ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಕುಡಿಯುವ ನೀರಿಗೆ ಹಾಹಾಕಾರ

Last Updated 22 ಅಕ್ಟೋಬರ್ 2011, 11:10 IST
ಅಕ್ಷರ ಗಾತ್ರ

ಬಂಗಾರಪೇಟೆ:  ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಎಲ್ಲೆಲ್ಲೂ ಕೆರೆಗಳು ಬತ್ತಿಹೋಗಿವೆ.  ಪರಿಣಾಮ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಸರ್ಕಾರ ಬಂಗಾರಪೇಟೆ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ.  ತಾಲ್ಲೂಕಿ ನಲ್ಲಿ ಕಸಬಾ, ಕಾಮಸಮುದ್ರ, ಬೂದಿಕೋಟೆ, ರಾಬರ್ಟ್‌ಸನ್‌ಪೇಟೆ, ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಹೋಬಳಿಗಳಿವೆ. ರಾಬರ್ಟ್‌ಸನ್‌ಪೇಟೆ, ಕ್ಯಾಸಂಬಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಕೆರೆಗಳಿಗೆ ನೀರು ತುಂಬದಿದ್ದರೂ, ರೈತರು ನಿಟ್ಟುಸಿರು ಬಿಡುವಷ್ಟು ಸಾಧಾರಣ ಮಳೆ ಯಾಗಿದೆ.  ಉಳಿದಂತೆ ಕಸಬಾ, ಕಾಮಸಮುದ್ರ ಹೋಬಳಿಯ ಕೆಲ ಭಾಗ ಮತ್ತು ಬೂದಿಕೋಟೆ ಹೋಬಳಿಯ ಸಂಪೂರ್ಣ ಭಾಗವು ಬರಗಾಲದ ಕೆನ್ನಾಲಿಗೆಗೆ ತುತ್ತಾಗಿದೆ.

ಹೊಲಗಳಲ್ಲಿ ಬಿತ್ತನೆ ಕಾರ್ಯ ಮಾಡಿ ಸುಮಾರು 2 ರಿಂದ 3 ತಿಂಗಳಾಗಿದೆ. ಬಿತ್ತನೆ ಮಾಡಿದಾಗಿನಿಂದ ಇಲ್ಲಿಯವರೆಗೆ ಕೇವಲ ಮೂರ‌್ನಾಲ್ಕು ಬಾರಿ ಮಾತ್ರ ಮಳೆಯಾಗಿದೆ. ಇತ್ತೀಚೆಗೆ ತುಂತುರು ಮಳೆ ಬಿದ್ದ ಕಾರಣ ಹೊಲಗಳು ಹಸಿರಾಗಿವೆ, ಇಲ್ಲದಿದ್ದಲ್ಲಿ ಈ ವೇಳೆಗೆ ಒಣಗಿಹೋಗುತ್ತಿದ್ದುದಾಗಿ ಬೂದಿಕೋಟೆ ಹೋಬಳಿಯ ಹಿರೇಕರಪನಹಳ್ಳಿ ರೈತ ಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಈ ಭಾಗದಲ್ಲಿ ಕಳೆದ 5-6 ವರ್ಷಗಳಿಂದ ಸಮರ್ಪಕ ಮಳೆಯಾಗಿಲ್ಲ.  ಕೆರೆಗಳು ತುಂಬಿ ವರ್ಷಗಳೇ ಉರುಳಿವೆ.  ಪರಿಣಾಮವಾಗಿ ತಮ್ಮ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 30 ರಿಂದ 35 ಕೊಳವೆ ಬಾವಿಗಳಲ್ಲಿ, ಇಂದು ಕೇವಲ ಐದಾರು ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬರುತ್ತಿವೆ.  ಉಳಿದ ಶೇ 80 ರಷ್ಟು ಕೊಳವೆ ಬಾವಿಗಳಲ್ಲಿ ನೀರು ಇಂಗಿಹೋಗಿದೆ ಎಂಬುದು ಹಿರೇಕರಪನಹಳ್ಳಿ ಗ್ರಾಮದ ಮತ್ತೊಬ್ಬ ರೈತ ರಾಜೇಶ್ ಅವರ ನುಡಿ.

ಈಗ ಬಿತ್ತನೆ ಮಾಡಿರುವ ಬೆಳೆಗಳಿಗೆ ಮತ್ತೆ ಮಳೆ ಬಂದರೆ ಶೇ 50ರಷ್ಟು ಫಸಲು ನಿರೀಕ್ಷಿಸಬಹುದು ಇಲ್ಲವಾದಲ್ಲಿ ಕೇವಲ ಹುಲ್ಲನ್ನು ನೋಡಬಹುದೇ ಹೊರತು ಕಾಳುಗಳನ್ನು ನೋಡಲು ಸಾಧ್ಯವಿಲ್ಲ.

ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಕಳೆದ 6 ತಿಂಗಳವರೆಗೂ ಕಾರ್ಯನಿರ್ವಹಿಸುತ್ತಿದ್ದ ಕೊಳವೆ ಬಾವಿಯಲ್ಲಿ ನೀರು ಇಂಗಿಹೋಗಿದೆ.

 ಸುಮಾರು 1000 ದಿಂದ 1200 ಅಡಿ ಆಳ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಮಳೆಗಾಲದಲ್ಲೆೀ ಹೀಗಾದರೆ ಮುಂದಿನ ಬೇಸಿಗೆ ಕಾಲದ ವೇಳೆಗೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತುಮಟಗೆರೆ ಗ್ರಾಮದ ರೈತ ಶ್ರೀನಿವಾಸ್ ತಿಳಿಸಿದರು.

ವಿದ್ಯುತ್ ಅಭಾವ: ಮಳೆ ಅಭಾವದಿಂದ ಕುಡಿಯುವ ನೀರಿಗೆ ಮತ್ತು ತಮ್ಮ ಜಾನುವಾರುಗಳಿಗೆ ಆಹಾರ ಒದಗಿಸಲು ಜನ ಪರದಾಡುತ್ತಿದ್ದರೆ, ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದು.

 ಈ ಭಾಗದ ಜನರು ಹೇಳುವಂತೆ ದಿನವಿಡೀ ಕೇವಲ 3 ಗಂಟೆ ಕಾಲ ಮಾತ್ರ ವಿದ್ಯುತ್ ಪೂರೈಕೆಯಾಗುತ್ತದೆ.
 ಪೂರೈಕೆಯಾಗುವ 3 ಗಂಟೆಗಳಲ್ಲಿ ಹಲವು ಬಾರಿ ಕಡಿತಗೊಳಿಸಿ ಪೂರೈಕೆ ಮಾಡಲಾಗುತ್ತಿದೆ.   ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. 

 ಇದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.  ಕೇವಲ 3 ಗಂಟೆ ಪೂರೈಕೆಯಾಗುವ 3ಫೇಸ್ ವಿದ್ಯುತ್‌ನ್ನು  ನಂಬಿಕೊಂಡು ಸಾಲ ಮಾಡಿ ತೋಟಗಳಲ್ಲಿ ಬೆಳೆ ಮಾಡುವುದಾದರೂ ಹೇಗೆ ಎಂಬುದು ಹೂವರಸನಹಳ್ಳಿ ರಾಜಪ್ಪನವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT