ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧನ ಖಂಡಿಸಿ ಬಿಜೆಪಿ ಬೈಕ್ ರ್‍ಯಾಲಿ

Last Updated 7 ಜೂನ್ 2011, 7:30 IST
ಅಕ್ಷರ ಗಾತ್ರ

ಹರಪನಹಳ್ಳಿ: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ವಿದೇಶದಲ್ಲಿನ ಕಪ್ಪುಹಣ ವಾಪಸ್ ತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನವದೆಹಲಿ ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟಾವಧಿ ನಿರಶನ ಕೈಗೊಂಡಿದ್ದ ಯೋಗಗುರು ಬಾಬಾ ರಾಮದೇವ್ ಅವರ ಮೇಲೆ ಹಲ್ಲೆ ನಡೆಸಿ ಬಲತ್ಕಾರದಿಂದ ಬಂಧಿಸಿರುವ ಕೇಂದ್ರ ಹಾಗೂ ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಬೈಕ್ ರ‌್ಯಾಲಿ ನಡೆಸಿದರು.

ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಅವರ ಖಾಸಗಿ ಕಚೇರಿಯಿಂದ ಬೈಕ್‌ಮೇಲೆ ತೆರಳಿದ ಕಾರ್ಯಕರ್ತರ ಪಡೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ದೆಹಲಿ ಸರ್ಕಾರ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಧಿಕ್ಕಾರದ ಕೂಗುತ್ತಾ ಸಂಚರಿಸಿದರು. ನಂತರ, ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸೋನಿಯಾಗಾಂಧಿ ಅವರ ಕಪಿಮುಷ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ. ದೇಶವನ್ನು ಭ್ರಷ್ಟಾಚಾರಮುಕ್ತ ರಾಷ್ಟ್ರ ಕಟ್ಟುವ ಆ ಮೂಲಕ ಮುಂದಿನ ಪೀಳಿಗೆ ಭವಿಷ್ಯದ ಕನಸು ಕಟ್ಟುವ ನಿಟ್ಟಿನಲ್ಲಿ ವಿದೇಶದಲ್ಲಿ ಹೂಡಿಕೆ ಆಗಿರುವ ಕಪ್ಪುಹಣವನ್ನು ಸ್ವದೇಶಕ್ಕೆ ಮರಳಿತಂದು ತುತ್ತು ಕೂಳಿಗಾಗಿ ತತ್ತರಿಸುತ್ತಿರುವ ಕೋಟ್ಯಂತರ ಭಾರತೀಯರ ಕಲ್ಯಾಣಕ್ಕಾಗಿ ವಿನಿಯೋಗಿಸುವಂತೆ ಬಾಬಾ ಕೈಗೊಂಡಿರುವ ಧರಣಿ ಸೋನಿಯಾಗಾಂಧಿ ಅವರ ಕಣ್ಣಿಗೆ ಅಪರಾಧದಂತೆ ಕಂಡುಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿನಿರತ ಮಹಿಳೆ ಮತ್ತು ಮಕ್ಕಳ ಮೇಲೂ  ಅಮಾನವೀಯವಾಗಿ ದೌರ್ಜನ್ಯ ಎಸಗಿರುವ ಪೊಲೀಸರು ಕೇಂದ್ರ ಸರ್ಕಾರದ ಕೃಪಪೋಷಿತರಂತೆ ನಡೆದುಕೊಂಡಿದ್ದಾರೆ.  ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಕಗ್ಗೊಲೆ ಮಾಡಿದಂತಾಗಿದೆ. ಈ ದುರಂತ ತುರ್ತು ಪರಿಸ್ಥಿತಿಯ ಪುನರಾವರ್ತನೆಯಾಗಿದೆ ಎಂದು ಕಿಡಿಕಾರಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ನೀಡುವ ಮೂಲಕ ಕೂಡಲೇ,ದೇಶದ ಜನತೆಯ ಕ್ಷಮೆಯಾಚಿಸುವಂತೆ ಆಗ್ರಹಿಸಿದ  ಮನವಿಯನ್ನುಉಪ ವಿಭಾಗಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಸಲ್ಲಿಸಿದರು.


ಸಿ.ಸಿ. ರಾಮಚಂದ್ರನಾಯ್ಕ, ಎಚ್. ದೇವರಾಜ್, ಸತೀಶ್ ಬಂಕಾಪುರ,ಡಾ.ನಾಗೇಶ್‌ಭಟ್, ಓಬಳಾಪುರ ಗೋಣಿಬಸಪ್ಪ, ಶಂಕರ್, ಪಿ. ರಾಜಶೇಖರ್, ಎಚ್.ಎಂ. ಜಗದೀಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ರವಿ, ವೀರೇಶ್ ಇತರರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಹರಪನಹಳ್ಳಿ: ನ್ಯಾಯಾಲಯದ ಕಲಾಪ ಸ್ಥಗಿತ

ಹರಪನಹಳ್ಳಿ: ರಾಮದೇವ್ ಹಾಗೂ ಅವರ ಬೆಂಬಲಿಗರು ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿ ಸೋಮವಾರ ಸ್ಥಳೀಯ ವಕೀಲರ ಸಂಘ ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದೆ.

ಬೆಳಿಗ್ಗೆ ನ್ಯಾಯಾಲಯದ ಕಲಾಪ ಆರಂಭಕ್ಕೂ ಮುನ್ನ ಸಂಘದ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ವಕೀಲರು, ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಯೋಗಗುರು ಬಾಬಾ ರಾಮದೇವ್ ಕೈಗೊಂಡಿರುವ ಬೃಹತ್ ಆಂದೋಲನವನ್ನು ಹತ್ತಿಕ್ಕಲು ಕೇಂದ್ರ ಹಾಗೂ ದೆಹಲಿ ಸರ್ಕಾರ ದೌರ್ಜನ್ಯದ ಪರಮ ಪಾತಕದ ಕೆಲಸಕ್ಕೆ ಕೈಹಾಕಿದೆ ಎಂದು ದೂರಿದರು.

ನಂತರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದ ವಕೀಲರು ಮಿನಿ ವಿಧಾನಸೌಧಕ್ಕೆ ತೆರಳಿ, ಬಾಬಾಗೆ ನೈತಿಕ ಬೆಂಬಲ ಸೂಚಿಸುವ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಪಿ. ಜಗದಪ್ಪ, ಎ.ಕೆ. ಅಜ್ಜಪ್ಪ, ಇದ್ಲಿ ರಾಮಪ್ಪ, ಗಂಗಾಧರ ಗುರುಮಠ್, ಕೆ.ಎಂ. ರುದ್ರಮುನಿಸ್ವಾಮಿ, ಮತ್ತಿಹಳ್ಳಿ ಅಜ್ಜಣ್ಣ, ರಾಮನಗೌಡ ಪಾಟೀಲ್, ಕೆ. ಸುರೇಶ್, ನಂದಿಬೇವೂರು ಮಲ್ಲಪ್ಪ, ಬಂಡ್ರಿ ಗೋಣಿಬಸಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT