ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ನಿರ್ಲಕ್ಷಿಸಿದ ಎಂಎಫ್‌ಐ

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ’-
ಹೀಗೆಂದು ಸರ್ವಜ್ಞ ಶತಮಾನಗಳ ಹಿಂದೆಯೇ ಹೇಳಿದ್ದಾನೆ. ಈ ಮಾತು 21ನೇ ಶತಮಾನದ ಕಿರು ಹಣಕಾಸು ಸಂಸ್ಥೆಗಳ ವಹಿವಾಟಿನ ವಿಷಯದಲ್ಲಿಯೂ ಅನ್ವಯಿಸುತ್ತದೆ. ಬಡವರ ರಕ್ತವನ್ನು ತಿಗಣೆಯಂತೆ ಹೀರುತ್ತಿದ್ದ ಕಿರು ಹಣಕಾಸು ಸಂಸ್ಥೆಗಳ ವಹಿವಾಟನ್ನು ನಿಯಂತ್ರಿಸಿ ಈ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ ಬ್ಯಾಂಕ್ ನೇಮಿಸಿದ್ದ ಮಾಲೆಗಂ ಸಮಿತಿ ಮಾಡಿರುವ ಶಿಫಾರಸುಗಳು ಈ ರಂಗದಲ್ಲಿ ತೀವ್ರ ಚರ್ಚೆಗೆ ಆಸ್ಪದ ಮಾಡಿಕೊಟ್ಟಿವೆ.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಲೇವಾದೇವಿಗಾರರು ಮತ್ತು ಇತರ ಬಡ್ಡಿ ವ್ಯವಹಾರಸ್ಥರ ಬಳಿ ಸಾಲ ಪಡೆದು ದುಬಾರಿ ಬಡ್ಡಿ ಪಾವತಿಸುತ್ತ ಬದುಕಿನುದ್ದಕ್ಕೂ ಸಾಲದ ಸುಳಿಯಲ್ಲಿಯೇ ಸಿಲುಕಿ ಒದ್ದಾಡುತ್ತಾರೆ. ಸಾಲ ವಿತರಣೆಗೆ ಸಮರ್ಪಕ ಬ್ಯಾಂಕಿಂಗ್ ವ್ಯವಸ್ಥೆ ಇದ್ದರೂ ಅದು ಸಾಲದ ಬೇಡಿಕೆ ಮತ್ತು ಪೂರೈಕೆ ಅಂತರ ನಿವಾರಿಸಲು ಸಾಧ್ಯವಾಗುತ್ತಿಲ್ಲ.

ಬ್ಯಾಂಕಿಂಗ್ ವ್ಯವಸ್ಥೆ ಎಲ್ಲೆಡೆ ಸಮರ್ಪಕವಾಗಿರದ ಮತ್ತು ಬ್ಯಾಂಕುಗಳು ಸಾಲ ಮಂಜೂರಾತಿಗೆ ಹಲವಾರು ಷರತ್ತುಗಳನ್ನು ವಿಧಿಸುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡು ಬಂದಿದ್ದಾರೆ. ‘ಹಣಕಾಸು ಸೇರ್ಪಡೆ’ಯಲ್ಲಿ ಈ ವ್ಯವಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ವ್ಯವಸ್ಥೆಯಿಂದ ಇವುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವೂ ಇಲ್ಲ.

ಬ್ಯಾಂಕ್‌ಗಳು ಮಧ್ಯವರ್ತಿಗಳ ಮೂಲಕ ಸಣ್ಣ ಪ್ರಮಾಣದ ಸಾಲ ನೀಡುವುದು ಆದ್ಯತಾ ವಲಯ ಎಂದು ಮಾನ್ಯತೆ ಪಡೆದ ನಂತರ ಈ ಕಿರು ಹಣಕಾಸು ವ್ಯವಸ್ಥೆಯ ಚಿತ್ರಣವೇ ಬದಲಾಯಿತು. ‘ಎಂಎಫ್‌ಐ’ಗಳು ಬ್ಯಾಂಕುಗಳಿಂದ ಕಡಿಮೆ ಬಡ್ಡಿಗೆ ಸಾಲ ಪಡೆದು ಬಡವರಿಗೆ ದುಬಾರಿ (ಶೇ 30ರಿಂದ 36ರಷ್ಟು) ಬಡ್ಡಿ ವಸೂಲು ಮಾಡುವ ಹಗಲು ದರೋಡೆಗೆ ಇಳಿದವು. ಸಾಲ ವಸೂಲಿಗೆ ಬಲ ಪ್ರಯೋಗಕ್ಕೂ ಮುಂದಾದವು. ಇದು ಸಾಲ ಪಡೆದವರ ಬದುಕಿನ ಬವಣೆಯನ್ನು ಇನ್ನಷ್ಟು ಹೆಚ್ಚಿಸಿತು. ಇದರಿಂದ ಒಟ್ಟಾರೆ ಈ ವ್ಯವಸ್ಥೆಯ ಕರಾಳ ಮುಖ ಬಯಲಿಗೆ ಬರಲಾರಂಭಿಸಿತು.

ಹಲವಾರು ಕಾರಣಕ್ಕೆ ವಿವಾದಕ್ಕೆ ಗುರಿಯಾಗಿ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಕಿರು ಹಣಕಾಸು ವಲಯಕ್ಕೆ ಪುನಶ್ಚೇತನ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು, ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ್ದ ಉಪ ಸಮಿತಿಯು ಈಗ  ತನ್ನ ವರದಿ ನೀಡಿದೆ. ಆರ್‌ಬಿಐನ ಕೇಂದ್ರೀಯ ಮಂಡಳಿಯ ನಿರ್ದೇಶಕ ವೈ. ಎಚ್. ಮಾಲೆಗಂ ನೇತೃತ್ವದ ಸಮಿತಿಯು, ದುಬಾರಿ ಬಡ್ಡಿ ದರ ಮತ್ತು ಸಾಲ ವಸೂಲಾತಿಗೆ ಬೆದರಿಕೆ ತಂತ್ರ ಅನುಸರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಿರು ಹಣಕಾಸು ವ್ಯವಸ್ಥೆಯ ಒಟ್ಟಾರೆ ಸ್ವರೂಪ ಸರಳಗೊಳಿಸಲು ಹಲವಾರು ಸಲಹೆಗಳನ್ನು ನೀಡಿದೆ.

ಶೇ 24ರಷ್ಟು ಗರಿಷ್ಠ ಬಡ್ಡಿ ದರ ಮಿತಿ. ವ್ಯಕ್ತಿಗಳಿಗೆ ಮಂಜೂರು ಮಾಡುವ ಸಾಲದ ಗರಿಷ್ಠ ಮಿತಿ ್ಙ 25 ಸಾವಿರ. ಸಾಲಗಾರರ ಕುಟುಂಬದ ವಾರ್ಷಿಕ ಆದಾಯ ್ಙ 50 ಸಾವಿರಕ್ಕಿಂತ ಕಡಿಮೆ ಇರಬೇಕು. ಸಾಲಗಾರರ ಅನುಕೂಲಕ್ಕೆ ತಕ್ಕಂತೆ ಸಾಲ ಮರುಪಾವತಿಯು ವಾರ, ಹದಿನೈದು ದಿನ, ಮಾಸಿಕ ಕಂತಿನಲ್ಲಿ ಇರಬೇಕು. ಸಾಲದ ಶೇ 75ರಷ್ಟು ಮೊತ್ತ ವರಮಾನ ಹೆಚ್ಚಳಕ್ಕೆ ಬಳಕೆಯಾಗಬೇಕು. ಬ್ಯಾಂಕ್‌ಗಳು ಆದ್ಯತಾ ವಲಯದ ಸಾಲ ಸೌಲಭ್ಯವನ್ನು ‘ಎಂಎಫ್‌ಐಗಳಿಗೆ ಮುಂದುವರೆಸಬೇಕು. ಸಾಲದ ಪ್ರಮಾಣವೂ ಹೆಚ್ಚಬೇಕು. ಕಿರು ಹಣಕಾಸು ಸಂಸ್ಥೆಗಳನ್ನು ಪ್ರತ್ಯೇಕ ಬ್ಯಾಂಕೇತರ ಹಣಕಾಸು ಕಂಪನಿಗಳಾಗಿ ರಚಿಸಿ ಅವುಗಳನ್ನು ಇನ್ನಷ್ಟು ನಿಯಂತ್ರಣಕ್ಕೆ ಒಳಪಡಿಸುವ ಸಲಹೆಗಳನ್ನು ನೀಡಿದೆ.

ಸಮಿತಿಯ ಆಶಯ ಮತ್ತು ಶಿಫಾರಸುಗಳು ಸದುದ್ದೇಶದಿಂದಲೇ ಕೂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಸಮಿತಿಯ ಹಲವಾರು ಶಿಫಾರಸುಗಳ ಬಗ್ಗೆ ಆರ್ಥಿಕ ತಜ್ಞರು, ಕಿರು ಹಣಕಾಸು ಸಂಸ್ಥೆಗಳ ನಿರ್ವಾಹಕರು ಅಪಸ್ವರ ಎತ್ತಿದ್ದಾರೆ.

ಗರಿಷ್ಠ ಬಡ್ಡಿ ದರ ಮತ್ತು ಲಾಭದ ಗರಿಷ್ಠ ಮಿತಿಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಜಾರಿಗೆ ತರುವುದು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಣಕಾಸು ನೆರವಿನ ತುರ್ತು ಅಗತ್ಯ ಇರುವ ಕಡು ಬಡವರನ್ನು ಕಿರು ಹಣಕಾಸು ಸಂಸ್ಥೆಗಳು ನಿರ್ಲಕ್ಷಿಸುತ್ತಲೇ ಬಂದಿವೆ. ಬಡತನ ರೇಖೆಗಿಂತ ಕೆಳಗೆ ಇರುವವರಿಗೆ (ಕಡು ಬಡವರಿಗೆ) ಗರಿಷ್ಠ ಪ್ರಮಾಣದಲ್ಲಿ ಸಾಲ ನೀಡುವಂತಾಗಬೇಕು ಎನ್ನುವ ಸದುದ್ದೇಶದಿಂದ ಈ ಶಿಫಾರಸುಗಳನ್ನು ಮಾಡಿರುವೆ ಎಂದು ವೈ. ಎಚ್. ಮಾಲೆಗಂ ತಮ್ಮ ಸಲಹೆಗಳನ್ನು ಸಮರ್ಥಿಸಿಕೊಂಡು ಟೀಕಾಕಾರರಿಗೆ ಸೂಕ್ತ ಉತ್ತರವನ್ನೂ ನೀಡಿದ್ದಾರೆ.

ಯಾವುದೇ ಸಾಲ ಹೆಚ್ಚುವರಿ ವರಮಾನ ಬರುವಂತೆ ಮಾಡದಿದ್ದರೆ ಮರು ಪಾವತಿಯು ಹೆಚ್ಚುವರಿ ಹೊರೆಯಾಗಿ ಪರಿಣಮಿಸುತ್ತದೆ. ಸಾಲದ ಕನಿಷ್ಠ ಶೇ 75ರಷ್ಟನ್ನಾದರೂ ವರಮಾನ ಹೆಚ್ಚಳ ಚಟುವಟಿಕೆಗಳಿಗೆ ಬಳಸಬೇಕು  ಎಂಬುದು ಮಾಲೆಗಂ ಅವರ ಕಾಳಜಿಯಾಗಿದೆ.

ಸಮಿತಿಯ ಇಂತಹ ಸಲಹೆಗಳು ಈ ಹಿಂದೆ ಕಾರ್ಯಗತಗೊಂಡಿಲ್ಲ. ಮುಂದೆಯೂ ಸಮರ್ಪಕವಾಗಿ ಕಾರ್ಯಗತಗೊಳ್ಳುವ ಸಾಧ್ಯತೆಗಳೂ ಇಲ್ಲ. ಒಂದು ವೇಳೆ ಇಂತಹ ಶಿಫಾರಸುಗಳು ಜಾರಿಗೆ ಬಂದರೂ, ಸಾಲ ಪಡೆಯುವ ಅನಿವಾರ್ಯತೆ ಇದ್ದವರು ಮತ್ತೆ ಅಧಿಕ ಬಡ್ಡಿ ವಿಧಿಸುವ ಲೇವಾದೇವಿಗಾರರ ತೆಕ್ಕೆಗೆ ಬೀಳುವ ಅಪಾಯದ ಸಾಧ್ಯತೆ ಹೆಚ್ಚಿಗೆ ಇದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಕುಟುಂಬದ ವಾರ್ಷಿಕ ಆದಾಯವು ್ಙ 50 ಸಾವಿರಕ್ಕಿಂತ ಕಡಿಮೆ ಇರಬೇಕು ಮತ್ತು ಇಂತಹ ಕುಟುಂಬಗಳಿಗೆ ಕಿರು ಹಣಕಾಸು ಸಂಸ್ಥೆಗಳು ಶೇ 90ರಷ್ಟು ಸಾಲ ವಿತರಿಸಬೇಕು ಎನ್ನುವ ನಿಬಂಧನೆಯ ಪಾಲನೆಯೂ ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಲು ಸಾಧ್ಯ ಎನ್ನುವ ಅನುಮಾನಗಳು ಮೂಡಿವೆ. 

 ಕಿರು ಹಣಕಾಸು ಸಂಸ್ಥೆಗಳು ದೇಶದಾದ್ಯಂತ ಅಂದಾಜು 2.67 ಕೋಟಿಯಷ್ಟು ಸಾಲಗಾರರಿಗೆ ್ಙ 18,344 ಕೋಟಿಗಳಷ್ಟು ಸಾಲ ಮಂಜೂರು ಮಾಡಿವೆ. ಇದರಲ್ಲಿ ಶೇ 75ರಷ್ಟು ಸಾಲ ಬ್ಯಾಂಕ್ ಗಳಿಂದಲೇ ಪಡೆಯಲಾಗಿದೆ. ಮಾಲೆಗಂ ಸಮಿತಿಯ ಶಿಫಾರಸುಗಳ ಬಗ್ಗೆ ಆಂಧ್ರಪ್ರದೇಶ ಸರ್ಕಾರವೂ ತನ್ನ ಆಕ್ಷೇಪಗಳನ್ನು ದಾಖಲಿಸಿದೆ.

 ಸಾಲಗಾರರ ಹಿತರಕ್ಷಣೆ ಬಗ್ಗೆ ಸಮಿತಿಯು ಹೆಚ್ಚು ಗಮನ ಹರಿಸಿಲ್ಲ. ದೊಡ್ಡ ದೊಡ್ಡ ಎಂಎಫ್‌ಐ ಸಂಸ್ಥೆಗಳ ಸಮಸ್ಯೆಗಳ ಬಗ್ಗೆಯಷ್ಟೆ ಸಮಿತಿ ವರದಿ ನೀಡಿದೆಯೇ ಹೊರತು ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಜನರ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಟೀಕಿಸಿದೆ.

2011ರ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿರುವ ಸಮಿತಿಯ ಶಿಫಾರಸುಗಳು ಮತ್ತು ಆಂಧ್ರಪ್ರದೇಶ ಕಿರು ಹಣಕಾಸು ಸಂಸ್ಥೆಗಳು (ಲೇವಾದೇವಿ ನಿಯಂತ್ರಣ) ಸುಗ್ರೀವಾಜ್ಞೆ-2010 ಮಧ್ಯೆ ಉದ್ಭವಿಸಲಿರುವ ಸಂಘರ್ಷವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎನ್ನುವುದರತ್ತ ಈಗ ಎಲ್ಲರ ಚಿತ್ತ ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT