ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚ ತಡೆಗೆ ಆಗ್ರಹ

Last Updated 17 ಡಿಸೆಂಬರ್ 2012, 8:07 IST
ಅಕ್ಷರ ಗಾತ್ರ

ಹುನಗುಂದ: ಇಲ್ಲಿನ ವಿವಿಧ ಅಭಿವೃದ್ಧಿ ಬಡಾವಣೆಗಳಲ್ಲಿ ಖಾಲಿಯಿರುವ ನಿವೇಶನಗಳಲ್ಲಿ ಜಾಲಿಕಂಟಿ ಬೆಳೆದು ಸುತ್ತಲಿನ ನಿವಾಸಿಗಳಿಗೆ ಇಲ್ಲದ ತೊಂದರೆಗಳು ಉಂಟಾಗುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಹಂದಿಗಳು ವಾಸವಾಗಿ ಇಲ್ಲದ ಆತಂಕ ಮತ್ತು ಭಯ ಸೃಷ್ಟಿಯಾಗಿದೆ.

ಕೂಡಲೇ ಪಟ್ಟಣ ಪಂಚಾಯಿತಿ  ಸಂಬಂಧಪಟ್ಟ ನಿವೇಶನ ಮಾಲೀಕರಿಗೆ ತಿಳಿಸಬೇಕು ಅಥವಾ ತಾವೇ ಸ್ವಚ್ಛಗೊಳಿಸಬೇಕು ಎಂದು ತಾಲ್ಲೂಕು ಪ್ರಗತಿಪರ ಚಿಂತಕರ ವೇದಿಕೆ ಗೌರವಾಧ್ಯಕ್ಷ ಎಸ್.ಜಿ.ಪರೂತಿ ಮತ್ತು ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ ಆಗ್ರಹಿಸಿದ್ದಾರೆ.

ನವನಗರ, ಮಹಾಂತನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲಿ ಜಾಲಿಕಂಟಿ ಮರೆಯಲ್ಲಿ ಜನರು  ಶೌಚ ಮಾಡುತ್ತಿದ್ದಾರೆ. ಯಥೇಚ್ಛವಾಗಿ ಕಸ ಚೆಲ್ಲುತ್ತಾರೆ. ಅದರಂತೆ ಅಲ್ಲಲ್ಲಿ ಇರುವ ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಜಾಲಿಯ ಮರೆಯಲ್ಲಿ ಹಾಗೂ ಸಾರ್ವಜನಿಕ ರಸ್ತೆ ಕಟ್ಟಡಗಳ ಸುತ್ತ ಶೌಚ ಮಾಡುತ್ತಿದ್ದಾರೆ.

ಇದರಿಂದ ಎಲ್ಲೆಂದರಲ್ಲಿ ದರಿದ್ರ ವಾಸನೆ, ಹಂದಿಗಳ ಕಾಟ ಮತ್ತು ಮಾಲಿನ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಬಾಡಿಗೆ ಕೊಟ್ಟ ಕೋಣೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡದಿರುವುದರ ಬಗ್ಗೆ ಪ.ಪಂ. ಆಡಳಿತ ನಿಗಾವಹಿಸಬೇಕು.ಮಹಾಂತನಗರದ ಜನರು ಮಿನಿವಿಧಾನ ಸೌಧ ಮತ್ತು ಟಿಸಿಎಚ್ ಕಂಪೌಂಡ್‌ಮರೆಯಲ್ಲಿ ಶೌಚ ಮಾಡುತ್ತಾರೆ.

ಇನ್ನು ಚಿತ್ತವಾಡಗಿ ಹಾದಿಯಂತೂ ನೋಡಬಾರದು. ವಿದ್ಯಾವಂತ ಜನರೂ ಮನೆಯಲ್ಲಿ ಶೌಚಾಲಯ ಇಟ್ಟುಕೊಂಡು ಬಯಲಿನಲ್ಲಿ ಹೋಗುತ್ತಾರೆ. ಸ್ವತಃ ಪಟ್ಟಣ ಪಂಚಾಯಿತಿ ಆವರಣವೇ ಬಯಲು ಶೌಚಾಲಯವಾಗಿದೆ.
ಲೋಕೋಪಯೋಗಿ ಇಲಾಖೆ, ತಾಲ್ಲೂಕು ಪಂಚಾಯಿತಿ ಆವರಣ, ಕೇಂದ್ರ ಶಾಲೆ ಮುಂದೆ ಒಳಗೂ ಜನರು ಶೌಚ ಮಾಡುತ್ತಾರೆ.

ಪಟ್ಟಣ ಪಂಚಾಯಿತಿ ಅಲ್ಲಲ್ಲಿ ಕಟ್ಟಿದ ಶೌಚಾಲಯಗಳು ಕೇವಲ ನೋಡಲುಂಟು ಬಳಸಲಲ್ಲ. ಜನರೂ ಸಹಿತ ಶೌಚಾಲಯ ಬಳಕೆಯ ಬಗ್ಗೆ ಕನಿಷ್ಠ ತಿಳಿವಳಿಕೆಯನ್ನು ಹೊಂದಿಲ್ಲದಿರುವುದು ಅನಾಗರಿಕತೆಯನ್ನು ತೋರುತ್ತದೆ. ಪಟ್ಟಣ ಪಂಚಾಯಿತಿ ಆಡಳಿತ ಈ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡಿ ಮಾಲಿನ್ಯ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT