ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಮಗಳು ಬೆಳಕಿನ ಮಗಳು

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ನಮ್ಮಮ್ಮ ಶಾರದೆ', `ಪುಣ್ಯಕೋಟಿ', `ಚಕ್ರತೀರ್ಥ' ಮುಂತಾದ ಧಾರಾವಾಹಿಗಳ ಮೂಲಕ ಪರಿಚಿತರಾದವರು ರಶ್ಮಿ ಅಭಯಸಿಂಹ. ನಿರ್ದೇಶಕ ಅಭಯಸಿಂಹರ ಪತ್ನಿ ಎನ್ನುವುದಕ್ಕಿಂತಲೂ `ಪಲ್ಲವಿ ಅನುಪಲ್ಲವಿ'ಯ ನಂದಿನಿಯಾಗಿ ಅವರು ಹೆಸರು ಗಳಿಸಿದವರು. `ಲೈಫು ಇಷ್ಟೇನೆ', `ಕೂರ್ಮಾವತಾರ'ಗಳಲ್ಲಿ ಸಿನಿಮಾ ಯಾನವೂ ನಡೆದಿದೆ. `ಅಳಗುಳಿ ಮನೆ' ಮತ್ತು `ಪಲ್ಲವಿ ಅನುಪಲ್ಲವಿ' ಧಾರಾವಾಹಿಗಳಲ್ಲಿ ಸದ್ಯ ಬಿಜಿಯಾಗಿರುವ ರಶ್ಮಿ, ಒಳ್ಳೆಯ ಪಾತ್ರ, ಚಿತ್ರತಂಡ ಸಿಕ್ಕರೆ ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎನ್ನುತ್ತಾರೆ. ಕಲಾತ್ಮಕ ಚಿತ್ರಗಳ ಸವಾಲಿನ ಪಾತ್ರಗಳಲ್ಲಿ ನಟಿಸುವ ಬಯಕೆ ಅವರದು.

ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಓದಿದವರು ರಶ್ಮಿ. ಅಭಯಸಿಂಹ ಅದೇ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ. ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿದ್ದ ಅವರ ಮದುವೆ ನಿಶ್ಚಯವಾಗಿದ್ದು ಹಿರಿಯರ ಮೂಲಕ. ಇಬ್ಬರ ಕುಟುಂಬದವರೂ ಪರಸ್ಪರ ಪರಿಚಿತರಾಗಿದ್ದರಿಂದ ಮುಂದೆ ವಿವಾಹದ ಪ್ರಸ್ತಾಪವೂ ಬಂತು. ಕಾಲೇಜಿನಲ್ಲಿ ನಾಟಕ, ಕಾರ್ಯಕ್ರಮ ನಿರೂಪಣೆಗಳಲ್ಲಿ ತೊಡಗಿಕೊಂಡಿದ್ದ ರಶ್ಮಿ ಅವರಲ್ಲಿ ನಟಿಯಾಗುವ ಆಸೆ ಇರಲಿಲ್ಲ. ಕಿರುತೆರೆ ಪ್ರವೇಶಿಸುವ ಕನಸೂ ಇರಲಿಲ್ಲ. ಸಿನಿಮಾ ಆಸಕ್ತಿ ಹುಟ್ಟಿದ್ದು ಮದುವೆಯ ಬಳಿಕ.

ವಿಶ್ವದ ಶ್ರೇಷ್ಠ ಸಿನಿಮಾಗಳನ್ನು ತೋರಿಸುವ ಮೂಲಕ ಅವುಗಳ ಪರಿಚಯ ಮಾಡಿಕೊಟ್ಟಿದ್ದಲ್ಲದೆ ನಟಿಸುವ ಗೀಳು ಹಚ್ಚಿಸಿದ್ದು ಪತಿ ಅಭಯಸಿಂಹ. ಅವರ ಕೆಲವು ಕಿರುಚಿತ್ರಗಳಲ್ಲಿ ಕ್ಯಾಮೆರಾ ಎದುರಿಸಿದರು. ಪತ್ನಿಯಲ್ಲಿ ತಾಂತ್ರಿಕ ಪರಿಣತಿ ತುಂಬುವ ಆಕಾಂಕ್ಷೆ ಅಭಯಸಿಂಹರದು. ಹೀಗಾಗಿ ಸಿನಿಮಾಟೊಗ್ರಫಿ, ಎಡಿಟಿಂಗ್‌ನ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ಅಡುಗೆ ಕಲೆಯನ್ನು ಪರಿಚಯಿಸುವ ಬ್ಲಾಗ್ ಒಂದನ್ನು ತೆರೆದಿದ್ದಾರೆ ರಶ್ಮಿ. ಅಡುಗೆ ತಯಾರಿಸುವ ಬಗೆಯನ್ನು ತಾವೇ ಚಿತ್ರೀಕರಿಸುತ್ತಾರೆ. ಅದನ್ನು ಸಂಕಲನ ಮಾಡಿ ಬ್ಲಾಗ್‌ಗೆ ಹಾಕುವ ಹೊಣೆ ಅಭಯರದ್ದು.

ಪತಿ ಅಭಯಸಿಂಹರದ್ದು ಸದಾ ಹೊಸತನಕ್ಕೆ ತೆರೆದುಕೊಳ್ಳುವ ಮನ. ಯಾವುದೇ ಚೌಕಟ್ಟಿನೊಳಗೆ ಸಿಲುಕದೆ ನಿರಂತರ ಪ್ರಯೋಗಗಳನ್ನು ನಡೆಸುವ ತುಡಿತ. ಹೀಗಾಗಿ ಕಲಾತ್ಮಕ ಚಿತ್ರದಿಂದ ಕಮರ್ಷಿಯಲ್ ಚಿತ್ರದ ನಿರ್ದೇಶನದತ್ತ ಹೊರಳಿದ್ದಾರೆ. ಯಶಸ್ಸು ಸಿಗುತ್ತದೆ ಎಂಬ ಭರವಸೆ ಇದ್ದರೂ ಭಯವೂ ಇದೆ ಎನ್ನುತ್ತಾರೆ ರಶ್ಮಿ. ಪತಿ ಅಭಯಸಿಂಹ ತಮ್ಮ ಸಿನಿಮಾದ ಪ್ರತಿ ಸನ್ನಿವೇಶವನ್ನೂ ರಶ್ಮಿ ಅವರೊಂದಿಗೆ ಚರ್ಚಿಸುತ್ತಾರೆ. ಅವರ ಗ್ರಹಿಕೆ ಮತ್ತು ಕಾಲ್ಪನಿಕ ಶಕ್ತಿ ಅದ್ಭುತ ಎಂಬ ಪ್ರಶಂಸೆ ಅವರದು.

ಅಭಯಸಿಂಹ `ಗುಬ್ಬಚ್ಚಿಗಳು' ಸಿನಿಮಾ ನಿರ್ದೇಶನಕ್ಕೆ ಕೈಹಾಕುವಾಗ ಇಬ್ಬರ ವಿವಾಹ ನಿಶ್ಚಯವಾಗಿತ್ತು. ಚಿತ್ರ ಪನೋರಮಾಕ್ಕೆ ಆಯ್ಕೆಯಾದಾಗ ಪ್ರಶಸ್ತಿಯ ವಾಸನೆ ಬಡಿದಿತ್ತು. ಕೆಂಪುರತ್ನಗಂಬಳಿಯ ಮೇಲೆ ಇಬ್ಬರೂ ನಡೆದು ಪ್ರಶಸ್ತಿ ಸ್ವೀಕರಿಸಬೇಕೆಂಬ ಉದ್ದೇಶದಿಂದ ನಿಶ್ಚಿತ ದಿನಾಂಕಕ್ಕಿಂತ ಮೊದಲೇ ವಿವಾಹವಾದರು. ನಿರೀಕ್ಷೆ ಸುಳ್ಳಾಗಲಿಲ್ಲ.

ಬಿಬಿಎಂ ಪದವೀಧರೆಯಾದ ರಶ್ಮಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪೂರೈಸಿದವರು. ಆದರೆ ಉದ್ಯೋಗದತ್ತ ಒಲವು ಮೂಡಲಿಲ್ಲ. ಎಡಿಟಿಂಗ್ ಕಲಿಕೆ ಸಾಗುತ್ತಿದ್ದರೂ ಅದಕ್ಕಿಂತ ನಟನೆ ಸುಲಭ ಮತ್ತು ಪರಿಣಾಮಕಾರಿ ಎನಿಸಿತು. `ಧಾರಾವಾಹಿಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗುವುದು ಮಾತ್ರವಲ್ಲ, ಅವರ ಮನೆಯವರಾಗಿ ಬಿಡುತ್ತೇವೆ. ಅದರಲ್ಲೂ ಹಳ್ಳಿ ಜನರಲ್ಲಿ ಒಂಟಿತನ ಕಾಡುತ್ತಿದೆ. ಜನ ಧಾರಾವಾಹಿ ಮೂಲಕ ಬದುಕನ್ನು ನೋಡುತ್ತಾರೆ. ಇದು ಅನುಕೂಲವೂ ಹೌದು ಪ್ರತಿಕೂಲವೂ ಹೌದು. ಇಲ್ಲಿ ನಟನೆ ತೃಪ್ತಿ ನೀಡುತ್ತಿದೆ' ಎನ್ನುತ್ತಾರೆ ಅವರು.

ಸಂಕೀರ್ಣವಲ್ಲದ ನೈಜತೆಗೆ ಹತ್ತಿರವಾದ ಪಾತ್ರಗಳನ್ನು ಸೃಷ್ಟಿಸುವ ತಮಿಳು ನಿರ್ದೇಶಕ ಕೆ. ಬಾಲಚಂದರ್ ಚಿತ್ರಗಳೆಂದರೆ ಬಹಳ ಇಷ್ಟ. ಅವರು ನಮ್ಮಳಗಿನ ವ್ಯಕ್ತಿಯ ಗೊಂದಲ, ಬದುಕು ಕಟ್ಟಿಕೊಳ್ಳುವ ಬಗೆಯನ್ನು ಅಭಿವ್ಯಕ್ತಿಸುವ ಬಗೆಯಂತೂ ಅದ್ಭುತ ಎನ್ನುವ ರಶ್ಮಿ ಅವರಿಗೆ ಕಾರ್ಯಕ್ರಮ ನಿರೂಪಣೆ ಅಚ್ಚುಮೆಚ್ಚಿನ ಕ್ಷೇತ್ರ. ಕಾಲೇಜು ಕಾರ್ಯಕ್ರಮಗಳಲ್ಲಿ ಪಡೆದ ನಿರೂಪಣೆಯ ಅನುಭವವನ್ನು ಕಿರುತೆರೆಗೆ ವಿಸ್ತರಿಸುವ ಆಸಕ್ತಿಯೂ ಇದೆ.

ಓದು ಮತ್ತು ಬರವಣಿಗೆಯ ಹವ್ಯಾಸ ಮೈಗೂಡಿಸಿಕೊಂಡ ರಶ್ಮಿ, ಕಾಲೇಜು ದಿನಗಳಲ್ಲಿ ಅಂಟಿಸಿಕೊಂಡ ಕವಯತ್ರಿ ಪಟ್ಟವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರ ಬತ್ತಳಿಕೆಯಲ್ಲಿ ಕಥೆಗಳಿಗೆ ಹೇರಳ ಜಾಗ. ಅವುಗಳಲ್ಲಿ ಕೆಲವು ಕಥೆ ಸಿನಿಮಾರೂಪ ತಾಳುವ ನಿರೀಕ್ಷೆಯೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT