ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಕ್ಕೆ ವೈಜ್ಞಾನಿಕ ಬೆಲೆಗೆ ಆಗ್ರಹ; ಜೈಲ್‌ಭರೋ

Last Updated 21 ಜೂನ್ 2011, 9:15 IST
ಅಕ್ಷರ ಗಾತ್ರ

ದಾವಣಗೆರೆ: ಬತ್ತಕ್ಕೆ ವೈಜ್ಞಾನಿಕ ಬೆಲೆ ಹಾಗೂ ಪ್ರೋತ್ಸಾಹಧನ ನೀಡಲು ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿಯಲು ಯತ್ನಿಸಿದ 43 ರೈತರನ್ನು ಬಂಧಿಸಿದ ಪೊಲೀಸರು, 30 ರೈತರನ್ನು ಬಿಡುಗಡೆ ಮಾಡಿ, 13 ರೈತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಬತ್ತಕ್ಕೆ ್ಙ 1500 ಬೆಂಬಲ ಬೆಲೆ ನೀಡಬೇಕು. ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿ ಹಲವು ತಿಂಗಳಿನಿಂದ ಹೋರಾಟ ನಡೆಸುತ್ತಾ ಬಂದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ರೈತರ ಮೂಗಿಗೆ ತುಪ್ಪ ಸವರಿರುವ ಕೇಂದ್ರ ಸರ್ಕಾರ ಕೇವಲ ರೂ 80 ಬೆಂಬಲ ಬೆಲೆ ಹೆಚ್ಚಿಸಿದೆ ಹಾಗೂ ರಾಜ್ಯ ಸರ್ಕಾರ ರೂ 100 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ. ಇದರಿಂದ ಬತ್ತ ಬೆಳೆಗಾರರಿಗೆ ಅನ್ಯಾಯವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರಕ್ಕೆ ತರಾತುರಿಯಲ್ಲಿ ನಿಯೋಗ ತೆಗೆದುಕೊಂಡು ಹೋದ ರಾಜ್ಯದ ಕೃಷಿ ಮಂತ್ರಿಗಳು ಬತ್ತ ಬೆಳೆಯಲು ರೈತರು ಮಾಡುವ ವೆಚ್ಚವನ್ನು ವಿವರಿಸಿ, ಬೆಂಬಲ ಬೆಲೆ ಹೆಚ್ಚಳಕ್ಕೆ ಪ್ರಯತ್ನಿಸಿಲ್ಲ. ಬದಲಿಗೆ ರೈತರ ಹೋರಾಟದಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಸುಳ್ಳು ಆರೋಪ ಮಾಡಿ, ಆ ಮೂಲಕ ಬೆಂಬಲ ಬೆಲೆ ನೀಡಲು ಕೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಹೋರಾಟ ಸಮಿತಿ, ಬತ್ತ ಬೆಳೆಯುವ ರೈತರ ಹಿತರಕ್ಷಣಾ ಸಮಿತಿ, ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ರೈತ ಸಂಘದ ನೇತೃತ್ವದಲ್ಲಿ ಜಯದೇವ ವೃತ್ತದಿಂದ `ಜೈಲ್‌ಭರೋ~ ಚಳವಳಿ ಆರಂಭಿಸಿದ ರೈತರು, ಗಾಂಧಿ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಈ ಸಂದರ್ಭದಲ್ಲಿ ಕಚೇರಿಯ ಗೇಟ್‌ಗೆ ಬೀಗ ಜಡಿಯಲು ರೈತ ಮುಖಂಡರು ಪ್ರಯತ್ನಿಸಿದ್ದರಿಂದ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ರೈತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ತಕ್ಷಣವೇ 43 ರೈತರನ್ನು ಬಂಧಿಸಿ, ತಹಶೀಲ್ದಾರ್ ಮುಂದೆ ಹಾಜರುಪಡಿಸಿದರು. ಅದರಲ್ಲಿ 13 ಮಂದಿ ಜಾಮೀನು ಪಡೆಯಲು ನಿರಾಕರಿಸಿದ ಪರಿಣಾಮ ಜೂನ್ 23ರವರೆಗೆ ನಾಯಾಂಗ ವಶಕ್ಕೆ ನೀಡಲಾಯಿತು.

ರೈತ ಮುಖಂಡರಾದ ಆವರಗೆರೆ ರುದ್ರಮುನಿ, ತೇಜಸ್ವಿ ಪಟೇಲ್, ವಾಸನದ ಓಂಕಾರಪ್ಪ, ಹೊನ್ನೂರು ಮುನಿಯಪ್ಪ, ಪ್ರಭುಗೌಡ, ಪೂಜಾರ್ ಅಂಜಿನಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಖರೀದಿದಾರರಿಗೆ ಎಚ್ಚರಿಕೆ
ಜಿಲ್ಲೆಯ ರೈತರಿಂದ ಬತ್ತ ಖರೀದಿಸುವಾಗ, ಖರೀದಿದಾರರು, ವರ್ತಕರು, ದಲಾಲರು ತೂಕ ಮತ್ತು ಅಳತೆಯಲ್ಲಿ ಅನ್ಯಾಯ ಮಾಡುತ್ತಿರುವ ಬಗ್ಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ  ರೈತ ಸಂಘಟನೆಗಳು ದೂರು ನೀಡಿವೆ.

ದೂರಿನ ಹಿನ್ನೆಲೆಯಲ್ಲಿ ಎಲ್ಲಾ ಬತ್ತ ಖರೀದಿದಾರರು, ವರ್ತಕರು ಹಾಗೂ ದಲಾಲರು ಯಾವುದೇ ಕೃಷಿ ಉತ್ಪನ್ನಗಳನ್ನು ಖರೀದಿಸುವಾಗ ನಿಖರವಾಗಿ, ಶಾಸನಬದ್ಧವಾಗಿ ತೂಕ ಮತ್ತು ಅಳತೆ ಮಾಡಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವವರ ಮತ್ತು ನಿಯಮಬಾಹಿರ ವಹಿವಾಟಿನ ವಿರುದ್ಧ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಹಾಗೂ ತೂಕ ಮತ್ತು ಅಳತೆ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಸಿದೆ.

ಈ ರೀತಿ ಮೋಸ ಮಾಡುವವರ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಅಥವಾ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರು ಅಥವಾ ತಹಶೀಲ್ದಾರರಿಗೆ ದೂರು ನೀಡಲು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT