ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ, ನಗರದತ್ತ ಮುಖ ಮಾಡಿದ ರೈತ: ಗುಡಿಮನಿ

Last Updated 7 ಜುಲೈ 2012, 3:45 IST
ಅಕ್ಷರ ಗಾತ್ರ

ಗಜೇಂದ್ರಗಡ: ರೋಣ ತಾಲ್ಲೂಕು ಕಳೆದ ವರ್ಷದಿಂದ ನಿರಂತರ ಬರ ಪರಿ ಸ್ಥಿತಿಯನ್ನು ಎದುರಿಸುತ್ತಿದ್ದರೂ ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಗಳು `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ~ ಯೋಜನೆಯಡಿ ದುಡಿಯುವ ಕೈಗಳಿಗೆ ಸಮರ್ಪಕ ಉದ್ಯೋಗ ನೀಡುತ್ತಿಲ್ಲ. ಜಾನುವಾರುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಶುಕ್ರವಾರ ಸಮೀಪದ ನೆಲ್ಲೂರ ಗ್ರಾಮ ಸ್ಥರು ಮುಶಿಗೇರಿ ಗ್ರಾ.ಪಂ ಎದುರು ಸಾಂಕೇತಿಕ ಧರಣಿ ನಡೆಸಿ, ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ ಮಾತನಾಡಿ, ಮಳೆ ಆಶ್ರಿತ ಬೇಸಾವನ್ನೇ ನೆಚ್ಚಿಕೊಂಡಿರುವ ರೋಣ ತಾಲ್ಲೂಕಿನ ರೈತರಿಗೆ ಕಳೆದ ವರ್ಷದಿಂದ ಭೀಕರ ಬರ ಎದುರಾಗಿದೆ. ಪರಿಣಾಮ ರೈತರಿಗೆ ದಿಕ್ಕು ತೋಚದಂತಾಗಿದೆ. ಬದುಕು ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಹೀಗಿದ್ದರೂ ಸರ್ಕಾರ ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕನಿಷ್ಠ ಯೋಜನೆಗಳನ್ನು ರೂಪಿಸದಿರು ವುದು ನಾಗರಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷದ ಬರದಿಂದ ತಾಲ್ಲೂ ಕಿನ ರೈತರು ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸುವಂತಾಗಿದೆ. ರಾಜ್ಯದ ಬರ ಪೀಡಿತ ಪ್ರತಿ ತಾಲ್ಲೂಕಿಗೆ 3 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಪ್ರಕಟಿಸಿದ್ದಾರೆ. ಆದರೆ, ತಾಲ್ಲೂಕಿನ ಯಾವೊಬ್ಬ ರೈತನಿಗೂ ಈವರೆಗೂ ಸರ್ಕಾರದ ಪರಿಹಾರ ಹಣದ ಬಿಡಿಗಾಸು ದೊರಕಿಲ್ಲ ಎಂದರು.

ಸರ್ಕಾರ ಬರ ಕಾಮಗಾರಿಯನ್ನು ಆರಂಭಿಸದಿರುವುದರಿಂದ ಬೇಸತ್ತ ನಾಗರಿಕರು ಉದ್ಯೋಗ ಅರಸಿ ರಾಜ್ಯ ಹಾಗೂ ಅಂತರ್ ರಾಜ್ಯಗಳ ಮಹಾ ನಗರಗಳತ್ತ ಮುಖ ಮಾಡಿದ್ದಾರೆ. ಉದ್ಯೋಗ ಅರಸಿ ಗ್ರಾಮ ತೊರೆಯುವ ಕುಟುಂಬಗಳು ಮನೆಗಳಿಗೆ ಬೀಗ ಜಡಿದು, ಕುಟುಂಬ ಸಮೇತರಾಗಿ ಗುಳೆ ಹೋಗುತ್ತಿದ್ದಾರೆ.

ಹೀಗಾಗಿ ತಾಲ್ಲೂಕಿನ ಬಹುತೇಕ ಗ್ರಾಮಗಳು ಬಿಕೋ ಎನ್ನುತ್ತಿವೆ. ಗ್ರಾಮಗಳಲ್ಲಿ ಜನರೇ ಕಾಣ ಸಿಗದಿರುವುದು ಸರ್ಕಾರದ ಕಾಳಜಿ ಯನ್ನು ತೋರ್ಪಡಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ನೆಪ ಮಾತ್ರಕ್ಕೆ ಎನ್ನುವಂತೆ ತಾಲ್ಲೂಕಿನ ನಾಗೇಂದ್ರಗಡದಲ್ಲಿ ಗೋ ಶಾಲೆಯನ್ನು ಪ್ರಾರಂಭಿಸಿದೆ. ಆದರೆ, ಅಲ್ಲಿ ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವ ಹೊಟ್ಟು-ಮೇವು, ಹಿಂಡಿ, ಹತ್ತಿ ಕಾಳು, ಲವನಾಂಶ ಕಲ್ಲು, ಗೋಪಾಲಕರು, ಪಶು ವೈದ್ಯರಿಲ್ಲ. ಜೊತೆಗೆ ರೋಗಗ್ರಸ್ಥ ಜಾನುವಾರುಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಲ್ಲ. ಜಾನು ವಾರುಗಳ ಸಂಖ್ಯೆಗೆ ಅನುಗುಣವಾಗಿ ಶೆಡ್‌ಗಳನ್ನು ನಿರ್ಮಿಸಿಲ್ಲ. ಇದರಿಂದಾಗಿ ರೈತರು ಗೋಶಾಲೆಗೆ ಜಾನುವಾರು ಗಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ವಾರದ ಗಡುವು: ತಾಲ್ಲೂಕು ಆಡಳಿತ ವಾರದೊಳಗೆ ಎಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಹೊಂದಿ ದವರಿಗೆ ಸಮರ್ಪಕ ಉದ್ಯೋಗ ನೀಡ ಬೇಕು. ಕಳೆದ ವರ್ಷದ ಬರದಿಂದ ಉಂಟಾದ ನಷ್ಟದ ಹಣವನ್ನು ರೈತರಿಗೆ ಕೂಡಲೇ ನೀಡಬೇಕು. ಬರ ಕಾಮ ಗಾರಿಯನ್ನು ಆರಂಭಿಸಬೇಕು. ಇಲ್ಲ ದಿದ್ದರೆ ಉಗ್ರ ಹೋರಾಟ ನಡೆಸಲಾ  ಗುವುದು ಎಂದು ಎಚ್ಚರಿಸಿದರು.

ವೀರಪ್ಪ ರಂಗಾಪೂರ, ಕಾಳಪ್ಪ ಬಡಿಗೇರ, ಬಸಪ್ಪ ಗೇಣಿ, ಶಾಂತಯ್ಯ ಹಿರೇಮಠ, ಶಿವಪ್ಪ ಪೂಜಾರ, ಶರಣಪ್ಪ ಪತ್ತಾರ, ಶರಣಯ್ಯ ಹಿರೇಮಠ, ಮುದ್ದವ್ವ ಅಂಗಡಿ, ಯಲ್ಲವ್ವ ಈಳಗೇರ ಸೇರಿದಂತೆ ನೂರಾರು ಗ್ರಾಮಸ್ಥರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT