ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಪಾಯಿ ವರ್ತಕರ ಎತ್ತಂಗಡಿ; ಕಾರುಗಳಿಗೆ ಸ್ಥಳ

Last Updated 1 ಜೂನ್ 2011, 9:40 IST
ಅಕ್ಷರ ಗಾತ್ರ

ಮಂಗಳೂರು: ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಮಹಾನಗರ ಪಾಲಿಕೆ ಕೈಗೊಂಡಿರುವ `ಟೈಗರ್~ ಕಾರ್ಯಾಚರಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವಾಗಲೇ ನಗರದ ಸ್ಟೇಟ್ ಬ್ಯಾಂಕ್ ಬಳಿಯ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿರುವ ಸ್ಥಳದಲ್ಲೇ ವಾಹನ ನಿಲುಗಡೆಗೆ ಅವಕಾಶ ನೀಡಿರುವುದು ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ ಪಾಲಿಕೆಯ `ನಿರ್ದಾಕ್ಷಿಣ್ಯ~ ಕ್ರಮ ದಿನ ಕೂಳಿಗೆ ಬೀದಿಬದಿ ವ್ಯಾಪಾರವನ್ನೇ ಅವಲಂಬಿಸಿದ್ದವರ `ಹೊಟ್ಟೆ~ಗೆ ಹೊಡೆತ ನೀಡಿದಂತಾಗಿದೆ.

ಬೀದಿಬದಿ ವ್ಯಾಪಾರಿಗಳಿಂದ ಪಾದಚಾರಿ ಹಾಗೂ ವಾಹನಗಳಿಗೆ ತೊಂದರೆಯಾಗಲಿದೆ ಎಂಬ ಕಾರಣ ಮುಂದಿಟ್ಟು ಪಾಲಿಕೆ ಆಡಳಿತ ನಗರದ ಹಲವೆಡೆ `ಟೈಗರ್~ ಮೂಲಕ ಕಾರ್ಯಾಚರಣೆ ಆರಂಭಿಸಿದಾಗಿನಿಂದ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇದೆ. ಈ ಸಂಬಂಧ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಧರಣಿ-ಪ್ರತಿಭಟನೆಯೂ ನಡೆದಿದೆ.

ಆದರೆ ಈಗ ವರ್ತಕರನ್ನು `ಖಾಲಿ~ ಮಾಡಿಸಿದ ಸ್ಥಳದಲ್ಲೇ ವಾಹನ `ಭರ್ತಿ~ಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಪಾಲಿಕೆ `ಶ್ರೀಮಂತರ ಪರ~ವಾಗಿದೆ ಎಂದು ವ್ಯಾಪಾರಿಗಳೂ ದೂರುವಂತಾಗಿದೆ.

ನಗರದ ಅತ್ಯಂತ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಇರುವ ಪ್ರದೇಶವೆಂದರೆ ಸ್ಟೇಟ್ ಬ್ಯಾಂಕ್ ಪ್ರದೇಶ. ನಗರ ಸಾರಿಗೆಯ ಖಾಸಗಿ ಬಸ್ ನಿಲ್ದಾಣವೂ ಪಕ್ಕದಲ್ಲೇ ಇರುವುದರಿಂದ ದಿನದ ಎಲ್ಲ ವೇಳೆಯೂ ಇಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆದ್ದರಿಂದಲೇ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚು. ಈ ಬಸ್ ನಿಲ್ದಾಣದ ಸಮೀಪವೇ ಹಸಿಮೀನು ಮತ್ತು ಒಣಮೀನು ಮಾರುಕಟ್ಟೆಯೂ ಇದೆ.

ಇಲ್ಲಿಗೂ ಸಾಕಷ್ಟು ಗ್ರಾಹಕರು ಭೇಟಿ ನೀಡುತ್ತಾರೆ. ಒಟ್ಟಾರೆ ಸ್ಟೇಟ್‌ಬ್ಯಾಂಕ್ ಎಲ್ಲ ಸಮಯದಲ್ಲೂ ಜನರಿಂದ ಗಿಜಿಗುಡುವ ಸ್ಥಳ. ಇದೆಲ್ಲದರಿಂದ ಪಾದಚಾರಿಗಳಿಗೆ ತೊಂದರೆಯಾಗದಿರಲಿ ಎಂದು ಬಸ್‌ಗಳು ಪ್ರವೇಶ ಮಾಡುವ ಸ್ಥಳದಿಂದ ಬಹುದೂರದವರೆಗೆ ತಳವೂರಿದ್ದ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿ, ಅದೇ ಜಾಗದಲ್ಲಿ ಪಾರ್ಕಿಂಗ್‌ಗೆ `ವ್ಯವಸ್ಥೆ~ ಮಾಡಲಾಗಿದೆ.

ಈಗಾಗಲೇ ಇಲ್ಲಿ ಬಸ್ ಸಂಚಾರಕ್ಕೆ ಅಡಚಣೆಯಾಗುವಷ್ಟು ಸ್ಥಳಾಭಾವವಿತ್ತು. ಇದೀಗ ಮತ್ತೆ ವಾಹನ ನಿಲುಗಡೆಗೆ ಅವಕಾಶ ಒದಗಿಸಿದ್ದರಿಂದ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಇದರಿಂದ ಮಹಾನಗರ ಪಾಲಿಕೆ ದ್ವಂದ್ವ ನೀತಿ ಪಾಲಿಸುತ್ತಿದೆ. ಬಡವರಿಗೆ ಒಂದು ಕಾನೂನು ಶ್ರೀಮಂತಿಗೆ ಮತ್ತೊಂದು ಎಂದು ಕೆಲ ವ್ಯಾಪಾರಿಗಳು ಆಪಾದಿಸಿದ್ದಾರೆ. 

`ಗೂಂಡಾಗಿರಿ ಮಾಡ್ತಾರೆ~:  ಬೀದಿಬದಿ ವ್ಯಾಪಾರಿಗಳನ್ನು ಪಾಲಿಕೆ ಎತ್ತಂಗಡಿ ಮಾಡಿ ಪಾದಚಾರಿ ಮಾರ್ಗ ನಿರ್ಮಿಸಿದ ನಂತರವೂ ಕೆಲ ವ್ಯಾಪಾರಿಗಳು ಇಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರೆಲ್ಲ ಪಾಲಿಕೆಯ `ಟೈಗರ್~ ವಾಹನಕ್ಕೆ ಹೆದರುತ್ತಲೇ ಗ್ರಾಹಕರನ್ನು ಕರೆದು ವ್ಯಾಪಾರ ಮಾಡುತ್ತಿದ್ದಾರೆ.

`10-12 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೆ. ಈಗ ಪಾಲಿಕೆ ದಿಢೀರ್ ಎಂದು ನಮ್ಮನ್ನೆಲ್ಲ ಎತ್ತಂಗಡಿ ಮಾಡಿದೆ. ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸದೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡಿದೆ~ ಎಂದು ಮಾವಿನಹಣ್ಣಿನ ವ್ಯಾಪಾರಿ ಮೊಹಮ್ಮದ್ ರಫೀಕ್ ಪ್ರಜಾವಾಣಿ ಬಳಿ ಮಂಗಳವಾರ ದೂರಿದರು.

`ಪಾಲಿಕೆ ವಾಹನದಲ್ಲಿ ಬರುವವರು ಸೌಜನ್ಯದಿಂದಂತೂ ವರ್ತಿಸುವುದೇ ಇಲ್ಲ. ಗೂಂಡಾಗಿರಿ ಮಾಡುತ್ತಾರೆ. ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ವ್ಯಾಪಾರಕ್ಕೆ ಇಟ್ಟಿರುವ ಸಾಮಗ್ರಿಗಳನ್ನಷ್ಟೇ ಅಲ್ಲದೆ, ಗೋದಾಮಿನಲ್ಲಿರುವ ಸರಕನ್ನೂ ಹೊತ್ತುಕೊಂಡು ಹೋಗುತ್ತಾರೆ. ಇದ್ಯಾವ ನ್ಯಾಯ?~ ಎಂದು ಅವರು ಪ್ರಶ್ನಿಸುತ್ತಾರೆ.

ಮತ್ತೆ ಸಭೆ:  ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಒದಗಿಸದೆ ಟೈಗರ್ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರ ಪಾಲಿಕೆ ಧೋರಣೆ ವಿರೋಧಿಸಿ ಈಗಾಗಲೇ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಹಲವು ಕಡೆ ಪ್ರತಿಭಟನೆ ನಡೆಸಿರುವ ವ್ಯಾಪಾರಿಗಳು, ಪಾಲಿಕೆಗೂ ಮತ್ತಿಗೆ ಹಾಕಿದ್ದರು.

ಹಿಂದೆ ಪಾಲಿಕೆ ಆಯುಕ್ತರ ಜತೆಗೆ ಸಭೆಯನ್ನೂ ನಡೆಸಿದ್ದರು. ಆದರೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಈ ಸಂಬಂಧ ಗುರುವಾರ ನಡೆಯುವ ಸಭೆಯಲ್ಲಿ ತೀರ್ಮಾನವಾಗಲೇಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ದೊಡ್ಡ ಕಂಪೆನಿ ಹುನ್ನಾರ: `ಮಹಾನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ಹಿಂದೆ ದೊಡ್ಡ ಕಂಪೆನಿಗಳ ಹುನ್ನಾರವಿದೆ. ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರು ಬೀದಿಬದಿ ವ್ಯಾಪಾರಿಗಳಲ್ಲಿಯೇ ಹೆಚ್ಚು ವಸ್ತುಗಳನ್ನು ಖರೀದಿಸುತ್ತಾರೆ. ಎಲ್ಲರೂ ದೊಡ್ಡ ಮಾಲ್‌ಗಳಲ್ಲಿನ ಬಜಾರ್‌ಗಳಿಗೆ, ಐಷಾರಾಮಿ ಅಂಗಡಿಗಳಿಗೆ ಹೋಗಲು ಸಾಧ್ಯವಿಲ್ಲ~ ಎನ್ನುವುದು ಗ್ರಾಹಕ ರಾಜೇಶ್ ಅವರ ಪ್ರತಿಪಾದನೆ.

`ಇಂದು ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ಪಾಲಿಕೆ ನಾಳೆ ಗೂಡಂಗಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನೂ ಖಾಲಿ ಮಾಡಿಸುತ್ತಾರೆ~ ಎಂದು ಎಚ್ಚರಿಸುವ ಮಾತನಾಡಿದವರು ಮತ್ತೊಬ್ಬ ಗ್ರಾಹಕ ಹಮೀದ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT