ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮುಖಿ ಹೋರಾಟ

Last Updated 19 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಅದು ಬೇಡ್ತಿ ನದಿಯಲ್ಲ, ಕರ್ನಾಟಕದ ಸೈಲೆಂಟ್ ವ್ಯಾಲಿ!
1982ರಲ್ಲಿ ಉತ್ತರ ಕನ್ನಡ ಜಿಲ್ಲೆಯ ‘ಬೇಡ್ತಿ ಯೋಜನೆ’ ವಿರುದ್ಧ ಹೋರಾಟ ನಡೆಯುತ್ತಿದ್ದ  ಸಂದರ್ಭದಲ್ಲಿ ‘ಚಿಪ್ಕೊ’ ಚಳವಳಿ ನೇತಾರ ಸುಂದರಲಾಲ್ ಬಹುಗುಣ ಅವರು ಅಲ್ಲಿನ ಪರಿಸರ ಕಂಡು ಹೀಗೆ ಉದ್ಗರಿಸಿದ್ದರು.ಪಶ್ಚಿಮ ಘಟ್ಟಗಳ ಬಗ್ಗೆ ಬಹುಗುಣ ಅವರಿಗೆ ಅಪಾರ ಪ್ರೀತಿ.ಅದಕ್ಕಾಗಿಯೇ ‘ಘಟ್ಟ’ವನ್ನು ಕರ್ನಾಟಕದ  ‘ಮುಕುಟ’ ಎಂದಿದ್ದರು.ಹಿಮಾಲಯದಲ್ಲಿ ಹುಟ್ಟಿದ ಅವರಿಗೆ ಕರ್ನಾಟಕದ ಜತೆ ಬೆಳೆದ ನಂಟಿಗೆ ದಶಕಗಳ ಇತಿಹಾಸವಿದೆ.

ಹಿಮಾಲಯ ತಪ್ಪಲಿನ ಹಳ್ಳಿಯೊಂದರಲ್ಲಿ 1927ರ ಜನವರಿ 9ರಂದು ಜನಿಸಿದ ಬಹುಗುಣ ಅವರು ಗಾಂಧೀಜಿ ತತ್ವಗಳಿಂದ ಪ್ರಭಾವಿತರಾದವರು.ವಿದ್ಯಾಭ್ಯಾಸದ ನಂತರ ನಡುವೆ ರಾಜಕೀಯ ಪ್ರವೇಶ.1956ರಲ್ಲಿ  ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ಆಶ್ರಮ ಸ್ಥಾಪಿಸಿದರು.ಆಶ್ರಮದಲ್ಲಿ ಬಡವರೊಂದಿಗೆ ಬದುಕುತ್ತಾ ‘ಬಡತನ’ಕ್ಕೆ ಕಾರಣ ಹುಡುಕುತ್ತಾ ಹೊರಟರು.ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವೆಲ್ಲ ಬಡತನಕ್ಕೆ ಕಾರಣ ಎಂಬುದನ್ನು ಅರಿತ ಬಹುಗುಣ ‘ಪರಿಸರ ಸಂರಕ್ಷಣೆ’ ಹೋರಾಟ ಆರಂಭಿಸಿದರು.

ಚಿಪ್ಕೊ’ ಚಳವಳಿ
1930ರಲ್ಲಿ ಅರಣ್ಯವನ್ನು ವಾಣಿಜ್ಯ ಉದ್ದೇಶಗಳಿಗೆ (ಫಾರೆಸ್ಟ್ ಕಮರ್ಷಿಯಲೈಸೇಷನ್) ಬಳಕೆ ಮಾಡಿಕೊಳ್ಳಲು ಬ್ರಿಟಿಷ್ ಆಡಳಿತ ಆದೇಶಿಸಿತು. ಅದರ ವಿರುದ್ಧ ತಿರುಗಿ ಬಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿತು. ಆ ಘಟನೆಗಳಲ್ಲಿ  ಹದಿನೇಳು ಜನರು ಸತ್ತರು.ಸುಮಾರು ಎಂಬತ್ತು ಜನರನ್ನು  ಸರ್ಕಾರ ಬಂಧಿಸಿತು.ಈ ಹೋರಾಟದ ಸ್ಪೂರ್ತಿಯಿಂದ ಸುಂದರಲಾಲ್ ಬಹುಗುಣ 1970ರಲ್ಲಿ ‘ಚಿಪ್ಕೊ’ ಚಳವಳಿ ಆರಂಭಿಸಿದರು.

‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ ಚಳವಳಿ ವಿದೇಶಗಳಿಗೂ ಪಸರಿಸಿತು. ಸ್ವೀಡನ್, ಜರ್ಮನಿ, ನೆದರ್‌ಲೆಂಡ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಾದವರು ‘ಚಿಪ್ಕೊ’ ಚಳವಳಿ ನಡೆದ ಪ್ರದೇಶಗಳಿಗೆ, ಬಹುಗುಣ ಅವರ ಆಶ್ರಮಕ್ಕೆ ಭೇಟಿ ನೀಡಿದರು.ಪರಿಸರ ಉಳಿವಿಗಾಗಿ ಪ್ರಾಣ ತೆತ್ತವರ ಬಗ್ಗೆ ಕಂಬನಿ ಮಿಡಿದ ಅನೇಕ ವಿದೇಶಿಯರು ಈ ಹೋರಾಟವನ್ನು ತಮ್ಮ ದೇಶಗಳಿಗೂ ಕೊಂಡೊಯ್ದರು.ಚಳವಳಿಯ ಬಿಸಿ ವಿಶ್ವಸಂಸ್ಥೆಯವರೆಗೂ ಮುಟ್ಟಿತು.

ಗಾಂಧಿ ತತ್ವದಲ್ಲೇ ಹೋರಾಟ
ಗಾಂಧೀಜಿಯವರ ಅಹಿಂಸಾ ತತ್ವದ ಪ್ರಕಾರ ಶಾಂತಿಯುತವಾಗಿ ಹೋರಾಟ ನಡೆಯಬೇಕು ಎಂಬುದು ಅವರ ಆದರ್ಶವಾಗಿತ್ತು.ಅದಕ್ಕಾಗಿ ಬಹುಗುಣ ಅವರು ಪಾದಯಾತ್ರೆಯನ್ನು ಹೋರಾಟದ ಅಸ್ತ್ರವಾಗಿಸಿಕೊಂಡರು.

ಪಾದಯಾತ್ರೆ ಮೂಲಕ ಜನರನ್ನು ನೇರವಾಗಿ ಸಂಪರ್ಕಿಸಿದರು.ಭಾವನೆಗಳ ಮೂಲಕ ಅವರ ಮನಸ್ಸು ತಟ್ಟಿದರು.ಹತ್ತಿರವಾದರು.ಜನರ ನಾಡಿ ಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿದರು. ಪರಿಸರ ಸಂರಕ್ಷಣೆ ಹೋರಾಟಗಳಿಗೆ ಸ್ಥಳೀಯರನ್ನೇ ಸ್ವಯಂಸೇವಕರನ್ನಾಗಿ ತೊಡಗಿಸಿಕೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.ಅದನ್ನು ಅವರು ಕಾರ್ಯರೂಪಕ್ಕೆ ತಂದರು.

ಅರಣ್ಯದಲ್ಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವಂತೆ ಒತ್ತಾಯಿಸಿ 1981ರಿಂದ 83ರವರಗೆ ಹಿಮಾಲಯ ಪರ್ವತ ವ್ಯಾಪ್ತಿಯ ಏಳು ರಾಜ್ಯಗಳಲ್ಲಿ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ-ಹಳ್ಳಿ ಸುತ್ತುತ್ತಾ ಜನರ ಸಹಕಾರ ಕೇಳುತ್ತ ಚಳವಳಿಯನ್ನು ಗಟ್ಟಿಗೊಳಿಸಿದರು.ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಪರಿಸರ ಸಂರಕ್ಷಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.1980ರಲ್ಲಿ  ಮರ ಕಡಿಯುವುದಕ್ಕೆ  ಹದಿನೈದು ವರ್ಷಗಳ ಕಾಲ ನಿಷೇಧ ಹೇರುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತು.ಅದು ಅವರ ನಿರಂತರ ಹೋರಾಟಕ್ಕೆ ಸಿಕ್ಕ ಜಯ.

ಬಹುಗುಣ ಅವರ ಪಾದಯಾತ್ರೆ, ಚಳವಳಿ, ಹೋರಾಟಗಳೇ 1982ರಲ್ಲಿ ಕರ್ನಾಟಕದಲ್ಲಿ ‘ಅಪ್ಪಿಕೊ’ ಚಳವಳಿ ಆರಂಭಕ್ಕೆ ಸ್ಪೂರ್ತಿಯಾಯಿತು. ಉತ್ತರ ಕನ್ನಡದ ಪಶ್ಚಿಮ ಘಟ್ಟದಲ್ಲಿ ಆರಂಭವಾದ ಈ ಚಳವಳಿಯಲ್ಲಿ ಬಹುಗುಣ ಖುದ್ದಾಗಿ ಪಾಲ್ಗೊಂಡರು. ಅಂದಿನಿಂದ ಆರಂಭವಾದ ಅವರ ಕರ್ನಾಟಕದ ನಂಟು ಇಂದಿಗೂ ನಿರಂತರ.

ರಾಜ್ಯದಲ್ಲಿ ಬಹುಗುಣರ ಹೆಜ್ಜೆ
ರಾಜ್ಯದಲ್ಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲೆಲ್ಲಾ ಬಹುಗುಣ ಪ್ರತ್ಯಕ್ಷರಾಗಿದ್ದಾರೆ.1982ರಲ್ಲಿ ನಡೆದ ಅಪ್ಪಿಕೊ ಚಳವಳಿ, 1983ರಲ್ಲಿ ರೈತ ಸಂಘ ನಡೆಸಿದ ‘ನೀಲಿಗಿರಿ ನಾಟಿ’ ವಿರುದ್ಧದ ಹೋರಾಟ, ದಕ್ಷಿಣ ಕನ್ನಡದಲ್ಲಿ ಮಂಗನ ಕಾಯಿಲೆ ವಿರುದ್ಧ ಜಾಗೃತಿ, 1992ರಲ್ಲಿ ಕೊಡಗಿನ ಶೋಲಾ ಅರಣ್ಯದಲ್ಲಿ ‘ಟೀ ಪ್ಲಾಂಟೇಷನ್ ನಾಟಿ’ ವಿರುದ್ಧ ಆಂದೋಲನ, 2003ರಲ್ಲಿ ಕಾರವಾರದಲ್ಲಿ ನಡೆದ ಕಾಳಿ ಪಾದಯಾತ್ರೆ, 2005ರಲ್ಲಿ ಶರಾವತಿ ಅವಲೋಕನ ಪಾದಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದರು.

ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೂ ಕೈ ಜೋಡಿಸಿದ ಬಹುಗುಣ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ‘ಅರಣ್ಯ ನಾಶ, ನೀಲಿಗಿರಿ ನಾಟಿ’ ವಿರುದ್ಧ ಧ್ವನಿ ಎತ್ತಿ, ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದರು.

ಇಂಥದ್ದೊಂದು ನಂಟಿನೊಂದಿಗೆ ಕರ್ನಾಟಕದ ಪರಿಸರ ಹೋರಾಟಗಾರರ ಪಾಲಿಗೆ ಪ್ರೀತಿಯ ಅಜ್ಜನಾಗಿರುವ 84ರ ಸುಂದರಲಾಲ್ ಬಹುಗುಣ ಅವರು ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಸಭಾಂಗಣದಲ್ಲಿ ನಡೆದ ‘ಪಶ್ಚಿಮಘಟ್ಟ ಸಂರಕ್ಷಣಾ ಅಭಿಯಾನದ ಸಮಾವೇಶ’ಕ್ಕೂ ಬಂದಿದ್ದರು. ಆ ಸಂದರ್ಭದಲ್ಲಿ ಪ್ರಜಾವಾಣಿ ಸಮಕಾಲೀನ ಪರಿಸರ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಆ ಸಂದರ್ಭದ ಮಾತುಕತೆಯ ಸಾರಾಂಶ ಇಲ್ಲಿದೆ.

*ನೀವು ಬಹಳ ಹಿಂದಿನಿಂದ ‘ವನಮಹೋತ್ಸವ’ಕ್ಕೆ ಜನರನ್ನು ಪ್ರೇರೇಪಿಸುತ್ತಿದ್ದಿರಿ.ಇಂದು ಹಣಕ್ಕಾಗಿ ಗಿಡ ಬೆಳೆಸುವ ಪರಿಪಾಠ ಬೆಳೆಯುತ್ತಿದೆ.ಹಾಗೆ ಬೆಳೆಸಿದ ಗಿಡಗಳು ಹತ್ತು-ಹದಿನೈದು ವರ್ಷಗಳಲ್ಲಿ ನಾಶವಾಗುತ್ತಿವೆ. ಇಂಥ ‘ಮರ - ಮುರಿಯುವ’ ಮನಸ್ಸುಗಳನ್ನು ಪರಿವರ್ತಿಸುವುದು ಹೇಗೆ?
ಮುನ್ನೂರು ದಿನಗಳ ಕಾಲ ಏಳು ರಾಜ್ಯಗಳಲ್ಲಿ  ಸುಮಾರು ಐದು ಸಾವಿರ ಕಿಲೋಮೀಟರ್ ಸುತ್ತಾಡಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸಿದ್ದೇನೆ.ಈಗ ಅಂಥ ಚಳವಳಿಯನ್ನು ಮತ್ತೆ ನಡೆಸುವ ಕಾಲ ಬಂದಿದೆ.ಎಲ್ಲೆಡೆ ಚಳವಳಿ ಆರಂಭವಾಗಬೇಕು.ಜನರಲ್ಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು.ಅದು ನಿರಂತರವಾಗಿ ನಡೆಯುತ್ತಿರಬೇಕು.ಈ ಹೋರಾಟದ ನಾಯಕತ್ವವನ್ನು ಯುವಕರೇ ವಹಿಸಿಕೊಳ್ಳಬೇಕು.

*ಪಶ್ಚಿಮ ಘಟ್ಟಗಳಿಗೆ ‘ಘಾಸಿ’ಯಾದರೆ ಕೃಷಿ ಮೇಲೆ ನೇರ ಪರಿಣಾಮ ಆಗುತ್ತದೆ.ಪರಿಸರ ಹೋರಾಟಗಳಿಗೆ ರೈತರು ಕೈಜೋಡಿಸುತ್ತಿಲ್ಲ.‘ಚಿಪ್ಕೊ’ ಚಳವಳಿ ಮಾಡಿದಾಗ ರೈತರು ಬೆಂಬಲ ನೀಡಿದ್ದರೇ?
ಬಹುತೇಕ ರೈತರು ಚಿಪ್ಕೋ ಚಳವಳಿಯಲ್ಲಿದ್ದರು.ಕರ್ನಾಟಕದ ‘ಅಪ್ಪಿಕೋ’ ಚಳವಳಿಯಲ್ಲೂ ರೈತರಿದ್ದರು.ರೈತರಷ್ಟೇ ಅಲ್ಲ ಪರಿಸರದ ಬಗ್ಗೆ ಕಾಳಜಿ ಇರುವವರೆಲ್ಲ ಚಳವಳಿಗೆ ಕೈಜೋಡಿಸಿದರೆ ಹೋರಾಟ ಬಲಗೊಳ್ಳುತ್ತದೆ.ಹಾಗೆ ಬಲಗೊಳ್ಳಬೇಕಾದರೆ ರೈತರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಪ್ರಜ್ಞೆ ಮೂಡಿಸುವ ಕೆಲಸವನ್ನು ಪರಿಸರ ಸಂಘಟನೆಗಳು ಮಾಡಬೇಕು.ಪರಿಸರ ಮತ್ತು ಕೃಷಿ, ತಾಯಿ-ಮಕ್ಕಳಿದ್ದಂತೆ.

*ಇತ್ತೀಚೆಗೆ ಹಳ್ಳಿಗಳ ಜನರಲ್ಲಿ  ಪರಿಸರ ಕಾಳಜಿ ಕುಂಠಿತವಾಗಿದೆ.ಗಣಿಗಾರಿಕೆ, ಭೂ ಮಾಫಿಯಾಗಳಿಂದ ಹಳ್ಳಿಗಳು ಕಣ್ಮರೆಯಾಗುತ್ತಿವೆ.ಗ್ರಾಮೀಣ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಹೇಗೆ?
ಹಳ್ಳಿಗಳಲ್ಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ.ಪರಿಸರ ಸಂಘಟನೆಗಳ ಕಾರ್ಯಕರ್ತರು ಹಳ್ಳಿಗಳಲ್ಲಿ ವಾಸ ಮಾಡಬೇಕು. ಸಮುದಾಯಗಳನ್ನು ಸಂಘಟಿಸಿ. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲ್ಲಿನವರೇ ಕಾವಲುಗಾರರಾಗಬೇಕು.

*ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ? ‘ಅಭಿವೃದ್ಧಿ’ಯ ವ್ಯಾಖ್ಯಾನವೇನು?
ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂತಹ ‘ಪರಿಸರ ಪೂರಕ, ಸುಸ್ಥಿರ ಅಭಿವೃದ್ಧಿ’ ಜಾರಿಗೆ ಬರಬೇಕು.ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ ‘ಸುಸ್ಥಿರ ಅಭಿವೃದ್ಧಿ’.

*ಪರಿಸರ ಹೋರಾಟದಲ್ಲಿ ಆಸಕ್ತಿ ಇರುವ ಯುವಕರಿಗೆ ನಿಮ್ಮ  ಸಂದೇಶವೇನು?
ಎಲ್ಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ.ಅದು ಹೃದಯವಿಲ್ಲದ ಯಂತ್ರವಿದ್ದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.ಸರ್ಕಾರವನ್ನು ಮರೆತು ಬಿಡಿ. ಅಭಿವೃದ್ಧಿ ವಿಷಯದಲ್ಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯಲ್ಲ. ಅವರು ಅಭಿವೃದ್ಧಿ ಹೆಸರಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ.ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ.ನಮ್ಮದು ವನ ಸಂಸ್ಕೃತಿ.ಟಿಂಬರ್, ಮೈನಿಂಗ್ ಸಂಸ್ಕೃತಿಯಲ್ಲ.ಅದು ಬ್ರಿಟಿಷರ ಕೊಡುಗೆ.ಅದು ನಮಗೆ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT