ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

Last Updated 24 ಸೆಪ್ಟೆಂಬರ್ 2011, 6:40 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಕಾರಣ ತಾಲ್ಲೂಕನ್ನು `ಬರಪೀಡಿತ ಪ್ರದೇಶ~ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ವಂದೇಮಾತರಂ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಬಹುತೇಕ ಭಾಗದಲ್ಲಿರುವ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು, ಕೃಷಿ ಕಾರ್ಮಿಕರು ಕೈಗಳಿಗೆ ಕೆಲಸವಿಲ್ಲದೇ ಗುಳೇ ಹೋಗುತ್ತಿದ್ದಾರೆ. ಜಾನುವಾರುಗಳನ್ನು ಕೇಳಿದ ಬೆಲೆಗೆ ಮಾರಿಕೊಳ್ಳುತ್ತಿದ್ದು, ಬಹುತೇಕ ರಾಸುಗಳು ಕಸಾಯಿಖಾನೆ ಸೇರುತ್ತಿವೆ ಎಂದು ದೂರಿದರು.

ಹಿಂದಿನ ವರ್ಷ ಹಿಂಗಾರು ಮಳೆ ಹೆಚ್ಚಾಗಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಶೇಂಗಾ ಹಾಳಾಗಿತ್ತು. ಈ ಬಾರಿ ಬಿತ್ತನೆಯೇ ಆಗಿಲ್ಲ. ಬಿತ್ತನೆ ಮಾಡಲು ತಂದಿದ್ದ ಶೇಂಗಾ ಬೀಜವನ್ನು ಕ್ವಿಂಟಲ್‌ಗೆ ್ಙ 2-3 ಸಾವಿರ ಕಡಿಮೆ ದರಕ್ಕೆ ರೈತರು ಮಾರಿಕೊಂಡಿದ್ದಾರೆ. ತಕ್ಷಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ, ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎಂದು ವೇದಿಕೆ ಮುಖಂಡರು ಆಗ್ರಹಿಸಿದರು.

ಜಿಲ್ಲೆಯನ್ನು ಪದೇಪದೇ ಕಾಡುವ ಬರಗಾಲದಿಂದ ಮುಕ್ತಗೊಳಿಸಲು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಚುರುಕುಗೊಳಿಸಿ, ಜಿಲ್ಲೆಗೆ ನೀರು ಹರಿಯುವಂತೆ ಮಾಡಬೇಕು. ತಾಲ್ಲೂಕಿನಲ್ಲಿ ಅಗತ್ಯವಿರುವ ಕಡೆ ಗೋಶಾಲೆ ಆರಂಭಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್, ಎನ್. ಬಾಲು, ಎಚ್.ಪಿ. ಮಹಾಂತೇಶ್, ಪಿ. ಕೃಷ್ಣಮೂರ್ತಿ, ಮಸ್ಕಲ್ ಪರಮೇಶ್, ಕೆ. ಸೆಂದಿಲ್ ಕುಮಾರ್, ವಿ. ಅರುಣ್‌ಕುಮಾರ್, ಟಿ.ವಿ. ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲಸೌಲಭ್ಯದ ಭರವಸೆ
ತಾಲ್ಲೂಕಿನ ಮಲ್ಲಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ ಭರವಸೆ ನೀಡಿದರು.

ಮಲ್ಲಪ್ಪನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮುದಾಯ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ವೈದ್ಯರ ಕೊರತೆಯಿದೆ. ಆರೋಗ್ಯ ಸಚಿವರ ಮೇಲೆ ಒತ್ತಡ ತಂದು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವೈದ್ಯಾಧಿಕಾರಿ ಡಾ.ಪ್ರಭುಪ್ರಸಾದ್, ಹರ್ತಿಕೋಟೆ ಗ್ರಾ.ಪಂ. ಅಧ್ಯಕ್ಷೆ ರತ್ನನಾಯಕಿ, ತಾ.ಪಂ. ಸದಸ್ಯೆ ಭಾರತಮ್ಮ, ಕಿರಿಯ ಆರೋಗ್ಯ ಸಹಾಯಕಿ ಎಂ. ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT