ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಚುನಾವಣೆ ಹಿಂಸಾಚಾರಕ್ಕೆ 21 ಬಲಿ

ಮತದಾನ ಪ್ರಮಾಣ ನಗಣ್ಯ, 200 ಮತಗಟ್ಟೆಗಳಿಗೆ ಬೆಂಕಿ
Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಬಾಂಗ್ಲಾದೇಶದಲ್ಲಿ ಭಾನು­ವಾರ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭ­ದಲ್ಲಿ ಹಿಂಸಾಚಾರ ತಾಂಡವವಾಡಿದೆ. ಹಿಂಸೆಯ ಭೀತಿ­ಯಿಂದ ಜನರು ಮನೆಯಿಂದ ಹೊರಗೆ ಬಾರದ ಕಾರಣ ಮತದಾನದ ಪ್ರಮಾಣ ನಗಣ್ಯ ಎನ್ನುವಷ್ಟು ಕಡಿಮೆಯಾಗಿದೆ.

21 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ನೇತೃತ್ವದ 18 ಪಕ್ಷಗಳ ಮೈತ್ರಿಕೂಟದ ಬೆಂಬಲಿ­ಗರು 200ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಬೆಂಕಿ ಹಚ್ಚಿ­ದ್ದಾರೆ. ಮೈತ್ರಿಕೂಟವು ಈ ವಿವಾದಾತ್ಮಕ ಚುನಾ­ವಣೆ­­ಯನ್ನು ಪ್ರಹಸನ ಎಂದು ಬಣ್ಣಿಸಿದೆ. ಪ್ರತಿ­ಪಕ್ಷಗಳ ಭಾಗವಹಿಸುವಿಕೆ ಇಲ್ಲದ ಚುನಾವಣೆ ದೋಷ­­ಪೂರಿತ ಎಂದು ಅಂತರರಾಷ್ಟ್ರೀಯ ಸಮುದಾಯ ಹೇಳಿದೆ.

ರಂಗ್‌ಪುರ್, ದಿನಜ್‌ಪುರ್‌, ನಿಲ್ಫಮರಿ, ಫೇಣಿ ಮತ್ತು ಮುನ್ಶಿಗಂಜ್‌ಗಳಲ್ಲಿ ಮೈತ್ರಿಕೂಟದ ಬೆಂಬಲಿಗರು ಮತದಾನ ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಮೈತ್ರಿಕೂಟದ ಕನಿಷ್ಠ 17 ಬೆಂಬಲಿ­ಗರು ಮೃತಪಟ್ಟಿದ್ದಾರೆ.

ದಿನಜ್‌ಪುರದ ಮತದಾನ ಕೇಂದ್ರದಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿಯನ್ನು ಹೊಡೆದು ಕೊಲ್ಲ­ಲಾಗಿದೆ. ಓರ್ವ ಮತಗಟ್ಟೆ ಅಧಿಕಾರಿ ಮತ್ತು ಇತರ ಇಬ್ಬರು ಮೃತಪಟ್ಟಿದ್ದಾರೆ.

ಬಾಂಗ್ಲಾದ 59 ಜಿಲ್ಲೆಗಳ 300 ಕ್ಷೇತ್ರಗಳ ಪೈಕಿ 147ರಲ್ಲಿ ಮತದಾನ ನಡೆದಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 390 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆಡಳಿತಾರೂಢ ಅವಾಮಿ ಲೀಗ್‌ ಮತ್ತು ಅದರ ಮಿತ್ರ ಪಕ್ಷ ಜತಿಯಾ ಪಾರ್ಟಿಗೆ ಸೇರಿದವರು.

ಪ್ರತಿಪಕ್ಷ ಬಿಎನ್‌ಪಿ ನೇತೃತ್ವದ ಮೈತ್ರಿಕೂಟವು ಚುನಾವಣೆ ಬಹಿಷ್ಕರಿಸಿರುವುದರಿಂದ ಉಳಿದ 153 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಚುನಾವಣೆ ನಡೆದ 147 ಕ್ಷೇತ್ರಗಳಲ್ಲಿ ಸುಮಾರು 44 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಮತ ಚಲಾಯಿಸಿದವರ ಸಂಖ್ಯೆ ಬಹಳ ಕಡಿಮೆ. ಕೆಲವು ಮತಗಟ್ಟೆಗಳಲ್ಲಿ ಒಂದು ಮತವೂ ಚಲಾ­ವ­ಣೆ­ಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮತದಾನ ಪ್ರಮಾಣ ಅತ್ಯಲ್ಪವಾಗಿರು­ವು­ದ­ರಿಂದ ಚುನಾವಣೆಯ ಸಿಂಧುತ್ವವನ್ನೇ ಪ್ರಶ್ನಿಸು­ವುದಕ್ಕೆ ಪ್ರತಿಪಕ್ಷಕ್ಕೆ ಅವಕಾಶ ಇದೆ.­1996ರಲ್ಲಿಯೂ ಇಂತಹುದೇ ಸನ್ನಿವೇಶ ಸೃಷ್ಟಿ­ಯಾಗಿತ್ತು. ಆಗ ಪ್ರತಿಪಕ್ಷವಾಗಿದ್ದ ಅವಾಮಿ ಲೀಗ್‌ ಚುನಾವಣೆ ಬಹಿಷ್ಕರಿಸಿತ್ತು. ಆಗಿನ ಚುನಾವಣೆ­ಯಲ್ಲಿ ಕೇವಲ ಶೇ 7ರಷ್ಟು ಮತದಾನ ನಡೆದಿತ್ತು. ಹಾಗಾಗಿ ಖಲೀದಾ ಜಿಯಾ ನಾಯಕತ್ವದ ಬಿಎನ್‌ಪಿ ಸರ್ಕಾರ ಕೆಲವೇ ತಿಂಗಳಲ್ಲಿ ತಟಸ್ಥ ಉಸ್ತು­­ವಾರಿ ವ್ಯವಸ್ಥೆಯ ಅಡಿಯಲ್ಲಿ ಹೊಸ ಚುನಾವಣೆ ನಡೆಸಬೇಕಾಗಿ ಬಂದಿತ್ತು.

ಹಿನ್ನೆಲೆ: ಪ್ರತಿಪಕ್ಷ ಬಿಎನ್‌ಪಿ ನೇತೃತ್ವದ ಮೈತ್ರಿಕೂಟ ಚುನಾವಣೆ ಮುಂದೂಡುವಂತೆ ಆಗ್ರಹಿಸಿತ್ತು.

ತಟಸ್ಥ ಉಸ್ತುವಾರಿ ಸರ್ಕಾರದ ಅಡಿಯಲ್ಲಿ ಚುನಾವಣೆ ನಡೆಸುವಂತೆ ಬಿಎನ್‌ಪಿಯ ನಾಯಕಿ ಖಲೀದಾ ಜಿಯಾ ಒತ್ತಾಯಿಸಿದ್ದರು. ಆದರೆ ಪ್ರಧಾನಿ ಶೇಖ್‌ ಹಸೀನಾ ಈ ಬೇಡಿಕೆಯನ್ನು ತಿರಸ್ಕರಿ­ಸಿ­ದ್ದರು. ಹಾಗಾಗಿ ಪ್ರತಿಪಕ್ಷಗಳ ಮೈತ್ರಿಕೂಟ ಚುನಾವಣೆಯನ್ನು ಬಹಿಷ್ಕರಿಸಿವೆ.

ಕಳೆದ ನವೆಂಬರ್‌ನಿಂದ ಪ್ರತಿಪಕ್ಷ ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿನ ಹಿಂಸಾಚಾರಕ್ಕೆ 150ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಕಣ್ಣಿಟ್ಟಿರುವ ಜಗತ್ತು: ಇದು ಏಕಪಕ್ಷೀಯವಾಗಿ ನಡೆದಿ­ರುವ ಚುನಾವಣೆಯಾದ ಕಾರಣ ಐರೋಪ್ಯ ಒಕ್ಕೂಟ, ಅಮೆರಿಕ ಅಥವಾ ಇಂಗ್ಲೆಂಡ್‌ ಚುನಾವಣೆಗೆ ವೀಕ್ಷಕರನ್ನು ಕಳುಹಿಸಿಲ್ಲ. ಭಾರತ ಮಾತ್ರ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT