ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ಆಗ್ರಹ: ಪ್ರತಿಭಟನೆ

Last Updated 7 ಡಿಸೆಂಬರ್ 2013, 6:58 IST
ಅಕ್ಷರ ಗಾತ್ರ

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆಯ ನಗರಸಭೆ ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಿ, ಈಗಿರುವ ಬಸ್‌ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು ಎಂದು ಒತ್ತಾಯಿಸಿ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತರು ಶುಕ್ರವಾರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ರಾಬರ್ಟ್‌ಸನ್‌ಪೇಟೆಯಲ್ಲಿ ನಿರ್ಮಿಸಲಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣವನ್ನು ಉಪಯೋಗಪಡಿಸಿಕೊಳ್ಳಲಾಗುತ್ತಿಲ್ಲ. ಆಂಡರಸನ್‌­ಪೇಟೆ­ಯಲ್ಲಿರುವ ಬಸ್‌ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು 2007 ರಲ್ಲಿ ಆದೇಶ ನೀಡಿದ್ದರು. ಆದ್ದರಿಂದ ಈಗಿರುವ ನಗರಸಭೆಯ ಬಸ್‌ ನಿಲ್ದಾಣ ಕಿರಿದಾಗಿರುವುದರಿಂದ ಅದನ್ನು ಸ್ಥಳಾಂತರ ಮಾಡ­ಬೇಕು ಎಂದು ಆಗ್ರಹಿಸಿ ಪಕ್ಷದ ಮುಖಂಡ, ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌.ರಾಜೇಂದ್ರನ್‌ ನಗರಸಭೆಗೆ ಸೇರಿದ ಎಂ.ಜಿ.ಮಾರುಕಟ್ಟೆಯಲ್ಲಿರುವ ಅಂಗಡಿಗಳನ್ನು ಹರಾಜು ಹಾಕಿ ನಲವತ್ತು ವರ್ಷಗಳಾದವು. ಕೂಡಲೇ ಅವುಗಳನ್ನು ಮರುಹಂಚಿಕೆ ಮಾಡಲು ಹರಾಜು ಹಾಕಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದರು.

ಆಂಡರಸನ್‌ಪೇಟೆ ಪ್ರದೇಶ ಅಭಿವೃದ್ಧಿ ಹೊಂದಲು ಅಲ್ಲಿನ ಬಸ್‌ ನಿಲ್ದಾಣಕ್ಕೆ ಎಲ್ಲ ಖಾಸಗಿ ಬಸ್‌ಗಳು ಹೋಗಿಬರಬೇಕು ಎಂದು ಜಿಲ್ಲಾಡಳಿತ ಮೊದಲು ಸೂಚಿಸಿತ್ತು. ಸ್ವಲ್ಪ ದಿನಗಳ ಕಾಲ ಜಾರಿಗೆ ಬಂದ ಸೂಚನೆ ನಂತರದ ದಿನಗಳಲ್ಲಿ ಮರೆಯಾಯಿತು. ಆದ್ದರಿಂದ ಕೂಡಲೇ ಎಲ್ಲಾ ಖಾಸಗಿ ಬಸ್‌ಗಳನ್ನು ಆಂಡರಸನ್‌ಪೇಟೆಗೆ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಅದರ ಬಸ್‌ ನಿಲ್ದಾಣಕ್ಕೆ ಕಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹಂತದಲ್ಲಿ  ಪ್ರತಿಭಟನಾಕಾರರು ಬಸ್‌ ನಿಲ್ದಾಣದಲ್ಲಿದ್ದ ಎಲ್ಲಾ ಬಸ್‌ಗಳನ್ನು ನಿಲ್ದಾಣದಿಂದ ಹೊರಹಾಕಿದರು.

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಎಂ.ಭಕ್ತವತ್ಸಲಂ, ರಾಜ್ಯ ಸರ್ಕಾರ 60 ಲಕ್ಷ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಬಸ್‌ ನಿಲ್ದಾಣ ನಿಮಿರ್ಸಿದ್ದರೂ; ಸಂಸ್ಥೆಯ ಅಧಿಕಾರಿಗಳು ಬಸ್‌ ನಿಲ್ದಾಣವನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಆರ್‌ಪಿಐ ನಡೆಸುವ ಪ್ರತಿಭಟನೆಗೆ ಜೆಡಿಎಸ್‌ ಬೆಂಬಲ ನೀಡುತ್ತದೆ ಎಂದರು.

ನಂತರ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ಪಿ.ದಯಾನಂದ್‌, ಮುಖಂಡರಾದ ಕುಬೇಂದ್ರನ್‌, ಸುರೇಶ್‌, ನಟರಾಜ್‌, ವೆಂಕಟೇಶಗೌಡ, ತಂಗತಾಯಿ, ಶಾಂತಿ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT