ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಬೆಳೆಗಾರ; ಮುಚ್ಚಿದ ರಾಗಿ ಕೇಂದ್ರ

Last Updated 7 ಜನವರಿ 2014, 7:15 IST
ಅಕ್ಷರ ಗಾತ್ರ

ಚಿಂತಾಮಣಿ: ಸುಗ್ಗಿಯ ಕಾಲದಲ್ಲಿ ರೈತರು ಬೆಳೆದ ಉತ್ಪನ್ನಗಳು ಬೆಲೆ ಕುಸಿತ ಕಂಡಾಗ, ರೈತರು ಬೀದಿ­ಗಿಳಿದು ಹೋರಾಟವನ್ನು ನಡೆಸಿದ್ದರು. ಹೋರಾ­­ಟಕ್ಕೆ ಮಣಿದ ಸರ್ಕಾರ ಬೆಂಬಲ ಬೆಲೆಯನ್ನು ಘೋಷಿಸಿದ್ದಲ್ಲದೇ ರಾಗಿ ಮತ್ತು ಮೆಕ್ಕೆಜೋಳದ ಖರೀದಿ ಕೇಂದ್ರಗಳನ್ನು ಸಹ ತೆರೆಯಿತು. ಇನ್ನೇನು ರೈತರ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ, ಎಲ್ಲವೂ ತಿರುವು–ಮುರುವು ಆಗಿರುವ ಲಕ್ಷಣ­ಗಳು ಗೋಚರಿಸತೊಡಗಿದೆ. ರೈತರು ಬಾರದೇ ಜಿಲ್ಲೆಯ ಖರೀದಿ ಕೇಂದ್ರಗಳು ಈಗ ಮುಚ್ಚುವ ಆತಂಕ ಎದುರಿಸುತ್ತಿವೆ. ಅವುಗಳಲ್ಲಿ ಚಿಂತಾ­ಮಣಿ ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರವೂ ಒಂದು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾ­ಖೆಯು ಖರೀದಿ ಕೇಂದ್ರವನ್ನು ತೆರೆಯಲು ಮುಂದಾ­­ದಾಗ, ಎಪಿಎಂಸಿಯು ತನ್ನ ಆವರಣ­ದಲ್ಲಿ ಉಚಿತ ಮಳಿಗೆ ನೀಡಿತು. ಅಧಿ­ಕಾರಿಗಳು ನಿತ್ಯವೂ ಖರೀದಿ ಕೇಂದ್ರಕ್ಕೆ ಬರತೊಡಗಿ­ದ­ರಾದರೂ ರಾಗಿ ಮತ್ತು ಮೆಕ್ಕೆಜೋಳ ಬೆಳೆಗಾರರು ಅತ್ತ ಸುಳಿಯಲಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಅಂಗಡಿಯಲ್ಲೇ ಕೂತಿದ್ದರೂ ಯಾರೂ ಸಹ ಸುಳಿಯದ ಕಾರಣ ಅಧಿಕಾರಿಗಳು ಬರುವುದು ಕ್ರಮೇಣ ಕಡಿಮೆಯಾಯಿತು. ಈಗ ಬೇರೆ ವಿಧಿಯಿಲ್ಲದೇ ಖರೀದಿ ಕೇಂದ್ರದ ಬಾಗಿಲು ಮುಚ್ಚಿಕೊಂಡು ಅಧಿಕಾರಿಗಳು ಬರುವುದನ್ನೇ ನಿಲ್ಲಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ರಾಗಿ ಮತ್ತು ಮುಸುಕಿನ ಜೋಳ ಗುರಿ ಮೀರಿ ಬಿತ್ತನೆಯಾಗಿತ್ತು. ರಾಗಿ 12 ಸಾವಿರ ಹೆಕ್ಟೇರ್‌ ಬಿತ್ತನೆಯ ಗುರಿ­ಯನ್ನು ಹೊಂದಿದ್ದು,   14,025 ಹೆಕ್ಟೇರ್‌ ಬಿತ್ತನೆ­ಯಾಗಿತ್ತು. ಮುಸುಕಿನ ಜೋಳ   2,850ಹೆಕ್ಟೇರ್‌ ಬಿತ್ತನೆಯ ಗುರಿಯನ್ನು ಹೊಂದಿದ್ದು 4545  ಹೆಕ್ಟೇರ್‌ ಬಿತ್ತನೆಯಾಗಿದೆ. ಬೆಳೆಯೂ ಉತ್ತಮ­ವಾಗಿ ಬಂದಿದೆ. ಆದರೆ ಬೆಳೆ ಮಾರಾಟಕ್ಕೆ ಮಾತ್ರ ಬೆಳೆಗಾರರು ಖರೀದಿ ಕೆಂದ್ರದತ್ತ ಬರುತ್ತಿಲ್ಲ.

ಖಾಸಗಿ ಮಂಡಿಗಳಲ್ಲಿ, ಮಳಿಗೆಗಳಲ್ಲಿ  ರಾಗಿ, ಜೋಳದ ಖರೀದಿ ವಹಿವಾಟು ನಡೆಯುತ್ತಿದ್ದರೂ ಸರ್ಕಾರಿ ಖರೀದಿ ಕೇಂದ್ರದ ಕಡೆಗೆ ಮಾತ್ರ ಬೆಳೆಗಾರರು ತಲೆ ಹಾಕುತ್ತಿಲ್ಲ. ಅವರು ಖರೀದಿ ಕೇಂದ್ರದತ್ತ ಏಕೆ ಅಸಡ್ಡೆ ತೋರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.  ನವೆಂಬರ್‌ ಕೊನೆ ವಾರದಲ್ಲಿ  ಖರೀದಿ ಕೇಂದ್ರವನ್ನು ತೆರೆದು ಸಾಕಷ್ಟು ಪ್ರಚಾರ ನಡೆಸಿದ್ದರೂ ಇದುವರೆಗೆ  ಒಬ್ಬ ಬೆಳೆಗಾರ ಕೂಡ  ಕೇಂದ್ರದಲ್ಲಿ ಬೆಳೆಯನ್ನು ಮಾರಾಟ ಮಾಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‘ರಾಗಿಗೆ ಕ್ವಿಂಟಲ್‌ಗೆ ರೂ. 1800 ಮತ್ತು ಮುಸುಕಿನ ಜೋಳಕ್ಕೆ ರೂ. 1310 ಬೆಂಬಲ ಬೆಲೆ­ಯನ್ನು ನಿಗದಿಗೊಳಿಸಲಾಗಿದೆ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ರಾಗಿ­ಯನ್ನು ಮಾರಾಟ ಮಾಡಲು ಸಿದ್ದರಿದ್ದೇವೆ. ಆದರೆ ಸರ್ಕಾರ ರೂಪಿಸಿರುವ ಷರತ್ತುಗಳನ್ನು ಪಾಲಿಸುವುದು ತುಂಬಾ ಕಷ್ಟಕರ. ಅಗತ್ಯ ದಾಖಲೆ­ಪಡೆಯಲು ಕಂದಾಯ ಇಲಾಖೆಯ ಅಧಿಕಾರಿಗಳ ಬಳಿ ಅಲೆದಾಡಬೇಕು. ಹಣವನ್ನು ಪಡೆ-­ಯಲು ಬ್ಯಾಂಕ್‌ಗಳಲ್ಲಿ ಖಾತೆಯನ್ನು ತೆರೆಯಬೇಕು. ಹಣವನ್ನು ಸಹ ತಕ್ಷಣ ನೀಡದೆ 15 ದಿನಗಳಿಗೆ ಬ್ಯಾಂಕ್‌ಗಳಿಗೆ ಜಮಾ ಮಾಡುತ್ತಾರೆ. ಎಲ್ಲ ಷರತ್ತುಗಳಿಂದ ಬೇಸತ್ತು ರೈತರು ಖರೀದಿ ಕೇಂದ್ರಗಳಿಗೆ ಬರುತ್ತಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಗೋಪಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡವಾಳಶಾಹಿ ಪದ್ದತಿಯಲ್ಲಿ ಬಡ ರೈತರು ಬಿತ್ತನೆ ಮಾಡುವಾಗಲೇ ಬಂಡವಾಳಶಾಹಿಗಳಿಂದ ಬಿತ್ತನೆ ಬೀಜ, ಗೊಬ್ಬರವನ್ನು ಸಾಲವಾಗಿ ಪಡೆ­ದಿರುತ್ತಾರೆ. ಕೈಸಾಲ ಪಡೆಯುವಾಗ ಉತ್ಪನ್ನವನ್ನು ಅವರಿಗೆ ಬೆಳೆಯನ್ನು ಮಾರುವ ಷರತ್ತನ್ನು ಒಡ್ಡಿರುತ್ತಾರೆ. ಹಾಗಾಗಿ ಬೆಳೆಯನ್ನು ಅವರಿಗೆ ಮಾರುವ ಅನಿವಾರ್ಯತೆ ಎದುರಿಸು­ತ್ತಾರೆ. ಬೆಂಬಲ ಬೆಲೆಯೂ ಕಡಿಮೆ, ಷರತ್ತುಗಳ ಪೂರೈಕೆ ಕಷ್ಟ, ಮಾರಾಟವಾದ ತಕ್ಷಣ ಹಣ ಸಿಗುವುದಿಲ್ಲ, ಖಾಸಗಿ ವ್ಯಕ್ತಿಗಳ ಒತ್ತಡ. ಇಂತಹ ಸಂಕಷ್ಟ­ಗಳನ್ನು ಭೇದಿಸಿಕೊಂಡು ಯಾವ ಬೆಳೆ­ಗಾರರು ಮಾರಾಟಕ್ಕೆ ಬರುತ್ತಾರೆ ಎಂದು ಅವರು ಪ್ರಶ್ನಿಸುತ್ತಾರೆ.

ಬಿತ್ತನೆ ಬೀಜ, ಗೊಬ್ಬರ, ಔಷಧಿಗಳು, ಕೂಲಿ­ಯಾಳು, ಉಳುಮೆ ಮತ್ತಿತರ ಎಲ್ಲ ವೆಚ್ಚಗಳು ಜಾಸ್ತಿ­ಯಾಗಿವೆ. ಒಂದು ಕ್ವಿಂಟಲ್‌ ರಾಗಿ ಬೆಳೆಯಲು ಕನಿಷ್ಠ ರೂ. 2500, ಮೆಕ್ಕೆ ಜೋಳಕ್ಕೆ ರೂ. 1800  ಖರ್ಚು ಬರುತ್ತದೆ. ಸರ್ಕಾರ ನಿಗದಿಪಡಿಸಿರುವುದು ಕೇವಲ 1800 ಮತ್ತು 1310 ರೂಪಾಯಿ ಮಾತ್ರ. ಅದನ್ನು ಪಡೆಯಲು ನೂರೆಂಟು ಷರತ್ತುಗಳು. ಯಾರು ತಾನೆ ಖರೀದಿ ಕೇಂದ್ರಗಳಿಗೆ ಬರುತ್ತಾರೆ. ಕ್ವಿಂಟಲ್‌ ರಾಗಿಗೆ  2500 ರೂಪಾಯಿ ಮತ್ತು ಜೋಳಕ್ಕೆ 1800 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಬರುತ್ತಾರೆ ಎಂದು ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಜೆ.ವಿ.ರಘುನಾಥರೆಡ್ಡಿ ತಿಳಿಸಿದರು.

ಸಾಮಾನ್ಯವಾಗಿ  ಬೆಳೆಗಾರರು ತಮ್ಮ ಸರಕು ಮಾರಾಟವಾದ ತಕ್ಷಣ ಹಣವನ್ನು ಬಯಸು­ತ್ತಾರೆ. ಹಳ್ಳಿಗಳಿಂದ ಸರಕನ್ನು ತಂದು ಮಾರಾಟ ಮಾಡಿ ಸಂಜೆ ಹಣವನ್ನು ತೆಗೆದುಕೊಂಡು ಮನೆ ಸೇರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಜತೆಗೆ ಬಹುತೇಕ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು ಬೆಳೆ ಮಾರಾಟಕ್ಕಾಗಿ ಕಾದಿರುತ್ತಾರೆ. ಹಣಕ್ಕಾಗಿ 15–20 ದಿನಗಳು ಕಾಯುವ ತಾಳ್ಮೆ ಅಥವಾ ಪರಿಸ್ಥಿತಿಯಲ್ಲಿ ಬೆಳೆಗಾರರು ಇರುವುದಿಲ್ಲ. ಈ ಕಾರಣದಿಂದಲೇ ಸ್ವಲ್ಪ ಬೆಲೆ ಕಡಿಮೆಯಾದರೂ ಖಾಸಗಿ ವರ್ತಕರಿಗೆ ಮಾರಾಟ ಮಾಡಿ ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ ಎಂದು ಅವರು ತಿಳಿಸಿದರು.

ಸರ್ಕಾರದ ನೀತಿ ನಿಯಮಗಳಂತೆ ನಡೆದುಕೊಳ್ಳಬೇಕಾಗಿದೆ. ಸರ್ಕಾರ ನಿಗದಿಪಡಿಸಿ­ರುವ ಷರತ್ತುಗಳನ್ನು ಉಲ್ಲಂಘಿಸಿ ರಾಗಿ, ಜೋಳವನ್ನು ಖರೀದಿಸಲು ಸಾಧ್ಯವಿಲ್ಲ. ಷರತ್ತು­ಗಳನ್ನು ಪಾಲಿಸಿದ ನಂತರ ಮಾತ್ರ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಸುಮಾರು 20–30 ಜನ ರೈತರು ಸ್ಯಾಂಪಲ್ಸ್‌ ತೋರಿಸಿ­ಕೊಂಡು ಹೋಗಿದ್ದಾರೆ ಈ ಬಗ್ಗೆ ಪ್ರತಿನಿತ್ಯವೂ ಬೆಳೆ­ಗಾರರಿಗೆ ಅರಿವು ಮೂಡಿಸುತ್ತಿದ್ದೇವೆ. ಆದರೂ ಸಹ ಬೆಳೆಗಾರರು ಇತ್ತ ಸುಳಿಯುತ್ತಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT