ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರರ್ ವಿರುದ್ಧ ಗೆದ್ದ ಮರೆ

ಆಸ್ಟ್ರೇಲಿಯಾ ಓಪನ್: ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಂದು ಲೀ ನಾ-ಅಜರೆಂಕಾ ಹಣಾಹಣಿ
Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ರಾಯಿಟರ್ಸ್): ಲಂಡನ್ ಒಲಿಂಪಿಕ್ಸ್‌ನಲ್ಲಿ ಜಯಿಸಿದ ಚಿನ್ನದ ಪದಕ ಬ್ರಿಟನ್‌ನ ಆ್ಯಂಡಿ ಮರ‌್ರೆ ಅವರ ಅದೃಷ್ಟವನ್ನೇ ಬದಲಾಯಿಸಿರುವಂತೆ ಕಾಣುತ್ತಿದೆ. ಆ ಸಾಧನೆ ಬಳಿಕ ಮರ‌್ರೆ ಅವರ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡುವವರೇ ಇಲ್ಲ. ಆ ಯಶಸ್ಸಿನ ಓಟ ಮೆಲ್ಬರ್ನ್ ಪಾರ್ಕ್‌ನಲ್ಲೂ ಮುಂದುವರಿದಿದೆ.

ಆದರೆ ಒಲಿಂಪಿಕ್ಸ್‌ನ ಟೆನಿಸ್ ಫೈನಲ್‌ನಲ್ಲಿ ಸೋಲು ಕಂಡಿದ್ದ ರೋಜರ್ ಫೆಡರರ್‌ಗೆ ಮತ್ತೆ ಆಘಾತ ಎದುರಾಯಿತು. ಏಕೆಂದರೆ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೆಡರರ್ ಎದುರು ಗೆದ್ದ ಮರ‌್ರೆ ಫೈನಲ್ ತಲುಪಿದ್ದಾರೆ.

ರಾಡ್ ಲವೆರಾ ಅರೆನಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮರ‌್ರೆ 6-4, 6-7, 6-3, 6-7, 6-2ರಲ್ಲಿ ಫೆಡರರ್ ಅವರನ್ನು ಮಣಿಸಿದರು. ಈ ಮೂಲಕ ಅವರು ಭಾನುವಾರ ನಡೆಯಲಿರುವಫೈನಲ್‌ನಲ್ಲಿ ಅಗ್ರ ರ‌್ಯಾಂಕ್‌ನ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಎದುರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಜೊಕೊವಿಚ್ ಹಾಲಿ ಚಾಂಪಿಯನ್ ಕೂಡ.

ಮರ‌್ರೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ಹಿಂದೆ ಫೆಡರರ್ ಎದುರು ಗೆದ್ದಿರಲಿಲ್ಲ. ಆದರೆ ಬಾರಿ ಫೆಡರರ್ ಎದುರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. 18ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಸ್ವಿಟ್ಜರ್ಲೆಂಡ್‌ನ ಆಟಗಾರ ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಶರಣಾದರು.

ಹೋದ ವರ್ಷ ಅಮೆರಿಕ ಓಪನ್ ಟೂರ್ನಿ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾಗಿರುವ ಮರ‌್ರೆ ಅತ್ಯುತ್ತಮ ಸರ್ವ್‌ಗಳ ಮೂಲಕ ರೋಜರ್ ಮೇಲೆ ಒತ್ತಡ ಹೇರಿದರು. ಈ ಹೋರಾಟ ನಾಲ್ಕು ಗಂಟೆ ನಡೆಯಿತು.
`ಫೆಡರರ್ ವಿರುದ್ಧದ ಪಂದ್ಯವೆಂದರೆ ಅದು ಸದಾ ಕಠಿಣ ಹೋರಾಟವಾಗಿರುತ್ತದೆ' ಎಂದು ಪಂದ್ಯದ ಬಳಿಕ ಮರ‌್ರೆ ನುಡಿದರು.

ಇಂದು ಮಹಿಳೆಯರ ಕಾದಾಟ: ಮಹಿಳೆಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಲೀ ನಾ ಹಾಗೂ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮುಖಾಮುಖಿಯಾಗಲಿದ್ದಾರೆ. ಹಾಲಿ ಚಾಂಪಿಯನ್ ಕೂಡ ಆಗಿರುವ ವಿಕ್ಟೋರಿಯಾ ಸದ್ಯ ವಿಶ್ವ ಟೆನಿಸ್‌ನಲ್ಲಿ ಅಗ್ರರ‌್ಯಾಂಕಿಂಗ್ ಹೊಂದಿದ್ದಾರೆ. ಆದರೆ ಚೀನಾದಲ್ಲಿ ಟೆನಿಸ್ ಕ್ರಾಂತಿಗೆ ಕಾರಣವಾಗಿರುವ ಲೀ ಅವರು ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಲೀ 2011ರ ಫ್ರೆಂಚ್ ಓಪನ್ ಜಯಿಸಿದ್ದರು. ಆ ಮೂಲಕ ಗ್ರ್ಯಾನ್‌ಸ್ಲಾಮ್ ಜಯಿಸಿದ ಚೀನಾದ ಮೊದಲ ಆಟಗಾರ್ತಿ ಎನಿಸಿದ್ದರು.

23 ವರ್ಷ ವಯಸ್ಸಿನ ಅಜರೆಂಕಾ ಸೆಮಿಫೈನಲ್‌ನಲ್ಲಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದರು. ಸುಸ್ತಾದಾಗ ಚಿಕಿತ್ಸೆಗಾಗಿ ಹೆಚ್ಚಿನ ಸಮಯ ತೆಗೆದುಕೊಂಡಿದ್ದರು. ಜೊತೆಗೆ ಸರ್ವ್ ಮಾಡುವಾಗ ಅವರು ಕಿರುಚುವ ರೀತಿಯಿಂದಾಗಿ ಜನರ ಆಕ್ರೋಶಕ್ಕೆ ಒಳಗಾಗ್ದ್ದಿದಾರೆ. ಹಾಗಾಗಿ ಜನರ ಬೆಂಬಲ ಲೀ ನಾ ಅವರಿಗಿದೆ.

ಎರಾನಿ-ವಿನ್ಸಿಗೆ ಪ್ರಶಸ್ತಿ: ಇಟಲಿಯ ಸಾರಾ ಎರಾನಿ ಹಾಗೂ ರಾಬೆರ್ಟಾ ವಿನ್ಸಿ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಅವರು ಫೈನಲ್‌ನಲ್ಲಿ 6-2, 3-6, 6-2ರಲ್ಲಿ ಸ್ಥಳೀಯ ಆಟಗಾರ್ತಿಯರಾದ ಅಶ್ಲೇಗ್ ಬಾರ್ಟಿ ಹಾಗೂ ಕೇಸಿ ಡೆಲಕ್ವಾ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT