ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮಾಜದ ಪ್ರತಿಭಟನೆ

Last Updated 22 ಡಿಸೆಂಬರ್ 2012, 9:00 IST
ಅಕ್ಷರ ಗಾತ್ರ

ಯಾದಗಿರಿ: ಗುರುಮಠಕಲ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ವರ್ತಕನ ಅಂಗಡಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಂಜಾರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಗುರುವಾರ ಗುಲ್ಬರ್ಗ ಜಿಲ್ಲಾ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಎಚ್. ಹುಲ್ಲೂರು ಹಾಗೂ ಅವರ ಸಿಬ್ಬಂದಿ, ಗುರುಮಠಕಲ್‌ನ ನರೇಂದ್ರ ಟ್ರೇಡಿಂಗ್ ಕಂಪೆನಿಯ ಅಂಗಡಿ ಮೇಲೆ ದಾಳಿ ಮಾಡಿ ಮಾಲೀಕನೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೇ ಹೆದರಿಸಿದ್ದಾರೆ.

ನಿಮ್ಮ ಅಂಗಡಿಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಆಹಾರ ಮೂಟೆಗಳು ಸಂಗ್ರಹವಿದೆ ಎಂದು ದೌರ್ಜನ್ಯದಿಂದ ಅಂಗಡಿಯಲ್ಲಿನ ದಾಖಲಾತಿಗಳನ್ನು ಪರಿಶೀಲನೆ ಮಾಡದೇ 432 ಅಕ್ಕಿ ಮೂಟೆಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವಿಷಯ ತಿಳಿದ ಪಕ್ಕದ ಅಂಗಡಿಯ ಮಾಲೀಕರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಅಂಗಡಿಯಲ್ಲಿ ಸಂಗ್ರಹವಾಗಿರುವ ಆಹಾರ ಪದಾರ್ಥಗಳ ಸಮಗ್ರ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ತೋರಿಸುವುದಾಗಿ ಮನವಿ ಮಾಡಿದರು. ಅದನ್ನು ಕೇಳುವಷ್ಟು ಸಹನೆ ಪೊಲೀಸರಿಗೆ ಇರಲಿಲ್ಲ. ಪೊಲೀಸರು ತೆಗೆದುಕೊಂಡು ಹೋಗಿರುವ ಅಕ್ಕಿ ಮೂಟೆಗಳನ್ನು ವಾಪಸ್ ತರಿಸಿ ಕೊಡಬೇಕು ಎಂದು ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ತನಿಖೆ ನಡೆಸಿ, ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಅಂಗಡಿ ಮಾಲೀಕನಿಗೆ ನ್ಯಾಯ ಒದಗಿಸದಿದ್ದರೆ ಬಂಜಾರ ಸಮಾಜವು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಬಂಜಾರ ಸಮಾಜದ ಜಿಲ್ಲಾ ಘಟಕದ ಮುಖಂಡರಾದ ಜನಾರ್ದನ ರಾಠೋಡ, ಸುರೇಶ ಬಸವಂತಪೂರ, ಡಾ. ದೇವಲಾಲ, ಅಮರೇಶ ರಾಠೋಡ, ಪ್ರೇಮಕುಮಾರ, ಕಾಶಿನಾಥ ರಾಠೋಡ, ಪರಶುರಾಮ ಚವ್ಹಾಣ, ನರೇಂದ್ರ ರಾಠೋಡ ಸೇರಿದಂತೆ ಹಲವಾರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT