ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಯೂ ಆಕ್ಟಿವಿಸಮ್ಮೇ...

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವೊಲ್ಗಾ ಅನೇಕ ಕಾರಣಗಳಿಗಾಗಿ ನಮ್ಮ ಅಗ್ರಮಾನ್ಯ ಲೇಖಕಿ. ಎಡಪಂಥೀಯ ವಿಚಾರಧಾರೆಯ ಮತ್ತು ಹೋರಾಟದ ದಟ್ಟ ಹಿನ್ನೆಲೆಯಿಂದ ಬಂದವರು ವೊಲ್ಗಾ. ಆದರೆ, `ಹೆಣ್ಣಿನ ವಿಷಯಗಳು' ಎಡಪಂಥೀಯವೂ ಸೇರಿದಂತೆ ಯಾವುದೇ ಸಾಮುದಾಯಿಕ ತಾತ್ವಿಕ ಮಾದರಿಗಳ ಮೂಲ ಆದ್ಯತೆಗಳಲ್ಲಿ ಒಂದಾಗುವುದು ಸಾಧ್ಯವಿಲ್ಲ ಎನ್ನುವ ಸತ್ಯದ ಮನವರಿಕೆಯ ಬೆನಲ್ಲೆ ತಮ್ಮನ್ನು ಮಹಿಳಾ ಹೋರಾಟದ ಜೊತೆ ಗುರುತಿಸಿಕೊಂಡರು. `ಅಸ್ಮಿತಾ' ಸಂಘಟನೆಯ ಮೂಲ ಸಂಸ್ಥಾಪಕರಲ್ಲಿ ಒಬ್ಬರಾದ ವೊಲ್ಗಾ ಅದರ ಮೂಲಕ ನಡೆಸಿದ ಪ್ರಯತ್ನಗಳು, ಸಾಹಸಗಳು,ಪ್ರಯೋಗಗಳು ಅನೇಕ. ಇವರು ಸಂಪಾದಿಸಿದ `ನೀಲಿ ಮೇಘ್ಹಾಲು' (ತೆಲುಗು ಸ್ತ್ರೀವಾದಿ ಕವಿತೆಗಳ ಸಂಕಲನ) ತೆಲುಗು ಸಾಹಿತ್ಯಕ ಜಗತ್ತಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು `ರಾಜಕೀಯ ಕಥೆಗಳು', `ಪ್ರಯೋಗಮ್','ವಿಮುಕ್ತ', ಮೊದಲಾದ ಕಥಾ ಸಂಕಲನಗಳು, `ಸಹಜ', ಸ್ವೇಚ್ಚಾ', 'ಮಾನವಿ' ಕಾದಂಬರಿಗಳಲ್ಲದೆ ವಿಮರ್ಶೆ ಮತ್ತು ಅನುವಾದಗಳೂ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ. ಸದ್ಯ ತಮ್ಮ ಪತಿ ಕುಟುಂಬರಾವ್ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

ಆಕ್ಟಿವಿಸಮ್‌ನೊಂದಿಗೆ ನಿಮ್ಮದು ಅವಿನಾ ಎನ್ನುವಂತಹ ಅನುಬಂಧ. ಬರವಣಿಗೆ ಮತ್ತು ಆಕ್ಟಿವಿಸಂನ ಸಾಂಗತ್ಯವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಬರವಣಿಗೆಯೂ ಆಕ್ಟಿವಿಸಮ್ ಎಂದೇ ನಾನು ತಿಳಿಯುವುದು. ಎಲ್ಲ ಬರಹಗಾರರ ಮಟ್ಟಿಗೂ ಇದು ನಿಜ. ಸಮುದಾಯದ ಯಾವುದೇ ಸಂಗತಿಗಳನ್ನೂ ಮೊದಲು   ಗ್ರಹಿಸುವುದಾಗಲೀ, ಪ್ರತಿಕ್ರಿಯಿಸುವುದಾಗಲೀ ಲೇಖಕರೇ ಹೀಗೆ ತನ್ನ ಪರಿಸರ, ವ್ಯಕ್ತಿಗಳು ಎಲ್ಲರೊಂದಿಗೂ ಬರವಣಿಗೆಯ ಮೂಲಕ ನಡೆಸುವ ಮುಖಾಮುಖಿಯೂ ಆಕ್ಟಿವಿಸಮ್ಮೇ.

ಸಾಮಾನ್ಯವಾಗಿ ನಾವು ಆಕ್ಟಿವಿಸಮ್ಮನ್ನು ಬಹಳ ಸರಳವಾಗಿ,ಏಕತಾನತೆಯ ರೂಢಿಗತ  ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ತಾ ಇರ್ತೀವಿ. ಬದಲಾದ ಸನ್ನಿವೇಶಗಳಲ್ಲಿ ಇದರ ಅರ್ಥ ಮತ್ತು ಸ್ವರೂಪವೂ ಬದಲಾಗಿದೆ. ಸ್ತ್ರೀವಾದಿ ರಾಜಕಾರಣಕ್ಕೆ ಬಂದ ಮೇಲಂತೂ ನನಗೆ ಇದು ಇನ್ನೂ ಸ್ಪಷ್ಟವಾಗಿದೆ. ಹೆಣ್ಣಿನ ಬಗ್ಗೆ ಭಿನ್ನ ರೀತಿಯಲ್ಲಿ , ಅವಳ ಅಗತ್ಯ ಮತ್ತು ಅವಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತಿಸುವುದು ಮತ್ತು ಬರೆಯುವುದೂ ಆಕ್ಟಿವಿಸಂ ಎಂದೇ ನನಗನ್ನಿಸುತ್ತದೆ. This is also a kind of contribution to women's  movement ಮನೆಯಲ್ಲಿ ಕುಳಿತೂ ಈ ಕೆಲಸ ಮಾಡುತ್ತಿರುವವರೆಲ್ಲ ಆಕ್ಟಿವಿಸ್ಟ್ ಗಳೆಂದೇ ನಾನು ತಿಳಿಯುತ್ತೇನೆ.

ಎಂದರೆ, ಬರವಣಿಗೆಯ ಅಥವಾ ಕಲಾಭಿವ್ಯಕ್ತಿಯ ಸ್ವಾಂತಸುಖಾಯದ ನೆಲೆಯನ್ನು ನೀವು ಒಪ್ಪುವುದಿಲ್ಲ ಅಲ್ಲವೆ?
ಖಂಡಿತಕ್ಕೂ ಒಪ್ಪುವುದಿಲ್ಲ. ಕಲೆಗಾಗಿ ಕಲೆ ಅನ್ನುವುದೇ ಒಂದು ಬಗೆಯ ಮೂಲಭೂತವಾದ ಅನ್ನಿಸುತ್ತದೆ ನನಗೆ. ಇದನ್ನು ದಾಟುವುದರಲ್ಲಿಯೇ ಕಲೆಯ ಪಾತ್ರ ಮತ್ತು ಸಾರ್ಥಕತೆ ಇದೆ. ಹೀಗೆ ಹೇಳುತ್ತಿರುವಾಗ accountability ಯ ಪ್ರಶ್ನೆ ಕೇವಲ ಬರಹಗಾರರದ್ದು ಎನ್ನುವುದನ್ನೂ ನಾನು ಒಪ್ಪುವುದಿಲ್ಲ. ಒಂದು ಕಲಾತ್ಮಕ ಅಭಿವ್ಯಕ್ತಿ ಭಿನ್ನ ಜನರಲ್ಲಿ ಭಿನ್ನ ದೃಷ್ಟಿಕೋನಗಳನ್ನು ಸೃಷ್ಟಿಸುತ್ತಿರುತ್ತದೆ.ಈ ಮೂಲಕವೇ ಅದು ಸಂಗತಿಯೊಂದರ ಭಿನ್ನ ಆಯಾಮಗಳನ್ನು ಹುಡುಕುತ್ತಾ ವಿಸ್ತಾರವನ್ನು ಪಡೆಯುತ್ತಿರುತ್ತದೆ.ಕಲಾಪಠ್ಯವೊಂದು ತನ್ನ ಓದುಗರಲ್ಲಿ ಬೆಳೆಯುವ ಕ್ರಿಯೆಯೇ ಕಲೆಯ ಜೀವಂತಿಕೆಯ ಲಕ್ಷಣ.

ನಿಮ್ಮ ಬರವಣಿಗೆಯ ಹಿಂದಿನ ಪ್ರಭಾವಗಳು ಮತ್ತು ಹಿನ್ನೆಲೆಯ ಬಗ್ಗೆ...
ನಿಸ್ಸಂದೇಹವಾಗಿ ಸಾಹಿತ್ಯವೇ. ನನ್ನ ತಂದೆ ಕಮ್ಮುನಿಸ್ಟ್ ಚಿಂತನೆಗಳಲ್ಲಿ ನಂಬಿಕೆಯಿಟ್ಟವರು. ಮನೆಯಲ್ಲಿ ಅತ್ಯುತ್ತಮ ಜಾಗತಿಕ ಸಾಹಿತ್ಯದ ಕೃತಿಗಳಿದ್ದವು. ಅದರಲ್ಲೂ ಮುಖ್ಯವಾಗಿ ರಷ್ಯಾ ಮತ್ತು ತೆಲುಗು ಸಾಹಿತ್ಯ.

ಈ ದತ್ತ ವಾತಾವರಣ ನಿಮ್ಮ ಆಯ್ಕೆಯನ್ನು ಕಟ್ಟಿ ಹಾಕಿತು ಅಂತ ನಿಮಗೆ ಎಂದಾದರೂ ಅನ್ನಿಸಿದ್ದಿದೆಯೆ? ಕಮ್ಯುನಿಸ್ಟ್ ಹಿನ್ನೆಲೆ ನಿಮ್ಮ ಇತರ ಆಯ್ಕೆಗಳ ಅವಕಾಶವನ್ನು ಮೊಟಕು ಮಾಡಿತೆ?
ಇಲ್ಲ. ತಂದೆ ಕಮ್ಯುನಿಸ್ಟರಾಗಿದ್ದರೂ ಮನೆಯಲ್ಲಿ ಮುಕ್ತ ವಾತಾವರಣವಿತ್ತು.ತಾಯಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಹಬ್ಬ ಹರಿದಿನಗಳು, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಹೀಗೆ ಮನೆಯಲ್ಲಿ ಮುಕ್ತ ವಾತವರಣವಿತ್ತು. ನಿಜ ಅಂದರೆ ನನ್ನ ಗೆಳತಿಯರಲ್ಲೆಲ್ಲಾ ಈ ಬಗೆಯ ಮುಕ್ತ ವಾತಾವರಣವಿದ್ದದ್ದು ನಮ್ಮ ಮನೆಯಲ್ಲಿ ಮಾತ್ರ.

ತಂದೆ ನಿಮ್ಮ ತಾಯಿಯವರನ್ನ ನಡೆಸಿಕೊಳ್ತಾ ಇದ್ದದ್ದು ಸಮಾನತೆಯಲ್ಲಿ ನಂಬಿಕೆಯಿಟ್ಟಿದ್ದ ಕಮ್ಯುನಿಸ್ಟ್‌ರಾಗಿಯೋ? ಪಿತೃಸಂಸ್ಕೃತಿಯ ಪ್ರತಿನಿಧಿಯಾಗಿಯೋ?
He was never a hypocrite and I am very proud of it.. ತಾಯಿಯನ್ನು ಅವರ ಸಹಜ ವ್ಯಕ್ತಿತ್ವದ ನೆಲೆಯಲ್ಲಿಯೇ ನನ್ನ ತಂದೆ ಒಪ್ಪಿಕೊಂಡಿದ್ದರು.

ಅಥವಾ ಇದರ ಹಿಂದೆ ಸುಧಾರಣಾವಾದಿ ಪ್ರಭಾವಗಳನ್ನೂ ಗುರುತಿಸಲು ಸಾಧ್ಯವಿದೆಯೆ?
ಇದ್ದೀತು. ಅವರಲ್ಲೊಬ್ಬ ಆದರ್ಶವಾದಿಯನ್ನೂ ನಾನು ಕಂಡಿದ್ದೇನೆ. ಅಪಾರ ಗೌರವದಲ್ಲಿ ಅವರು ಹೆಂಡತಿ ಮತ್ತು ಮಕ್ಕಳನ್ನು ಕಂಡವರು. ಎಂದೂ ಅವರು ತಮ್ಮ ವಿಚಾರಗಳನ್ನು ನಮ್ಮ ಮೇಲೆ ಹೇರಿದ್ದಿಲ್ಲ.

 ಸ್ತ್ರೀವಾದಿ ಹೋರಾಟದ ಜೊತೆ ಗುರುತಿಸಿಕೊಳ್ಳುವಾಗ ನಿಮ್ಮಲ್ಲಿದ್ದ ನಿರೀಕ್ಷೆಗಳು ಏನಾಗಿದ್ದವು?
ಸ್ತ್ರೀವಾದಿ ಹೋರಾಟವು ನನ್ನನ್ನು ನಾನು ಅನಾವರಣ ಮಾಡಿಕೊಳ್ಳಲು ಸಹಾಯ ಮಾಡಿತು. ಹೆಣ್ಣಿನ ಅಸ್ಮಿತೆಯ ಚಹರೆಗಳನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಹೋರಾಟ ನನಗೆ ತೋರಿಸಿಕೊಟ್ಟಿತು.

ವಾತಾವರಣವೂ ಅದಕ್ಕೆ ಪೂರಕವಾಗಿತ್ತು ಎಂದೇ ಹೇಳಬೇಕು.1975ನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವಾಗಿ ಘೋಷಿಸಲಾಗಿತ್ತು.1980ರಲ್ಲಿ  ನಾವು `ಸ್ತ್ರೀವಾದಿ ಅಧ್ಯಯನ ಮಂಡಲ' ವನ್ನು ಪ್ರಾರಂಭಿಸಿದೆವು. ಮಹಿಳಾ  ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೆೀಶವಾಗಿತ್ತು.

ನಿಮ್ಮ ಬರವಣಿಗೆಯ ಹಲವು ಕೇಂದ್ರಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸ್ತ್ರೀ ಪಾತ್ರಗಳ ಪುನರ್ರಚನೆಯೂ ಒಂದು. ಮತ್ತು ಇದು demythification ಗಿಂತ ಭಿನ್ನವಾದದ್ದು. ಇದಕ್ಕೆ ತೆಲುಗು ಸಾಹಿತ್ಯ ಪರಂಪರೆಯ ಹಿನ್ನೆಲೆಯೇನಾದರೂ ಇದೆಯೇ?
ತೆಲುಗಿನಲ್ಲಿ ಪುರಾಣ ಭಂಜನೆಯ ಬಹು ದೊಡ್ಡ ಇತಿಹಾಸವಿದೆ. ಗುಡಿಪಾಟಿ ವೆಂಕಟಾಚಲಂ, ರಾಮಸ್ವಾಮಿ ಚೌಧರಿ, ಗುರುಜಾಡ ಮೊದಲಾದವರು ಇದರ ಹರಿಕಾರರು. ಇದು ಪ್ರಾರಂಭವಾಗಿದ್ದು ಬ್ರಾಹ್ಮಣ ವಿರೋಧಿ ಚಳವಳಿಯಾಗಿ. ಪರಂಪರೆಯನ್ನು ಮುಖಾಮುಖಿಯಾಗುವ ಹಲವು ದಾರಿಗಳ ಶೋಧ ಆರಂಭವಾದದ್ದೆ ಇದರಿಂದ. ರಾಮಸ್ವಾಮಿಯವರ `ಶಂಭೂಕ ವಧ' ಜಾತಿ ಮತ್ತು ವರ್ಣ ವ್ಯವಸ್ಥೆ ಎರಡನ್ನೂ ಪ್ರಶ್ನಿಸಿದ ಕೃತಿ. 1909ರಲ್ಲಿ ಪ್ರಕಟವಾದ ಗುರುಜಾಡ ಅವರ `ಕನ್ಯಾ ಶುಲ್ಕ' ಕಾದಂಬರಿ ಮತ್ತು ಅದಕ್ಕೆ ಅವರು ಬರೆದ ಮುನ್ನುಡಿ ಈ ನಿಟ್ಟಿನಲ್ಲಿ ನಿರ್ಣಾಯಕವಾದ ಕೃತಿ. ಹಾಗೆಯೇ ಚಲಂ ಅವರ `ಸೀತಾಗ್ನಿ ಪ್ರವೇಸಾಲು' ಹೆಣ್ಣಿನ ಪ್ರಶ್ನೆಗಳನ್ನು ಎತ್ತಿದ ಆರಂಭದ ಮಹತ್ವದ ಕೃತಿ. ಅಗ್ನಿ ಪ್ರವೇಶದ ಹಿನ್ನೆಲೆಯನ್ನು ರಾಮನಿಂದ ಕೇಳಿ ವ್ಯಗ್ರಳಾದ ಸೀತೆ , `ಯಾವ ಕರಾರುಗಳೂ ಇಲ್ಲದೆಯೇ ರಾವಣ ನನ್ನನ್ನು ಪ್ರೀತಿಸಿದ. ನನ್ನ ಸಲುವಾಗಿ ರಾಜ್ಯವೂ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡ. ಅವನು ವ್ಯಕ್ತಿತ್ವದಲ್ಲಿ ನಿನಗಿಂತ ದೊಡ್ಡವನು' ಎಂದು ಹೇಳಿ ಇನ್ನೂ ಉರಿಯುತ್ತ್ದ್ದಿದ ರಾವಣನ ಚಿತೆಗೆ ಹಾರುತ್ತಾಳೆ. ಆ ಕಾಲಕ್ಕೆ ಬಹು ಚರ್ಚಿತವಾದ ಕೃತಿಯಾಗಿತ್ತು ಇದು.

ನೀವು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೀರಲ್ಲವೆ? ನಿಮ್ಮ ಸೀತೆಯ ಕುರಿತ ನಿರೂಪಣೆಗಳಲ್ಲಿ ಇದು ಸ್ಪಷ್ಟವಾಗಿದೆ.
ಹೌದು. ನನಗನ್ನಿಸಿದ್ದು ಯಾಕಾಗಿ ಒಬ್ಬರಲ್ಲ ಒಬ್ಬ ಗಂಡಸಿನೊಂದಿಗೆ ಸೀತೆಯನ್ನು ಹೊಂದಿಸಬೇಕು?  can't she be herself at some point of time?  ಆದ್ದರಿಂದಲೇ  ನಾನು ಸೀತೆಯನ್ನು ರಾಮ ರಾವಣ ಇಬ್ಬರಿಂದಲೂ ಮುಕ್ತವಾಗಿಸುವ ಪ್ರಯತ್ನ ಮಾಡಿದೆ. ಆದರೆ ಈ ಪ್ರಯತ್ನ ಪುರುಷರಿಂದ ಬಿಡುಗಡೆ ಅಲ್ಲ, ಪಿತೃಸಂಸ್ಕೃತಿಯಿಂದ ಬಿಡುಗಡೆಯನ್ನು ಪಡೆಯಲು.

ನಿಮ್ಮ ನಿರೂಪಣೆಗಳನ್ನು, (ಉದ್ದೆೀಶಪೂರ್ವಕವಾಗಿಯೇ ನಿಮ್ಮ ಕಥನಗಳನ್ನು ನಿರೂಪಣೆಗಳೆಂದು ನಾನು ಕರೆಯುತ್ತಿದ್ದೇನೆ. ಅವುಗಳ ಸ್ವರೂಪ ಮತ್ತು ಸೋದ್ದಿಶ್ಯತೆಯನ್ನು ಗಮನದಲ್ಲಿಟ್ಟುಕೊಂಡು  ಈ ಪರಿಕಲ್ಪನೆಯನ್ನು ಬಳಸುತ್ತಿದ್ದೆೀನೆ.) ನೀವು ರಾಜಕೀಯ ನಿರೂಪಣೆಗಳೆಂದು ಕರೆಯುತ್ತೀರಿ. ಹೆಣ್ಣಿನ ಅಸ್ಮಿತೆಯ ರಾಜಕೀಯ ಅಧಿಕೃತತೆಯ ಹೋರಾಟದ ಆಯಾಮದ ಪ್ರಯತ್ನವೆ ಇದು?
Personal is politicalಎನ್ನುವುದರಲ್ಲಿ ನನಗೆ ನಂಬಿಕೆಯಿದೆ. ಹಾಗೆಯೇ ಮಹಿಳಾ ಹೋರಾಟಕ್ಕೆ ರಾಜಕೀಯ ಅಧಿಕೃತತೆ ಬೇಕು ಎನ್ನುವುದೂ ನಿಜ.

ನಿಮ್ಮ ಸಮಕಾಲೀನ ಬರಹಗಾರರಲ್ಲಿ ತೀ ರ ಭಿನ್ನವೆನ್ನಬಹುದಾದ ಗ್ರಹಿಕೆಗಳಿಂದ ಹೊರಟವರು ನೀವು. ಯಾವ ಬಗೆಯ ಪ್ರತಿಕ್ರಿಯೆಗಳನ್ನು ಅಥವಾ ಸವಾಲುಗಳನ್ನು ನೀವು ಎದುರಿಸಬೇಕಾಯಿತು?

ಪ್ರತಿಕ್ರಿಯೆಗಳು ತುಂಬಾ. ತುಂಬಾ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದವು. ಎಡಪಂಥೀಯ ಲೇಖಕರಿಗೂ ಮಹಿಳಾ ಸಮಾನತೆಯ ಸಂಗತಿಗಳ ಅಗತ್ಯ ಅಷ್ಟಾಗಿ ತೋರಲಿಲ್ಲ. ಹಾಗೆ ನೋಡಿದರೆ ಎಡಪಂಥೀಯ ಕಾರ್ಯಕ್ಷೇತ್ರದಿಂದ ನಾನು ಹೊರಬಂದಿದ್ದೇ ಈ ಕಾರಣದಿಂದ. ನಾನು ಅಲ್ಲಿ ಏಕಾಂಗಿಯಾಗತೊಡಗಿದ್ದೆ. ನಾನೊಬ್ಬಳೆ ಮಹಿಳಾ ಆಕ್ಟಿವಿಸ್ಟ್ ಆಗಿದ್ದದ್ದು.

ಮಹಿಳೆ ಎನ್ನುವ ಕಾರಣಕ್ಕಾಗಿಯೇ ಅಂತರವೊಂದು ರೂಪುಗೊಳ್ಳತೊಡಗಿತು ಹಗಲೆಲ್ಲ ಪೋಸ್ಟರ್ ಹಚ್ಚಿ ಬಂದು ರಾತ್ರಿ ಪ್ರೇಮಗೀತೆಗಳನ್ನು ಬರೆದವಳು ನಾನು! ಆದರೆ ದಿನಕಳೆದಂತೆ ಹೆಣ್ಣಿನ ವಿಷಯಗಳಿಗೆ ಅಲ್ಲಿ ಅವಕಾಶವಿಲ್ಲ ಎನ್ನುವ ಸತ್ಯ ಅರಿವಾಗತೊಡಗಿತು. ಆದ್ದರಿಂದಲೇ ಸ್ತ್ರೀವಾದಿ ಹೋರಾಟಕ್ಕೆ ನಾನು ಬಂದೆ. ಈ ಸನ್ನಿವೇಶದಲ್ಲಿ ನಾನು ಎತ್ತಿದ ಪ್ರಶ್ನೆಗಳನ್ನು ವಿರೋಧಿಸಿದವರೇ ಹೆಚ್ಚು. ಪುರುಷಾಧಿಪತ್ಯ, ಪಿತೃಸಂಸ್ಕೃತಿ ಮೊದಲಾದವು ಅಸ್ತಿತ್ವದಲ್ಲಿಯೇ ಇಲ್ಲ, ಅವುಗಳ ಬಗ್ಗೆ ಚರ್ಚೆ ಮಾಡುವುದೇ ಅನಗತ್ಯ ಎನ್ನುವ ತನಕವೂ ಚರ್ಚೆಗಳು ನಡೆದವು. ನಾನು ಸಂಪಾದಿಸಿದ ತೆಲುಗು ಸ್ತ್ರೀವಾದಿ ಕವನಗಳ ಸಂಕಲನ `ನೀಲಿ ಮೇಘ್ಹಾಲು'ವಿಗಂತೂ ತೀವ್ರವಾದ ಪ್ರತಿಕ್ರಿಯೆಗಳು ಎದುರಾದವು. ಅದು ನೀಲಿ ಕಾವ್ಯವೇ ಎನ್ನುವ ತನಕ! ನನ್ನ ಎರಡನೆಯ ಕಾದಂಬರಿ `ಸ್ವೇಚ್ಚಾ'ಗೂ ಇದೇ ಬಗೆಯ ವಿಮರ್ಶೆಗಳು ಬಂದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಲಿಂಗರಾಜಕಾರಣದ ಆಯಾಮ ಈಗಿನ ಎಡಪಂಥೀಯ ವಿಚಾರಧಾರೆಯ ಒಂದು ಭಾಗವಾಗಿದೆ.

ಜೆಂಡರ್‌ನ ವಿನ್ಯಾಸಗಳು ಬದಲಾಗಿವೆ ಅಂತ ಹೇಳಬಹುದೆ? ಪರಿಸ್ಥಿತಿ ಹೆಣ್ಣಿನ ಮಟ್ಟಿಗೆ ನಿಜಕ್ಕೂ ಬದಲಾಗುತ್ತಿದೆಯೆ?
ಜೆಂಡರ್ ವಿನ್ಯಾಸಗಳು ಬದಲಾಗುವುದು ಹೊಸ ಕಾರ್ಯಮಾದರಿಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ಮಾತ್ರ.ಬದಲಾದ ರೂಪಗಳಲ್ಲಿ ಅವು ಕಾಣಿಸಿಕೊಳ್ಳುತ್ತವೆಯೇ ಹೊರತು ಮೂಲಭೂತವಾದ ಬದಲಾವಣೆ ಆಗಿದೆ ಅನಿಸುವುದಿಲ್ಲ ನನಗೆ.

ದೆಹಲಿಯ ದುರಂತದ ಬಗ್ಗೆ...
ಈ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರತಿ ನಿಮಿಷವೂ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇಷ್ಟೇ ಅಥವಾ ಇದಕ್ಕಿಂತ ಭೀಕರವಾದ ದುರಂತಗಳು ಘಟಿಸುತ್ತಿರುವುದು ಯಾರಿಗೆ ಅರಿವಿಲ್ಲ? ಇದು ದೆಹಲಿ ಎನ್ನುವ ರಾಜಧಾನಿಯಲ್ಲಿ, ಅದು ರಾಜಕೀಯ ಕೇಂದ್ರವಾದ್ದರಿಂದ ಇಷ್ಟು ಸುದ್ದಿಯಾಯಿತು. ಎಲ್ಲಿಯತನಕ ಒಂದು ನಾಗರಿಕ ಸಮುದಾಯದಲ್ಲಿ ಹೆಣ್ಣನ್ನು ಕುರಿತ ಮೂಲಭೂತವಾದ ದೃಷ್ಟಿಕೋನ ಬದಲಾಗುವುದಿಲ್ಲವೋ ಅಲ್ಲಿಯ ತನಕ ಇವುಗಳನ್ನು ನಿಲ್ಲಿಸುವುದು ಸಾಧ್ಯವಾಗುವುದಿಲ್ಲ.

ಇಲ್ಲಿಯ ತನಕದ ಹೋರಾಟದ ಬರವಣಿಗೆಯ ಅಥವಾ ಬರವಣಿಗೆಯ ಹೋರಾಟದ ಬಗ್ಗೆ...
No regrets ಒಬ್ಬರ ದೃಷ್ಟಿಕೋನವಾದರೂ ಬದಲಾಗಬಹುದಾದರೆ ಅದಕ್ಕಿಂತ ಹೆಚ್ಚಿನ ಸಮಾಧಾನ ಯಾವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT