ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ ವಿವಿ ಸ್ಥಾಪನೆಗೆ 25 ಕೋಟಿ

Last Updated 18 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ 25 ಕೋಟಿ ಹಣ ಮೀಸಲು.ಜ್ಞಾನ ವಿನಿಮಯಕ್ಕಾಗಿ ನಾಲ್ಕು ವಿಶ್ವವಿದ್ಯಾಲಯ ಹಾಗೂ ರಾಜ್ಯದ ವಿ.ವಿ.ಗಳೊಂದಿಗೆ ಒಡಂಬಡಿಕೆ. ಬರುವ ಎರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್.ರೈತರ ಅನುಕೂಲಕ್ಕಾಗಿ ಕೃಷಿ ಬಂಡವಾಳ ಹೂಡಿಕೆ ಸಮಾವೇಶ.ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ...

-ಇವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಇಲ್ಲಿಯ ಅರಮನೆ ಮೈದಾನದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಾಡಿದ ಘೋಷಣೆ.‘ನಾನು ಏನೇ ಮಾತನಾಡಿದರೂ ಅದು ಮಾಧ್ಯಮಗಳಲ್ಲಿ ಬೇರೆಯದೇ ಆದ ಅರ್ಥಕ್ಕೆ ಎಡೆ ಮಾಡಿಕೊಡುತ್ತದೆ’ ಎಂದೇ ಮಾತು ಆರಂಭಿಸಿದ ಅವರು, ‘ಕಳೆದ ಎರಡೂವರೆ ವರ್ಷದಲ್ಲಿ ಯಾವ ವಿಶ್ವವಿದ್ಯಾಲಯವೂ ಕಲಿಸದಂಥ ಪಾಠಗಳನ್ನು ಕಲಿತಿದ್ದೇನೆ.

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಜನತೆ ಹಾಗೂ ಶ್ರೀಗಳ ಆಶೀರ್ವಾದದಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಆಡಳಿತದಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತೇನೆ.ಆದರೆ ಯಾರಿಗೂ ಜಗ್ಗೋನಲ್ಲ, ಬಗ್ಗೋನಲ್ಲ’ ಎಂದು ಗುಡುಗಿದರು.

ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರ, ‘ಕೂಡಲಸಂಗಮದಲ್ಲಿ ಬಸವಣ್ಣನವರ ಹೆಸರಿನಲ್ಲಿ ವಿ.ವಿಯ.ಯನ್ನು ಸ್ಥಾಪಿಸಬೇಕು’ ಎಂಬ ಮನವಿಗೆ ಸ್ಪಂದಿಸಿ ವಿ.ವಿ.ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ ಅವರು, ಇಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತಿಲ್ಲ. ಆದರೆ ಈ ಬಜೆಟ್‌ನಲ್ಲಿ ರೂ 25 ಕೋಟಿ ಅದಕ್ಕಾಗಿ ಮೀಸಲಿರಿಸುತ್ತೇನೆ.ಪಾಟೀಲ ಪುಟ್ಟಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅವರನ್ನು ಒಳಗೊಂಡಂತೆ ಐದು ಮಂದಿಯ ಸಮಿತಿ ರಚನೆ ಮಾಡಿ ಅವರು ಸೂಚಿಸುವ ಜಾಗದಲ್ಲಿ ವಿ.ವಿ.ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

‘ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಅವರ ಸೂಚನೆಯಂತೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಹೂಚ್‌ಬರ್ಗ್, ಹೈಡಲ್‌ಬರ್ಗ್, ಯೂನಿಕ್ ಹಾಗೂ ವಿಯೆನ್ನಾ ವಿ.ವಿ.ಗಳು ಹಾಗೂ ರಾಜ್ಯದ ವಿ.ವಿ.ಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗುವುದು.ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ನಾಲ್ಕು ಕೋಟಿ ತೆಗೆದಿರಿಸುತ್ತೇನೆ.ಬಂಡವಾಳ ಹೂಡಿಕೆದಾರರ ಸಮಾವೇಶದಂತೆಯೇ ಕೃಷಿಗೆ ಬಂಡವಾಳ ಹೂಡಿಕೆದಾರರ ಸಮಾವೇಶವನ್ನೂ ಬರುವ ಜೂನ್‌ನಲ್ಲಿ ಮಾಡುತ್ತೇನೆ’ ಎಂದು ಅವರು ಘೋಷಿಸಿದರು.


‘ನನ್ನ ತಪ್ಪನ್ನು ತೋರಿಸಿದರೆ ಸರಿಪಡಿಸಿಕೊಂಡು ಕೆಲಸ ಮಾಡುತ್ತೇನೆ.ಅದು ಬಿಟ್ಟು ಅಪಪ್ರಚಾರಗಳನ್ನು ಮಾಡುವುದರಿಂದ ಉಳಿದ ರಾಜ್ಯಗಳಲ್ಲಿ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಳ್ಳುತ್ತೇವೆ’ ಎಂದು ಪ್ರತಿಪಕ್ಷದವರಿಗೆ ಸಲಹೆ ನೀಡಿದ ಅವರು, ‘ಉಳಿದ ಅವಧಿಯಲ್ಲಿ ಹೆಚ್ಚು ಕಾಲವನ್ನು ವಿಧಾನಸೌಧದಲ್ಲಿ ಕಳೆದು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ. ಜಿಲ್ಲಾ ಕೇಂದ್ರಗಳಿಗೂ ತೆರಳಿ ಜನರ ಸಂಕಷ್ಟವನ್ನು ಕೇಳುತ್ತೇನೆ’ ಎಂದು ಹೇಳಿದರು.

ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಟ-ಮಂತ್ರ ಮಾಡಿಸಲಾಗಿದೆ ಎಂಬ ಮುಖ್ಯಮಂತ್ರಿಗಳ ಮಾತನ್ನು ನೇರವಾಗಿ ಪ್ರಸ್ತಾಪಿಸದೇ, ‘ನಾವೇ ಮೂಢನಂಬಿಕೆಗಳನ್ನು ಹೊಂದಿದ್ದರೆ ಮುಂದಿನ ಪೀಳಿಗೆಗೆ ಹೇಗೆ ಮಾದರಿಯಾಗುತ್ತೇವೆ. ಬೇವಿನ ಗಿಡ ನೆಟ್ಟು ಮಾವಿನ ಹಣ್ಣು ಬೇಡಿದರೆ ಸಿಗುವುದಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.

ತರಳಬಾಳು ಮಠವು ಇಲ್ಲಿಯವರೆಗೆ ಪ್ರಗತಿಪರ ವಿಚಾರಧಾರೆಯ ಮೂಲಕ ವಿಶಿಷ್ಟವಾಗಿ ಮುನ್ನಡೆಯುತ್ತದೆ.ಅದಕ್ಕೆ ಕುತ್ತು ಬರದಿರಲಿ ಎಂದು ಆಶಿಸಿದರು. ತರಳಬಾಳು ಹುಣ್ಣಿಮೆ ಮಹೋತ್ಸವ-2011ರ ಸವಿನೆನಪಿಗಾಗಿ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಪಾದಕತ್ವದಲ್ಲಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು.


ಸಚಿವ ಎಸ್.ಎ.ರವೀಂದ್ರನಾಥ್, ಸಂಸದರಾದ ಜಿ.ಎಂ.ಸಿದ್ಧೇಶ್ವರ್, ಶಿವಕುಮಾರ್ ಉದಾಸಿ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ವಿ.ರಾಜಶೇಖರನ್, ಮಾಡಾಳು ವಿರೂಪಾಕ್ಷಪ್ಪ, ಎಂ.ಚಂದ್ರಪ್ಪ, ಬಸವರಾಜ ನಾಯಕ್, ವಿಶ್ವನಾಥ್ ಹಾಜರಿದ್ದರು.

ವಿಧಾನಸಭೆ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು ‘ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಗಾಯಕಿ ಸಂಗೀತಾ ಕಟ್ಟಿ ವಚನ ಹಾಗೂ ಭಾವಗೀತೆ ಪ್ರಸ್ತುತಪಡಿಸಿದರು.ರಾಜ್ಯದ ವಿವಿಧೆಡೆಯ ಸಾವಿರಾರು ಭಕ್ತರು ಸಮಯ 10 ಗಂಟೆ ಮೀರಿದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT