ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಕಟ್ಟಲ್ಲ, ದೇಹ ದಂಡಿಸುವೆ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಆರೋಗ್ಯದ ಸ್ಥಿರತೆಗಾದರೂ ವ್ಯಾಯಾಮ ಮಾಡು, ಪಠ್ಯ ಚಟುವಟಿಕೆಗಳು ವ್ಯಕ್ತಿತ್ವ ರೂಪಿಸಲು ಎಷ್ಟು ಅನುಕೂಲವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಅಗತ್ಯ’ ಶಾಲೆಯ ಪಠ್ಯಪುಸ್ತಕ ಬಿಟ್ಟು ಬೇರೆ ವಿಷಯಗಳತ್ತ ಗಮನಹರಿಸದಿದ್ದ ನಟಿ ಅಖಿಲಾಗೆ ಅವರ ಅಮ್ಮ ಪರಿಮಳ ಬಾಲ್ಯದಲ್ಲಿ ಹೇಳಿಕೊಟ್ಟ ಮೊದಲ ಫಿಟ್‌ನೆಸ್ ಮಂತ್ರ ಇದು.

ಅಮ್ಮ ಅಕ್ಷರ ಕಲಿಕೆಗೆ ಮಾತ್ರ ಮಗಳನ್ನು ಸೀಮಿತಗೊಳಿಸ­ಲಿಲ್ಲ. ಫಿಟ್‌ನೆಸ್‌ ಕಸರತ್ತು ಮತ್ತು ಕೌಶಲ­ಗಳನ್ನೂ ಮನದಲ್ಲಿ ಅಚ್ಚೊತ್ತಿದರು. ಆಟೋಟಗಳ ಬಗೆಗಿನ ಹಸಿವು ಹೆಚ್ಚಿಸಿದರು. ಪಾಠಕ್ಕಿಂತ ಆಟಕ್ಕೆ  ಹೆಚ್ಚು ಅವಕಾಶ ಮಾಡಿಕೊಟ್ಟರು.

ಕಾಲೇಜು ದಿನಗಳಲ್ಲಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಚಿಗರೆ­ಯಂತೆ ಜಿಗಿಯುತ್ತಾ ಗೆಲುವನ್ನು ಸಂಭ್ರಮಿಸುತ್ತಿದ್ದ ಈ ನೀಳ­ಕಾಯೆಯನ್ನು ಸಿನಿಲೋಕಕ್ಕೆ ಕರೆತಂದಿದ್ದು ಅವರ ದೇಹ­ಭಾಷೆ.  ಸಪೂರ ಕಾಯ, ಅದಕ್ಕೊಪ್ಪುವ ಮೊಗದ ಅಂದ, ಚಿತ್ರಬದುಕಿನಲ್ಲಿ ಏರಿಳಿತಗಳಾದರೂ ದೇಹಸಿರಿಯಲ್ಲಿ ಬಾಡದ ಬಿನ್ನಾಣ ಅಖಿಲಾ ಸಿನಿಗ್ರಾಫ್‌ ಏರಲು ಮುಖ್ಯ ಕಾರಣ. 

ಅಖಿಲಾ ದೇಹಸಿರಿಯನ್ನು ಲಯ ತಪ್ಪದಂತೆ ಕಾಯ್ದು­ಕೊಂಡಿದ್ದಾರೆ. ಕಾಲೇಜಿನ ಬಾಸ್ಕೆಟ್‌ ಬಾಲ್‌ ತಂಡದ ನಾಯ­ಕತ್ವ ವಹಿಸಿಕೊಂಡಿದ್ದ ಅವರು, ಚೆಂಡನ್ನು ಎದುರಾಳಿ­ಗಳ ಕೈ ತಪ್ಪಿಸಿ ಪಾಯಿಂಟ್‌ ಹೆಚ್ಚಿಸುತ್ತಲೇ ಕಾಲೇಜು ಆವರಣದಲ್ಲಿ ಇಮೇಜ್‌ ಎತ್ತರಿಸಿಕೊಂಡವರು. ಗ್ಲಾಮರ್ ಮತ್ತು ದೇಹಭಾಷೆ ರೂಪು ಪಡೆಯಲು ಅಮ್ಮ ಹೇಳಿಕೊಟ್ಟಿದ್ದ ಫಿಟ್‌ನೆಸ್‌ ಮಾತುಗಳು ನೆನಪಾಗಿದ್ದು ಆಗಲೇ.

ಎಂಜಿನಿಯರಿಂಗ್‌ ವ್ಯಾಸಂಗದ ವೇಳೆಯಲ್ಲೇ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಒತ್ತಡ ನಿವಾರಣೆಗೆ ಅವರು ಕಂಡುಕೊಂಡ ಹಾದಿಗಳು ಹಲವು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಲು ಒಂದು ಮಂತ್ರ ಸಾಲದು, ವಿಭಿನ್ನ ಕಸರತ್ತುಗಳ ಅಗತ್ಯವಿದೆ ಎನ್ನುವ ಫಿಟ್‌ನೆಸ್‌ ತಂತ್ರಗಳನ್ನು ಅರಿತರು. ಅದರಂತೆ ಸ್ವಿಮಿಂಗ್‌, ಜಾಗಿಂಗ್, ಸ್ಕಿಪ್ಪಿಂಗ್‌... ಹೀಗೆ ಹಲವು ಕಸರತ್ತುಗಳಿಗೆ ದೇಹವನ್ನು ಒಗ್ಗಿಸಿ  ಎಲ್ಲ ಪ್ರಕಾರಗಳಿಗೂ ನಿರ್ದಿಷ್ಟ ಸಮಯ ಮೀಸಲಿಟ್ಟಿದ್ದಾರೆ. 

ಚಿತ್ರೀಕರಣಕ್ಕೆ ಬಿಡುವಿದ್ದಾಗ ದೇಹದಂಡನೆ ತುಸು  ಬಿರುಸು ಪಡೆಯುತ್ತದೆ. ಬೆಳಿಗ್ಗೆ ಮತ್ತು ಸಂಜೆ ಅರ್ಧ ತಾಸಿಗಿಂತ ಹೆಚ್ಚು ಕಾಲ ಗರಡಿ ಮನೆಯಲ್ಲಿ ಮಲ್ಲರು ಸಾಮು ಮಾಡುವಂತೆ ದೇಹ ದಂಡನೆ. ಹಳ್ಳಿಗಳಲ್ಲಿ ಚಿತ್ರೀಕರಣ ಇದ್ದಾಗ ಮೂರು ಕಿಲೊ ಮೀಟರ್ ಓಟ. ಓಟದ ಹುಮ್ಮಸ್ಸನ್ನು ಎಂದೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾ ಸಿನಿ ವೇಗಕ್ಕೆ ಕಾರಣವಾದ ಫಿಟ್‌ನೆಸ್‌ ವೇಗವನ್ನು ಸ್ಮರಿಸುತ್ತಾರೆ. 

ಅಖಿಲಾ ತಮ್ಮ ಆಹಾರದ ಮೆನುವಿನಲ್ಲಿ ಆರಾಧಿಸುವುದು ‘ಅನ್ನ’ ಬ್ರಹ್ಮನನ್ನು. ಅನ್ನ ತಿಂದರೆ ಹೊಟ್ಟೆ ಉಬ್ಬುತ್ತದೆ ಎನ್ನುವ ಮಾತುಗಳನ್ನು ಅವರು ಮರೆಯುತ್ತಾರೆ.  ‘ನನಗೆ ಅನ್ನದ ಮೇಲೆ ಅತಿಯಾದ ಆಸೆ. ಹೆಚ್ಚು ಇಷ್ಟಪಡುವವರನ್ನು ದೂರ ಮಾಡಿಕೊಳ್ಳಲು ಸಾಧ್ಯವೇ? ಹೊಟ್ಟೆ ತುಂಬಾ ತಿನ್ನುವ ಮನಸ್ಸಿರುವಂತೆಯೇ ಕರಗಿಸುವ ಮನಸ್ಸೂ ಇದೆ’ ಎನ್ನುತ್ತಾ ಆಹಾರ ಕ್ರಮಗಳನ್ನು ತೆರೆದಿಡುತ್ತಾರೆ. ಬೆಳಿಗ್ಗೆ ಶ್ರೀಮಂತವಾಗಿ ಆಹಾರ ಸೇವಿಸುವ ಅವರು, ಮಧ್ಯಾಹ್ನ ’ಮಧ್ಯಮ ವರ್ಗ’ದ ಪ್ರಜೆ. ರಾತ್ರಿ ಮಾತ್ರ ಅತ್ಯಂತ ಕಡಿಮೆ ಆಹಾರ ಪ್ರಿಯೆ.

ಎಲ್ಲ ಬಗೆಯ ಖಾದ್ಯಗಳೂ ಅಖಿಲಾ ಮೆನುವಿನಲ್ಲಿವೆ. ಬಾಯಿ ಕಟ್ಟಿ ದೇಹ ಕಾಪಾಡುವುದಕ್ಕಿಂತ, ಇಷ್ಟ ಪಟ್ಟಿದ್ದನ್ನು ತಿಂದು ಆರೋಗ್ಯ ಕಾಯ್ದುಕೊಳ್ಳುವ ಜಾಣ್ಮೆ  ಸಿದ್ಧಿಸಿದೆ.

‘ದೇಹ ದಂಡನೆಯಿಂದ ನಾನು ಸುಸ್ತಾಗುವುದಿಲ್ಲ ಫಿಟ್ಟಾಗುತ್ತೇನೆ. ಅನ್ನಾಹಾರಗಳ ಪಥ್ಯ– ಅಪಥ್ಯದಿಂದ ಸೌಂದರ್ಯ ಇಮ್ಮಡಿಸಬಹುದು, ಆರೋಗ್ಯವನ್ನೂ ಕಾಯ್ದುಕೊಳ್ಳಬಹುದು ನಿಜ. ಆದರೆ ನಾಲಿಗೆ ಕಟ್ಟಲು ಸಾಧ್ಯವಾಗದ ನನ್ನಂತಹವರು ಕಂಡುಕೊಳ್ಳಬೇಕಾದದ್ದು ದೇಹ ದಂಡನೆ’ ಎನ್ನುತ್ತಾ ದೇಹಭಾಷೆ ಮತ್ತು ಅನ್ನ ಭಾಷೆಯ ಸಂಬಂಧ ಬೆಸೆಯುತ್ತಾರೆ. ಸೌಂದರ್ಯದ ಪಸೆ ಕಾಯಲು ಅವರು ನಿತ್ಯ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ನಳಪಾಕದ ಕಲೆ ಬಲ್ಲ ಅವರಿಗೆ ತಾವೇ ತಯಾರಿಸಿದ ಆಹಾರ ಮೆಲ್ಲುವುದೆಂದರೆ ಬಹು ಇಷ್ಟ.
 
ಭರತ ನಾಟ್ಯದಲ್ಲಿ ಜೂನಿಯರ್‌ ಗಳಿಸಿ­ರುವ ಅವರು,  ಮನಸ್ಸಿನ ತಾಕಲಾಟದ ತಹಬಂದಿಗಾಗಿ ನೃತ್ಯ­ವನ್ನು ಅಪ್ಪಿ­ಕೊಂಡಿದ್ದಾರೆ. ಅವರು ಕರಗತ ಮಾಡಿ­ಕೊಂಡಿ­ರುವ ಕಲೆಗಳು ಅವರ ಸಿನಿಮಾ ಸ್ಕೋಪಿಗೂ ಕಾರಣ­ವಂತೆ. ಕಾಲೇಜಿನಲ್ಲಿ ಮೊದಲನೇ ದರ್ಜೆ ವಿದ್ಯಾರ್ಥಿಯಾದ ಅವರು ಚಿತ್ರರಂಗ­ದಲ್ಲಿ ತೊಡಗಿದಾಗಲೂ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಎಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನ್ ಪಡೆದವರು.

ಹೀಗೆ ಚಿತ್ರರಂಗ ಮತ್ತು ಶಿಕ್ಷಣದ ನಡುವಿನ ಸಂಬಂಧ ಗಟ್ಟಿಗೊಳ್ಳಲು ಅಖಿಲಾ ಅವರಿಗೆ ನೆರವಾಗಿದ್ದು ನೃತ್ಯ ಮತ್ತು ಫಿಟ್‌ನೆಸ್‌. ಅವರ ಇಚ್ಛಾಶಕ್ತಿ ಹೆಚ್ಚಾಗಿದ್ದು ಫಿಟ್‌ನೆಸ್‌ ಪ್ರಕಾರಗಳಿಂದ. ನೃತ್ಯದಲ್ಲಿ ಹೆಜ್ಜೆಗಳನ್ನು ತಿರುವಿ, ನಡುವನ್ನು ಬಳ್ಳಿಯಂತೆ ಬಳುಕಿಸಿ,  ತಮ್ಮ ನೀಳ ದೇಹವನ್ನು ಬೆವರಿನಲ್ಲಿ ತೋಯಿಸಿ, ಒತ್ತಡ ನಿವಾರಿಸಿಕೊಂಡು ಹೊಸತನ ಕಂಡುಕೊಳ್ಳುತ್ತಾರೆ ಅವರು.

ಚಿತ್ರ: ಕೆ.ಎನ್‌.ನಾಗೇಶ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT