ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣದ ಹಳ್ಳಕ್ಕೆ ಮುಕ್ತಿ ಎಂದು?

Last Updated 8 ಸೆಪ್ಟೆಂಬರ್ 2011, 11:05 IST
ಅಕ್ಷರ ಗಾತ್ರ

ಯಳಂದೂರು: ಈ ಗುಂಡಿಯಲ್ಲಿ ತಿಂಗಳುಗಳಿಂದಲೂ ಕಲುಷಿತ ನೀರು ನಿಂತಿದೆ. ಅದರ ತುಂಬೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದೆ. ರೋಗ ತರುವ ಕ್ರಿಮಿ ಕೀಟಗಳ ಆವಾಸ ಸ್ಥಾನ ಅದಾಗಿದೆ. ಪಕ್ಕದಲ್ಲೇ ಇರುವ ರಸ್ತೆಯ ತುಂಬ ಹಳ್ಳಕೊಳ್ಳ ನಿರ್ಮಾಣಗೊಂಡಿವೆ. ಮಳೆಗಾಲದಲ್ಲಿ ವಾಹನ ಸವಾರರು, ಪಾದಚಾರಿಗಳು ಚಲಿಸಲು ಸರ್ಕಸ್ ಮಾಡಬೇಕು. ಆಯ ತಪ್ಪಿದರೆ ಗುಂಡಿಗೆ ಬೀಳುವ ಅಪಾಯವೂ ಇದೆ.

ಇದು ಪಟ್ಟಣದ ಬಸ್ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆ ಹಾಗೂ ಶೌಚಾಲಯ ನಿರ್ಮಿಸಲು ತೋಡಲಾಗಿರುವ ದೊಡ್ಡ ಗುಂಡಿಯ ದೊಡ್ಡ ಕತೆ.

ಗುಂಡಿ ತೋಡಿ ಹಲವು ತಿಂಗಳು ಕಳೆದಿವೆ. ಈ ಬಗ್ಗೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿರುವುದರಿಂದ ಹಾಗೆ ಬಿಡಲಾಗಿದೆ. ಇದರಿಂದ ನಿಜವಾದ ಸಮಸ್ಯೆ ಎದುರಿಸುತ್ತಿರುವುದು ಸಾರ್ವಜನಿಕರು.

ಮೊದಲೇ ಜಾಗದ ಸಮಸ್ಯೆಯಿಂದ ಬಳಲುತ್ತಿರುವ ಪಟ್ಟಣದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಕಿರಿದಾಗಿದೆ. ಒಂದೆಡೆ ಶೆಲ್ಟರ್‌ನ ನಿರ್ಮಾಣವಾಗಿದೆ. ಇದರ ಪಕ್ಕದಲ್ಲೇ ಅಂಗಡಿ ಮಳಿಗೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಶಿಥಿಲಗೊಂಡ ಕಟ್ಟಡವನ್ನು ಕೆಡವಿ ಹಳ್ಳ ತೋಡಲಾಗಿತ್ತು. ಆದರೆ ಕೆಲವರು ಇದರ ನಿರ್ಮಾಣದ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಕೇಸು ದಾಖಲಾದ್ದರಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.

ಇದರಲ್ಲಿ ಚರಂಡಿ ಹಾಗೂ ಮಳೆಯ ನೀರು ನಿಂತು ಇಲ್ಲೇ ಕೊಳೆತು ದುರ್ವಾಸನೆ ಬೀರುತ್ತದೆ. ಜತೆಗೆ ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯಗಳು ಇದರೊಳಗೆ ಬಿದ್ದಿವೆ. ಪಕ್ಕದಲ್ಲೇ ಕುಂಬಾರಗುಂಡಿ ಬಡಾವಣೆ, ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದೆ. ಇದೂ ಕೂಡ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಯಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಆಯತಪ್ಪಿದಲ್ಲಿ 10 ಅಡಿಗೂ ಹೆಚ್ಚು ಆಳವಿರುವ ಕೊಳಚೆ ನೀರಿನಿಂದ ಆವೃತ್ತವಾಗಿರುವ ಹಳ್ಳದಲ್ಲಿ ಬೀಳುವ ಅಪಾಯವಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿ ತೋಡಿರುವ ಹಳ್ಳ ಅಪಾಯಕಾರಿಯಾಗಿದೆ. ಕೇವಲ ಶೆಲ್ಟರ್ ಕುರ್ಚಿಗಳು ಮಾತ್ರ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ಯಾವುದೆ ಸೌಲಭ್ಯಗಳಿಲ್ಲ. ಇರುವ ಶೌಚಾಲಯವೂ ಗಬ್ಬು ನಾರುತ್ತಿದೆ. ಅದರ ಎದುರಿಗೇ ಇರುವ ಶೆಲ್ಟರ್‌ನ ಕುರ್ಚಿಗಳಲ್ಲೇ ದುರ್ವಾಸನೆ ಸಹಿಸುತ್ತಾ ಕುಳಿತುಕೊಳ್ಳುವ ದೌಭಾಗ್ಯ ಪ್ರಯಾಣಿಕರದು. ಇದರ ಜತೆಗೆ ಪಕ್ಕದ ಈ ಹಳ್ಳವೂ ಸೇರಿಕೊಂಡಿದೆ. ಇಲ್ಲಿಗೆ ಬಂದು ದುಮುಕುವ ಚರಂಡಿ ನೀರು ಕೊಳೆತು ದುರ್ವಾಸನೆ ಬೀರುತ್ತಿರುವುದರಿಂದ ಪ್ರಯಾಣಿಕರು ನರಕಯಾತನೆ ಅನುಭವಿಸಬೇಕಾದ ಸ್ಥಿತಿ ಇದೆ.

ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಬೇಗ ಕ್ರಮ ಕೈಗೊಂಡು ಕಾಮಗಾರಿಗೆ ಮರುಜೀವ ನೀಡಿ ಈ ಸಮಸ್ಯೆಗಳಿಂದ ಈಗಲಾದರೂ ಸಾರ್ವಜನಿಕರಿಗೆ ಮುಕ್ತಿ ದೊರಕಿಸಲಿ ಎಂದು ಸ್ಥಳೀಯರಾದ ಎನ್. ದೊರೆಸ್ವಾಮಿ, ಮಹದೇವಸ್ವಾಮಿ, ನಾಗೇಂದ್ರ ಇತರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT