ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ರೂಪಿಸಿದ ನೃತ್ಯ

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು ಚೆನ್ನೈ, ಬೆಳೆದದ್ದು ಮುಂಬೈ, ಬದುಕು ಕಂಡುಕೊಂಡಿದ್ದು ಬೆಂಗಳೂರು. ಕುಟುಂಬದಲ್ಲಿ ಯಾರೂ ಸಿನಿಮಾ ನೋಡುತ್ತಿರಲಿಲ್ಲ. ಆದರೆ ನನ್ನಲ್ಲಿ ಸಿನಿಮಾ ಆಸಕ್ತಿ ಅದರಲ್ಲೂ ನೃತ್ಯದ ಒಲವು ಹೇಗೆ ಬೆಳೆಯಿತೋ ನನಗೇ ಗೊತ್ತಿಲ್ಲ.

ಟಿವಿಯಲ್ಲಿ ಹಾಡು ಬಂದರಂತೂ ತದೇಕಚಿತ್ತದಿಂದ ನೋಡುತ್ತಿದ್ದೆ. ಹಾಡಿನ ಲಯಕ್ಕೆ ಹಾಕುವ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಶಾಲೆಗಳಲ್ಲಿ ಡ್ಯಾನ್ಸ್ ಸ್ಪರ್ಧೆಗಳಿದ್ದರಂತೂ ನಾನೇ ಮುಂದು.

ಆದರೆ ಅದೇ ಒಲವು ನನಗೆ ಮುಂದೆ ಬದುಕಿನ ದಾರಿ ತೋರಿಸುತ್ತದೆ ಎಂಬುದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಒಂದು ವೇಳೆ ನೃತ್ಯ ಬದುಕಾಗಿರದಿದ್ದರೆ...? ಊಹಿಸಲೂ ಸಾಧ್ಯವಿಲ್ಲ ನಾನೇನಾಗಿರುತ್ತಿದ್ದೇನೆಂದು. ನನ್ನ ಬದುಕಲ್ಲಿ ಎಲ್ಲವೂ ಆಕಸ್ಮಿಕ.
 
ಓದಿಗೆ ಶರಣು ಹೇಳಿದ್ದು, ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದು, ಇಲ್ಲಿ  ಡ್ಯಾನ್ಸ್ ಕಲಿಯಲು ಹೋಗಿ ಡ್ಯಾನ್ಸ್ ಮಾಸ್ಟರ್ ಆಗಿದ್ದು, ಸಿನಿಮಾಕ್ಕೆ ನೃತ್ಯ ಸಂಯೋಜನೆ ಮಾಡಿದ್ದು, ಮದುವೆಯಾಗಿದ್ದು ಕೂಡ.

ನನ್ನಮ್ಮನ ಊರು ಬೆಂಗಳೂರು. ಅಪ್ಪನ ಊರು ಮುಂಬೈ. ಅಮ್ಮನ ಅಮ್ಮ ಅಂದರೆ ನನ್ನ ಅಜ್ಜಿಗೆ ಬೆಂಗಳೂರು ಮತ್ತು ಚೆನ್ನೈ ಎರಡೂ ಕಡೆ ಮನೆ ಇತ್ತು. ನಾನು ಅಜ್ಜಿಯ ಚೆನ್ನೈ ಮನೆಯಲ್ಲಿಯೇ ಹುಟ್ಟಿದ್ದು. ಆಸ್ಪತ್ರೆಯಲ್ಲಲ್ಲ. ಓದಿದ್ದು, ಬೆಳೆದದ್ದು ಮುಂಬೈನಲ್ಲಿ. ಅಪ್ಪ ಅಲ್ಲಿ ಟ್ರ್ಯಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದರು. ಬೆಂಗಳೂರಿಗೆ ಬರಬೇಕಾದಗಲೂ ವಿಮಾನ ಹತ್ತುತ್ತಿದೆವು. ಅಷ್ಟರಮಟ್ಟಿಗೆ ಸ್ಥಿತಿವಂತರಾಗಿದ್ದೆವು.

ಮೊದಲಿನಿಂದಲೂ ನನಗೆ ಓದಿನತ್ತ ಆಸಕ್ತಿ ಅಷ್ಟಕಷ್ಟೆ. ಹೊಡೆದು ಬಡಿದು ಶಾಲೆಗೆ ಕಳುಹಿಸುತ್ತಾರಲ್ಲ ಆ ಪೈಕಿ ಹುಡುಗ ನಾನು. ನಾನು ಏನೇ ಮಾಡುತ್ತಿದ್ದರೂ ಅಪ್ಪ ಏನೂ ಹೇಳುತ್ತಿರಲಿಲ್ಲ. ನಮಗೆ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ.
 
ಆದರೆ ಬದುಕು ಬದಲಾಗಿದ್ದು ಅಪ್ಪ ತೀರಿಕೊಂಡಾಗ. ನಾನಾಗ 10ನೇ ತರಗತಿ ಓದುತ್ತಿದ್ದೆ. ಅಲ್ಲಿದ್ದ ದೊಡ್ಡಪ್ಪ ನಾವು ಆ ಮನೆ ತೊರೆದು ಹೊರಡುವಂತೆ ಮಾಡಿದರು. ನಾನು, ಅಮ್ಮ, ತಂಗಿ ಮತ್ತು ತಮ್ಮ ದಿಕ್ಕೇ ತೋಚದಂತಾದೆವು. ಜೀವನವೆಂದರೆ ಏನೆಂಬುದು ಆಗ ಅರ್ಥವಾಗತೊಡಗಿತು.

ಬಳಿಕ ಬಂದಿದ್ದು ಬೆಂಗಳೂರಿಗೆ. ಅದು ಬೇಸಿಗೆ ಕಾಲ. ಹೇಗೂ ರಜೆ ಇದೆಯಲ್ಲ ಸಮ್ಮರ್ ಡ್ಯಾನ್ಸ್ ಸ್ಕೂಲ್‌ಗೆ ಸೇರಲು ಮನೆಯಲ್ಲಿ ಸಲಹೆ ನೀಡಿದರು. ಮೊದಲ ದಿನ ವಿದ್ಯಾರ್ಥಿಗಳು ಹೇಗೆ ಡ್ಯಾನ್ಸ್ ಮಾಡುತ್ತೇವೆ ಎಂದು ಪರೀಕ್ಷಿಸಲು ನಾಲ್ಕೈದು ಹಾಡುಗಳನ್ನು ಹಾಕಿ ಡ್ಯಾನ್ಸ್ ಮಾಡಲು ಹೇಳಿದರು.
 
ಅಭ್ಯಾಸ ಮುಗಿದಾಗ ನನ್ನ ಗುರುಗಳಾದ ವೀರೇಂದ್ರ ಜಲ್ವಾರ್ ಕರೆದು ಕೇಳಿದ್ದು `ಈಗಲೇ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತೀಯಾ. ನೀನು ನನಗೆ ಏಕೆ ಅಸಿಸ್ಟೆಂಟ್ ಆಗಬಾರದು?~ ಎಂದು. ಕಲಿಯಲು ಹೋಗಿ ದುಡಿಮೆ ಆರಂಭಿಸಿದೆ. ಹಿಂದಿ, ಇಂಗ್ಲಿಷ್, ಮರಾಠಿ ಮಾತನಾಡುತ್ತಿದ್ದ ನನಗೆ ಕನ್ನಡ ಕಲಿಯುವುದು ಕಷ್ಟವಾಗಲಿಲ್ಲ.

ಮುಂದೆ ಸ್ವಂತ ನೃತ್ಯ ಶಾಲೆ ಆರಂಭಿಸಿದೆ. ನಟ ರಮೇಶ್ ಅರವಿಂದ್ ಮಗಳು ನನ್ನ ತರಗತಿಗೆ ಬರುತ್ತಿದ್ದಳು. ಒಂದು ಕಾರ್ಯಕ್ರಮದಲ್ಲಿ ನಾನು ಸಂಯೋಜನೆ ಮಾಡಿದ ನೃತ್ಯವನ್ನು ನೋಡಿದ ರಮೇಶ್ ತುಂಬಾ ಖುಷಿಯಾಗಿ ಅಭಿನಂದಿಸಿದ್ದರು.

ಕೆಲವು ದಿನಗಳ ನಂತರ ರಮೇಶ್ ಅರವಿಂದ್ ಅವರಿಂದ ಫೋನ್ ಬಂತು. ನಿಮಗೊಂದು ಹಾಡು ಕೊಡುತ್ತೇನೆ. ಅದಕ್ಕೆ ನೃತ್ಯ ಸಂಯೋಜನೆ ಮಾಡುತ್ತೀರಾ ಎಂದು ಕೇಳಿದರು.

ಸಿನಿಮಾ ಲೋಕಕ್ಕೆ ಬರುವ ಕಲ್ಪನೆಯೇ ಇರದ ನನಗೆ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದಿತು. ಅದು ಪಲ್ಲವಿ ಪ್ರಕಾಶ್ ನಿರ್ಮಾಣದ `ಅಮ್ಮ ನಿನ್ನ ತೋಳಿನಲ್ಲಿ~ ಚಿತ್ರ. ನೃತ್ಯ ಮಾಡಿಸುವಾಗ ಕಲಾವಿದರ ಮುಂದೆಯೇ ನಿಂತುಕೊಂಡಿದ್ದೆ.

ಕ್ಯಾಮೆರಾಮನ್ ನೀವು ಬದಿಗೆ ಹೋಗದಿದ್ದರೆ ಅದನ್ನು ಶೂಟ್ ಮಾಡೋಕೆ ಆಗುವುದಿಲ್ಲ ಎಂದರು! ಎಂಥಾ ದಡ್ಡನಿರಬೇಕು ನಾನು ಎಂದು ನನ್ನನ್ನು ನಾನೇ ಹಳಿದುಕೊಂಡು ಪಕ್ಕಕ್ಕೆ ಸರಿದು ನಿಂತೆ. ಮೊದಲ ಹಾಡಿನ ಮೊದಲ ಶಾಟ್‌ನ ಅನುಭವವದು.

ಎರಡು ದಿನ ಆ ಹಾಡಿನ ಶೂಟಿಂಗ್ ಮುಗಿಸಿ ಎಂದಿನಂತೆ ನೃತ್ಯ ಶಾಲೆಯಲ್ಲಿ ತೊಡಗಿಕೊಂಡೆ. ಮೂರು ತಿಂಗಳ ನಂತರ ರಮೇಶ್ ಅರವಿಂದ್ ಮತ್ತೆ ಫೋನ್ ಮಾಡಿದರು. `ಬಿಸಿ ಬಿಸಿ~ ಚಿತ್ರಕ್ಕೆ ಆಹ್ವಾನವಿತ್ತರು. ನನಗೆ ಮುಂಬೈನಲ್ಲಿ ಬಾಲ್ಯದ ಗೆಳೆಯರು ತುಂಬಾ ಜನ.
 
`ವಿ ಚಾನೆಲ್~ನಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಗಿರೀಶ್ ಬಾಲನ್ ಚಾನೆಲ್‌ನ `ಸೂಪರ್ ಸಿಂಗರ್~ ಸ್ಪರ್ಧೆಯಲ್ಲಿ ಗೆದ್ದವರೊಂದಿಗೆ ಮಾಡಬೇಕಿದ್ದ ಆಲ್ಬಮ್‌ಗೆ ನೃತ್ಯ ಸಂಯೋಜಿಸಲು ನನಗೇ ಅವಕಾಶ ನೀಡಿದನು.

ರಮೇಶ್ ಅರವಿಂದ್ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ `ಅಮೃತಧಾರೆ~ಯಲ್ಲಿ ಒಂದು ಅವಕಾಶ ಸಿಕ್ಕಿತು. ಅಲ್ಲಿ ನಟ ಗಣೇಶ್ ಪರಿಚಯವಾಯಿತು. ಮುಂದೆ `ಮುಂಗಾರು ಮಳೆ~ ಅದ್ಭುತ ಯಶಸ್ಸು ಕಂಡಾಗ ಗಣೇಶ್‌ಗೆ ಶುಭಾಶಯ ತಿಳಿಸಲು ಫೋನ್ ಮಾಡಿದೆ.
 
ನನ್ನ ಬಗ್ಗೆಯೂ ಅವರು ವಿಚಾರಿಸಿದರು. ಅವರಿಗೆ ನಾನು ನೃತ್ಯ ಸಂಯೋಜಿಸಿದ ಆಲ್ಬಮ್‌ಗಳನ್ನು ತೋರಿಸಿದೆ. ಇಷ್ಟಪಟ್ಟು ಅವಕಾಶ ಕೊಡಿಸಿದರು. `ಹುಡುಗಾಟ~ ಚಿತ್ರದ `ಸ್ಟೈಲೋ ಸ್ಟೈಲೋ~ ಮತ್ತು `ಏನೋ ಒಂಥರಾ~ ಹಿಟ್ ಆದವು.

ಮುಂದೆ ನಾನು ಹಿಂದಿರುಗಿ ನೋಡುವ ಪ್ರಮೇಯವೇ ಎದುರಾಗಿಲ್ಲ. ರಮೇಶ್‌ರಿಂದ ಬದುಕಿನ ಹಾದಿ ಬದಲಾಯಿತು. ಗಣೇಶ್‌ರಿಂದ ಯಶಸ್ಸಿನ ಮೆಟ್ಟಿಲೇರುವ ಭಾಗ್ಯ ನನ್ನದಾಯಿತು.

`ಮಿಲನ~ ಪುನೀತ್ ಜೊತೆ ಮಾಡಿದ ಮೊದಲ ಸಿನಿಮಾ. `ಬಿಂದಾಸ್~, `ವಂಶಿ~, `ಅರಮನೆ~, `ಕೃಷ್ಣ~, ~ರಾಮ್~ ಮುಂತಾದ ಚಿತ್ರಗಳಲ್ಲಿ ಅವಕಾಶ ಸಿಕ್ಕಿತು. `ಜಂಗ್ಲಿ~, `ಜಾಕಿ~, `ಅಣ್ಣಾಬಾಂಡ್~, `ಸೂಪರ್~, `ಪರಮಾತ್ಮ~ ಜನ ನನ್ನನ್ನು ಗುರುತಿಸುವಂತೆ ಮಾಡಿದವು.

ಬಾಂಬೆಯ ಗೆಳೆಯರು ಮತ್ತಷ್ಟು ಆಲ್ಬಮ್‌ಗಳಲ್ಲಿ ಅವಕಾಶ ನೀಡಿದರು. `ಗಾಡ್‌ಫಾದರ್~, `ರ‌್ಯಾಂಬೋ~, `ಅದ್ದೂರಿ~, `ಅಂದರ್ ಬಾಹರ್~, `ಲಕ್ಷ್ಮೀ~, `ಟೋಪಿವಾಲಾ~ ಚಿತ್ರಗಳು ಬಿಡುಗಡೆಯಾಗಬೇಕಿವೆ.

ನಾನು ಸಿನಿಮಾದಲ್ಲಿ ನೆಲೆ ಕಂಡುಕೊಳ್ಳುವ ಮುಂಚೆ ತರಗತಿ ನಡೆಸುತ್ತಿದ್ದಾಗ ಯುವತಿಯೊಬ್ಬಳು ಡ್ಯಾನ್ಸ್ ಕಲಿಯಲು ಬಂದಿದ್ದಳು. ಸಾನಿಯಾ ಸರ್ದಾರಿಯಾ ಅವಳ ಹೆಸರು. ಮೂರು ತಿಂಗಳು ಡ್ಯಾನ್ಸ್ ಕಲಿಸಿದೆ.

ನಾಲ್ಕನೇ ತಿಂಗಳಿಗೆ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಿತು. ಆರನೇ ತಿಂಗಳಿಗೆ ಮದುವೆಯೂ ಆಯಿತು. ನಮಗೆ ಈಗ ಮುದ್ದಾದ ಮಗುವೊಂದಿದೆ. ನನ್ನ ನೃತ್ಯ ಶಾಲೆ, ಸಿನಿಮಾ ಬದುಕು ಎರಡಕ್ಕೂ ಆಕೆ ಬೆಂಬಲವಾಗಿ ನಿಂತಿದ್ದಾಳೆ.

ಲವ್ ಸಾಂಗ್‌ಗೆ ನೃತ್ಯ ಸಂಯೋಜಿಸುವುದೆಂದರೆ ತುಂಬಾ ಕಷ್ಟ. ಅದು ನನಗೆ ಭಯ ಕೂಡ. ಏಕೆಂದರೆ ನನ್ನದು ಪ್ರಾಕ್ಟಿಕಲ್ ವ್ಯಕ್ತಿತ್ವ.ರೊಮ್ಯಾಂಟಿಕ್ ಆಗಿಲ್ಲ ಎಂದು ಸಾನಿಯಾ ಕೂಡ ಹೇಳುತ್ತಿರುತ್ತಾಳೆ! ಅದರಲ್ಲಿ ನಟ ನಟಿಯರ ನಡುವೆ ಕೆಮಿಸ್ಟ್ರಿ ಚೆನ್ನಾಗಿರಬೇಕು.
 
ಏಕೆಂದರೆ ಇಡೀ ಸಿನಿಮಾದಲ್ಲಿ ನಾಯಕ ನಾಯಕಿಯರ ಆತ್ಮೀಯತೆ ಪ್ರಕಟವಾಗುವುದು ಇಂಥ ಹಾಡಿನ ಸನ್ನಿವೇಶದಲ್ಲಿ. ನಿರ್ದೇಶಕ ನಾಗಶೇಖರ್ `ಸಂಜು ವೆಡ್ಸ್ ಗೀತಾ~ದಲ್ಲಿ ನೀಡಿದ್ದೂ ಅಂತದ್ದೇ ಸವಾಲು.

`ಗಗನವೇ ಬಾಗಿ~, ~ಸಂಜು ಮತ್ತು ಗೀತಾ...~ ಹಾಡುಗಳನ್ನು ಹೇಗೋ ಹೆದರುತ್ತಲೇ ಮುಗಿಸಿದ್ದೆ. ಈಗ ಬಿಡದೆ `ಮೈನಾ~ದಲ್ಲಿ ಅವರು ಮತ್ತೆ ಮೂರು ಪ್ರೇಮ ಗೀತೆಗಳಿಗೆ ನೃತ್ಯ ಸಂಯೋಜಿಸಲು ಕರೆದಿದ್ದಾರೆ.

ಲಿರಿಕಲ್ ಹಿಪ್‌ಹಾಪ್‌ನಂತಹ ವಿದೇಶಿ ನೃತ್ಯ ಶೈಲಿಗಳನ್ನು ನಮ್ಮ ಸಿನಿಮಾಗಳಲ್ಲಿ ಅಳವಡಿಸುವುದು ನನ್ನ ಬಯಕೆ. ಕನ್ನಡ ಸಿನಿಮಾಗಳಲ್ಲಿ ಹೊಸ ಬಗೆಯ ಪ್ರಯೋಗಗಳು ನಡೆಯಬೇಕು.
 
ಅಂತದ್ದೊಂದು ಪ್ರಯತ್ನವನ್ನು ನಾನು ಖಂಡಿತಾ ಮಾಡುತ್ತೇನೆ. ನಿರ್ದೇಶನ ನನ್ನ ಕನಸು. ಕಥೆ ಬರೆದು ಚಿತ್ರ ಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದೇನೆ. ಅದಕ್ಕೆ ಕಾಲ ಯಾವಾಗ ಕೂಡಿ ಬರುವುದೋ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT