ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ವಸೂಲಿ: ಒತ್ತಡ ಹೇರಲು ನಿರ್ಧಾರ

Last Updated 30 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರಪಾಲಿಕೆಗೆ ಸೇರಿದ ಖಾಲಿ ನಿವೇಶನ, ಮಳಿಗೆ ಹಾಗೂ ಇನ್ನಿತರ ಸ್ಥಿರಾಸ್ತಿಗಳಿಂದ ಬಾಡಿಗೆ ಸಂಗ್ರಹ ಸಂಬಂಧ ಆದೇಶ ಹೊರಡಿಸುವುದಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಪೂರ್ಣಾ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ ಮೊದಲಿಗೆ ಈ ವಿಷಯ ಪ್ರಸ್ತಾಪಿಸಿದರು. ಪಾಲಿಕೆಗೆ ಸೇರಿದ ಸ್ಥಿರಾಸ್ತಿಗಳಿಂದ ಪ್ರಸ್ತುತ ವರ್ಷಕ್ಕೆ ಅಂದಾಜು 50 ಕೋಟಿಗಳಷ್ಟು ಆದಾಯ ಸಂಗ್ರಹಿಸಬಹುದಾಗಿದೆ.

ಆದರೆ ಸರ್ಕಾರದ ನಿಯಮದಿಂದಾಗಿ ಕಳೆದ 6 ವರ್ಷಗಳಿಂದ ಬಾಡಿಗೆ ವಸೂಲಿ ಆಗುತ್ತಿಲ್ಲ. ಇದರಿಂದ ಪಾಲಿಕೆಗೆ ಸಾಕಷ್ಟು ನಷ್ಟವಾಗುತ್ತಿದೆ. ಹೀಗಾಗಿ ಕೂಡಲೇ ಸರ್ವಪಕ್ಷ ನಿಯೋಗ ಕೊಂಡೊಯ್ದು ಸಚಿವರಿಗೆ ಮನವಿ ಮಾಡಬೇಕು. ಬಾಡಿಗೆ ವಸೂಲಾತಿಗೆ ಅನುಮತಿ ನೀಡಲು ಕೋರಬೇಕು ಎಂದು ತಿಳಿಸಿದರು.
 
ಇದಕ್ಕೆ ಧ್ವನಿಗೂಡಿಸಿದ ವಿರೋಧಪಕ್ಷದ ನಾಯಕ ದೀಪಕ ಚಿಂಚೋರೆ, ಈವರೆಗೆ ಪಾಲಿಕೆ ಆಸ್ತಿಯಿಂದ ಎಷ್ಟು ಬಾಡಿಗೆ ಸಂಗ್ರಹಿಸಲಾಗಿದೆ ಎಂಬುದನ್ನು ಮಾಹಿತಿ ನೀಡುವಂತೆ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಈ ಕುರಿತು ಗಮನ ಹರಿಸುವಂತೆ ಕೋರಿದರು. 
 
ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಈ ಕುರಿತು 2010ರಿಂದ ಈವರೆಗೆ ಸರ್ಕಾರಕ್ಕೆ 3 ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಅಸಹಾಕಾರದಿಂದ ಕಡತ ಸಚಿವರ ಹತ್ತಿರ ಹೋಗುತ್ತಿಲ್ಲ. ಈ ವಿಳಂಬಕ್ಕೆ ಇಲಾಖೆ ಕಾರ್ಯದರ್ಶಿಗಳೇ ಹೊಣೆ ಎಂದು ಆರೋಪಿಸಿದರು.
 
ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಪ್ರತಿಕ್ರಿಯಿಸಿ, ಬಾಡಿಗೆ ಸಂಗ್ರಹ ಸಂಬಂಧ ಕೆಲವು ಕಾನೂನು ತೊಡಕುಗಳಿವೆ. ಈ ಸಂಬಂಧ 2010ರ ಮೇನಲ್ಲಿ ಠರಾವು ಸಂಖ್ಯೆ 488ರ ಪ್ರಕಾರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.

ಆಗಿನ ಅಂಕಿ-ಅಂಶಗಳಂತೆ 1313 ಆಸ್ತಿಗಳನ್ನು ಬಾಡಿಗೆ ನೀಡಲಾಗಿದ್ದು, ಇದರಿಂದ 33.29 ಕೋಟಿ ಬಾಡಿಗೆ ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದೆ. ಆಸ್ತಿಗಳ ಗುತ್ತಿಗೆ ಅವಧಿ ವಿಸ್ತರಣೆ ಅಥವಾ ಹರಾಜಿಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. ಮತ್ತೆ ಕಳೆದ ಮೇನಲ್ಲಿ ಮನವಿ ಸಲ್ಲಿಸಲಾಗಿದ್ದು, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ನವನಗರದಲ್ಲಿ ಇಂತಹ 71 ಫ್ಲ್ಯಾಟ್‌ಗಳಿದ್ದು, ಇವುಗಳ ಅತಿಕ್ರಮಣವಾಗುತ್ತಿದೆ. ಹೀಗಾಗಿ ಅವುಗಳನ್ನು ಹರಾಜು ಹಾಕಿ ಆದಾಯ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರೊಬ್ಬರು ಆಗ್ರಹಿಸಿದರು.

ಅಧಿಕಾರಿಗಳ ಶಾಮೀಲು-ಆರೋಪ
ಪಾಲಿಕೆಯ ಹಣಕಾಸು ಸಮಿತಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ. ಆದರೆ ಈ ನಿಯಮವನ್ನು ಮೀರಿ ಎಡಿಎಲ್‌ಆರ್ ಕಚೇರಿಯಿಂದ ಕೆಲವು ಗುತ್ತಿಗೆಗಳನ್ನು ನವೀಕರಿಸಲಾಗಿದೆ. ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸದಸ್ಯರು ಸಭೆಯಲ್ಲಿ ಆರೋಪಿಸಿದರು.

ಆಯುಕ್ತರ ಗಮನಕ್ಕೆ ಬರದೆಯೇ ಕಡತಗಳು ಅವರ ಎಡಿಎಲ್‌ಆರ್ ಮೂಲಕ ವರ್ಗಾವಣೆಯಾಗುತ್ತಿವೆ. ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಟಗರಗುಂಟಿ ಆಗ್ರಹಿಸಿದರು. ಮಧುರಾ ಕಾಲೊನಿಯಲ್ಲಿ ಉದ್ಯಾನವೊಂದರ ಅತಿಕ್ರಮಣವಾಗಿದ್ದು, ಕ್ರಮ  ಕೈಗೊಳ್ಳಬೇಕು ಎಂದು ಸದಸ್ಯರೊಬ್ಬರು ಆಗ್ರಹಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ, ಈ ಸಂಬಂಧ ಎಡಿಎಲ್‌ಆರ್ ಅವರಿಗೆ ಪತ್ರ ಬರೆಯಲಾಗಿದ್ದು, ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಪಾಲಿಕೆಗೆ ಸೇರಿದ ಖಾಲಿ ನಿವೇಶನ, ಉದ್ಯಾನ ಇನ್ನಿತರ ಜಾಗಗಳನ್ನು ಕಾಯ್ದಿರಿಸಲಾಗಿದ್ದು, ಅವುಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ಆಯುಕ್ತರ ವಿರುದ್ಧ ಆರೋಪ

ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಮಾತನಾಡಿ, ಆಯುಕ್ತರಿಗೆ ಇಲ್ಲಿನ ಅಭಿವೃದ್ಧಿ ಕುರಿತು ಆಸಕ್ತಿ ಇದ್ದಂತಿಲ್ಲ. ಯಾವ ವಾರ್ಡ್‌ಗಳಿಗೂ ಭೇಟಿ ನೀಡುತ್ತಿಲ್ಲ. ಅವರು ಜನರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಅರಿಯಬೇಕು ಎಂದರು.
 

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಟೋಬರ್‌ವರೆಗೆ 4 ಕೋಟಿ ರೂಪಾಯಿಗಳಿಗೂ ಅಧಿಕ ಕರ ವಸೂಲಿ ಮಾಡಲಾಗಿದೆ. ಒಟ್ಟಾರೆ ಹಿಂದೆಂದೂ ಆಗದಂತಹ ಆದಾಯ ವಸೂಲಾಗುತ್ತಿದೆ. ಈ ಎಲ್ಲವನ್ನೂ ಎಲ್ಲ ವಾರ್ಡುಗಳಿಗೂ ಸಮಾನಾಗಿ ಹಂಚುವ ಕೆಲಸ ಮಾಡುತ್ತಿದ್ದೇವೆ ಎಂದರು.

ತೆರವಿಗೆ ಸೂಚನೆ
ಹುಬ್ಬಳ್ಳಿಯ ಗಣೇಶಪೇಟೆಯಲ್ಲಿರುವ ಮಟನ್ ಮಾರ್ಕೆಟ್‌ನಲ್ಲಿ ನೂತನ ಕಟ್ಟಡ ನಿರ್ಮಾಣ ಸಂಬಂಧ ಅಲ್ಲಿರುವ ಅಂಗಡಿಗಳ ತೆರವಿಗೆ ಆದೇಶವಿದೆ. ಆದಾಗ್ಯೂ ತೆರವು ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ತಡೆಹಿಡಿಯಲಾಗಿದೆ. ವಲಯಾಧಿಕಾರಿ ಹಾಗೂ ಇತರರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಚಿಂಚೋರೆ ಆರೋಪಿಸಿದರು.

ಸದ್ಯ ಈ ಕುರಿತು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಅದು ತೆರವುಗೊಂಡ ನಂತರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದರು. ಈದ್ಗಾ ಮೈದಾನ ಸದುಪಯೋಗ ಸಬಂಧ ಯೋಜನೆ ರೂಪಿಸುವಂತೆ ಸಭಾನಾಯಕ ವೀರಣ್ಣ ಸವಡಿ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಕುರಿತು ಅಂಜುಮಾನ್ ಇಸ್ಲಾಂ ಸಂಸ್ಥೆ ಧಾರವಾಡ ಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದೆ. ಹೀಗಾಗಿ ಈ ಕುರಿತು ಏನನ್ನೂ ಹೇಳಲಾಗದು ಎಂದರು.

ಸಭೆಯಲ್ಲಿ ನಗರ ಬಡತನ ನಿರ್ಮೂಲನಾ ಯೋಜನೆ, ಬಿಡಾಡಿ ದನಗಳು, ನಾಯಿ ಹಾಗೂ ಹಂದಿಗಳ ನಿಯಂತ್ರಣ, ರಸ್ತೆ,ಬೀದಿದೀಪ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಎಪಿಎಂಸಿ ಯಾರ್ಡ್‌ನಲ್ಲಿ ಜಲಮಂಡಳಿಯಿಂದ ಭೂಮಿ ಹಸ್ತಾಂತರ ಸಂಬಂಧ ಅಧಿಕಾರಿಗಳು ಚರ್ಚಿಸಿದರು.

ಶ್ರದ್ಧಾಂಜಲಿ: ಈಚೆಗೆ ನಿಧನರಾದ ಭಾರತೀಯ ವಿದ್ಯಾಭವನದ ನಿರ್ದೇಶಕ ಮತ್ತೂರು ಕೃಷ್ಣ ಮೂರ್ತಿ, ಉಜ್ಜಯಿನಿಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಕೆ.ಎಚ್. ರಂಗನಾಥ್ ಹಾಗೂ ಅಮರಗೋಳ ಆಶ್ರಯ ಬಡಾವಣೆಯಲ್ಲಿ ಮನೆ ಕುಸಿತದಿಂದ ಮೃತಪಟ್ಟ ಬಾಲಕರಾದ ರಾಜು, ಕೃಷ್ಣ ಹಾಗೂ ಮಂಟೂರ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಕುಸಿದು ಮೃತಪಟ್ಟ ಮಹಿಳೆಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯಲ್ಲಿ  ಉಪಮೇಯರ್ ನಾರಾಯಣ ಜರತಾರಘರ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT