ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರನ್ನು ರಕ್ಷಿಸಿ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ವಿದ್ಯುತ್ ಪೂರೈಕೆ ಸಂಸ್ಥೆಗಳು (ಎಸ್ಕಾಂ) ಆರ್ಥಿಕ ಮುಗ್ಗಟ್ಟಿನಲ್ಲಿವೆ. 2010ರಲ್ಲಿ ದೇಶದ ಎಲ್ಲ ಎಸ್ಕಾಂಗಳ ಒಟ್ಟು ನಷ್ಟ 1.16 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
 
ಕರ್ನಾಟಕವೊಂದರಲ್ಲಿಯೇ ಈ ನಷ್ಟದ ಮೊತ್ತ ಎಂಟು ಸಾವಿರ ಕೋಟಿ ರೂಪಾಯಿ. ಈ ನಷ್ಟವನ್ನು ನಿವಾರಿಸಿಕೊಳ್ಳಲು ರಾಜ್ಯಸರ್ಕಾರಗಳ ನಿಯಂತ್ರಣದ ಹಂಗಿಲ್ಲದೆ ಸ್ವತಂತ್ರವಾಗಿ ವಿದ್ಯುತ್ ದರ ಏರಿಸಲು ಅವಕಾಶ ನೀಡಬೇಕೆಂಬುದು ಎಸ್ಕಾಂಗಳ ಬಹುದಿನದ ಬೇಡಿಕೆ.
 
ಕೇಂದ್ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿರುವ ಕೇಂದ್ರ ಇಂಧನ ಸಚಿವಾಲಯ, ಎಸ್ಕಾಂಗಳ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಇಂಗಿತವನ್ನು ನೀಡಿದೆ. ಹನ್ನೆರಡನೇ ಪಂಚವಾರ್ಷಿಕ ಯೋಜನೆ ಕರಡು ವರದಿಯಲ್ಲಿ ಕೇಂದ್ರ ಸರ್ಕಾರ ಈ ಪ್ರಸ್ತಾವವನ್ನು ಮಾಡಿದೆ.

ಈಗಿನ ವ್ಯವಸ್ಥೆಯ ಪ್ರಕಾರ ರಾಜ್ಯದ ಎಸ್ಕಾಂಗಳು ವಿದ್ಯುತ್ ದರ ಏರಿಕೆಯ ಪ್ರಸ್ತಾವವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆಯೋಗ, ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ದಿಷ್ಟ ಪ್ರಮಾಣದಲ್ಲಿ ದರ ಏರಿಕೆಗೆ ಅನುಮತಿ ನೀಡುತ್ತದೆ.
 
ಅದರ ನಂತರ ಎಸ್ಕಾಂ ರಾಜ್ಯ ಸರ್ಕಾರದ ಅನುಮತಿ ಪಡೆದು ದರ ಏರಿಕೆ ಮಾಡುತ್ತದೆ. `ರಾಜ್ಯ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ವಿದ್ಯುತ್ ದರವನ್ನು ಏರಿಸಲು ಅವಕಾಶ ನೀಡದೆ ಇರುವುದರಿಂದ ನಾವು ನಷ್ಟ ಅನುಭವಿಸಬೇಕಾಗಿ ಬಂದಿದೆ~ ಎನ್ನುವುದು ಎಸ್ಕಾಂಗಳ ದೂರು.

ಯಾವುದೇ ಸಂಸ್ಥೆ ಇಷ್ಟೊಂದು ಪ್ರಮಾಣದ ನಷ್ಟವನ್ನು ಕಟ್ಟಿಕೊಂಡು ಬದುಕುಳಿಯುವುದು ಕಷ್ಟವಾದ ಕಾರಣ ಅದರ ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇ ಬೇಕು.

ಆದರೆ ಇದಕ್ಕಾಗಿ ಪ್ರತಿ ಬಾರಿ ವಿದ್ಯುತ್ ದರ ಹೆಚ್ಚಿಸುವ ಮೂಲಕ ಬಳಕೆದಾರರ ತಲೆ ಮೇಲೆ ಹೊರೆ ಹೊರಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ. ಎಸ್ಕಾಂಗಳ ನಷ್ಟಕ್ಕೆ ಮೊದಲ ಕಾರಣ- ರಾಜ್ಯಸರ್ಕಾರಗಳು ಬಾಕಿ ಉಳಿಸಿಕೊಂಡಿರುವ ಸಹಾಯಧನ.

ಈ ಸಮಸ್ಯೆಯನ್ನು ಹೇಗೆ ಇತ್ಯರ್ಥ ಮಾಡಿಕೊಳ್ಳಬೇಕೆಂಬುದು ಸರ್ಕಾರ ಮತ್ತು ಎಸ್ಕಾಂಗಳಿಗೆ ಬಿಟ್ಟ ವಿಚಾರ, ಅದನ್ನು ಅವರು ಮಾಡಿಕೊಳ್ಳಲಿ. ಎರಡನೇ ಕಾರಣ- ವಿದ್ಯುತ್ ಸಾಗಾಣಿಕೆಯಲ್ಲಿನ ನಷ್ಟ ಮತ್ತು ವಿದ್ಯುತ್ ಕಳ್ಳತನ. ಇದು ಎಸ್ಕಾಂಗಳ ಅದಕ್ಷತೆಯ ಫಲ.
 
ಅದನ್ನು ಸುಧಾರಣಾ ಕ್ರಮಗಳ ಮೂಲಕ ಎಸ್ಕಾಂಗಳೇ ಸರಿಪಡಿಸಿಕೊಳ್ಳಬೇಕು. ಇದರ ಬದಲಿಗೆ ಸರ್ಕಾರ ಮತ್ತು ಎಸ್ಕಾಂಗಳು ತಮ್ಮ ಪಾಪದ ಫಲವನ್ನು ಬಳಕೆದಾರರು ಅನುಭವಿಸಬೇಕು ಎಂದು ಹೇಳುವುದು ತಾಂತ್ರಿಕವಾಗಿ ತಪ್ಪು ಮಾತ್ರವಲ್ಲ, ಜನವಿರೋಧಿ ಕ್ರಮವೂ ಹೌದು.
 
ವಿದ್ಯುತ್ ದರ ಏರಿಕೆಯಲ್ಲಿ ಸರ್ಕಾರಗಳ ನಿಯಂತ್ರಣ ತಪ್ಪಿಸಬೇಕೆನ್ನುವ ಪ್ರಸ್ತಾವದ ಹಿಂದೆ ದುರುದ್ದೇಶದ ಅನುಮಾನ ಕೂಡಾ ಇದೆ. ಈಗಾಗಲೇ ಬಹಳಷ್ಟು ನಗರಗಳಲ್ಲಿ ವಿದ್ಯುತ್ ಪೂರೈಕೆಯ ಹೊಣೆಯನ್ನು ರಾಜ್ಯ ಸರ್ಕಾರಗಳು ಖಾಸಗಿಯವರಿಗೆ ಒಪ್ಪಿಸಿವೆ.

ಮುಂದಿನ ದಿನಗಳಲ್ಲಿ ಸರ್ಕಾರ ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸಿದರೂ ಅಚ್ಚರಿ ಇಲ್ಲ. ಇಂತಹ ಖಾಸಗಿ ಎಸ್ಕಾಂಗಳ ಕೈಗೆ ವಿದ್ಯುತ್ ದರ ಏರಿಕೆಯ ಅನಿಯಂತ್ರಿತ ಅಧಿಕಾರ ಕೊಟ್ಟರೆ ಬಳಕೆದಾರರನ್ನು ರಕ್ಷಿಸುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT