ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಮುಂದುವರಿದ ಸಿಬಿಐ ದಾಳಿ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಆರಂಭಿಸಿರುವ ಸಿಬಿಐ ತಂಡ, ಜಿಲ್ಲೆಯ ವಿವಿಧೆಡೆ ಮಂಗಳವಾರವೂ ದಾಳಿ ಮುಂದುವರಿಸಿದ್ದು, ಹಲವು ಗಣಿ ಕಂಪೆನಿಗಳ ಕಚೇರಿ ಹಾಗೂ ಗಣಿ ಮಾಲೀಕರ ನಿವಾಸಗಳಿಗೆ ತೆರಳಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿತು.

ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ಸೋಮವಾರ ಒಟ್ಟು ಏಳು ಕಡೆ ದಾಳಿ ನಡೆಸಿದ್ದ ಸಿಬಿಐ ಎಸ್‌ಪಿ ಡಾ. ಎ ಸುಬ್ರಮಣ್ಣೇಶ್ವರ ರಾವ್ ನೇತೃತ್ವದ ತಂಡ, ಮಂಗಳವಾರ ಬಳ್ಳಾರಿಯ ವಿ.ನಾಗ್  ಮೈನಿಂಗ್ ಕಂಪೆನಿ ಕಚೇರಿ ಹಾಗೂ ಜಿಲ್ಲೆಯ ಹೊಸಪೇಟೆಯಲ್ಲಿ ಕೆಲವು ಕಡೆ ದಾಳಿ ನಡೆಸಿದೆ.

ಬಳ್ಳಾರಿಯ ಮಾಜಿ ಶಾಸಕ ದಿ. ವಡ್ಡರ ನಾಗಪ್ಪ ಅವರು ಆರಂಭಿಸಿದ್ದ ವಿ. ನಾಗ್ ಮೈನ್ಸ್ ಕಂಪೆನಿಯ ಹಾಲಿ ಮಾಲೀಕರಾದ ಶಾಂತಲಕ್ಷ್ಮಿ ಜಯರಾಂ ಅವರ ಬೆಳಗಲ್ ರಸ್ತೆಯ ನಿವಾಸ ಹಾಗೂ ಎಸ್.ಜಿ. ಕಾಲೇಜು ಬಳಿಯ ಕಚೇರಿ ಮೇಲೆ ಸೋಮವಾರ ರಾತ್ರಿ  ದಾಳಿ ನಡೆಸಿದ್ದ ಸಿಬಿಐ, ಮಂಗಳವಾರ ಬೆಳಿಗ್ಗೆಯಿಂದಲೇ ಮತ್ತೆ ಅವರ ಕಚೇರಿಗೆ ತೆರಳಿ ಸಂಜೆಯವರೆಗೆ ದಾಖಲೆಗಳ ಪರಿಶೀಲನೆ ನಡೆಸಿತು. ಅದೇರೀತಿ, ನಗರದಲ್ಲಿರುವ ದಿವಾಕರ್ ಮಿನರಲ್ಸ್ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.

ಹೊಸಪೇಟೆಯಲ್ಲೂ ದಾಳಿ
ಹೊಸಪೇಟೆಯ ಕೈಗಾರಿಕಾ ಪ್ರದೇಶದಲ್ಲಿರುವ ಇಂಟಿಗ್ರೇಟೆಡ್ ಲಾಜಿಸ್ಟಿಕ್ಸ್ ಕಂಪೆನಿ ಅಂಡ್ ಇಂಡಸ್ಟ್ರೀಸ್ (ಐಎಲ್‌ಸಿ) ಕಚೇರಿ, ಐಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಸೋಮಶೇಖರ್ ಅವರ ನಿವಾಸ, ಆಪ್ತ ಸಹಾಯಕಿ ವಿ. ಪದ್ಮಾವತಿ ಅವರ ನಿವಾಸ, ನಿರ್ದೇಶಕರಾದ ವಿಶ್ವನಾಥ ಹಿರೇಮಠ, ಕೆ.ಚಂದ್ರಶೇಖರ, ಈ ಹಿಂದೆ ನಿರ್ದೇಶಕರಾಗಿದ್ದ ಜಂಬಣ್ಣ ಅವರ ನಿವಾಸಗಳು, ಜನದೇವಿ ಮಿನರಲ್ಸ್, ಹಯವದನ ಮಿನರಲ್ಸ್, ಭಕ್ತ ಮಾರ್ಕಂಡೇಯ ಮಿನರಲ್ಸ್, ವಿಜಯ ಮೈನಿಂಗ್ ಕಂಪೆನಿ ಹಾಗೂ ಸಿಂಗ್ ಕಾಲೋನಿಯಲ್ಲಿರುವ ಬಿ.ಆರ್. ಯೋಗೇಂದ್ರನಾಥ್‌ಸಿಂಗ್ ಮೈನಿಂಗ್ ಕಂಪೆನಿಯ ಮಾಲೀಕ ರಾಜೇಶ್ವರಸಿಂಗ್ ನಿವಾಸ, ಮಿತ್ರಾ ಎಸ್‌ಕೆ ಪ್ರೈವೇಟ್ ಲಿಮಿಟೆಡ್‌ನ ಕಚೇರಿಗಳ ಮೇಲೆ ದಾಳಿ ನಡೆದಿದೆ.

ಬೆಳಿಗ್ಗೆಯಿಂದಲೇ ಕಡತಗಳ ಪರಿಶೀಲನೆ ಮತ್ತು ತಪಾಸಣೆ ಆರಂಭಿಸಿದ ಸಿಬಿಐ ಅಧಿಕಾರಿಗಳು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರಲ್ಲದೆ, ಕಂಪೆನಿಗಳ ಸಿಬ್ಬಂದಿ ಹಾಗೂ ಮಾಲೀಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು ಎಂದು ತಿಳಿದುಬಂದಿದೆ.

ಸಿಬಿಐ ಮೂಲಗಳ ಪ್ರಕಾರ, ತೊರಣಗಲ್‌ನ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆ ಕಚೇರಿ ಮೇಲೂ ಮಂಗಳವಾರ ದಾಳಿ ಮುಂದುವರಿದಿದೆ. ರಾತ್ರಿಯವರೆಗೂ ದಾಳಿಗಳು ಮುಂದುವರಿದಿದ್ದು, ದಾಳಿಯ ಯಾವುದೇ ಮಾಹಿತಿಯ ಕುರಿತು ಸಿಬಿಐ ಸಿಬ್ಬಂದಿ ಮಾಧ್ಯಮದವರಿಗೆ ವಿವರಣೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT