ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೆರಗಿದೆ ಬರ: ಜಿಲ್ಲೆಯ ರೈತರು ತತ್ತರ

Last Updated 21 ಜುಲೈ 2012, 10:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆಕಾಡು ಹೊಂದಿರುವ ಮಲೆನಾಡಿನಲ್ಲೂ ಮಳೆ ದೂರವಾಗಿದೆ. ಇನ್ನೂ ಜಿಲ್ಲೆಯ ಬಯಲು ಸೀಮೆಯಲ್ಲಿ ಕಳೆದ ಮೂರು ತಿಂಗಳಿಂದ ಮಳೆದರ್ಶನವಿಲ್ಲ. ಬಿತ್ತಿದ ಬೆಳೆಗಳು ಒಣಗಿ ರೈತರು ಚಿಂತಾಕ್ರಾಂತರಾಗಿದ್ದಾರೆ. ಅರೇಬಿಕಾ ಕಾಫಿ ತೋಟಗಳು ಬಿಳಿಕಾಂಡ ಕೊರಕ ಹುಳು ಬಾಧೆಗೆ ತತ್ತರಿಸುತ್ತಿವೆ. ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಲಕ್ಯಾ, ಅಂಬಳೆ, ಸಖರಾಯಪಟ್ಟಣ ಹೋಬಳಿ ಗಳು ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಬಯಲುಸೀಮೆಯಲ್ಲಿ ಮುಂಗಾರಿನಲ್ಲಿ ಬಿತ್ತನೆ ಮಾಡಿರುವ ಅಲ್ಪಸ್ವಲ್ಪ ಬೆಳೆಗಳೂ ಒಣಗಿ ಹೋಗಿವೆ.

ಜಾನುವಾರುಗಳಿಗೂ ಮೇವು ಇಲ್ಲದೆ, ಕೆರೆಕಟ್ಟೆಗಳೂ ಬತ್ತಿ ಬರದ ಕರಿನೆರಳು ದಟ್ಟವಾಗಿ ಕಾಣಿಸುತ್ತಿದೆ. ಈ ಭಾಗದ ಹಳ್ಳಿಗಳಿಗೆ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದಾಗ ಹೊಸಕೋಟೆ- ರಾಮನಹಳ್ಳಿಯ ರೈತರಾದ ಪುಟ್ಟೇಗೌಡ, ಸಿದ್ದೇಗೌಡ ಹಾಗೂ ರೈತ ಮಹಿಳೆ ಕಾಳಮ್ಮ ಮಳೆ ಬಾರದೆ ಗ್ರಾಮದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಅಳಲುತೋಡಿಕೊಂಡರು.

ಕುರುಬರಹಳ್ಳಿ, ಮಾಣೇನಹಳ್ಳಿ, ಹರಿಹರದಳ್ಳಿ, ತಿಮ್ಮನಹಳ್ಳಿ, ಮರ್ಲೆ, ನಾಗರಹಳ್ಳಿ, ಈಶ್ವರಹಳ್ಳಿ, ಕುಳಾರದಹಳ್ಳಿ, ಕಬ್ಬಿಗೆರೆ, ಕಳಸಾಪುರ, ಮಾಗಡಿ, ದೇಗಲಾಪುರ, ಬೆಳವಾಡಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಆಲೂಗಡ್ಡೆ ಹೊರತುಪಡಿಸಿ ಉಳಿದ ಯಾವುದೇ ಬೆಳೆಗಳನ್ನು ಬಿತ್ತನೆ ಮಾಡಲು ರೈತರಿಗೆ ಸಾಧ್ಯವಾಗಿಯೇ ಇಲ್ಲ. ತಾಲ್ಲೂಕಿನ ಬಯಲು ಸೀಮೆಯಲ್ಲಿ ಆಲೂಗಡ್ಡೆ, ಜೋಳದ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಬಾಡಿ ಹೋಗಿವೆ.

`ರೇವತಿ ಮಳೆ ಸ್ವಲ್ಪಮಟ್ಟಿಗೆ ಆಯಿತು. ಆನಂತರ ಎರಡೂವರೆ ತಿಂಗಳು ಕಳೆದರೂ ಒಂದೇ ಒಂದು ಹನಿ ಮಳೆ ಬಿದ್ದಿಲ್ಲ. ಈ ಭಾಗದಲ್ಲಿ ಹೆಚ್ಚು ಬೆಳೆಯುತ್ತಿದ್ದ ರಾಗಿ, ನೆಲಗಡಲೆ, ಭತ್ತ, ಗೆಣಸು ಹೀಗೆ ಯಾವುದೇ ಬೆಳೆಗಳನ್ನು ಈ ಬಾರಿ ಬೆಳೆಯಲು ಆಗಿಲ್ಲ. ರೇವತಿ ಮಳೆ ಹದವಾಗಿ ಬಂದಿದ್ದರಿಂದ ಬಿತ್ತಿದ್ದ ಆಲೂಗಡ್ಡೆ ಚೆನ್ನಾಗಿ ಬೆಳೆದಿತ್ತು. ಈಗ ಫಸಲು ಬಿಡುವ ವೇಳೆಗೆ ಮಳೆ ಕೈಕೊಟ್ಟಿರುವುದರಿಂದ ಆಲೂಗಡ್ಡೆ ಬೆಳೆಯೂ ಕೈಗೆ ಸಿಗದಂತಾಗಿದೆ~ ಎಂದು ಪುಟ್ಟೇಗೌಡ ವಿಷಾದಿಸಿದರು.

`ಕಳೆದ ವರ್ಷವೂ ನಮಗೆ ಸರಿಯಾದ ಮಳೆ ಬರಲಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗಿದೆ. ಮೇವು ಇಲ್ಲದೆ ದನಕರು, ಮೇಕೆಗಳನ್ನು ಮಾರಾಟ ಮಾಡುವ ಸ್ಥಿತಿ ಬಂದೊದಗಿದೆ. ಮುಂಗಾರು ಬಿತ್ತನೆ ಹಂಗಾಮು ಮುಗಿದು ಹೋಗಿದೆ. ಇನ್ನು ಮಳೆ ಬಾರದಿದ್ದರೆ ಕೆರೆಕಟ್ಟೆಗಳು ಸಂಪೂರ್ಣ ಬತ್ತಿಹೋಗಿ ಸಮಸ್ಯೆ ಬಿಗಡಾಯಿಸುವುದು ಖಚಿತ~ ಎಂದು ಸಿದ್ದೇಗೌಡ ಆತಂಕ ವ್ಯಕ್ತಪಡಿಸಿದರು.

ಮಳಲೂರು, ಕೆ.ಆರ್.ಪೇಟೆ, ಹಳುವಳ್ಳಿ, ಹಾದಿಹಳ್ಳಿ, ಬಾಣಾವರ, ಗಂಜಲಗೋಡು, ಮತ್ತೀಕೆರೆ ಗ್ರಾಮಗಳಲ್ಲಿ ಈ ಬಾರಿ ಆಲೂಗಡ್ಡೆ ಬಂಪರ್ ಬೆಳೆಯಾಗುವ ನಿರೀಕ್ಷೆ ಇತ್ತು. ಕಳೆದ ಒಂದು ತಿಂಗಳಿನಿಂದಲೂ ಸರಿಯಾಗಿ ಮಳೆಯಾಗದೆ, ಈಗ ಹೂವಿನ ಕುಡಿ ಹೊರಡುತ್ತಿದ್ದು, ಫಸಲುಗಟ್ಟುವ ಹಂತದಲ್ಲಿರುವ ಆಲೂಗಡ್ಡೆ ರೈತರಿಗೆ ನಷ್ಟ ಉಂಟು ಮಾಡಲಿದೆ. ಕುಂಟೆ ಮಣ್ಣು ಏರಿಸಿದ್ದ ಆಲೂಗಡ್ಡೆ ದೋಣಿಸಾಲುಗಳಲ್ಲಿ ನೀರು ಹರಿಯುವಂತೆ ಮಳೆ ಬಂದಿದ್ದರೆ ಚೆನ್ನಾಗಿ ಫಸಲುಗಟ್ಟುತ್ತಿತ್ತು. ಈಗ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎನ್ನುತ್ತಾರೆ ಆಲೂಗಡ್ಡೆ ಬೆಳೆಗಾರ ಲೋಕಪ್ಪಗೌಡ. 

ಇನ್ನೂ ಬಯಲು ಸೀಮೆ ಪರಿಸ್ಥಿತಿ ಹೀಗಿದ್ದರೆ, ಮಲೆನಾಡಿನಲ್ಲೂ ಮಳೆ ಕಾಣೆಯಾಗಿದ್ದು, ತೋಟಗಳನ್ನು ಈ ಬಾರಿ ಉಳಿಸಿಕೊಳ್ಳುವುದೇ ಕಾಫಿ ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ. ಮಳೆ ಕೊರತೆಯಿಂದ ತೋಟಗಳಲ್ಲಿ ಬಿಳಿಕಾಂಡ ಕೊರಕ ಹುಳುಬಾಧೆ (ವೈಟ್ ಸ್ಟೆಮ್ ಬೋರರ್) ಹೆಚ್ಚಾಗಿದೆ. ಇದೇ ರೀತಿಯ ಬರಗಾಲ ಮಲೆನಾಡಿನಲ್ಲಿ ಬಂದು 2001ರಿಂದ 2005ರವರೆಗೆ ಕಾಫಿ ತೋಟಗಳನ್ನು ನಿರ್ವಹಿಸಲು ಆಗಲೇ ಇಲ್ಲ. ಆಗ ಬಂದ ಬರದಿಂದ ಕನಿಷ್ಠ ಒಂದು ಎಕರೆಗೆ ಸುಮಾರು 400ರಿಂದ 500 ಕಾಫಿ ಗಿಡಗಳನ್ನು ಕಳೆದುಕೊಂಡಿದ್ದೇವೆ.

ಬಹಳಷ್ಟು ಕಾಫಿ ಬೆಳೆಗಾರರು ಬೋರರ್ ತಗುಲಿದ ಗಿಡಗಳನ್ನು ಕಡಿದು ಹಾಕಿ ಹೊಸ ಅರೆಬಿಕಾ ಗಿಡಗಳನ್ನು ಬೆಳೆಸಿದ್ದರು. ಈಗ ಅವು ಫಸಲಿಗೆ ಬರುವ ಹಂತದಲ್ಲಿದ್ದವು. ಶುಕ್ರವಾರದಿಂದ ಪುಷ್ಯ ಮಳೆ ಶುರುವಾಗಿದೆ. ರೇವತಿ ಮಳೆಯ ನಂತರ ಯಾವುದೇ ಮಳೆ ಸರಿಯಾಗಿ ಆಗಿಲ್ಲ. ಈ ಮಳೆಯೂ ಕೈಕೊಟ್ಟರೆ ಹೊಸ ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟ. ಕಳೆದ ವರ್ಷ ಇದೇ ಋತುವಿನಲ್ಲಿ ಮಲ್ಲಂದೂರು, ಜೋಳದಾಳ್, ಆಣೂರು ಭಾಗದಲ್ಲಿ 40ರಿಂದ 43 ಇಂಚು ಮಳೆಯಾಗಿತ್ತು. ಈ ಬಾರಿ ಕೇವಲ 20 ಇಂಚು ಮಳೆಯಾಗಿದೆ. ಈಗಾಗಲೇ ಕಾಫಿ ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT