ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ದಿನ: ಅತ್ಯುತ್ತಮ ಭಿತ್ತಿಪತ್ರಕ್ಕೆ ಬಹುಮಾನ

Last Updated 6 ನವೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ನವೆಂಬರ್ ತಿಂಗಳ ಬಸ್ ದಿನದ ಅಂಗವಾಗಿ ಏರ್ಪಡಿಸಿದ್ದ `ಉತ್ತಮ ಬಸ್ ದಿನ ಭಿತ್ತಿಪತ್ರ ಹಾಗೂ ಘೋಷಣೆ~ ಎಂಬ ಸ್ಪರ್ಧೆಯಲ್ಲಿ ಅನಿರುದ್ದ ತಿವಾರಿ, ಪಿ. ಸಂಕೀರ್ತ್, ಎನ್.ಪಿ. ಸಾಯಿ ಗಣೇಶ್ ಹಾಗೂ ಎಂ.ಎ. ಶಶಾಂಕ್ ಜಂಟಿಯಾಗಿ ರೂಪಿಸಿದ ಭಿತ್ತಿಪತ್ರಕ್ಕೆ ಉತ್ತಮ ಬಹುಮಾನ ಲಭಿಸಿದ್ದು, ಈ ತಂಡ ಒಟ್ಟು 15 ಸಾವಿರ ರೂಪಾಯಿ ನಗದು ಬಹುಮಾನ ಗೆದ್ದುಕೊಂಡಿದೆ.

`ನಿಮ್ಮ ವಾಹನಕ್ಕಿಂದು ವಿರಾಮ, ಬಿಎಂಟಿಸಿಯೊಂದಿಗೆ ಆರಾಮ, ಮಾಲಿನ್ಯಕ್ಕೆ ಹೇಳಿ ವಿದಾಯ~ ಎಂಬುದು ಬಹುಮಾನಿತ ಘೋಷಣೆಯಾಗಿದೆ.ಅಲ್ಲದೆ, ಅಭಿಲಾಷ್ ಗೋಪಿನಾಥ್, ಶಶಾಂಕ್ ಶಾಸ್ತ್ರಿ, ಕೇಶವಮೂರ್ತಿ, ರಾಘವೇಂದ್ರಸಿಂಗ್ ಹಾಗೂ ಅಖಿಲ್ ಗಿರಿಜನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಈ ಐವರಿಗೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.

`ಸುಸ್ಥಿರ ಸಾರಿಗೆ~ ಸಂದೇಶವನ್ನು ಸಾರುವ ಪ್ರಮುಖ ಉದ್ದೇಶದಿಂದ ಬಿಎಂಟಿಸಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಗೆ ಕಳಿಸಿದ ಭಿತ್ತಿಪತ್ರಗಳನ್ನು ಎರಡು ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಅಂತಿಮವಾಗಿ ಉತ್ತಮ ಭಿತ್ತಿ ಪತ್ರಗಳನ್ನು ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಅವರು ಉತ್ತಮ ಭಿತ್ತಿಪತ್ರವನ್ನು ಅನಾವರಣಗೊಳಿಸುವುದರ ಜತೆಗೆ, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.

ಆನಂತರ ಮಾತನಾಡಿದ ಅವರು, ನಗರದಲ್ಲಿ ವಾಹನ ದಟ್ಟಣೆ ಹಾಗೂ ಒತ್ತಡವನ್ನು ನಿಯಂತ್ರಿಸಲು ಸಾರ್ವಜನಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಮೂಲಕ ಬಸ್ ದಿನ ಪ್ರಚಾರಕ್ಕೆ ವ್ಯಾಪಕ ಬೆಂಬಲ ಸೂಚಿಸಬೇಕು ಎಂದು ಕರೆ ನೀಡಿದರು.

ಭಿತ್ತಿಪತ್ರ ಸ್ಪರ್ಧೆಯ ವಿಜೇತರು ಮಾತನಾಡಿ, ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಭಿತ್ತಿಪತ್ರ ರೂಪಿಸುವ ಕಾರ್ಯ ವಹಿಸುವ ಬದಲಿಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.ಅಲ್ಲದೆ, ವಾರ್ಷಿಕ ಬಸ್ ದಿನ ಸ್ಪರ್ಧೆಯನ್ನು ಏರ್ಪಡಿಸುವಂತೆಯೂ ಸಲಹೆ ಮಾಡಿದರು.
ನಗರ ಭೂ ಸಾರಿಗೆ ಇಲಾಖೆಯ ಆಯಕ್ತರಾದ ವಿ. ಮಂಜುಳಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT