ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯಾಗದ ನಗರಸಭೆ ವಾಹನಗಳು!

Last Updated 21 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ


ಹಾಸನ: ಒಂದೆಡೆ ಜನರಿಗೆ ಮೂಲ ಸೌಲಭ್ಯ ಗಳನ್ನು ಕಲ್ಪಿಸಲು ಹಣವಿಲ್ಲ, ಇನ್ನೊಂದೆಡೆ ಲಕ್ಷಾಂತರ ರೂಪಾಯಿಯ ವಾಹನಗಳನ್ನು ಖರೀದಿಸಿ ಉಪಯೋಗಕ್ಕೂ ಬಾರದಂತೆ ಕೊಳೆ ಸುವುದು... ಇದು ಹಾಸನ ನಗರಸಭೆಯ ಸ್ಥಿತಿ.ನಗರದ ಜನರು ಕೂಗಿ-ಕೂಗಿ ಗಂಟಲು ಒಣಗಿಸಿಕೊಂಡು, ಪತ್ರಿಕೆಗಳು ಜನರಿಗೇ ಬೇಸರ ಬರುವಷ್ಟು ಬಾರಿ ಬರೆದ ಬಳಿಕ ಈಗ ನಗರದ ಕೆಲವು ಮುಖ್ಯ ರಸ್ತೆಗಳು ದುರಸ್ತಿಯ ಭಾಗ್ಯ ಕಂಡಿವೆ. ಕೆಟ್ಟು ಕೆಸರು ಗದ್ದೆಯಂತಾಗಿದ್ದ ಬಿ.ಎಂ ರಸ್ತೆ ಈಚೆಗೆ ಗುಂಡಿಗಳನ್ನು ಮುಚ್ಚಿಸುವ ಭಾಗ್ಯ ಕಂಡಿದೆ. ಅದರಂತೆ ಎನ್.ಆರ್. ಸರ್ಕಲ್‌ನಿಂದ ರೈಲ್ವೆ ಗೇಟ್- ಹೊಸ ಬಸ್ ನಿಲ್ದಾಣದವರೆಗಿನ ರಸ್ತೆಯೂ ಡಾಂಬರು ಕಂಡಿದೆ. ದುರಸ್ತಿ ಆಗ ಬೇಕಾದ ರಸ್ತೆಗಳ ಸಂಖ್ಯೆ ಇನ್ನೂ ದೊಡ್ಡದಿದೆ.

‘ಆಸ್ತಿ ತರಿಗೆ ಸಂಗ್ರಹಣೆಯಲ್ಲಿ ಈ ವರ್ಷ ಉತ್ತಮ ಸಾಧನೆಯಾಗಿದೆ ಎಂದು ನಗರಸಭೆ ಆಯುಕ್ತರು ಈಚೆಗೆ ಹೇಳಿಕೆ ನೀಡಿದ್ದರು. ನಿಜವೇ ಇರಬಹುದು. ಆದರೆ ನಗರದ ಪಾರ್ಕ್‌ಗಳ ಅಭಿವೃದ್ಧಿ ಸೇರಿದಂತೆ ವಿವಿಧ ಜನಪರ ಯೋಜನೆಗಳಿಗೆ ದುಡ್ಡಿಲ್ಲ ಎಂಬುದೂ ಅಷ್ಟೇ ಸತ್ಯ’ ಎಂದು ನಗರಸಭೆಯ ಕೆಲವು ಸದಸ್ಯರು ಆರೋಪಿಸುತ್ತಿದ್ದಾರೆ. 

ಎಲ್ಲಕ್ಕಿಂತ ಮಖ್ಯವಾಗಿ ನಗರದ ಸ್ವಚ್ಛತೆ, ಕಸ ನಿರ್ವಹಣೆಗಾಗಿ ಖರೀದಿಸಿದ ವಾಹನಗಳ ದುರಸ್ತಿಗೂ ಹಣವಿಲ್ಲ ಎಂಬುದು ಅಚ್ಚರಿಯ ವಿಚಾರವಾಗಿದೆ.ಘನತ್ಯಾಜ್ಯ ವಿಲೇವಾರಿಯ ಕಂಟೇನರ್ ಗಳನ್ನು ಸಾಗಿಸುವ ಸಲುವಾಗಿ ಕೆಲವು ವರ್ಷಗಳ ಹಿಂದೆ ನಗರಸಭೆ ವಾಹನಗಳನ್ನು ಖರೀದಿಸಿತ್ತು. ಈ ವಾಹನಗಳು ಕೆಟ್ಟು ಹಲವು ತಿಂಗಳಾ ಗಿದ್ದರೂ ದುರಸ್ತಿ ಮಾಡಲಿಲ್ಲ.

ನಗರದ ಪ್ರಮುಖ ಸ್ಥಳಗಳಲ್ಲಿ ಕಸಹಾಕಲು ದೊಡ್ಡ ಕಂಟೇನರ್‌ಗಳನ್ನಿಡುವುದು, ತುಂಬಿದ ಕಂಟೇನರ್‌ಗಳನ್ನು ಈ ವಾಹನಗಳ ಮೂಲಕ ಎತ್ತಿ ಹಾಗೆಯೇ ಸಾಗಿಸುವ ಉದ್ದೇಶದಿಂದ ಒಟ್ಟಾರೆ ಐದು ವಾಹನಗಳನ್ನು ಖರೀದಿಸ ಲಾಗಿತ್ತು. ವಿಶೇಷವೆಂದರೆ ಐದು ವಾಹನಗಳಲ್ಲಿ ನಾಲ್ಕು ವಾಹನಗಳು ಕೆಟ್ಟು ನಿಂತಿವೆ. ಇದಲ್ಲದೆ ನಗರಸಭೆಯ ಏಳು ಟ್ರ್ಯಾಕ್ಟರ್‌ಗಳಲ್ಲಿ ಎರಡು ಕೆಟ್ಟು ತಿಂಗಳುಗಳಾಗಿವೆ. ಈ ಬಗ್ಗೆ ಹೆಚ್ಚಿನ ಸದಸ್ಯರಿಗೆ ಮಾಹಿತಿಯೇ ಇಲ್ಲ. ಯಾಕೆ ಕೆಟ್ಟಿವೆ ? ದುರಸ್ತಿಯಾಗದಿರಲು ಕಾರಣ ಏನು ಎಂದು ಯಾವ ಸದಸ್ಯನೂ ಈ ವರೆಗೆ ಕೇಳಿಲ್ಲ. ಕೆಟ್ಟಿರುವ ವಾಹನಗಳನ್ನು ಹಾಗೆಯೇ ನಗರಸಭೆಯ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ. ಹಲವು ತಿಂಗಳಿಂದ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿ ನಿಂತಿರುವುದರಿಂದ ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ.

ಹಾಗೆಂದು ಅಧಿಕಾರಿಗಳಿಗೆ ಮಾಹಿತಿ ಇಲ್ಲವೆಂದಲ್ಲ. ಪ್ರತಿ ವಾಹನ ದುರಸ್ತಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಪಟ್ಟಿಮಾಡಿ ಮೇಲಧಿಕಾರಿಗಳಿಗೆ ಕಳುಹಿಸಿ ಅವರು ಸುಮ್ಮನಾ ಗಿದ್ದಾರೆ ಅಷ್ಟೇ. ನಗರಸಭೆಯ ಅಧಿಕಾರಿಗಳು ಕಳುಹಿಸಿದ ಮಾಹಿತಿ ಪ್ರಕಾರ ಪ್ರತಿ ವಾಹನ ದುರಸ್ತಿಗೆ 70 ರಿಂದ 80 ಸಾವಿರ ರೂಪಾಯಿ ಬೇಕಾಗುತ್ತದೆ (ಏಳೆಂಟು ತಿಂಗಳಹಿಂದಿನ ಲೆಕ್ಕ). ಈ ಪಟ್ಟಿ ತಯಾರಿಸಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದಾರೆ. ಇದು ದುಬಾರಿ ಯಾಯಿತು ಎಂಬ ಉತ್ತರ ಅಲ್ಲಿಂದ ಬಂದಿದೆ.ಅಲ್ಲಿಗೆ ಎಲ್ಲರೂ ಸುಮ್ಮನಾಗಿದ್ದಾರೆ. ರಿಪೇರಿ ದುಬಾರಿಯಾಗಿದ್ದರಿಂದ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ ವಾಹನಗಳನ್ನು ಹಾಗೇಯೇ ಇಟ್ಟು ಕೆಡಿಸುವುದರಲ್ಲಿ ಅರ್ಥವಿದೆಯೇ ಎಂಬುದು ಸದಸ್ಯರ ಪ್ರಶ್ನೆ.

ಅಧ್ಯಕ್ಷ ಸಿ.ಆರ್. ಶಂಕರ್ ಅವರನ್ನು ಕೇಳಿದರೆ ‘ಅಧಿಕಾರಿಗಳು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿಲ್ಲ. ಕೇಳಿದರೆ ಸಮರ್ಪಕ ಮಾಹಿತಿಯನ್ನೂ ನೀಡುತ್ತಿಲ್ಲ.ಶೀಘ್ರದಲ್ಲೇ ಅವುಗಳನ್ನು ದುರಸ್ತಿಮಾಡಿ, ಬಳಸಲು ಆರಂಭಿಸುತ್ತೇವೆ’ ಎಂದಿದ್ದಾರೆ. ಇತ್ತ ನಗರದಲ್ಲಿ ಕಂಟೇನರ್‌ಗಳ ಕೊರತೆ ಇದ್ದು ಹೊಸ ಕಂಟೇನರ್ ಖರೀದಿಗೆ ಟೆಂಡರ್ ನೀಡಿ ತಿಂಗಳು ಗಳೇ ಗತಿಸಿವೆ. ಈವರೆಗೆ ಹೊಸ ಕಂಟೇನರ್‌ಗಳು ಬಂದಿಲ್ಲ. ‘ಶೀಘ್ರದಲ್ಲೇ ಆ ವ್ಯವಸ್ಥೆಯನ್ನೂ ಮಾಡುತ್ತೇನೆ. ಟೆಂಡರ್ ಪಡೆದವರ ಮೇಲೆ ಒತ್ತಡ ಹೇರಿ, ನಿಗದಿತ ಅವಧಿಯೊಳಗೆ ಕಂಟೇ ನರ್ ಕೊಡದಿದ್ದರೆ ಹೊಸ ಟೆಂಡರ್‌ಗೆ ವ್ಯವಸ್ಥೆ ಮಾಡುತ್ತೇನೆ’ ಎಂದು ಶಂಕರ್ ನುಡಿದಿದ್ದಾರೆ.

ಹಾಸನ ನಗರಸಭೆ ಬಜೆಟ್‌ಗೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಬಜೆಟ್ ಮಂಡನೆ ಯಾಗಬೇಕಿತ್ತು. ಆದರೆ ಎರಡು ವಾರ್ಡ್‌ಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಸಭೆ ಮುಂದೂಡಲಾಗಿದೆ. ಬಜೆಟ್‌ಗೆ ಮುನ್ನ ನಗರಸಭೆ ಸದಸ್ಯರು ಈ ಎಲ್ಲ ವಿಚಾರಗಳತ್ತಲೂ ಗಮನ ಹರಿಸುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT