ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹವೂ ಬೇಕು...

Last Updated 13 ಮೇ 2012, 19:30 IST
ಅಕ್ಷರ ಗಾತ್ರ

`ನಮ್ಮ ಮಗ  ಪ್ರಶ್ನೆಗೆಲ್ಲಾ ಸರಿಯಾಗೇ ಉತ್ತರ ಹೇಳ್ತಾನೆ; ಆದ್ರೆ ಬರೀಬೇಕಾದ್ರೆ ತಪ್ಪು ಮಾಡಿ ಬಿಡ್ತಾನೆ. ಅದಕ್ಕೇ ಕಮ್ಮಿ ಮಾರ್ಕ್ಸ್~. ಹೀಗಂತ ಅಪ್ಪ ಅಮ್ಮನ ಗೊಣಗಾಟ.
ಬರವಣಿಗೆಗೆ ಇಂದಿನ, ಹಿಂದಿನ ಎಲ್ಲ ಪಠ್ಯಕ್ರಮದಲ್ಲಿ ಪ್ರಾಮುಖ್ಯತೆ ಇದ್ದೇ ಇದೆ ಅಲ್ವೇ? ಆದರೂ `ಇಂದಿನ ಮಕ್ಕಳಿಗೆ ಬರವಣಿಗೆ ಅಭ್ಯಾಸವೇ ಕಡಿಮೆ, ಕಾಪಿ ರೈಟಿಂಗ್ ಅಂತೂ ಇಲ್ಲವೇ ಇಲ್ಲ~ ಎನ್ನುವ ಹಿರಿಯರು ಸಾಮಾನ್ಯ. ಹಾಗಿದ್ದರೆ ಬರವಣಿಗೆಯ ಅಗತ್ಯ ಕಲಿಕೆಗೆ ಇದೆಯೇ? ಅದನ್ನು ಹೊರೆಯಾಗದಂತೆ ಮಕ್ಕಳಿಗೆ ಹೇಳಿಕೊಡಲು ಹೇಗೆ ಸಾಧ್ಯ? ಬನ್ನಿ ನೋಡೋಣ.

ಬರವಣಿಗೆ ಸಹ ಒಂದು ರೀತಿಯ `ಮಾತು~. ಬರೆಯುವಾಗ ನಮ್ಮೆದುರಿಗಿಲ್ಲದ ಇನ್ನೊಂದು ವ್ಯಕ್ತಿಯ ಜೊತೆ ಸಂವಹನದ ಸಾಧ್ಯತೆ ತೆರೆದಿಡುತ್ತದೆ. ಹಾಗೆಯೇ ಮಾಹಿತಿ, ಯೋಚನೆ, ನೆನಪು ಇವೆಲ್ಲವನ್ನೂ ಜೋಪಾನವಾಗಿ ಕಾಯ್ದಿಡಲು ಬರವಣಿಗೆ ಸಹಕಾರಿ. ಹಾಗಾಗಿಯೇ ಕಲಿಕೆಯಲ್ಲಿ ಬರವಣಿಗೆ ಅಗತ್ಯ.

ಆದ್ದರಿಂದ ಮಕ್ಕಳಿಗೆ ಶಿಕ್ಷಕರು, ಪೋಷಕರು ಬರವಣಿಗೆಯನ್ನು ಒಂದು `ಮಾತಿ~ನ ವಿಧವಾಗಿ ಮೊದಲು ಪರಿಚಯಿಸಬೇಕು. ಅಂದರೆ ಹೆಚ್ಚಿನ ಮಕ್ಕಳು ಶಾಲೆಗೆ ಕಾಲಿಡುವಾಗ ಬೇರೆ ಬೇರೆ ವಿಷಯಗಳ ಬಗ್ಗೆ ಹಲವು ರೀತಿಯ ಜನರೊಂದಿಗೆ ಮಾತನಾಡುವುದನ್ನು ಕಲಿತಿರುತ್ತಾರೆ. ತಾವು ಹೇಳುವುದನ್ನು ಕೇಳುವ `ಕೇಳುಗ~ ವೃಂದಕ್ಕೆ ಕಾತರರಾಗಿರುತ್ತಾರೆ.

ಈ `ಕೇಳುಗರು ಬೇಕು~ ಎಂಬ ಭಾವನೆ ಬೆಳೆಯುವುದು ಮುಖ್ಯ. ಹಾಗೆಯೇ ಈ ಕೇಳುಗರು ಯಾವಾಗಲೂ ಎದುರಿನಲ್ಲಿ ಇರಬೇಕೆಂದಿಲ್ಲ. `ಬರೆಯುವ~ ಮಾತಿನ ಮೂಲಕವೂ ಅವರನ್ನು ತಲುಪಬಹುದು ಎಂಬುದು ಗೊತ್ತಾಗಬೇಕು.     
  
ಆದರೆ ನಾವಿಂದು ಅನುಸರಿಸುವ ಕ್ರಮ ಬೇರೆಯೇ ರೀತಿಯದು. ಲಕ್ಷಾಂತರ ಮಕ್ಕಳಿಗೆ ಬರಹವನ್ನು ಯಾಂತ್ರಿಕ ಕ್ರಿಯೆಯಾಗಿ ಹೇಳಿಕೊಡಲಾಗುತ್ತದೆ. ವರ್ಣಮಾಲೆ ತಿದ್ದುವುದು, ನಕಲು ಮಾಡುವುದು, ಉದ್ದೇಶವಿಲ್ಲದೇ ಮತ್ತೆ ಮತ್ತೆ ಅವುಗಳನ್ನು ಬರೆಯುವುದು, ನಂತರ ವಾಕ್ಯಗಳನ್ನು ಶಿಕ್ಷಕ ಹೇಳಿದಂತೆ ಬರೆಯುವುದು ಇತ್ಯಾದಿ ರೂಢಿಗತ ತಂತ್ರಗಳು. ಇದರ ಪರಿಣಾಮವೇ `ಕಾಪಿರೈಟಿಂಗ್~ ಎಂದರೆ ಮುಖ ಸಿಂಡರಿಸುವ ಮಕ್ಕಳು, ಬರವಣಿಗೆಯಲ್ಲಿ ಮಕ್ಕಳಿಗೆ ಆಸಕ್ತಿಯಿಲ್ಲ ಎಂದು ದೂರುವ ತಂದೆ- ತಾಯಿ- ಶಿಕ್ಷಕರು.

ಚಿತ್ರಕಲೆ, ಬಣ್ಣ ಹಾಕುವುದು ಮಕ್ಕಳ ಒಟ್ಟು ಬೆಳವಣಿಗೆಗೆ, ಬರವಣಿಗೆಗೆ ತುಂಬಾ ಸಹಾಯಕ. ತನ್ನ ಯೋಚನೆ- ಭಾವನೆಗಳನ್ನು ಮುಕ್ತವಾಗಿ ಹೊರಹಾಕಬಹುದಾದ ಮಾಧ್ಯಮ ಇದು. ಹಾಗಾಗಿ 3 ರಿಂದ 4 ವರ್ಷದ ಮಕ್ಕಳಿಗೆ  ಸಾಕಷ್ಟು ಕಾಗದ ಮತ್ತು ಬಣ್ಣ ಕೊಟ್ಟು, ಸಹನೆಯಿಂದ  ಅವರು ಚಿತ್ರ ಬಿಡಿಸಿ ಮುಗಿಸಲು ಕಾಯುವುದು ಅತ್ಯವಶ್ಯ. ಮಗು ಏನನ್ನು ಬಿಡಿಸಬೇಕೆಂಬ ಬಗ್ಗೆ ನಿರ್ದೇಶನ ಖಂಡಿತ ಬೇಡ.
 
ಚಿತ್ರ ಬರೆಯುವುದು ಹೇಗೆ ಮಗುವಿನ ಬೆರಳುಗಳ ಬೆಳವಣಿಗೆಯನ್ನು ಚುರುಕಾಗಿಸುತ್ತದೆಯೋ, ಚಿತ್ರಕಲೆಯ ಬೇರೆ ಬೇರೆ ಚಟುವಟಿಕೆಗಳು (ಬೀಜಗಳ ವಿಂಗಡಣೆ, ನೀರು ಲೋಟದಿಂದ ತೆಗೆದುಕೊಳ್ಳುವುದು, ಆಕಾರಗಳನ್ನು ಗುರುತಿಸುವುದು ಇತ್ಯಾದಿ) ಕೈಗಳ ಸೂಕ್ಷ್ಮ ಸ್ನಾಯುಗಳನ್ನು (Fine motor muscles)  ಬಲಗೊಳಿಸುತ್ತದೆ.

ಮಕ್ಕಳಿಗೆ ವರ್ಣಮಾಲೆಯನ್ನು ಒಂದು ಯಾಂತ್ರಿಕ ಕ್ರಿಯೆಯಾಗಿ ಕಲಿಸುವ ಬದಲು ಪ್ರಾಣಿ, ಪಕ್ಷಿ (`ಇ~ಯಿಂದ ಇಲಿ, `o~ ಯಿಂದ ಜೋಕರ್) ಮುಂತಾಗಿ ಚಿತ್ರಗಳಿಗೂ ಅಕ್ಷರಗಳಿಗೂ ನಂಟು ಹಾಕಿ ಕಲಿಸುವುದು ಉಪಯುಕ್ತ. ಬಿಡಿ ಅಕ್ಷರಗಳು ಮಕ್ಕಲ ಪಾಲಿಗೆ ಯಾವ ಅರ್ಥವನ್ನೂ ನೀಡುವುದಿಲ್ಲ ಎಂಬ ಗ್ರಹಿಕೆ ಎಲ್ಲ ಶಿಕ್ಷಕರದ್ದಾಗಬೇಕು. ಅದರ ಬದಲು ಮಕ್ಕಳು ಹೇಳುವ ಶಬ್ದಗಳನ್ನು ಬರೆದು ಅವುಗಳಲ್ಲಿ ಒಂದೇ ವಿಧದ ಅಕ್ಷರಗಳನ್ನು ಗುರುತಿಸುವಂತೆ ಹೇಳುವುದು ಅಗತ್ಯ.

ಬರೆಯುವ ಪ್ರಕ್ರಿಯೆ ಒಂದು  `ಸಂವಹನ~ ಎನಿಸಲು ಮಕ್ಕಳು ಕೇವಲ ಪಠ್ಯ ಬರವಣಿಗೆಯಷ್ಟೇ ಮಾಡದೆ ತಮಗನ್ನಿಸಿದ್ದನ್ನು ಮುಕ್ತವಾಗಿ ಬರೆಯುವ ಅಭ್ಯಾಸ ಅಪೇಕ್ಷಣೀಯ. ಹಾಗೆ ಬರೆದಿದ್ದನ್ನು ಎಲ್ಲರೆದುರು ಜೋರಾಗಿ ಓದುವುದು, ಹಿರಿಯರು ಅದನ್ನು ಪ್ರಶಂಸಿಸುವುದು ಬರವಣಿಗೆಯನ್ನು  ಪ್ರಚೋದಿಸುತ್ತದೆ.
 
ಜೊತೆಗೇ ಬೇರೆ ಬೇರೆ ರೀತಿಯ ಬರವಣಿಗೆ ಚಟುವಟಿಕೆಗಳನ್ನೂ ಪೋಷಕರು- ಶಿಕ್ಷಕರು ಮಕ್ಕಳಿಗಾಗಿ ನಡೆಸಬಹುದು. ಮಾತಿನ ಮೂಲಕ ಶಬ್ದ ಬೆಳೆಸುವುದು- ಅಂತ್ಯಾಕ್ಷರಿ- word building ಮುಂತಾದ ಆಟಗಳನ್ನು ಬರವಣಿಗೆಯಲ್ಲೂ ಆಡಬಹುದು.

ಹಾಗೆಯೇ ಮಕ್ಕಳ ಗುಂಪಿನ ಪ್ರತಿ ಮಗುವೂ ಒಂದೊಂದು ಶಬ್ದ ಬರೆಯುತ್ತ ಒಂದು ಪುಟ್ಟಕಥೆಯೇ ಹುಟ್ಟಬಹುದು. ಹಾಗೆಯೇ ದಿನದ ಅನುಭವವನ್ನು, ಭೇಟಿ ನೀಡಿದ ಸ್ಥಳಗಳನ್ನು ನಕಾಶೆ- ಪದಗಳ ಸೂಚನೆಯೊಂದಿಗೆ ರಚಿಸಬಹುದು.

ಸ್ವಲ್ಪ ದೊಡ್ಡ ಮಕ್ಕಳನ್ನು `ದಾಖಲು~ ಮಾಡಿಕೊಳ್ಳಲು ಕುಳ್ಳಿರಿಸಿ ಉಳಿದವರೆಲ್ಲರೂ ಯಾವುದಾದರೊಂದು ಅನುಭವದ  ಬಗ್ಗೆ ಮಾತನಾಡುವಂತೆ ಹೇಳುವುದು, ಅದನ್ನು ಬರೆಯುವ ದಾಖಲೆಯಾಗಿ ಮಾರ್ಪಡಿಸುವಂತೆ ಹಿರಿಯ ಮಕ್ಕಳಿಗೆ ಹೇಳುವುದು ಅಗತ್ಯ. ನಾಲ್ಕು ಸಾಲುಗಳ ಯಾವುದಾದರೊಂದು ಪದ್ಯ ಕೊಟ್ಟು ಅದನ್ನು ಬೆಳೆಸುವಂತೆ ಹೇಳಬಹುದು.

ಹೀಗೆ ಬರವಣಿಗೆ ಒಮ್ಮೆ `ಮಾತಿನ~ ಒಂದು ವಿಸ್ತೃತ ಭಾಗವಾಗಿ, ಸಂವಹನದ ಒಂದು ಮಾಧ್ಯಮವಾಗಿ ರೂಪುಗೊಂಡಾಗ ತನ್ನಿಂದ ತಾನೇ ಬರವಣಿಗೆಯ ಅಭ್ಯಾಸ ಮಗುವಿಗೆ ಸಿದ್ಧಿಸುತ್ತದೆ.
 
ಒಮ್ಮೆ ಹೀಗಾದ ಮೇಲೆ ಬರವಣಿಗೆಯನ್ನು ಉತ್ತಮಪಡಿಸಲು ತಿದ್ದುವಿಕೆ, ಸರಿಯಾದ ಪೆನ್ನು, ಪೆನ್ಸಿಲ್, ಬರೆಯುವ ಇತರ ಸಾಮಗ್ರಿಗಳು, ಬಾಯಿಯಲ್ಲಿ ಹೇಳಿಕೊಂಡು ಬರೆಯುವುದು, ಬರೆದದ್ದನ್ನು ಒಮ್ಮೆ ಜೋರಾಗಿ ಓದುವುದು ಮುಂತಾದವು ಉಪಯುಕ್ತ ಎನಿಸಬಲ್ಲವು. ಹಾಗಲ್ಲದೆ ಕೇವಲ ಬರವಣಿಗೆಯನ್ನೇ ಯಾಂತ್ರಿಕವಾಗಿ ಕಲಿಸತೊಡಗಿದಾಗ ಬರಹ ಬಾರದೇ ಹೋಗಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT