ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ಒಳನೋಟದಿ ಸಿಇಟಿ

Last Updated 7 ಮೇ 2016, 11:18 IST
ಅಕ್ಷರ ಗಾತ್ರ

*ಚಂದನದ ಸಿಇಟಿ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ...
ಇಂದು ಅಧಿಕ ಹಣ ಖರ್ಚು ಮಾಡಿ ಸಿಇಟಿ ಪರೀಕ್ಷೆಗೆ ತರಬೇತಿ ಪಡೆಯಲು ಆಗದ ಪಿಯು ಮಕ್ಕಳ ದೃಷ್ಟಿಯಿಂದ ರೂಪಿಸಿದ ಕಾರ್ಯಕ್ರಮ. ಇದರ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಸರ್ಕಾರದ ಪರೀಕ್ಷಾ ಪ್ರಾಧಿಕಾರ ನಿರ್ವಹಿಸುತ್ತದೆ. ದೂರದರ್ಶನ ಅದನ್ನು ಪ್ರಸರಿಸುವ ಜವಾಬ್ದಾರಿ  ಮಾಡುತ್ತಿದೆ. ಇದು ಗ್ರಾಮೀಣ ಹಾಗೂ ಬಡಮಕ್ಕಳಿಗೆ ಅನುಕೂಲವಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ 8 ರಿಂದ 9, ರಾತ್ರಿ 10.30ರಿಂದ 11.30ರ ವರೆಗೆ ಪ್ರಸಾರವಾಗುತ್ತದೆ. ಇದನ್ನು ಮಾರ್ಚ್‌ನಿಂದ ಮಾಡುವ ಬದಲು ಆರಂಭದ ದಿನಗಳಿಂದ ಮಾಡಿದರೆ ಇದರ ಪ್ರಯೋಜನ ಹೆಚ್ಚಾಗಬಹುದು. ನುರಿತ  ತರಬೇತಿದಾರರು ತರಗತಿಯನ್ನು ನಡೆಸಿಕೊಡುತ್ತಿದ್ದಾರೆ. ಅದಕ್ಕೂ ಆಧುನಿಕ ಸ್ಪರ್ಶ ನೀಡುವ ಅಗತ್ಯ ಇದೆ. ಹಳೆಯ ತರಗತಿಯಂತೆ ಬೋರ್ಡ್‌ ಮೇಲೆ ಬರೆಯುತ್ತಾ ಹೋದರೆ ವೀಕ್ಷಕ ವಿದ್ಯಾರ್ಥಿಗೆ ಅಧ್ಯಾಪಕರು ಅಡ್ಡ ಕಾಣಿಸುತ್ತಾರೆ ಇದನ್ನು ತಪ್ಪಿಸುವ ಜೊತೆಗೆ ಪರೀಕ್ಷೆಯ ಸಮೀಪದ ದಿನಗಳಲ್ಲಿ ಕಲಿಸುವುದಕ್ಕಿಂತ ಶೈಕ್ಷಣಿಕ ವರ್ಷಾರಂಭದಿಂದ ಇದ್ದರೆ ಚೆನ್ನ.

ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಇದು ಒಳ್ಳೆಯ ಕಾರ್ಯಕ್ರಮ. ಶಿಕ್ಷಣದ ಜೊತೆ ಅನೇಕ ಮಾಹಿತಿಯನ್ನು ದೂರದರ್ಶನ ನೀಡುತ್ತಿದೆ. ಇದು ನಮ್ಮ ಸಾಮಾಜಿಕ ಜವಾಬ್ದಾರಿ.

*ಮಧುರಮಧುರವೀ ಮಂಜುಳಗಾನ ಕುರಿತು ಹೇಳುವುದಾದರೆ...
ಇದು ನಮ್ಮ ಕೇಂದ್ರದ ಜನಪ್ರಿಯ ಮನರಂಜನಾ ಕಾರ್ಯಕ್ರಮ. ಇದರ ಉದ್ದೇಶ ಆಸಕ್ತ ಗಾಯಕರಿಗೆ ವೇದಿಕೆ ಕಲ್ಪಿಸುವುದು. ಆದರೆ ಇದನ್ನು ರೂಪಿಸುವಾಗ ಪ್ರದೇಶವಾರು ಪ್ರಾಮುಖ್ಯತೆ, ಸ್ಥಳೀಯ ವಿಶೇಷತೆಗಳಿಗೆ ಒತ್ತುಕೊಟ್ಟಿರುತ್ತೇವೆ. ಜೊತೆಗೆ  ಹಬ್ಬ, ಹರಿದಿನ, ಜಾತ್ರೆ ಉತ್ಸವಗಳನ್ನೂ  ಪರಿಗಣಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಉದಾಹರಣೆಗೆ ಈಗ ಯುಗಾದಿಗೆ ಸಂಬಂಧಿಸಿದ ಹಾಡುಗಳಿಗೆ ಪ್ರಾಧಾನ್ಯ ಕೊಟ್ಟಂತೆ, ಹಿಂದೆ ರಾಯಚೂರಿನಲ್ಲಿ ನಡೆಸಿದ ಸ್ಪರ್ಧೆಯಲ್ಲಿ ರಾಘವೇಂದ್ರರಾಯರ ಕುರಿತ ಭಕ್ತಿಗೀತೆಗಳಿಗೆ ಮಹತ್ವ ನೀಡಲಾಗಿತ್ತು.

ಯುಗಾದಿ ಸಂಬಂಧಿತ ಕಂತನ್ನು ರಾಜಭವನದಲ್ಲಿ ಚಿತ್ರೀಕರಿಸಲಾಯಿತು. ಮುಂದೆ ನಿರ್ದೇಶಕ ಕೆ.ಎಸ್‌.ಎಲ್‌.ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಅವರ ಸ್ಮರಣೆಗೆ ಹಾವೇರಿಯಲ್ಲಿ ನಡೆಸಲಾಗುತ್ತಿದೆ.

*ಸ್ಫರ್ಧಿಗಳ ಆಯ್ಕೆಯನ್ನು ಹೇಗೆ ಮಾಡುತ್ತೀರಿ?
ಅದಕ್ಕಾಗಿ ಕೇಂದ್ರದ ಐವರು ಸದಸ್ಯರ ಸಮಿತಿಯೊಂದು ಕೆಲಸ ಮಾಡುತ್ತದೆ. ಆ ಸಮಿತಿ ಚಿತ್ರೀಕರಣ ಪೂರ್ವದಲ್ಲಿ ಪ್ರಕಟಣೆ ನೀಡಿ ಒಂದು ದಿನ ಆಡಿಷನ್‌ ಮಾಡುತ್ತದೆ. ಆಡಿಷನ್‌ಗೆ ಯಾರಾದರೂ ಭಾಗವಹಿಸಬಹುದು. ಅದರಲ್ಲಿ ಹಾಡುವಂತಹ ಕೆಲವರನ್ನು ಆಯ್ಕೆ ಮಾಡಿಕೊಂಡು ನಂತರದ ಒಂದು ದಿನ ಚಿತ್ರೀಕರಣ ಮಾಡಲಾಗುತ್ತದೆ. ಅದರ ನೇರ ವೀಕ್ಷಣೆಗೂ ಯಾರಾದರೂ ಬರಬಹುದು.

*ಥೀಮ್‌ಗಳನ್ನು ನಿರ್ಧರಿಸುವರು ಯಾರು?
ಥೀಮ್‌ಅನ್ನು ಸಮಿತಿಯೇ ನಿರ್ಧಿರಿಸುತ್ತದೆ. ಪ್ರಕೃತಿ, ಸಂಪ್ರದಾಯ, ನಿರ್ದೇಶಕ, ನಟ- ನಟಿಯರು, ಸಂಗೀತ ಸಂಯೋಜಕರು ಹೀಗೆ ನಾನಾ ವಿಷಯಗಳ ಆಧಾರದ ಮೇಲೆ ಥೀಮ್‌ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಹಳೆ ಚಿತ್ರಗೀತೆಗಳು ಹೆಚ್ಚಾಗಿ ಆಯ್ಕೆ ಮಾಡುವುದು ಮತ್ತೊಂದು ವಿಶೇಷ. ಏಕೆಂದರೆ ಗೀತ ಸಾಹಿತ್ಯ, ಅರ್ಥ, ಜೀವನಾನುಭವವನ್ನು ಅವು ದಟ್ಟವಾಗಿ ಕಟ್ಟಿಕೊಡುತ್ತವೆ ಎನ್ನುವುದು ಇದಕ್ಕೆ ಕಾರಣ. ಹಾಡುಗಳು ಕೂಡ ಕೇಳಲು ಇಂಪಾಗಿರುವ ಜೊತೆಗೆ ಅರ್ಥಗರ್ಭಿತವಾಗಿರುವುದರಿಂದ ಮಧುರ ಮಧುರವೀ ಮಂಜುಳಗಾನ ಶೀರ್ಷೀಕೆಗೂ ಅರ್ಥ ತುಂಬಿದಂತಾಗುತ್ತದೆ.

* ಥಟ್‌ ಅಂತ ಹೇಳಿ ಏಕತಾನತೆಯಿಂದ ಕೂಡಿದೆ ಎನ್ನುವ ಆಕ್ಷೇಪ ವೀಕ್ಷಕರಿಂದ ಕೇಳಿಬರುತ್ತಿದೆ. ಅದರ ಬದಲಾವಣೆಗೆ ಚಿಂತನೆ ಇದೆಯಾ?
ಖಂಡಿತ. ಅದು ನಮ್ಮ ಅತ್ಯಂತ ಜನಪ್ರಿಯ ಕಾಯಕ್ರಮ. ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ನಡೆದು ಬರುತ್ತಿರುವ ‘ಥಟ್‌ ಅಂತ ಹೇಳಿ’ ಸುಮಾರು 3000 ಕಂತುಗಳನ್ನು ಪೂರೈಸಲಿದೆ. ಎಂದೂ ಕೂಡ ಪುನರಾವರ್ತನೆಯಾಗಿಲ್ಲ. ಈಗಲೂ ಅದು ತನ್ನ ಆಕರ್ಷಣೆಯನ್ನೂ ಕಡಿಮೆ ಮಾಡಿಕೊಂಡಿಲ್ಲ. ಶೀಘ್ರದಲ್ಲಿ ಅದರಲ್ಲಿಯೂ ಒಂದಿಷ್ಟು ಬದಲಾವಣೆ ತರುವ ಮೂಲಕ ವೀಕ್ಷಕರ ಆ ಆಕ್ಷೇಪಕ್ಕೆ ಕೇಂದ್ರ ಸ್ಪಂದಿಸುತ್ತದೆ. ಈಗಲೇ ನಮ್ಮ ಅದರ ಸ್ವರೂಪವನ್ನು ಹೇಳುವುದಿಲ್ಲ. ಅದನ್ನು ನೇರವಾಗಿ ಪರದೆಯ ಮೇಲೆ ಮಾಡಿ ತೋರಿಸುತ್ತೇವೆ.

*ಥಟ್‌ ಸ್ಫರ್ಧಿಗಳಿಗೆ ಸಂಭಾವನೆಯನ್ನೂ ಕೊಡುತ್ತೀರಾ?
ಅದಕ್ಕೆ ಪುಸ್ತಕ ರೂಪದಲ್ಲಿ ಬಹುಮಾನ ಕೊಡುತ್ತೇವೆ. ಅದನ್ನು ಬಿಟ್ಟು ಯಾವ ಪುರಸ್ಕಾರವನ್ನೂ ಕೊಡುವುದಿಲ್ಲ. ದೂರದ ಊರುಗಳಿಂದ ಬರುವ ಸ್ಫರ್ಧಾಳುಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ಬೆಂಗಳೂರಿನವರಿಗೆ ಈ ಭತ್ಯೆಯನ್ನು ಕೊಡಲು ಬರುವುದಿಲ್ಲ. ಕಾರ್ಯಕ್ರಮಕ್ಕೆ ಅವಕಾಶ ಕೋರಿ ತುಂಬಾ ಬೇಡಿಕೆ ಕೂಡ ಇದೆ. ನಿತ್ಯವೂ ನೂರಾರು ಪತ್ರಗಳು ಬರುತ್ತವೆ. ನಾವು ಸಮಯ- ಅವಕಾಶವನ್ನು ನೋಡಿ ಅವುಗಳನ್ನು ಇತ್ಯರ್ಥ ಮಾಡುತ್ತಿದ್ದೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT