ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆ: ಇಲ್ಲಿವರೆಗೆ 20ಕ್ಕೂ ಹೆಚ್ಚು ಸಾವು

Last Updated 17 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಸಾಂಕ್ರಾಮಿಕ ಕಾಯಿಲೆ ಉಲ್ಬಣಗೊಂಡಿದ್ದು, ಶಂಕಿತ ಡೆಂಗೆ ಮತ್ತು ಮಲೇರಿಯಾದಿಂದ 20 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.

ಕೂಡ್ಲಿಗಿ, ಹೊಸಪೇಟೆ, ಸಂಡೂರು, ಸಿರುಗುಪ್ಪ, ಬಳ್ಳಾರಿ, ಹೂವಿನಹಡಗಲಿ ಮತ್ತು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಡೆಂಗೆ ಮತ್ತು ಮಲೇರಿಯಾದಿಂದ ನೂರಾರು ಜನ ಬಳಲುತ್ತಿದ್ದು, ನಿತ್ಯವೂ ಬಳ್ಳಾರಿ ಯ ವಿಜಯನಗರ ವೈದ್ಯಕೀಯ ಸಂಸ್ಥೆಯ ಆಸ್ಪತ್ರೆ (ವಿಮ್ಸ)ಗೆ ಬಂದು ದಾಖಲಾಗುತ್ತಿದ್ದಾರೆ.

ಚಿಕ್ಕಮಕ್ಕಳೂ ಒಳಗೊಂಡಂತೆ 20ಕ್ಕೂ ಹೆಚ್ಚು ಜನ ಮೂರು ತಿಂಗಳ ಅವಧಿಯಲ್ಲಿ ಸಾವಿಗೀಡಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ ಎಂಬುದು ಜನರ ಆರೋಪವಾಗಿದೆ.

ಕೂಡ್ಲಿಗಿ ತಾಲ್ಲೂಕಿನ ಕೂಡ್ಲಿಗಿ, ಗಜಾಪುರ, ಕಂದಗಲ್, ಬಂಡೆಬಸಾಪುರ ತಾಂಡಾ ಮತ್ತು ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನತೆ ಆರು ತಿಂಗಳಿಂದ ಡೆಂಗೆ, ಮಲೇರಿಯಾ ಗುಣ ಲಕ್ಷಣಗಳಿರುವ ಕಾಯಿಲೆಯಿಂದ ಬಳಲುತ್ತ, ಹೊಸಪೇಟೆ ಮತ್ತು ದಾವಣಗೆರೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬಳ್ಳಾರಿಯ ವಿಮ್ಸಗೆ ದಾಖಲಾದ ಅನೇಕರ ರಕ್ತ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಡೆಂಗೆ ಇರುವುದು ಖಚಿತವಾಗಿದೆ. ಆದರೂ ಈ ಗ್ರಾಮ ಗಳಲ್ಲಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಅನೇಕ ಜನ ರೋಗ ದಿಂದ ಬಳಲುತ್ತಿದ್ದರೂ ಆರೋಗ್ಯ ಇಲಾಖೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸದೆ ನಿರ್ಲಕ್ಷ್ಯ ತಾಳಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಶಾಸಕರ ಅಸಡ್ಡೆ: ಶಾಸಕರು ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಸಭೆ ನಡೆಸಿಲ್ಲ.  ತೀವ್ರ ರಾಜಕೀಯ ಬೆಳವಣಿಗೆ ಗಳು, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ, ಮುಖಂಡರ ರಾಜೀನಾಮೆ, ಬಂಧನ ಮತ್ತಿತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕ ರೆಲ್ಲರೂ ತಲೆಮರೆಸಿಕೊಂಡಿದ್ದು, ಜನ ಪ್ರತಿನಿಧಿಗಳು ಜನರ ಸಮಸ್ಯೆಗಳ ನಿವಾರಣೆಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಜನತೆ ಸಾಮಾನ್ಯವಾಗಿ ದೂರುತ್ತಿದ್ದಾರೆ.

ಸಾವಿರಾರು ರೂಪಾಯಿ ವೆಚ್ಚದಲ್ಲಿ ಫಾಗಿಂಗ್ ಯಂತ್ರ ಖರೀದಿಸಿದ್ದರೂ, ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಅವನ್ನು  ವೈಜ್ಞಾನಿಕವಾಗಿ ಬಳಸ ಲಾಗಿಲ್ಲ. ಇನ್ನು ಕೆಲವು ಗ್ರಾಮಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮವನ್ನೇ ಕೈಗೊಳ್ಳಲಾಗಿಲ್ಲ ಎಂದು ಹೊಸಳ್ಳಿಯ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಧರ ಹೇಳುತ್ತಾರೆ.

ಬಾಎದ ಉಸ್ತುವಾರಿ ಸಚಿವ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಂಪುಟದಲ್ಲಿ ಸಚಿವರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದರೂ, ಈವರೆಗೆ ಅವರು ಜಿಲ್ಲೆಗೆ ಆಗಮಿಸಿ, ಇಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿಯೇ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದು ಸಾರ್ವ ಜನಿಕರ ಆರೋಪವಾಗಿದೆ.

ಡೆಂಗೆ, ಮಲೇರಿಯಾ ಹಾಗೂ ವೈರಲ್ ಜ್ವರದ ಲಕ್ಷಣಗಳು ಒಂದೇ ರೀತಿ ಇರುತ್ತವೆ. ಈ ಎಲ್ಲ ಕಾಯಿಲೆ ಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಡೆಂಗೆ ಇದೆ ಎಂಬುದು ಖಚಿತವಾಗಲು ಕನಿಷ್ಠ ಐದು ದಿನ ಕಾಯಬೇಕಾಗುತ್ತದೆ. ಒಂದೊಮ್ಮೆ ಡೆಂಗೆ ಇರುವುದು ಖಚಿತವಾದರೆ ನಿಯಂತ್ರಣ ಕ್ರಮ ಕೈಗೊಳ್ಳಬಹುದು ಎಂದು ವಿಮ್ಸನ ನಿರ್ದೇಶಕ ಡಾ.ಬಿ.ದೇವಾನಂದ ಹೇಳುತ್ತಾರೆ.

ಆದರೆ, ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ ಮತ್ತು ಹೂವಿನಹಡಗಲಿ ತಾಲ್ಲೂಕಿನ ಜನತೆ ಬಳ್ಳಾರಿ ದೂರ ಎಂಬ ಕಾರಣದಿಂದ ವಿಮ್ಸಗೆ ಬಂದು ಚಿಕಿತ್ಸೆಗೆ ದಾಖಲಾಗದೆ, ಸಮೀಪದಲ್ಲಿರುವ ಗದಗ, ದಾವಣಗೆರೆ ಮತ್ತು ಹೊಸಪೇಟೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಹತ್ತಾರು ಸಾವಿರ ಖರ್ಚು ಮಾಡಿ, ಚಿಕಿತ್ಸೆ ಪಡೆಯುವಷ್ಟು ಹಣ ಇಲ್ಲದವರು ಸ್ಥಳೀಯವಾಗಿಯೇ ಚಿಕಿತ್ಸೆ ಪಡೆದು, ಕಾಯಿಲೆ ಉಲ್ಬಣಗೊಂಡ ಬಳಿಕ ದೊಡ್ಡ ಆಸ್ಪತ್ರೆಗಳಿಗೆ ದಾಖಲಾದರೂ ಕಾಯಿಲೆ ಗುಣವಾಗದೆ ಅಸುನೀಗಿದ ಉದಾಹರಣೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT