ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬಳಿಯುವಾತನ ಸದ್ದಿಲ್ಲದ ಶಿಕ್ಷಣ ಸೇವೆ!

Last Updated 11 ಜನವರಿ 2014, 4:49 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಇವರ ಹೆಸರು ರಂಗಸ್ವಾಮಿ. ತಾಲ್ಲೂಕಿನ ಬೆಳಗೊಳ ಗ್ರಾಮದ ಪುಟ್ಟ ಮನೆಯಲ್ಲಿ ಪತ್ನಿ, ಇಬ್ಬರು ಪುತ್ರಿಯರ ಜತೆ ಬದುಕು ನಡೆಸುತ್ತಿದ್ದಾರೆ. ಮನೆ, ಅಂಗಡಿ ಮುಂಗಟ್ಟುಗಳಿಗೆ ಬಣ್ಣ ಬಳಿದು ತನ್ನ ಮತ್ತು ಕುಟುಂಬ ಸದಸ್ಯರ ಹೊಟ್ಟೆ ಹೊರೆಯುವ ರಂಗಸ್ವಾಮಿ ಕಳೆದ 15 ವರ್ಷಗಳಿಂದ ಸರ್ಕಾರಿ ಶಾಲೆಗಳ ಕಪ್ಪು ಹಲಗೆಗಳಿಗೆ ಉಚಿತವಾಗಿ ಬಣ್ಣ ಬಳಿಯುವ ಕಾಯಕ ಮಾಡುವ ಮೂಲಕ ಶಿಕ್ಷಣ ಪ್ರೇಮ ತೋರುತ್ತಿದ್ದಾರೆ.

ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು ಜಿಲ್ಲೆಗಳ ನೂರಾರು ಸರ್ಕಾರಿ ಶಾಲೆಗಳ ಕಪ್ಪು ಹಲಗೆಗಳಿಗೆ ತಮ್ಮ ದುಡಿಮೆ ಹಣದಿಂದ ರಂಗಸ್ವಾಮಿ ಬಣ್ಣ ಬಳಿದಿದ್ದಾರೆ. 7ನೇ ತರಗತಿ ವರೆಗೆ ಓದಿರುವ ಇವರು ತಾವು ಕೆಲಸಕ್ಕೆ ಹೋದಾಗ ಆ ಊರಿನ ಶಾಲೆಗೆ ಭೇಟಿ ನೀಡುತ್ತಾರೆ. ಶಾಲೆಯ ಕಪ್ಪು ಹಲಗೆ ಮಸುಕಾಗಿದ್ದರೆ ಆ ಶಾಲೆಯ ಮುಖ್ಯಸ್ಥರ ಬಳಿ ತಮ್ಮ ಪರಿಚಯ ಹೇಳಿಕೊಂಡು ಬಣ್ಣ ಹಚ್ಚಲು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಉತ್ತಮವಾದ ಕಂಪೆನಿಯ, 5 ವರ್ಷ ಕಾಲ ಬಾಳಿಕೆ ಬರುವ ಬಣ್ಣ ಬಳಿದು ಕಲಿಕೆಯ ಪ್ರಮುಖ ಆಕರವಾದ ಕಪ್ಪು ಹಲಗೆಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಾರೆ.

ರಂಗಸ್ವಾಮಿ ಮಿಮಿಕ್ರಿ ಕಲಾವಿದರೂ ಹೌದು. ಶಾಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಮಿಮಿಕ್ರಿ ಮಾಡಿ ವಿದ್ಯಾರ್ಥಿಗಳಿಗೆ ರಂಜನೆ ನೀಡುತ್ತಾರೆ. ಪ್ರಾಣಿ, ಪಕ್ಷಿಗಳ ದನಿಯನ್ನು ಅನುಕರಣೆ ಮಾಡುವುದರ ಜತೆಗೆ ರಾಷ್ಟ್ರ ನಾಯಕರ ಮಹತ್ವದ ನುಡಿಗಳನ್ನು ಅವರದ್ದೇ ಭಾವದಲ್ಲಿ ಧ್ವನಿಸುತ್ತಾರೆ. ದೇಶ ಭಕ್ತಿ ಗೀತೆಗಳನ್ನು ಹಾಡುವುದು ಮಾತ್ರವಲ್ಲದೆ ಅಂತಹ ಗೀತೆಗಳನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಕೂಡ ಇವರದ್ದು.

ಬಾಡಿಗೆ ಮನೆ: ಮಳೆಗಾಲದಲ್ಲಿ ಕೆಲಸ ಇಲ್ಲದೆ ಪಾಡುಪಡುವ ರಂಗಸ್ವಾಮಿ ಅಂತಹ ದಿನಗಳಲ್ಲಿ ಜೀವನ ನಡೆಸಲು ಬವಣೆ ಪಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕುಟುಂಬ ನಿರ್ವಹಣೆಗೆ ಪರದಾಡುತ್ತಾರೆ. ಸ್ವಂತದ್ದೊಂದು ಸೂರಿಲ್ಲದೆ ಬೆಳಗೊಳದ ಬಾಡಿಗೆ ಮನೆಯಲ್ಲಿ ದಿನ ದೂಡುತ್ತಿದ್ದಾರೆ. ಇಷ್ಟಾದರೂ ಶಾಲೆಗಳ ಕಪ್ಪು ಹಲಗೆಗಳು ಲಕಲಕಿಸುವಂತೆ ಮಾಡುತ್ತಾ ಸದ್ದಿಲ್ಲದೆ ಶಿಕ್ಷಣ ಸೇವೆ ಮುಂದುವರೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಕಪ್ಪು ಹಲಗೆ ಬಣ್ಣಕಳೆದುಕೊಂಡಿದ್ದಾರೆ ರಂಗಸ್ವಾಮಿ ಅವರನ್ನು ಸಂಪರ್ಕಿಸಬಹುದಾದ ಮೊ: 8884011041.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT