ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಸಾಲ ಮನ್ನಾಗೆ ರೇವಣ್ಣ ಆಗ್ರಹ

Last Updated 1 ಅಕ್ಟೋಬರ್ 2011, 9:20 IST
ಅಕ್ಷರ ಗಾತ್ರ

ಹಾಸನ: ~ಜಿಲ್ಲೆಯ ರೈತರು ಹಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಈ ವರ್ಷ ಬರಗಾಲವೂ ಅಪ್ಪಳಿಸಿರುವುದರಿಂದ ಇನ್ನಷ್ಟು ಸಂಕಟ ಎದುರಾಗಿದೆ. ಸರ್ಕಾರ ಜಿಲ್ಲೆಯ ರೈತರ ಸಾಲ ಮನ್ನಾ ಮಾಡಬೇಕು~ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರೇವಣ್ಣ, `ಹಾಸನವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಹಲವು ತಿಂಗಳಿಂದ ಒತ್ತಾಯ ಮಾಡುತ್ತ ಬಂದಿದ್ದೇವೆ. ಆದರೆ ಸರ್ಕಾರ ಗಮನಹರಿಸುತ್ತಿಲ್ಲ. ಒಂದೆಡೆ ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದರೆ ನಾಲೆಗಳಲ್ಲೂ ಎರಡೂವರೆ ತಿಂಗಳು ತಡವಾಗಿ ನೀರು ಹರಿಸಿದ್ದಾರೆ. ಇದರಿಂದಾಗಿ ಕೆಲವು ರೈತರು ಈಗ ನಾಟಿ ಮಾಡುತ್ತಿದ್ದಾರೆ.

ನಾಲೆಯ ಕೊನೆಯ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಮಾತ್ರವಲ್ಲ,  ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕಿನ ಕೆಲವು ಭಾಗಗಳಲ್ಲೂ ಬರಗಾಲ ಕಾಣಿಸಿಕೊಂಡಿದೆ. ಹಾಸನದಲ್ಲೂ ಸ್ಥಿತಿ ಸರಿಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೆ ಸರ್ಕಾರ ರೈತರನ್ನು ಬಿಟ್ಟು ಆಪರೇಶನ್ ಕಮಲದತ್ತ ಗಮನಹರಿಸಿದೆ ಎಂದರು.

`ಜಿಲ್ಲೆಯ ಎಲ್ಲ ಶಾಸಕರು ಶೀಘ್ರದಲ್ಲೇ ಹೋಗಿ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಲಿದ್ದೇವೆ. ಮುಖ್ಯಮಂತ್ರಿ ಕಾರ್ಯ ದರ್ಶಿ ಜತೆ ಮಾತುಕತೆ ನಡೆಸಿದ್ದೇನೆ.

ಮಂಗಳವಾರ ಸಮಯ ನಿಗದಿಮಾಡುವುದಾಗಿ ಹೇಳಿದ್ದಾರೆ. ನಿಯೋಗದಲ್ಲಿ ತೆರಳಿ ಜಿಲ್ಲೆಯ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟು ಸ್ವಲ್ಪ ಕಾಲಾವಕಾಶ ನೀಡುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ ಎಂದರು.

ಮಳೆ ಕಡಿಮೆಯಾಗಿ ಒಂದೆಡೆ ಬೆಳೆ ನಾಶವಾಗಿದ್ದರೆ, ಇನ್ನೊಂದೆಡೆ ಕುಡಿಯುವ ನೀರು ಹಾಗೂ ದಕನರುಗಳಿಗೆ ಮೇವಿಗೂ ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲೂ ಹಾಸನದಿಂದ ಹೊರಜಿಲ್ಲೆಗಳಿಗೆ ಮೇವು ಸಾಗಿಸಲಾಗುತ್ತಿದೆ. ಇದನ್ನು ನಿಷೇಧಿಸಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.

ಭೂಮಿ ನೀಡಿದ್ದು ಅಕ್ರಮ: ಹಾಸನದ ಎಸ್.ಎಂ. ಕೃಷ್ಣ ನಗರದಲ್ಲಿ ಹುಡಾದ ನಿವೇಶನಗಳನ್ನು ಕೆಎಸ್‌ಆರ್‌ಪಿಗೆ ನೀಡಿದ್ದನ್ನು ಸರ್ಕಾರ ವಿರೋಧಿಸಿದೆ. ಆದರೆ ಅದೇ ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ 200 ಎಕರೆ ಭೂಮಿಯನ್ನು ನಿಯಮ ಮೀರಿ ಪಶುವೈದ್ಯಕೀಯ ಕಾಲೇಜಿಗೆ ನೀಡಲಾಗಿದೆ. ಇದರ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

ಹಾಸನದಲ್ಲಿ ನ್ಯಾಯಾಧೀಶರ ವಸತಿಸಂಕೀರ್ಣ ನಿರ್ಮಾಣಕ್ಕೆ ಮೊದಲೇ ಗೊತ್ತುಮಾಡಿದ ಭೂಮಿಯನ್ನು ಬಿಟ್ಟು ಈಗ ಬಡವರ ಭೂಮಿಯನ್ನು ಕನಿಷ್ಟ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.

ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರಿಗೆ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ ಅಂತಾರೆ ಹಾಗಿದ್ದರೆ ಈ ಬದಲಾವಣೆಯನ್ನು ಮಾಡಿದ್ದು ಯಾರು ಎಂದು ಪ್ರಶ್ನಿಸಿದ ರೇವಣ್ಣ, ಉಳ್ಳವರ ಜಮೀನನ್ನು ಉಳಿಸುವ ಉದ್ದೇಶದಿಂದ ಬಡವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸುಳ್ಳು ಮಾಹಿತಿ : ತೆಲಂಗಾಣ ಹೋರಾಟ ಆರಂಭವಾಗಿರುವುದರಿಂದ ಕಲ್ಲಿದ್ದಲು ಬಾರದೆ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ಸಮಸ್ಯೆ ಉಂಟಾಗಿದೆ ಎಂದು ಇಂಧನ ಸಚಿವರು ಮತ್ತು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಸುಳ್ಳು ಹೇಳಿಕೆ.

ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆಯೇ ಕಲ್ಲಿದ್ದಲನ್ನು ಖರೀದಿಸುವಂತೆ ಹಲವುಬಾರಿ ಪತ್ರ ಬರೆದಿತ್ತು. ಆದರೆ ರಾಜ್ಯ ಸರ್ಕಾರ ಭಾರತದ ಕಲ್ಲಿದ್ದಲು ಬೇಡ ಎಂದು ತಿರಸ್ಕರಿ ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಇದು ಸಮಸ್ಯೆಗೆ ಕಾರಣ. ಮಾತ್ರವಲ್ಲದೆ ಕಳೆದ ಕೆಲವು ತಿಂಗಳಿಂದ ರಾಯಚೂರು ಶಾಖೋತ್ಪನ್ನ ಘಟಕಕ್ಕೆ ಕಲಬೆರಕೆ ಕಲ್ಲಿದ್ದಲು ಸರಬರಾಜಾಗುತ್ತಿದೆ. ಇದರಿಂದಾಗಿ ತಿಂಗಳು ಎರಡು ತಿಂಗಳಿಗೊಮ್ಮೆ ಘಟಕ ಸ್ಥಗಿತವಾಗುತ್ತಿದೆ. ನಾನು ಇಂಧನ ಸಚಿವನಾಗಿದ್ದ ಕಾಲದಲ್ಲಿ ಒಂದು ದಿನವೂ ಉತ್ಪಾದನೆ ನಿಲ್ಲದಂತೆ ವ್ಯವಸ್ಥೆ ಮಾಡಿದ್ದೆ ಎಂದು ರೇವಣ್ಣ ನುಡಿದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ,  ಎಚ್.ಕೆ. ಕುಮಾರಸ್ವಾಮಿ, ಪಟೇಲ್ ಶಿವರಾಂ, ಜಿ.ಪಂ. ಅಧ್ಯಕ್ಷ ಬಿ.ಡಿ. ಚಂದ್ರೇಗೌಡ, ನಗರಸಭೆ  ಅಧ್ಯಕ್ಷ ಸಿ.ಆರ್. ಶಂಕರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT