ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಕೃಷಿಗೆ ಸಮಪಾಲು: ಒತ್ತಾಯ

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಉತ್ಪಾದನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಕೃಷಿಗೆ ಬಜೆಟ್‌ನಲ್ಲಿ ಸಮಪಾಲು ಮೀಸಲಿಡಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಬಜೆಟ್ ಮತ್ತು ರೈತರು' ಕುರಿತ ವಿಚಾರ ಸಂಕಿರಣದಲ್ಲಿ ಒತ್ತಾಯಿಸಲಾಯಿತು.

ಸಂಕಿರಣದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ತಿಳಿಸಿದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, `ಶಿಕ್ಷಣ, ಆರೋಗ್ಯ ಇತ್ಯಾದಿ ಸೇವಾ ಕ್ಷೇತ್ರಗಳಂತೆ ಕೃಷಿಗೂ ಆದ್ಯತೆ ದೊರೆಯಬೇಕು. ರೈತರು ಬೆಳೆಯುವ ಬೆಳೆಗಳಿಗೆ ಸಮರ್ಪಕವಾದ ದರ ನಿಗದಿಪಡಿಸಲು ಸಮಿತಿ ರಚಿಸಬೇಕು. ಈ ಸಮಿತಿಗೆ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಬೇಕು' ಎಂದು ಆಗ್ರಹಿಸಿದರು.

`ರಾಜ್ಯದಲ್ಲಿ ನದಿಗಳು ತುಂಬಿ ಹರಿದರೂ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಆಂಧ್ರಪ್ರದೇಶದಲ್ಲಿ ಶೇಕಡಾ 59ರಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಈ ಪ್ರಮಾಣ ಶೇಕಡಾ 26 ಮಾತ್ರ. ಪರಿಣಾಮವಾಗಿ ಪ್ರತಿವರ್ಷ ಬರ ಎದುರಿಸುವಂತಾಗಿದೆ.

ಬರ ನಿರ್ವಹಣೆಗೆ ಸರ್ಕಾರ ಒಟ್ಟು ಐದು ವರ್ಷಗಳಿಗೆ 50 ಸಾವಿರ ಕೋಟಿ ರೂಪಾಯಿ ಮಾತ್ರ ಮೀಸಲಿಡುತ್ತದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಸಮಸ್ಯೆಗಳು ನಿವಾರಣೆಯಾಗಿಲ್ಲ. ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟು ಬರ ನಿರ್ವಹಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.

`60 ವರ್ಷ ದಾಟಿದ ರೈತರಿಗೆ ಮಾಸಾಶನ ಘೋಷಿಸಬೇಕು. ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದವರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ರೇಷ್ಮೆ, ತೆಂಗು, ಅಡಿಕೆ ಬೆಳೆಗಳ ರಕ್ಷಣೆಗೆ ಪ್ರತ್ಯೇಕ ಸಮಿತಿ ಹಾಗೂ ನಿಧಿ ಸ್ಥಾಪಿಸಬೇಕು. 1ಟನ್ ಕಬ್ಬಿಗೆ ನಾಲ್ಕು ಸಾವಿರ ರೂಪಾಯಿ ನೀಡಬೇಕು.

`ಭಾಗ್ಯಜ್ಯೋತಿ' ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದಿರುವವರು 40 ಯೂನಿಟ್‌ವರೆಗೆ ವಿದ್ಯುತ್ ಬಳಸಲು ಅವಕಾಶ ನೀಡಬೇಕು. ಬಗರ್‌ಹುಕುಂ ರೈತರ ಜಮೀನುಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು' ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT