ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಪಾಸ್ ಪ್ರಯಾಣಿಕರಿಗೆ ಕಿರಿಕಿರಿ

Last Updated 7 ಸೆಪ್ಟೆಂಬರ್ 2011, 9:50 IST
ಅಕ್ಷರ ಗಾತ್ರ

ಶಿರಸಿ: ಬಸ್‌ಪಾಸ್ ಮಾಡಿಕೊಂಡು ಶಾಲೆಗೆ ಬರುವ ಮಕ್ಕಳಿಗೆ ಬಸ್‌ನಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ  ಬೈಗುಳ ಉಗಿಯುತ್ತಾರೆ, ಬಸ್‌ಗಳಿಗೆ ನಾಮಫಲಕ ಸರಿಯಿಲ್ಲ, ಬಸ್ ನಿಗದಿತ ವೇಳೆಗೆ ಬರುವುದಿಲ್ಲ... ಹೀಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಅದಾಲತ್‌ನಲ್ಲಿ ದೂರುಗಳ ಸುರಿಮಳೆಯೇ ಬಂತು.
ಮಂಗಳವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್‌ನಲ್ಲಿ ಸಾರ್ವಜನಿಕರಿಂದ ದೂರುಗಳು ಹರಿದು ಬಂದವು.

ಮಾಹಿತಿ ಕೊರತೆಯಿಂದ ಕೆಲವೇ ಸಾರ್ವಜನಿಕರು ಪಾಲ್ಗೊಂಡಿದ್ದರು. `ಸಾರಿಗೆ ಸಂಸ್ಥೆಯ ಕೆಳ ಹಂತದ ಸಿಬ್ಬಂದಿ ಕೆಳಮಟ್ಟದ ಶಬ್ದ ಬಳಕೆ ಮಾಡುತ್ತಾರೆ. ಬಸ್‌ಪಾಸ್ ವಿದ್ಯಾರ್ಥಿಗಳನ್ನು ತಾತ್ಸಾರ ಭಾವದಿಂದ ನೋಡುತ್ತಾರೆ. ಹೀಗಾಗಿ ಮರ್ಯಾದಸ್ಥ ಸಾರ್ವಜನಿಕರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಲು ಯೋಚಿಸುವಂತಾಗಿದೆ.

ದೂರು ನೀಡಲು ಬಂದರೆ ದೂರು ಸ್ವೀಕರಿಸುವವರೂ ಇದಕ್ಕಿಂತ ಭಿನ್ನವಾಗಿರುವದಿಲ್ಲ. ಸಾರ್ವಜನಿಕ ಸೇವೆಗೆ ಮೀಸಲಿರುವ ವ್ಯವಸ್ಥೆಯಲ್ಲಿ ಈ ರೀತಿ ಅಸಭ್ಯ ವರ್ತನೆ ಮಾಡುವ ಸಿಬ್ಬಂದಿ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗುರುಪಾದ ಹೆಗಡೆ ಹೇಳಿದ್ದಕ್ಕೆ ಸಭೆಯಲ್ಲಿದ್ದ ಎಲ್ಲರೂ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್.ಗಡ್ಡಿಕೇರಿ ದೂರುಗಳು ಬಂದರೆ ಇಲಾಖೆ ಕ್ರಮ ವಹಿಸುತ್ತದೆ. ದೂರು ಆಧರಿಸಿ ಸಂಬಂಧಿಸಿದ ಸಿಬ್ಬಂದಿಯನ್ನು ಅಮಾನತು ಮಾಡಲಾಗುತ್ತದೆ ಎಂದರು.

`ಕಾಗದದ ಫಲಕ, ಚಾಕ್‌ಪೀಸ್‌ನಲ್ಲಿ ಬರೆದಿರುವ ಫಲಕಗಳನ್ನು ಕೆಲ ಬಸ್‌ಗಳಿಗೆ ಹಾಕಲಾಗುತ್ತಿದೆ. ಇನ್ನು ಕೆಲ ಬಸ್‌ಗಳಿಗೆ ಫಲಕವೇ ಇರುವುದಿಲ್ಲ~ ಎಂದು ತಾ.ಪಂ. ಸದಸ್ಯ ದತ್ತಾತ್ರೇಯ ವೈದ್ಯ ದೂರಿದರು. ಕೆಲ ಮಾರ್ಗದ ಬಸ್ ಕೆಟ್ಟು ಹೋದಾಗ ಪ್ರಯಾಣಿಕರಿಗೆ ತೊಂದರೆ ಆಗದಂತೆ ತುರ್ತಾಗಿ ಬಸ್ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಫಲಕದಲ್ಲಿ ವ್ಯತ್ಯಾಸ ಆಗಬಹುದು ಎಂದು ಗಡ್ಡಿಕೇರಿ ಸಮರ್ಥಿಸಿಕೊಂಡರು.

ಸೋರುವ ಬಸ್ ಇಲ್ಲ!: `ಕಾರವಾರದಿಂದ ಶಿರಸಿಗೆ ಬರುವಾಗ ಸೋರುವ ಬಸ್‌ನಲ್ಲಿ ಬಂದೆ~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ನಾಯ್ಕ ಹೇಳಿದರು. `ನಮ್ಮ ವಿಭಾಗದಲ್ಲಿ ಸೋರುವ ಬಸ್‌ಗಳು ಇಲ್ಲ. ಅದು ಹಾವೇರಿ ವಿಭಾಗದ ಬಸ್ ಇರಬಹುದು~ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು. 

ಬನವಾಸಿಯಿಂದ ಮಳಗಿ ಮಾರ್ಗಕ್ಕೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೂರು ತಿಂಗಳಿನಲ್ಲಿ ರೂ.4ಲಕ್ಷ ನಷ್ಟವಾಯಿತು ಎಂದು ಸಾರ್ವಜನಿಕರಿಂದ ಈ  ಬಗ್ಗೆ ಬಂದ ಬೇಡಿಕೆಗೆ ಅಧಿಕಾರಿ ತಿಳಿಸಿದರು. ಸಾರಿಗೆ ಇಲಾಖೆ ಸಮಸ್ಯೆ ಕುರಿತಂತೆ ಗ್ರಾಮ ಸಭೆಗಳಲ್ಲಿ ಆದ ನಿರ್ಣಯಗಳ ಪಟ್ಟಿ ತರಿಸಿಕೊಂಡು ಸಮಸ್ಯೆ ಪರಿಹರಿಸಿ ಎಂದು ಜಿ.ಪಂ. ಸದಸ್ಯ ಆರ್.ಡಿ.ಹೆಗಡೆ ಸೂಚಿಸಿದರು. ಹುಲೇಕಲ್-ಸೋಂದಾ- ಭೈರುಂಬೆ- ಶಿರಸಿ ಮಾರ್ಗವಾಗಿ ರಿಂಗ್‌ರೂಟ್ ಬಸ್ ಬಿಡಿ, ಜಡ್ಡಿಗದ್ದೆ ಬಸ್ ಬಕ್ಕಳದವರೆಗೆ ಓಡಿಸಬೇಕು ಎಂಬ ಬೇಡಿಕೆ ವ್ಯಕ್ತವಾಯಿತು.

ತಾ.ಪಂ. ಅಧ್ಯಕ್ಷೆ ಸುಮಂಗಲಾ ಭಟ್ಟ, ತಾ.ಪಂ. ಜಿ.ಪಂ ಸದಸ್ಯರು, ಸಹಾಯಕ ಆಯುಕ್ತ ಗೌತಮ ಬಾಗಡಿ, ತಹಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ, ಸಾರಿಗೆ ಇಲಾಖೆ ಅಧಿಕಾರಿಗಳಾದ ಎಂ.ವೆಂಕಟೇಶ, ಸುರೇಶ ನಾಯ್ಕ, ಪ್ರವೀಣ ಶೇಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT