ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಮಹಾಮನೆಯ ರೂವಾರಿ ಬಸವಾನಂದ ಸ್ವಾಮೀಜಿ

Last Updated 13 ನವೆಂಬರ್ 2011, 9:05 IST
ಅಕ್ಷರ ಗಾತ್ರ

`ಆರು ಮೂರು ಕಟ್ಟಿ ಮೇಲಕ್ಕೇರಿದವನೇ ಗಟ್ಟಿ.~ ಈ ಆರೋಗ್ಯದ ಗುಟ್ಟು ತಿಳಿದರೆ ಸುಂದರ ಜೀವನಕ್ಕೆ ಸುಗಮ ದಾರಿ ಎನ್ನುವ ತತ್ವದಡಿ ಬೆಳೆದು, ಸಮಾಜವನ್ನು ಬೆಳೆಸುವ ಪ್ರಯತ್ನ ಮನಗುಂಡಿಯ ಮಹಾಮನೆಯಲ್ಲಿ ನಡೆಯುತ್ತಿದೆ. ಕಳೆದ ಒಂದೂವರೆ ದಶಕದ ಅಧ್ಯಯನ, ಸ್ವಯಂ ಪ್ರಯೋಗಾನುಭವದಿಂದ ಸಂಪೂರ್ಣ ಆರೋಗ್ಯ ತತ್ವವನ್ನು ಕಂಡುಕೊಂಡವರು ಬಸವ ಮಹಾಮನೆಯ ರೂವಾರಿ ಬಸವಾನಂದ ಸ್ವಾಮೀಜಿ. ಈಗ ಮಹಾಮನೆ ಕೇವಲ ಅಧ್ಯಾತ್ಮ ಕೇಂದ್ರವಾಗಿಲ್ಲ; ಆರೋಗ್ಯವಂತ ಸಮಾಜದ ವೇದಿಕೆಯಾಗಿದೆ. ಈ ವೇದಿಕೆಯ ಸೃಷ್ಟಿಕರ್ತ ಬಸವಾನಂದ ಸ್ವಾಮೀಜಿ ಅವರಿಗೆ ಇಂದು ಜನ್ಮದಿನ.

ಬಸವಾನಂದ ಸ್ವಾಮೀಜಿ ಹುಟ್ಟಿದ್ದು 1971ರ ನವೆಂಬರ್ 13ರಂದು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಗೋಣಿಸೋಮನಹಳ್ಳಿ ಹುಟ್ಟೂರು. ಹಲಗೇಗೌಡ ಮತ್ತು ಜಯಮ್ಮ ಅವರ ಆರನೇ ಸುಪುತ್ರರಾಗಿ ಜನ್ಮ ತಳೆದ ಬಸವಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಪುಟ್ಟಬಸಪ್ಪ. ಎರಡನೇ ವಯಸ್ಸಿನಲ್ಲಿ ತೀವ್ರ ಜ್ವರದಿಂದ ಅಂಧರಾದರು. ಹೊರ ಜಗತ್ತು ಕಾಣದಾಯಿತು. ಆದರೆ ಅಂತರಂಗದ ಒಳಜಗತ್ತನ್ನು ತೆರೆದುಕೊಳ್ಳಲು ಅವರಿಗೆ ವರದಾನವಾಯಿತು. ಮೈಸೂರು ತನ್ನದು ಎನ್ನುವುದನ್ನೆಲ್ಲ ತೊರೆದು ಭಕ್ತರ ಸೇವೆಗಾಗಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಹೊಸತನ್ನು ಅರಸುತ್ತ ಬೈರಾಗಿಯಾದ ಬಸವಾನಂದ ಸ್ವಾಮೀಜಿ ಅವರು ನಿರಂತರ ಅಧ್ಯಯನಶೀಲ ವ್ಯಕ್ತಿ. ಗೊತ್ತಿಲ್ಲದ ವಿಚಾರವನ್ನು ತಿಳಿಯುವ ಕುತೂಹಲ, ಸಮಾಜಕ್ಕೆ ವಿಭಿನ್ನವಾದುದನ್ನು ಕೊಡುವ ಕಾತರದ ಫಲವಾಗಿ ಕಂಡುಕೊಂಡಿದ್ದು ಆರೋಗ್ಯದಲ್ಲಿ ಅಮೃತವನ್ನು. ಆಧುನಿಕತೆಯ ಜಂಜಾಟ, ಫಿಜ್ಜಾ ಸಂಸ್ಕೃತಿಯ ನಡುವೆ ಹದಗೆಡುವ ಆರೋಗ್ಯಕ್ಕೆ ಉಪವಾಸವೇ ಮದ್ದು ಎಂಬ ಸತ್ಯವನ್ನು ವೈಜ್ಞಾನಿಕವಾಗಿ  ಸಂಶೋಧಿಸಿ, ತಮ್ಮನ್ನೇ ಪ್ರಯೋಗಕ್ಕೆ ಒಳಪಡಿಸಿಕೊಂಡು ಪ್ರಮಾಣೀಕರಿಸಿದ್ದಾರೆ. ಈ ಶೋಧಕ್ಕಾಗಿ ಅವರು ಶ್ರಮವಹಿಸಿದ್ದು ಸುಮಾರು ಹತ್ತು ವರ್ಷ.

ಎಲ್ಲ ಅಂಗಾಗಗಳು ಸದೃಢವಾಗಿದ್ದರೂ ಜೀವನದಲ್ಲಿ ಏನನ್ನೂ ಮಾಡದೇ ಬದುಕಿದವವರೇ ಬಹುತೇಕ ಜನ. ಅವುಗಳ ನಡುವೆ ಕಣ್ಣುಗಳಿಲ್ಲದೆ ಸಮಾಜದ ಭವಿಷ್ಯಕ್ಕೆ ದಾರಿ ತೋರಿದ ಕೆಲವೇ ಜನ ಸಾಧಕರಲ್ಲಿ ಬಸವಾನಂದ ಸ್ವಾಮೀಜಿ ಅವರೂ ಒಬ್ಬರು. ತಾನು, ತನ್ನದು ಎನ್ನುವ ಬದಲಾಗಿ ಎಲ್ಲರೂ ತನ್ನವರು ಎನ್ನುವ ಭಾವನೆಯನ್ನು ಬೆಳೆಸಿಕೊಂಡು ಅದನ್ನೇ ಸಮಾಜಕ್ಕೆ ನೀಡುತ್ತಿದ್ದಾರೆ. ಉತ್ತಮ ಆರೋಗ್ಯದ ಗುಟ್ಟನ್ನು ಜನರಿಗೆ ತಿಳಿಸುತ್ತಿದ್ದಾರೆ. ಯೋಗ, ಉಪವಾಸ ವ್ರತ, ನಿಸರ್ಗ ಚಿಕಿತ್ಸೆಯ ಆರೋಗ್ಯಪೂರ್ವ ವಾತಾವರಣ ನಿರ್ಮಾಣದ ಜೊತೆಗೆ ಪ್ರವಚನದ ಮೂಲಕ ಅಧ್ಯಾತ್ಮ ಚಿಂತನೆಗೂ ಗಮನ ನೀಡಿದ್ದಾರೆ. ಈಗ ದೇಶದಾದ್ಯಂತ ಲಕ್ಷಾಂತರ ಜನರು ಅವರ ಆರೋಗ್ಯ ಸೇವೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಓದುವ ಹಂತದಿಂದಲೇ ಬಸವಾನಂದ ಸ್ವಾಮೀಜಿ ಅವರು ಅಧ್ಯಾತ್ಮದತ್ತ ಒಲವು ತೋರಿದ್ದರು. ದೇವರು, ಧರ್ಮ, ಸಂಸ್ಕೃತಿಯ ಅಧ್ಯಯನಕ್ಕೆ ವಿಶೇಷ ಆಸಕ್ತಿ ತೋರಿದ್ದರು. ಅಧ್ಯಾತ್ಮ ಸಾಧನೆಗಾಗಿ ಊರೂರು ಅಲೆದರು. ಲಿಂಗಾನಂದ ಸ್ವಾಮೀಜಿ ಆಶ್ರಯ, ಮಾತೆ ಮಹಾದೇವಿ ಅವರ ಪ್ರಭಾವದಿಂದ ಬಸವ ತತ್ವ ಅನುಭವ ಪಡೆದರು.

ಸಲಕಿನಕೊಪ್ಪದ ಬೆಟ್ಟದ ಮೇಲೆ ಅಧ್ಯಾತ್ಮ ಕೇಂದ್ರ ನಿರ್ಮಿಸಿ ಸಾಧನೆ ಕೈಗೊಂಡರು. ಅಂತರಂಗದ ಒಳಗಣ್ಣು ತೆರೆದುಕೊಳ್ಳಲು ಅಥಣಿಗೆ ಶಿವಯೋಗಿಗಳ ಕ್ಷೇತ್ರ ದರ್ಶನ ಮಾಡಿದರು. ಶ್ರೀಶೈಲದ ಕದಳಿ ವನಕ್ಕೆ ತೆರಳಿ ಅಕ್ಕ ಹಾಗೂ ಅಲ್ಲಮರ ಕ್ಷೇತ್ರದಲ್ಲಿ ಧ್ಯಾನ ಮಾಡಿದರು. ಬಾಲ್ಕಿ, ಇಳಕಲ್, ಚಿತ್ರದುರ್ಗ ಸುತ್ತಿ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಬಳಿ ಆಶ್ರಯ ಪಡೆದರು. ಎಲ್ಲೂ ನೆಮ್ಮದಿ ಸಿಗದೆ ತಮ್ಮಳಗಿನ ಅರಿವಿನ ಅನುಭಾವದ ಮೂಲಕ ಸಾಧನೆ ಮಾಡಿ ಯಶಸ್ಸು ಕಂಡಿದ್ದಾರೆ.

ಸುತ್ತಾಟ ಜ್ಞಾನ ವೃದ್ಧಿಗೆ ಅನುಕೂಲವಾಯಿತು. ಯೋಗ, ಶಿವಯೋಗ, ಆಧ್ಯಾತ್ಮ ಸಾಧನೆಯೊಂದಿಗೆ ದೈಹಿಕ ವ್ಯಾಯಮವನ್ನು ರೂಢಿಸಿಕೊಂಡರು. ಧ್ಯಾನದಿಂದ ಮನಸ್ಸು ಗಟ್ಟಿಯಾದರೆ, ವ್ಯಾಯಾಮದಿಂದ ದೇಹವೂ ಗಟ್ಟಿಗೊಂಡಿತು. ಸಂಶೋಧನೆ ಪ್ರವೃತ್ತಿ ಜೊತೆಗೆ ಸಾಗಿತು. ಅನ್ಯರಿಂದ ಓದಿಸಿ ಅನೇಕ ಸಾಧಕರ ಗ್ರಂಥಗಳಲ್ಲಿರುವ ವಿಚಾರವನ್ನು ತಿಳಿದುಕೊಂಡರು. ಕರ್ನಾಟಕದ ಗಾಂಧಿ, ಹರ್ಡೇಕರ್ ಮಂಜಪ್ಪನವರ `ಆರೋಗ್ಯ ಜೀವನ~ ಅಧ್ಯಯನ ಮಾಡಿದರು. ಅಷ್ಟೇ ಅಲ್ಲ ಅನುಷ್ಠಾನಕ್ಕೂ ತಂದರು.

ಬೇಯಿಸಿದ ಆಹಾರವನ್ನು ವರ್ಜಿಸಿದರು. 1998ರಿಂದ 2004ರವರೆಗೆ ಅಧ್ಯಯನ ಮಾಡಿದರು ಹಾಗೂ ಅವುಗಳನ್ನು ಬ್ರೈಲ್ ಲಿಪಿಯಲ್ಲಿ ಬರೆದು ಕೊಳ್ಳುತ್ತಿದ್ದರು. ಸ್ವಾಮೀಜಿ ದೆಹಲಿಯ ಕರೋಲ್‌ಬಾಗ್‌ನಲ್ಲಿ ಜಾಟವ ಜನಾಂಗದವರಿಗೆ ಹಿಂದಿಯಲ್ಲಿ ಬಸವ ಪ್ರವಚನ ಮಾಡಿದರು. ಗದುಗಿನ ಶ್ರೀಗಳ ಸಲಹೆಯಂತೆ ಅಥಣಿಗೆ ಹೋಗಿ ಊರ ಹೊರಗಿನ ಗವಿಮಠದಲ್ಲಿ ಅಧ್ಯಯನ, ಅಧ್ಯಾಪನ ಅನುಷ್ಠಾನ ಸಾಧನೆಯಲ್ಲಿ ನಿರತರಾದರು. ಆಗಲೇ ಮಹಾಮನೆಯ ಕಲ್ಪನೆ ಚಿಗುರೊಡೆಯಿತು. ಅದೇ ಸಂದರ್ಭದಲ್ಲಿ ಭಕ್ತರ ಆಹ್ವಾನದ ಮೇರೆಗೆ ಮನಗುಂಡಿಗೆ ಬಂದು ನೆಲೆಸಿದರು.

ಮನಗುಂಡಿಯ ಮಹಾಮನೆಯಲ್ಲಿ ವೈದ್ಯ ಸಂಗಣ್ಣ ಯೋಗ ನಿಸರ್ಗೋಪಚಾರ ಕೇಂದ್ರ ಸ್ಥಾಪಿಸಿ ಸಾಮಾನ್ಯ ಕಾಯಿಲೆಯಿಂದ ಮೊದಲುಗೊಂಡು ಮಾರಕ ಕಾಯಿಲೆಗಳವರೆಗೂ ನೈಸರ್ಗಿಕವಾಗಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರು. ಊರೂರು ಸುತ್ತಿ ಅಧ್ಯಾತ್ಮಾರೋಗ್ಯ ಪ್ರವಚನ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯವಂತ ವ್ಯಕ್ತಿಯಿಂದ ಉತ್ತಮ ಸಮಾಜ. ಅದೇ ದೇಶದ ಉನ್ನತಿಗೆ ಪೂರಕ ಎನ್ನುವುದು ಸ್ವಾಮೀಜಿ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT