ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ರೋಗಿಗಳಿಗೆ ವರ

ಸುಪ್ರೀಂಕೋರ್ಟ್ ಮಹತ್ವದ ತೀರ್ಪು, ಸ್ವಿಸ್ ಕಂಪೆನಿ `ನೋವಾರ್ಟಿಸ್'ಗೆ ಸೋಲು
Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಕ್ತ ಕ್ಯಾನ್ಸರ್ ನಿಯಂತ್ರಣಕ್ಕೆ ದುಬಾರಿ ದರದ ಔಷಧ ತಯಾರಿಸುವ ಸ್ವಿಟ್ಜರ್‌ಲೆಂಡ್ ಮೂಲದ ಪ್ರಖ್ಯಾತ ಔಷಧಿ ಕಂಪೆನಿ `ನೋವಾರ್ಟಿಸ್', ಭಾರತದಲ್ಲಿ ತನ್ನ ಉತ್ಪನ್ನದ ಹಕ್ಕುಸ್ವಾಮ್ಯ (ಪೇಟೆಂಟ್) ಸಾಧಿಸಲು 7 ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಸಮರದಲ್ಲಿ ಸೋಲು ಕಂಡಿದೆ. 

ಕಂಪೆನಿಯ  ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿಹಾಕುವ ಮೂಲಕ ಕಡಿಮೆ ಬೆಲೆಯಲ್ಲಿ ಜೆನರಿಕ್ ಔಷಧಿ ತಯಾರಿಸುವ ದೇಸಿ ಕಂಪೆನಿಗಳ ಹಿತಾಸಕ್ತಿ ರಕ್ಷಿಸಿದೆ.

ರಕ್ತ ಕ್ಯಾನ್ಸರ್ ಹತೋಟಿಗೆ ತಾನು ಅಭಿವೃದ್ಧಿಪಡಿಸಿರುವ `ಗ್ಲಿವೆಕ್'ನಲ್ಲಿ ಹೊಸ ರಾಸಾಯನಿಕ ಪದಾರ್ಥ ಬಳಸಲಾಗಿದ್ದು ಭಾರತದಲ್ಲಿ ಇದರ ಉತ್ಪಾದನೆಗೆ ಪೇಟೆಂಟ್ ನೀಡಬೇಕು ಎಂಬ `ನೋವಾರ್ಟಿಸ್' ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಅಫ್ತಾಬ್ ಅಲಂ ಹಾಗೂ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ಪೀಠ ತಿರಸ್ಕರಿಸಿತು. ಭಾರತೀಯ ಕಂಪೆನಿಗಳು ಈ ಔಷಧ ತಯಾರಿಸದಂತೆ ನಿರ್ಬಂಧ ಹೇರಬೇಕು ಎಂಬ ಕೋರಿಕೆಯನ್ನೂ ತಳ್ಳಿಹಾಕಿತು. 

ದೂರವಾದ ಅಡ್ಡಿ: ಸುಪ್ರೀಂಕೋರ್ಟ್ ನೀಡಿರುವ ಈ ಮಹತ್ವದ ತೀರ್ಪನ್ನು ವಿಶ್ವದಾದ್ಯಂತ ಔಷಧಿ ಕಂಪೆನಿಗಳು ಆಸಕ್ತಿಯಿಂದ ಗಮನಿಸುತ್ತಿವೆ. ಅಲ್ಲದೆ ರಕ್ತ ಕ್ಯಾನ್ಸರ್ ನಿಯಂತ್ರಣಕ್ಕೆ ಜೆನರಿಕ್ ಮದ್ದು ಸಿದ್ಧಪಡಿಸುವಲ್ಲಿ ಭಾರತೀಯ ಔಷಧಿ ಕಂಪೆನಿಗಳಿಗೆ ಒದಗಿಬಂದಿದ್ದ ಬಹುದೊಡ್ಡ ಅಡ್ಡಿ ಇದರಿಂದ ದೂರವಾದಂತಾಗಿದೆ.

ನೋವಾರ್ಟಿಸ್ ಕಂಪೆನಿ ತಯಾರಿಸಿದ `ಗ್ಲಿವೆಕ್' ಔಷಧಿಯನ್ನು ಒಂದು ತಿಂಗಳು ತೆಗೆದುಕೊಳ್ಳಲು ತಗಲುವ ವೆಚ್ಚ ಸುಮಾರು ರೂ. 1.2 ಲಕ್ಷ.  ಭಾರತೀಯ ಕಂಪೆನಿಗಳು ಇದೇ ರಾಸಾಯನಿಕ ಅಂಶ ಹೊಂದಿರುವ  `ಜೆನರಿಕ್' ಔಷಧ ಸಿದ್ಧಪಡಿಸಿದಲ್ಲಿ ಅದಕ್ಕೆ ತಗಲುವ ವೆಚ್ಚ ಕೇವಲ ರೂ. 8 ಸಾವಿರ. ಹಾಗಾಗಿ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ರೋಗಿಗಳು ದುಬಾರಿ ದರದ ಔಷಧಿ ಖರೀದಿಸುವ  ಸಂಕಷ್ಟ ಇದೀಗ ದೂರವಾಗಲಿದೆ.

ಐತಿಹಾಸಿಕ ತೀರ್ಪು: ದೇಶದ ಪ್ರಮುಖ ಔಷಧಿ ಕಂಪೆನಿಗಳಾದ `ರ‌್ಯಾನ್‌ಬಾಕ್ಸಿ' ಹಾಗೂ `ಸಿಪ್ಲಾ' ಪರವಾಗಿ ವಾದ ಮಂಡಿಸಿದ ವಕೀಲರಾದ ಪ್ರತಿಭಾ ಸಿಂಗ್, `ಭಾರತೀಯ ಔಷಧಿ ಕಂಪೆನಿಗಳ ಪಾಲಿಗೆ ಇದೊಂದು ಐತಿಹಾಸಿಕ ತೀರ್ಪು. ರಕ್ತ ಕ್ಯಾನ್ಸರ್ ರೋಗಿಗಳಿಗಾಗಿ ಇನ್ನು ಮುಂದೆ ಕಡಿಮೆ ವೆಚ್ಚದ ಔಷಧಿಗಳನ್ನು ತಯಾರಿಸಲು ಇದರಿಂದ ಸಹಾಯವಾಗಲಿದೆ. ಈ ತೀರ್ಪಿನಿಂದಾಗಿ ವಿದೇಶಿ ಔಷಧಿ ಕಂಪೆನಿಗಳು ಆತಂಕಗೊಳ್ಳುವ ಅಗತ್ಯ ಇಲ್ಲ. ಗುಣಮಟ್ಟದ ಔಷಧಿ ತಯಾರಿಕಾ ಕಂಪೆನಿಗಳಿಗೆ ಇದರಿಂದ ಯಾವ ತೊಂದರೆಯೂ ಆಗದು' ಎಂದು ತಿಳಿಸಿದರು.

ಕಾನೂನು ಸಮರ:
`ಗ್ಲಿವೆಕ್' ಔಷಧಿಯಲ್ಲಿ `ಇಮ್ಯಾಟಿನಿಬ್ ಮೆಸಿಲೇಟ್' ರಾಸಾಯನಿಕ ಪದಾರ್ಥ ಬಳಸುವುದು ಎಲ್ಲರಿಗೂ ತಿಳಿದಿದೆ. ಇದೇ ಕಾರಣ ಮುಂದಿಟ್ಟುಕೊಂಡು ನೋವಾರ್ಟಿಸ್ ಪೇಟೆಂಟ್ ಬೇಕು ಎಂದು ಪ್ರತಿಪಾದಿಸುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪೇಟೆಂಟ್ ನೀಡುವಂತೆ ನೋವಾರ್ಟಿಸ್ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲು ಚೆನ್ನೈನ `ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ' ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಕಂಪೆನಿ 2009ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಇದಕ್ಕೂ ಮೊದಲು 2006ರಲ್ಲಿ ಸಂಸ್ಥೆಯು ಪೇಟೆಂಟ್ ಹಾಗೂ ವಿನ್ಯಾಸದ ಕುರಿತಾದ ಮಹಾನಿಯಂತ್ರಕರ ಮುಂದೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿತ್ತು. ಭಾರತೀಯ ಪೇಟೆಂಟ್ ಕಾನೂನಿನ ಅಡಿ ಹಲವು ಷರತ್ತುಗಳನ್ನು ಪೂರೈಸಲು ವಿಫಲವಾಗಿರುವುದರಿಂದ `ಗ್ಲಿವೆಕ್'ಗೆ ಪೇಟೆಂಟ್ ನೀಡಲು ಸಾಧ್ಯವಿಲ್ಲ ಎಂದು ಆಗ ಮಹಾನಿಯಂತ್ರಕರು ತಿಳಿಸಿದ್ದರು.

ಈ ಸಂಬಂಧ ಕಂಪೆನಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್, `ಪೇಟೆಂಟ್‌ಗೆ ಬೇಡಿಕೆ ಸಲ್ಲಿಸಿರುವುದು ಬಡ ಜನರಿಂದ ಹಣ ಮಾಡುವುದಕ್ಕಲ್ಲ. ಕಂಪೆನಿಯ ಯೋಜನೆಯನ್ವಯ ಶೇ 80 ರಷ್ಟು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು' ಎಂದು ಹೇಳಿದ್ದರು.

ಐತಿಹಾಸಿಕ ತೀರ್ಪು
ಬಡ ರೋಗಿಗಳ ಪರವಾಗಿ ಇದೊಂದು ಐತಿಹಾಸಿಕ ತೀರ್ಪು ಎಂದಿರುವ ಭಾರತೀಯ ಔಷಧಿ ತಯಾರಕರ ಸಂಸ್ಥೆ (ಐಡಿಎಂಎ) ಪ್ರಧಾನ ಕಾರ್ಯದರ್ಶಿ ದಾರಾ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಜೆನರಿಕ್, ಬ್ರಾಂಡೆಡ್ ಔಷಧದ ನಡುವೆ ವ್ಯತ್ಯಾಸವೇನು?
ಜೆನರಿಕ್ ಔಷಧ ಎಂದರೆ ರಾಸಾಯನಿಕಗಳ ಹೆಸರಲ್ಲಿ, ಔಷಧಶಾಸ್ತ್ರೀಯ ಹೆಸರಲ್ಲಿ ಮಾರಾಟವಾಗುವ ಔಷಧ. ಯಾವುದೇ ಜಾಹೀರಾತು ಇಲ್ಲದೇ ಮಾರಾಟ ಮಾಡಲಾಗುತ್ತದೆ. ಹಾಗಾಗಿ ಈ ಔಷಧಗಳಿಗೆ ಬೆಲೆ ಕಡಿಮೆ. ಉದಾಹಣೆಗೆ: ಪ್ಯಾರಾಸಿಟಮಾಲ್

ಬ್ರಾಂಡೆಡ್ ಔಷಧಗಳು: ಕಂಪೆನಿಯ ಹೆಸರಿನಲ್ಲಿ ಮಾರಾಟವಾಗುವ ಔಷಧಗಳೆಲ್ಲ ಬ್ರಾಂಡೆಡ್ ಔಷಧಗಳಾಗಿರುತ್ತವೆ. ಇವುಗಳಿಗೆ ಕಂಪೆನಿಗಳು `ಹಕ್ಕು ಸ್ವಾಮ್ಯ' (ಪೇಟೆಂಟ್) ತೆಗೆದುಕೊಂಡಿರುತ್ತವೆ. ಈ ಔಷಧಗಳಿಗೆ ಬಳಸಿರುವ ರಾಸಾಯನಿಕ ಸಂಯೋಜನೆಯನ್ನು ಬೇರೆಯವರು ಬಳಸುವಂತಿಲ್ಲ. ಪೇಟೆಂಟ್ ಅವಧಿ ಗರಿಷ್ಠ 15-20 ವರ್ಷಗಳು. ಈ ಅವಧಿ ಮುಗಿದ ಮೇಲೆ ಬ್ರಾಂಡೆಡ್ ಔಷಧಗಳು- ಜೆನರಿಕ್ ಔಷಧಗಳಾಗಬಹದು. ಅಂದರೆ ಈ ಔಷಧಗಳಿಗೆ ಬಳಸಿರುವ ರಾಸಾಯನಿಕ ಸಂಯೋಜನೆಗಳನ್ನು ಬೇರೆಯವರು ಬಳಸಿಕೊಳ್ಳಬಹುದು.

ಹೂಡಿಕೆ ಮಾಡುವುದಿಲ್ಲ
ಮುಂಬೈ (ಪಿಟಿಐ):
  ನೋವಾರ್ಟಿಸ್ ಇನ್ನು ಮುಂದೆ ಭಾರತದಲ್ಲಿ ಸಂಶೋಧನೆ ಇಲ್ಲವೇ ಅಭಿವೃದ್ಧಿ (ಆರ್ ಆ್ಯಂಡ್ ಡಿ ) ಕ್ಷೇತ್ರದಲ್ಲಿ ಹೂಡಿಕೆ ಕೈಗೊಳ್ಳುವುದಿಲ್ಲ. ಉತ್ಪನ್ನಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡುತ್ತದೆ.
-ರಣಜಿತ್ ಸಹಾನಿ, ನೋವಾರ್ಟಿಸ್ ಇಂಡಿಯಾ ಎಂ.ಡಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT