ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಕರಗ

ಅಕ್ಷರ ಗಾತ್ರ

ಕರಗ ಬಂತು ಕರಗ ದಾರಿ ಬಿಡಿ... ಹೌದು. ಇದು ಕೊರವಂಜಿ ಜನಪದ ಗೀತೆ. ಇದರ ಮಧ್ಯೆ ದ್ರೌಪದಿ ಅಮ್ಮನ ಹಸಿ ಕರಗ ಬರುತ್ತಾ ಇದೆ ದಾರಿ ಬಿಡಿ...

ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಮತ್ತೆ ಸಂಭ್ರಮದ ಕಳೆ ಕಟ್ಟಿದೆ.
ಶನಿವಾರ ಹಸಿಕರಗ, ಭಾನುವಾರ ಪೊಂಗಲ್ ಸೇವೆ ಹಾಗೂ ಚೈತ್ರ ಪೂರ್ಣಿಮೆಯ  ಸೋಮವಾರ ಮಧ್ಯರಾತ್ರಿ ದ್ರೌಪದಿಯ ಹೂವಿನ ಕರಗ ಹಾಗೂ ಧರ್ಮರಾಯಸ್ವಾಮಿಯ ರಥೋತ್ಸವ ಸಡಗರದಿಂದ ನಡೆಯಲಿವೆ. ಕರಗ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.

ಭಾನುವಾರ ಚತುರ್ದಶಿಯಂದು ಮುಂಜಾನೆಯಿಂದಲೇ ದೇವಾಲಯದ ಆವರಣದಲ್ಲಿ ಸಾವಿರಾರು ಮಹಿಳಾ ಭಕ್ತರು ನೆರೆದು, ದೇವಿಗೆ ಇಷ್ಟವಾದ ಪೊಂಗಲ್ ತಯಾರಿಸಿ ಅರ್ಪಿಸುತ್ತಾರೆ. ಇದನ್ನು ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಸೋಮವಾರ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿಯೊಂದಿಗೆ ಹೂವಿನ ಕರಗಕ್ಕೆ ವಿದ್ಯುಕ್ತವಾಗಿ ಚಾಲನೆ. ಮಧ್ಯಾಹ್ನ ದೇವಿಯ ಹೂವಿನ ಕರಗ ಹೊರುವ ಲೋಕೇಶ್ ಅವರಿಗೆ ಎಂದಿನಂತೆ ಅರಿಶಿಣ ಬಣ್ಣದ ಸೀರೆ, ಬಳೆ ತೊಡಿಸಿ ಸಿಂಗಾರ ಮಾಡಲಾಗುತ್ತದೆ.
 
ಕಬ್ಬನ್ ಪಾರ್ಕ್‌ನ ಕರಗದಕುಂಟೆಯಲ್ಲಿ ಅಮ್ಮನಿಗೆ ಗಂಗೆ ಪೂಜೆ. ನಂತರ ಹಸಿಕರಗದ ಮಂಟಪಕ್ಕೆ ಕರೆತಂದು ಅಲ್ಲಿಯೂ ಪೂಜೆ ಸಲ್ಲಿಸಿ, ಸಾವಿರಾರು ಭಕ್ತರ ಕೊರವಂಜಿ ಗೀತೆಯೊಂದಿಗೆ ದೇವಾಲಯಕ್ಕೆ ಕರೆತರಲಾಗುತ್ತದೆ. ಮಧ್ಯರಾತ್ರಿಯ ನಂತರ ದೇವಿ ಭಕ್ತರಿಗೆ ದರ್ಶನ ನೀಡುತ್ತಾಳೆ. ದರ್ಶನದ ನಂತರ ಕರಗ ವಾಡಿಕೆಯಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವ ಮರಳುತ್ತದೆ.

ಈ ಸಮಯದಲ್ಲಿ ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು ಹಾಗೂ ಅಂಗಡಿಗಳ ಮಾಲಿಕರು ದೊಡ್ಡ ದೊಡ್ಡ ಕಡಾಯಿಗಳಲ್ಲಿ ಪೊಂಗಲ್, ಮೊಸರನ್ನ, ದೊಸೆ, ಬಿಸಿಬೇಳೆ ಬಾತ್ ಹೀಗೆ ನಾನಾ ಬಗೆಯ ತಿಂಡಿ ತಿನಿಸು ತಯಾರಿಸಿ ಭಕ್ತರಿಗೆ ಉಚಿತವಾಗಿ ನೀಡುತ್ತಾರೆ.

ಎಂದಿನಂತೆ ನಗರ್ತ ಪೇಟೆಯ ಆಭರಣ ವ್ಯಾಪಾರಿ ಜಗದೀಶ್ ಹಾಗೂ ಶ್ರೀಕಾಂತ್ ಅವರು ಈ ಬಾರಿ ಸೋಮವಾರ ರಾತ್ರಿ 9 ರಿಂದ ಮಂಗಳವಾರ ಬೆಳಗಿನ 5ರ ವರೆಗೆ ರಾಜಾ ಮಾರ್ಕೆಟ್ ಬಳಿ 20 ಸಾವಿರಕ್ಕೂ ಅಧಿಕ ಭಕ್ತರಿಗೆ ಉಚಿತವಾಗಿ ಬಿಸಿಬೇಳೆ ಬಾತ್, ಖಾರಾ ಬೂಂದಿ ವಿತರಿಸಲಿದ್ದಾರೆ.

‘ಕರಗ ಮೆರವಣಿಗೆಯಲ್ಲಿ ಸುಮಾರು 5 ಲಕ್ಷ ಭಕ್ತರು ಭಾಗವಹಿಸುತ್ತಾರೆ. ದೇವಿಗೆ ಅರಿಶಿಣ ಎಂದರೆ ತುಂಬ ಇಷ್ಟ. ಅರಿಶಿಣ ಬಟ್ಟೆ ತೊಟ್ಟರೆ ಯಾವುದೇ ಕೆಟ್ಟ ಗ್ರಹಗಳು ನಮ್ಮನ್ನು ಸುಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಅಂದು ಭಕ್ತರು ಅರಿಶಿಣ ಹಾಗೂ ಅರಿಶಿಣ ಬಟ್ಟೆಗೆ ಹೆಚ್ಚು ಆದ್ಯತೆ ನೀಡುತ್ತಾರೆ’ ಕರಗ ಸಮಯದಲ್ಲಿ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ’ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಅಭಿಮನ್ಯು.

ಧರ್ಮರಾಯ ಸ್ವಾಮಿ ದೇವಸ್ಥಾನ: 
ಶನಿವಾರ ಮಧ್ಯಾಹ್ನ 12.30ಕ್ಕೆ ಕರಗದ ಗಂಟೆ (ಕಬ್ಬನ್ ಪಾರ್ಕ್), ಮರಿಸ್ವಾಮಿ ಮಠ (ಕಲಾಸಿಪಾಳ್ಯ). ಭಾನುವಾರ ಬೆಳಿಗ್ಗೆ ಪೊಂಗಲ್ ಸೇವೆ. ಸೋಮವಾರ ರಾತ್ರಿ 10ಕ್ಕೆ ವೈದಿಕ ವಿದ್ವಾನ್ ರುದ್ರಪಟ್ಟಣ ಕೇಶವಮೂರ್ತಿ. ಆರ್.ಕೆ.ಪ್ರಕಾಶ್ ತಂಡದಿಂದ ವೀಣಾ ವಾದನ. ಮಧ್ಯರಾತ್ರಿ 2 ರಿಂದ ಬೆಳಗಿನ ಜಾವ 6ರ ವರೆಗೆ ಸೀತಾರಾಂ ಮುನಿಕೋಟಿಯವರಿಂದ  ದ್ರೌಪದಿ  ವೈಭವ ಕಥಾ ಕಾಲಕ್ಷೇಪ.
ಸ್ಥಳ: ಧರ್ಮರಾಯ ಸ್ವಾಮಿ ದೇವಾಲಯ, ತಿಗಳರಪೇಟೆ. ಸಂಜೆ 7.30. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT