ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರರ ನವ್ಯದ ಮರುಕಳಿಕೆಗೆ ಮುಖಾಮುಖಿ ಒಂದು ಪ್ರತಿಕ್ರಿಯೆ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬರಗೂರು ರಾಮಚಂದ್ರಪ್ಪನವರ `ನವ್ಯದ ಮರುಕಳಿಕೆಗೆ ಮುಖಾಮುಖಿ~  (ಸಾಹಿತ್ಯಪುರವಣಿ ಸೆ.9) ಲೇಖನದ ರೂಪದಲ್ಲಿ ದೀರ್ಘ ಚರ್ಚೆಯನ್ನು ಓದಿದೆವು. ಕಾಲಕಾಲಕ್ಕೆ ಹೊಸ ವಾಗ್ವಾದಗಳಿಗೆ ದ್ವನಿ ಕೊಡುವ ಬರಗೂರರ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಬಹಳ ಮುಖ್ಯವಾಗಿ ಪಂಥ ಪ್ರಭೇದಗಳ ಆಚೆ ಇರುವ ಮೂರನೆಯ ಪಂಥ ಮತ್ತು ನವ್ಯ ಸಾಹಿತ್ಯಕ ಧೋರಣೆಗಳನ್ನು ಮರುಸ್ಥಾಪಿಸುವ ಯತ್ನಗಳ ಬಗ್ಗೆ ಎಚ್ಚರಿಕೆಯನ್ನು ಸಕಾಲಿಕವಾಗಿ ನೀಡಿದ್ದಾರೆ.

ಈ ಚರ್ಚೆಯನ್ನು ನಾವು ಹೆಚ್ಚೆಚ್ಚು ಆಳಕ್ಕಿಳಿದು ನೋಡುವಾಗ ಇಂಥ ವಾದ ಮತ್ತು ಧೋರಣೆಗಳ ಪ್ರತಿಷ್ಠಾಪನೆಗೆ ಅನಿವಾರ್ಯ ಕಾಲಘಟ್ಟ ಇದು ಇರಬಹುದೇ ಎಂಬ ಪ್ರಶ್ನೆಯನ್ನಿಟ್ಟುಕೊಂಡಾಗ ಖಚಿತವಾಗಿ ನಕಾರಾತ್ಮಕ ಉತ್ತರವನ್ನು ತಾಳಬಹುದು. ಇನ್ನು ಕನ್ನಡ ಸಾಹಿತ್ಯದ ಪ್ರಯೋಗಶೀಲತೆ ಇದೆಂದು ಸಾರಲೂ ಸಾಧ್ಯವಿಲ್ಲ.

ಕಾರಣ ಈಗಾಗಲೇ ನವ್ಯ ಇಂಥ ಪ್ರಯೋಗವನ್ನು ಮಾಡಿದೆ. ಇದೊಂದು ರೀತಿಯಲ್ಲಿ ಕನ್ನಡದ ಹಿನ್ನಡೆ ಅನ್ನಬಹುದು. ಜಾಗತೀಕರಣದ ವಶೀಕರಣ ಕಾಲಘಟ್ಟದಲ್ಲಿಯ ಜಾಣವಿಸ್ಮೃತಿಯಿದು. ಆದ್ದರಿಂದ ಬರಗೂರರವರು ನೀಡಿದ ಎಚ್ಚರಿಕೆ ಒಟ್ಟು ಸಾಹಿತ್ಯ ಸಂದರ್ಭವನ್ನು ಮರುವಿಮರ್ಶೆಗೆ ಹಚ್ಚಿದೆ ಎಂದರೆ ತಪ್ಪಾಗಲಾರದು.

ನನ್ನಂಥವರು ಗಮನಿಸುತ್ತಲೇ ಇದ್ದೇವೆ. ಭಾಷೆಯ ದೃಷ್ಟಿಯಿಂದ ನವ್ಯದ ಸಂಕೀರ್ಣತೆ ಮತ್ತೆ ಮುಂಚೂಣಿಗೆ ಬಂದು ನಿಲ್ಲುತ್ತಿದೆ. ನಮ್ಮ ಅನೇಕ ಕವಿಗಳು ಅದರಲ್ಲಿಯೂ ಹೊಸ ತಲೆಮಾರಿನ ಕವಿಗಳು ಈ ತಿರುಗಣಿಗೆ ಬಿದ್ದಿದ್ದಾರೆ.

ದಲಿತ ಬಂಡಾಯದ ಪ್ರತಿಭಟನಾ ನೆಲೆಯಲ್ಲಿ ಹೊಸ ಭಾಷೆಯನ್ನು ಮುರಿದು ಕಟ್ಟಬಹುದಾಗಿದ್ದ ಕಾವ್ಯ, ಅಮೂರ್ತ- ಸಂಕೀರ್ಣತೆಯ ನವ್ಯದ ಮಡುವಿಗೆ ಬಿದ್ದಿದೆ. ಸದ್ಯದ ಹೊಸ ಕವಿಗಳ ಕಾವ್ಯವನ್ನು ಈ ಮಾತುಗಳಿಗೆ ಸಾಕ್ಷಿಯಾಗಿಸಬಹುದು. ಇದರರ್ಥ ಇದು ಕೆಟ್ಟ ಕಾವ್ಯವಲ್ಲ, ಸಾಗಿರುವ ಹಾದಿಯ ದೃಷ್ಟಿಯಿಂದ ಇದು ಅಪಾಯಕಾರವೆಂದೆನಿಸದೇ ಇರದು.

ಇನ್ನು ಬಹಳ ಮುಖ್ಯವಾಗಿ ಪ್ರಸ್ತುತತೆ ಮತ್ತು ಸಮಕಾಲಿನ ಸಾಹಿತ್ಯ ಪರಂಪರೆಗೆ ಸಾಕ್ಷಿಯಾಗಬೇಕಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ನವ್ಯ ಮಾದರಿಯ ಮರುಹುಟ್ಟಿಗೆ ನೀಡಿರುವ ಪ್ರಾತಿನಿಧ್ಯವನ್ನೂ ಇಲ್ಲಿ ಗಮನಿಸಬೇಕು.

ಶ್ರಿನಿವಾಸ ವೈದ್ಯರ  `ಹಳ್ಳ ಬಂತು ಹಳ್ಳ~ ಮತ್ತು ಗೋಪಾಲಕೃಷ್ಣ ಪೈಯವರ  `ಸ್ವಪ್ನ ಸಾರಸ್ವತ~ ಕಾದಂಬರಿಗಳಿಗೆ ನೀಡಿದ ಪ್ರಶಸ್ತಿ ಮತ್ತು ಅದರ ಹಿಂದೆ ಇರಬಹುದಾದ ನವ್ಯದ ವಿಮರ್ಶಾ ನಿಲುವುಗಳನ್ನು ಗಮನಿಸಬೇಕು. ಎಂದೂ ಚರ್ಚೆಯಾಗದ, ಪರಂಪರೆಯ ಭಾಗವೂ ಆಗದ ಲೇಖಕರು ದಿಢೀರನೆ ಮುಂಚೂಣಿಗೆ ಬಂದುದು ನವ್ಯದ ಸಂದರ್ಭದಲ್ಲಿದ್ದ ವಾತಾವರಣವನ್ನು ನೆನಪಿಸುತ್ತದೆ.

ಇವು ಎಷ್ಟೇ ಉತ್ತಮ ಕೃತಿಗಳಾದರೂ ಕನ್ನಡ ಸಾಹಿತ್ಯ ಪ್ರಯೋಗಶೀಲ ಓದುಗನ ಮನಸ್ಸಿನಲ್ಲಿ ವೈಚಾರಿಕತೆಯನ್ನು ಬಿಂಬಿಸುವುದಿಲ್ಲ. ಈ ಲೇಖಕರು ಒಮ್ಮಿಂದೊಮ್ಮೆಲೆ ಇಂಥ ಗೌರವವನ್ನು ಪಡೆದವರಾದರು. ಇದೊಂದು ರೀತಿಯ ನವ್ಯದ ಮರುಮಾಟ ಅನ್ನಿಸದೇ ಇರಲಾರದು. ಸಂಶಯಕ್ಕೇ ಎಡೆ ಮಾಡಿಕೊಡುತ್ತದೆ.

ಇದನ್ನೇ ಸೂಕ್ಷ್ಮವಾಗಿ ಬರಗೂರರು ಏಕವ್ಯಕ್ತಿ ಏಕಕೃತಿಗಳು  ಎಂದು ಕರೆದಿರಬಹುದು. ಮುಂದುವರೆದು ವ್ಯಕ್ತಿ ಮತ್ತು ಕೃತಿ ನಿಮಿತ್ತ ಮಾತ್ರವಾಗಿ ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಯನ್ನು ಪರೆಗಣಿಸಬೇಕಾಗುತ್ತದೆ ಎಂದು ಬರಗೂರರು ಹೇಳಿದ ಮಾತು ಅಕ್ಷರಶಃ ಸತ್ಯ.

ಕನ್ನಡ ಸಾಹಿತ್ಯ ಸಂದರ್ಭ ದಲಿತ ಬಂಡಾಯ ಸಾಹಿತ್ಯದ ಪ್ರಭಾವದಿಂದ ತಪ್ಪಿಸಿಕೊಂಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತ ಅದರ ಹೊಸ ಸಾಧ್ಯತೆಗಳು ಎಲ್ಲಿವೆ ಎಂಬುದನ್ನು ವಿವೇಚಿಸಿಕೊಳ್ಳುವ ಹೊಣೆಗಾರಿಕೆ ಕೂಡ ನಮ್ಮ ಮೇಲಿದೆ.

ತುರ್ತಾಗಿರುವ ಜಾಗತೀಕರಣದ ಈ ಸಂದರ್ಭಕ್ಕೆ ಶಕ್ತ ಸಾಹಿತ್ಯ ಹುಟ್ಟಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕು. ಸೃಜನಶೀಲತೆ ಅಥವಾ ಭಾಷಾ ಪ್ರಯೋಗ ಹೀಗೆ ಇರಬೇಕೆಂಬುದು ನಿರ್ಧರಿಸಲು ಸಾಧ್ಯವಾಗದಿದ್ದರೂ ಇಲ್ಲಿ ಪರಂಪರೆ ಹಿನ್ನಡೆ ಮಾತ್ರವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT