ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಲ್ಲಿ ಭರ್ಜರಿ ತೊಗರಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬದುಕಿಗೆ ಆಸರೆಯಾಗಿರುವ ಶೇಂಗಾ ಬೆಳೆಗೆ ಪರ್ಯಾಯವಾಗಿ ತೊಗರಿಯತ್ತ ಆಸಕ್ತಿ ತೋರಿರುವ ರೈತರೊಬ್ಬರು ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದಾರೆ.

ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಏಕ ಬೆಳೆಯಾಗಿ ಶೇಂಗಾ ಬೆಳೆಯುವ ಪದ್ಧತಿಯನ್ನು ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ರೈತರು ರೂಢಿಸಿಕೊಂಡಿರುವುದು ಸಾಮಾನ್ಯವಾಗಿದೆ. ಆದರೆ ಇದರಿಂದ ಪೋಷಕಾಂಶಗಳ ಕೊರತೆ ಮತ್ತು ಕೀಟ- ರೋಗಗಳ ಬಾಧೆ ಹೆಚ್ಚಾಗಿ, ಇಳುವರಿ ಕುಂಠಿತವಾಗುತ್ತದೆ.

ಇದನ್ನು ಗಮನಿಸಿದ ಚಳ್ಳಕೆರೆ ತಾಲ್ಲೂಕಿನ ವಿಡುಪನಕುಂಟೆ ಗ್ರಾಮದ ಪ್ರಗತಿಪರ ರೈತ ವಿ.ಎಸ್. ಸಿದ್ದೇಶ್ವರ ರೆಡ್ಡಿ ಚಿಂತನೆ ನಡೆಸಿ ಶೇಂಗಾಕ್ಕೆ ಪರ್ಯಾಯವಾಗಿ 30 ಎಕರೆ ಪ್ರದೇಶದಲ್ಲಿ ಬಿಆರ್‌ಜಿ 2 ತಳಿಯ ತೊಗರಿ ಬೆಳೆದಿದ್ದಾರೆ. ಈ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ವಿಸ್ತೀರ್ಣದಲ್ಲಿ ತೊಗರಿ ಬೆಳೆದವರಲ್ಲಿ ಮೊದಲಿಗರಾಗಿದ್ದಾರೆ.

ಎಕರೆಗೆ 1 ಕಿಲೊದಂತೆ 30 ಕಿಲೊ ಬೀಜವನ್ನು 30 ಎಕರೆಯಲ್ಲಿ ಬಿತ್ತಿ, ಬೆಳೆ ಮಧ್ಯೆ 5 ಕಿಲೊ ಹೆಸರು ಮತ್ತು 5 ಕಿಲೊ ಉ್ದ್ದದ್ದು ಅಂತರ ಬೆಳೆಯಾಗಿ ಹಾಕಿ ಈಗಾಗಲೆ ತಲಾ 5 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. ತೊಗರಿ ಬಿತ್ತುವಾಗ ಸಾಲಿನಿಂದ ಸಾಲಿಗೆ 6-7 ಅಡಿ ಮತ್ತು ಬೀಜದಿಂದ ಬೀಜಕ್ಕೆ 1-1 ಅಡಿ ಅಂತರ ಕಾಪಾಡಿಕೊಂಡರು.
 
ಜೂನ್‌ನಲ್ಲಿ ಬಿತ್ತನೆ ಮಾಡಿದ ನಂತರ ಅಲ್ಪ-ಸ್ವಲ್ಪ ಮಳೆ ಬಿತ್ತು. ಅಕ್ಟೋಬರ್ ತಿಂಗಳಲ್ಲಿ ಮಾತ್ರ ಉತ್ತಮ ಮಳೆ ಸುರಿಯಿತು. ಆದರೆ, ಅಂತರ ಬೇಸಾಯ ಮಾಡಿದ್ದರಿಂದ ಭೂಮಿಯಲ್ಲಿ ತೇವಾಂಶ ಉಳಿದು ತೊಗರಿ ಬೆಳೆ ಬಾಡದೆ ಹೂ, ಕಾಯಿ ಬೆಳವಣಿಗೆಗೆ ಸಹಕಾರಿಯಾಯಿತು. ಈಗ ಅವರು ಸುಮಾರು 100-120 ಕ್ವಿಂಟಲ್ ತೊಗರಿ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

30 ಎಕರೆ ತೊಗರಿಯನ್ನು ಬಿತ್ತನೆ ಬೀಜದ ಪ್ರಮಾಣೀಕರಣಕ್ಕೆ ನೋಂದಾಯಿಸಿದ್ದಾರೆ. ಇಡೀ ಬೆಳೆಯನ್ನು ಬೆಂಗಳೂರಿನ ಜಿಕೆವಿಕೆ ಬೀಜ ಘಟಕ ಖರೀದಿಸುವ ಭರವಸೆ ನೀಡಿದೆ.
`ನಾನು ಸರ್ಕಾರಿ ಗೊಬ್ಬರ ಬಳಸಿಲ್ಲ. ಕೊಟ್ಟಿಗೆ ಗೊಬ್ಬರ ಮಾತ್ರ ಹಾಕಿದ್ದೇನೆ. ತೊಗರಿ ಹೂವು, ಮೊಗ್ಗು ಅರಳುವಾಗ ಮಳೆ ಬಂತು. ಆದರೆ, ಕಾಯಿ ಕಟ್ಟಬೇಕಾದರೆ ಮಳೆ ಇರಲಿಲ್ಲ.
 
ಆಗ ಸಿಂಪರಣೆ ಮೂಲಕ ನೀರು ಕೊಟ್ಟೆ. ಹೀಗಾಗಿ ಮಳೆಯಾಗದಿದ್ದರೂ ಬೆಳೆಗೆ ತೊಂದರೆಯಾಗಲಿಲ್ಲ. ನನ್ನ ಅನುಭವದ ಪ್ರಕಾರ ಒಣ ಪ್ರದೇಶಗಳಲ್ಲಿ ತೊಗರಿಯಿಂದ ಉತ್ತಮ ಪ್ರತಿಫಲ ದೊರೆಯುತ್ತದೆ. ನಮ್ಮಲ್ಲೇ ನೋಡಿ. ಈ ವರ್ಷ ಶೇಂಗಾ ಬೆಳೆ ಪೂರ್ಣ ವಿಫಲವಾಗಿದೆ.

ಆದರೆ, ತೊಗರಿಯಿಂದ ಶೇಂಗಾ ಬೆಳೆಯಷ್ಟೇ ಆದಾಯ ದೊರೆಯುವ ನಿರೀಕ್ಷೆ ಮಾಡಿದ್ದೇನೆ. ಜತೆಗೆ ತೊಗರಿಯ ಎಲೆಗಳು ಭೂಮಿಯ ಮೇಲೆ ಬಿದ್ದು, ಕೊಯ್ಲಿನ ತಕ್ಷಣ ಉಳುಮೆ ಮಾಡಿ ಮಣ್ಣಿನಲ್ಲಿ ಸೇರಿಸುವುದರಿಂದ ಮತ್ತು ಬೇರು ಗಂಟುಗಳು ಮಣ್ಣಿನಲ್ಲಿ ಉಳಿಯುವುದರಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ~ ಎಂದು ರೆಡ್ಡಿ ಪ್ರತಿಪಾದಿಸುತ್ತಾರೆ.

`ಸತತವಾಗಿ 20-25 ವರ್ಷ ಶೇಂಗಾ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ, ಪೌಷ್ಟಿಕಾಂಶಗಳು ನಶಿಸುತ್ತವೆ. ಶೇಂಗಾಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ಮಳೆಯಾಗದಿದ್ದರೆ ಬೆಳೆ ಹಾನಿಗೊಳಗಾಗುತ್ತದೆ. ತೊಗರಿಗೆ ಈ ಸಮಸ್ಯೆ ಇಲ್ಲ. ದೀರ್ಘಾವಧಿ ಬೆಳೆ ಆದ ಕಾರಣ ಯಾವುದೇ ಸಮಯದಲ್ಲಿ ಮಳೆಯಾದರೂ ಚೇತರಿಸಿಕೊಳ್ಳುತ್ತದೆ.

ಇದುವರೆಗೆ ನಮ್ಮ  ಜಿಲ್ಲೆಯಲ್ಲಿ ಪೂರ್ಣ ಬೆಳೆಯಾಗಿ ತೊಗರಿ ಬೆಳೆದ ಉದಾಹರಣೆ ಇಲ್ಲ. ಇದೇ ಪ್ರಥಮ ಬಾರಿ 30 ಎಕರೆಯಷ್ಟು ವಿಸ್ತೀರ್ಣದಲ್ಲಿ ಕೇವಲ ಮಳೆ ಅವಲಂಬಿಸಿ ತೊಗರಿ ಬೆಳೆಯಲಾಗಿದೆ~ ಎಂದು `ಆತ್ಮ~ ಯೋಜನೆ ಉಪ ಯೋಜನಾ ನಿರ್ದೇಶಕ ಜೆ. ತಿಪ್ಪೇಸ್ವಾಮಿ ಹೇಳುತ್ತಾರೆ.
ಸಿದ್ದೇಶ್ವರ ರೆಡ್ಡಿ ಅವರ ಮೊಬೈಲ್ ಸಂಖ್ಯೆ 99023 33741.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT