ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕ ಬರೆದ ತವರು...

ಗುಲ್‌ಮೊಹರ್
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಎಷ್ಟೊಂದು ದಿನದಿಂದ ಬರೆಯಬೇಕು ಅಂದುಕೊಂಡು ಬರೆಯದೆ ಉಳಿದು ಹೋದ ಕೆಲವು ಮಾತುಗಳು, ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಮೊದಲೆಲ್ಲ ಎಷ್ಟೊಂದು ಪತ್ರ ನಾನು ನಿನಗೆ, ನೀನು ನನಗೆ ಬರೆದು ಕೊಳ್ಳುತ್ತಿದ್ದೆವು ನೆನಪಿದೆಯಾ ನಿಂಗೆ. ಫೋನ್ ಇರಲಿಲ್ಲ.

ಎಷ್ಟೋ ಬಾರಿ ಫೋನ್ ಮಾಡಿದ್ರೆ ಮನೆ ನೆನಪು ಮಾಡಿಕೊಂಡು ಅಳ್ತಾಳೆ ಅಂತ ಫೋನ್ ಮಾಡದೇ ಇರ್ತಿದ್ದೆ. ಅದ್ಯಾಕೋ ಈಗ ಪತ್ರ ಬರೆಯುವುದೇ ಇಲ್ಲ. ಹಾಗಂತ ಅಮ್ಮನ ನೆನಪು ಬಂದಾಗ ಮಾತ್ರ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ. ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿನ್ನೆದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗುಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಏನೇ ಮಾಡಿದರೂ ನಿನ್ನ ಮಡಿಲಲ್ಲಿ ಬೆಳೆದವಳು ನಾನು. ಅಪ್ಪನ ಮುದ್ದಿನ ಮಗಳು ಎಂದು ಯಾವಾಗಲೂ ನೀನು ಮೂದಲಿಸುತ್ತಿದ್ದದ್ದು ಚೆನ್ನಾಗಿರುತ್ತಿತ್ತು.

ಬದುಕ ಕಲಿಸಿದವಳು ನೀನು, ಬದುಕಿನಿಂದ ಪಾಠ ಕಲಿತವಳು ನಾನು. ತವರು ಎಲ್ಲವನ್ನು ಕಲಿಸಿದೆ ಅಮ್ಮಾ. ಮತ್ತೆ, ಹೇಗಿದೀಯಾ? ಇಲ್ಲಿ ಏನಿರುತ್ತೆ ಹೇಳು ಎಲ್ಲ ಕಡೆ ಬಿಲ್ಡಿಂಗ್, ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಸಮಯವಿಲ್ಲದ ಯಾಂತ್ರಿಕ ಜೀವನ. ಮಳೆಯೂ ಇಲ್ಲ. ಅಂದ ಹಾಗೆ, ನಮ್ಮೂರಲ್ಲೂ ಮಳೆ ತುಂಬಾ ಜಾಸ್ತಿನಾ ಅಮ್ಮಾ? ಅಲ್ಲಿ ಮಳೆ ಬರುವುದೇ ಹಾಗೆ. ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ಮನೆಯೊಳಗಿನ ಬಾವಿ ಎಲ್ಲಾ ತುಂಬಿ ಹರಿತಿರಬೇಕು ಅಲ್ಲವಾ.

ಅಪ್ಪಯ್ಯನಿಗೆ ನಿದ್ದೆ ಬಂದಿರಲಿಕ್ಕಿಲ್ಲ. ಮಳೆ ಜೋರಾಗಿ ಬಂದಾಗ ಅಪ್ಪಯ್ಯ ಹೇಳುತ್ತಿದ್ದುದು ಪ್ರಳಯ ಆಗ್ತಾ ಇದೆ ನಮ್ಮೂರಲ್ಲಿ ಅಂತ. ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಸೇವಂತಿಗೆ ಹೂವು, ಬಣ್ಣದ ಹೂಗಿಡಗಳು ಹಸಿರಾಗಿರಬೇಕಲ್ಲ. ನಾನು ಅಲ್ಲಿ ಕಳೆದ ದಿನಗಳನ್ನು, ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು... ಎಲ್ಲರನ್ನೂ ತುಂಬಾ ಮಿಸ್ ಮಾಡ್ಕೋತ ಇದೀನಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನಮಿಡಿ ಉಪ್ಪಿನಕಾಯಿ ಎಲ್ಲವನ್ನೂ ರೆಡಿಮಾಡಿ ಕಳುಹಿಸಿಕೊಡಮ್ಮ.

ಮದುವೆಗೆ ಮುಂಚೆ ನನ್ನ ಜೊತೆಗಿದ್ದು ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದೆ ಬೋರ್ ಎಂದು ಹೇಳುವ ತಮ್ಮನ ನೆನಪು ಕಾಡದಿರಲು ಹೇಗೆ ಸಾದ್ಯ ಹೇಳು... ನಾನೆಲ್ಲೇ ಹೋದರೂ ನನ್ನ ಚುಂಗು ಹಿಡಿದು ಬರುತ್ತಿದ್ದ ಆ ಟೀಪೂ, ನನ್ನ ಮುದ್ದಿನ ಬೆಕ್ಕು. ಎಲ್ಲ ಅಂದರೆ ಎಲ್ಲವನ್ನು ಮರೆಯಲು ಹೇಗೆ ಸಾಧ್ಯ. ಸ್ವಲ್ಪ ಕಾಲು ನೋವು ಅಂದರೂ ಸಾಕು ಸಕಲಕ್ಕೂ ಒಂದೇ ಮದ್ದು ಎಂಬಂತೆ ಅಂಬ್ರುತಾಂಜನ ಕೊಬ್ಬರಿ ಎಣ್ಣೆ ಹಚ್ಚಿ ವಾಸಿ ಆಯಿತು ಎಂಬುವವರೆಗೂ ಅಪ್ಪಯ್ಯಂಗೆ ಸಮಾಧಾನವಿರುತ್ತಿರಲಿಲ್ಲ. ಅದೆಲ್ಲ ಮರೆಯೋಕೆ ಸಾಧ್ಯನಾ ಹೇಳು.

ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಎಲ್ಲರೂ ಚೆನ್ನಾಗಿ ನೋಡ್ಕೋತಾರೆ. ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ಒಂದೆರಡು ವ್ಯಕ್ತ ಪಡಿಸಲಾಗದ, ಅವ್ಯಕ್ತ ನೋವುಗಳು ಬಿಟ್ಟರೆ ಪ್ರಪಂಚದಲ್ಲಿ ನಾನು ಅತ್ಯಂತ ಸಂತೋಷಿ ಕಣಮ್ಮಾ.

ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ತೋಟದ ತಂಪಿನಲ್ಲಿ ಕುಳಿತು ತಿಳಿ ತಂಬುಳಿ ತುತ್ತು ತಿಂದ ಅದೇ ಮಡಿಲಲ್ಲಿ ಕುಳಿತು ಮತ್ತೊಮ್ಮೆ ನಿನ್ನ ಸವಿತುತ್ತು ಮೆಲ್ಲುವಾಸೆ. ಅಪ್ಪ ಕಟ್ಟಿದ ಪ್ರೀತಿಯ ಜೋಕಾಲಿಯಲ್ಲಿ ಹಾಡುತ್ತಾ ಕಾಲ ಕಳೆದದ್ದು ನೆನಪಾಗಿತ್ತು. ತಪ್ಪಿ ನಡೆದ ದಾರಿಯಲ್ಲಿ ಸರಿ ದಾರಿ ತೋರಿಸಿ ಬದುಕ ತುಂಬಾ ಕನಸುಗಳ ಚಿತ್ತಾರ ಮೂಡಿಸಿ ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ನನ್ನಪ್ಪ ನೆನಪಾದರು.

ಅಷ್ಟು ವರ್ಷ ನಿನ್ನ ಒಡಲಲ್ಲಿ ಅಪ್ಪನ ನೆರಳಲ್ಲಿ ಬೆಳೆದು, ಬದುಕಲು ಕಲಿಸಿದ ಅಪ್ಪನ ನೀತಿ ನಿನ್ನ ವಾತ್ಸಲ್ಯದ ಪ್ರೀತಿ ಬದುಕಲು ಕಲಿಸಿದ್ದು, ನನ್ನ ಪ್ರತಿ ಕಷ್ಟಕ್ಕೂ ಹೆಗಲು ನೀಡಿದ್ದು, ನನಗಾಗಿ ಮಿಡಿದದ್ದು ನಿಮ್ಮ ಜೀವ. ಅದಕ್ಕೊಂದು ನನ್ನ ಅನಂತ ಪ್ರಣಾಮಗಳು. ಬರೆಯಲು ತುಂಬಾ ಇದೆ ಅಮ್ಮ ಎಲ್ಲ ಒಮ್ಮೆಗೆ ಬರೆದು ಮುಗಿಸಿದರೆ ಮನಸ್ಸು ಖಾಲಿ ಖಾಲಿ ಅನಿಸುತ್ತದೆ ... ಮನದ ತುಂಬಾ ನಿನ್ನ, ನಿಮ್ಮ, ತವರಿನ, ನೆನಪಿನಿಂದ ಯಾವಾಗಲೂ ಭರ್ತಿಯಾಗಿದ್ದರೆ ಚೆಂದ ಅಲ್ಲವೇನಮ್ಮಾ ....
–-ಸವಿತಾ ಗುರುಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT