ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಜೆಡಿಎಸ್-ಕಾಂಗ್ರೆಸ್ ಪ್ರತಿರೋಧ: ಉದ್ವಿಗ್ನ ಸ್ಥಿತಿ ನಿರ್ಮಾಣ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ:  ಒಂದೆಡೆ ಬಲವಂತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿದ ಬಿಜೆಪಿ ಕಾರ್ಯಕರ್ತರು, ಬೆನ್ನ ಹಿಂದೆಯೇ ಬೈಕ್ ರ್ಯಾಲಿ ನಡೆಸಿ ಅಂಗಡಿಗಳನ್ನು ಮತ್ತೆ ತೆರೆಯುವಂತೆ ಮನವಿ ಮಾಡಿದ ಜೆಡಿಎಸ್ ಕಾರ್ಯಕರ್ತರು, ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ತೆರವುಗೊಳಿಸುವಂತೆ ಜೆಡಿಎಸ್ ಧುರೀಣರಿಂದ ಆಗ್ರಹ, ಅದಕ್ಕೆ ಕೈಜೋಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಎರಡೂ ಗುಂಪುಗಳನ್ನು ತೆರವುಗೊಳಿಸಿ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದ ಪೊಲೀಸರು.... - ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಶನಿವಾರ ಕಂಡುದೃಶ್ಯಗಳಿವು.

ಬಿಜೆಪಿ ಕಾರ್ಯಕರ್ತರು ತಾಲ್ಲೂಕು ಹಾಗೂ ನಗರ ಘಟಕದ ಅಧ್ಯಕ್ಷರಾದ ವಿಷಕಂಠು, ಎಂ.ಎನ್.ಆನಂದಸ್ವಾಮಿ, ಹಾಪ್‌ಕಾಮ್ಸ್ ನಿರ್ದೇಶಕ ಎಸ್.ಸಿ.ಶೇಖರ್ ನೇತೃತ್ವದಲ್ಲಿ ಬೆಳಿಗ್ಗೆ 11ಕ್ಕೆ  ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‌ಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಯಾವುದೇ ಮುನ್ಸೂಚನೆ ಇಲ್ಲದೆ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಮುಂದಾಗಿದ್ದರಿಂದ ಹೋಟೇಲ್‌ಗಳು, ಬೀದಿ ಬದಿ ವ್ಯಾಪಾರಿಗಳಿಗೆ ತೀವ್ರ ತೊಂದರೆ ಉಂಟಾಯಿತು.

ಬಲವಂತದ ಬಂದ್ ಆಚರಣೆಯ ವಿಚಾರ ತಿಳಿದು ಪ್ರತಿ ಚಳವಳಿಗೆ ಮುಖಂಡರುಗಳಾದ ಸಿಂ.ಲಿಂ.ನಾಗರಾಜು, ಆರ್.ವಿ.ಧರಣೇಶ್ ಕುಮಾರ್, ಎಂ.ಜಿ.ಕೆ.ಪ್ರಕಾಶ್ ಅವರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗುತ್ತಾ, ಅಂಗಡಿಗಳನ್ನು ಮತ್ತೆ ತೆರೆದು ವಹಿವಾಟು ನಡೆಸುವಂತೆ ವ್ಯಾಪಾರಿಗಳಲ್ಲಿ ಮನವಿ ಮಾಡಿದರು. ಡಿಎಸ್ಪಿ ಟಿ. ಸಿದ್ದಪ್ಪ ಪ್ರತಿ ಚಳವಳಿ ನಡೆಸುವುದು ಬೇಡವೆಂದು ಜೆಡಿಎಸ್ ಧುರೀಣರಿಗೆ ಮನವಿಗೆ ಯಾವುದೇ ಪುರಸ್ಕಾರ ಸಿಗಲಿಲ್ಲ.

ಸಾತನೂರು ವೃತ್ತದಲ್ಲಿ ಅಂಗಡಿಗಳನ್ನು ಮುಚ್ಚಿಸಿ ಖಾಸಗಿ ಬಸ್ ನಿಲ್ದಾಣದ ಸಮೀಪ ಆಗಮಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದರು. ಅದೇ ವೇಳೆಗೆ ಪ್ರಧಾನ ಅಂಚೆ ಕಚೇರಿ ರಸ್ತೆಗೆ ಬಂದ ಜೆಡಿಎಸ್ ಪ್ರತಿಭಟನಾಕಾರರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಜೆಡಿಎಸ್ ಕಾರ್ಯಕರ್ತರೊಂದಿಗೆ ಸೇರಿ ಕಾಂಗ್ರೆಸ್‌ನ ಪಿ.ಡಿ.ರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ, ಪಾಳ್ಯ ಮಹದೇವು, ವಿ.ಜಿ. ಪುರ ಶ್ರೀನಿವಾಸ ಹಾಗೂ ಪಕ್ಷದ ಬಾವುಟ ಹಿಡಿದು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು.

ಎರಡೂ ಬದಿಗಳಲ್ಲೂ ಪರಸ್ಪರ ಧಿಕ್ಕಾರ ಕೂಗಲು ಆರಂಭಿಸಿದಾಗ ಉದ್ವಿಗ್ನ ವಾತಾವರಣ ಉಂಟಾಯಿತು. ಪ್ರತಿಭಟನೆ ನಿಲ್ಲಿಸಿ ಸ್ಥಳ ತೆರವುಗೊಳಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮೊದಲು ಹೆದ್ದಾರಿ ಸಂಚಾರಕ್ಕೆ ಅಡ್ಡಿ ಪಡಿಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿ ಎಂದು ಪಟ್ಟು ಹಿಡಿದರು.

ಪರಿಸ್ಥಿತಿಯನ್ನು ಅತ್ಯಂತ ಸಹನೆಯಿಂದ ನಿರ್ವಹಿಸಿದ ಡಿಎಸ್ಪಿ ಟಿ.ಸಿದ್ದಪ್ಪ, ನಗರ ಸಿಪಿಐ ಮಹಮದ್ ಹಸ್ಮತ್‌ಖಾನ್ ಅವರುಗಳು ಎರಡು ಕಡೆಯ ಪ್ರತಿಭಟನಾಕಾರರ ಸುತ್ತಲು ಪೊಲೀಸ್ ಸರ್ಪಗಾವಲು ಹಾಕಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯುವಲ್ಲಿ ಯಶಸ್ವಿಯಾದರು.

ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಾಲಕಿಯರ ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ರದ್ದಾಯಿತು.ಚಿತ್ರಮಂದಿರ, ಬ್ಯಾಂಕ್‌ಗಳು, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪರಸ್ಥಳಗಳಿಂದ ಬರುವ ಉದ್ಯೋಗಿಗಳು ಕಚೇರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ 1ಗಂಟೆಯ ನಂತರ ಅಂಗಡಿಗಳು ಮತ್ತೆ ತೆರೆದವು.

ಪ್ರತಿಭಟನೆಯಲ್ಲಿ ಅಶಿಸ್ತು: ಏಕಾಏಕಿ ಪ್ರತಿಭಟನೆಗಿಳಿದ ಬಿಜೆಪಿ ಕಾರ್ಯಕರ್ತರು ರಸ್ತೆಗೆ ಅಡ್ಡಲಾಗಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿದ ಡಿಎಸ್ಪಿ ಟಿ.ಸಿದ್ದಪ್ಪ, ಸಿಪಿಐ ಎಂ.ಹೆಚ್. ಖಾನ್ ಪಿಎಸ್‌ಐ ಹೆಚ್.ಎಲ್. ನಂದೀಶ್ ಅವರುಗಳ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT