ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ, ಭೀಕರ ಬರ, ;ಕುಷ್ಟಗಿ: ಎಳೆಯ ಕಬ್ಬು ಅಕಾಲದಲ್ಲೇ ಕಟಾವು

Last Updated 7 ಜುಲೈ 2012, 5:50 IST
ಅಕ್ಷರ ಗಾತ್ರ

ಕುಷ್ಟಗಿ:  ಕಳೆದ ಎರಡು ತಿಂಗಳಿನಿಂದಲೂ ಮಳೆಯಾಗದಿರುವುದು, ವಿದ್ಯುತ್ ಕಡಿತ ಅಲ್ಲದೇ ಅಂತರ್ಜಲ ಮಟ್ಟ ಕುಸಿದು ತೇವಾಂಶ ಕೊರತೆಯಿಂದ ತಾಲ್ಲೂಕಿನಲ್ಲಿ ಬೆಳೆಯುತ್ತಿರುವ ಕಬ್ಬು ಬಾಡಿ ಒಣಗುವ ಹಂತ ತಲುಪಿದೆ. ಹತಾಶೆಗೀಡಾಗಿರುವ ರೈತರು ಬಂದಷ್ಟು ಹಣ ಬರಲಿ ಎಂದು ಸರ್ಕಾರದ ಗೋಶಾಲೆಗಳಿಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಅನೇಕ ರೈತರು ಬಲಿಯದ ಕಬ್ಬನ್ನೇ ಕಟಾವು ಮಾಡಿ ಗೋಶಾಲೆಗಳಿಗೆ ತಂದು ಸುರಿಯುತ್ತಿದ್ದಾರೆ, ಇನ್ನೊಂದೆಡೆ ತಾಲ್ಲೂಕಿನಲ್ಲಿ ಸದ್ಯ 7 ಗೋಶಾಲೆಗಳಿದ್ದು ಎಲ್ಲೆಡೆ ಮೇವಿನ ಕೊರತೆ ಇರುವುದರಿಂದ ಬಾಡುತ್ತಿರುವ ಕಬ್ಬನ್ನು ರೈತರಿಂದ ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿಸುವ ಸಲುವಾಗಿ ಕಂದಾಯ ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ಕುರಿತು ವಿವರಿಸಿದ ತಹಶೀಲ್ದಾರ ವೀರೇಶ ಬಿರಾದಾರ, ಗೋಶಾಲೆಗೆ ತರುವು ಪ್ರತಿ ಟನ್ ಸೋಗೆ ಸಹಿತ ಕಬ್ಬಿಗೆ ರೂ 2000 ಮತ್ತು ಸಾಗಾಣಿಕೆ ವೆಚ್ಚ ಎಂದು ಪ್ರತಿ ಕ್ವಿಂಟಲ್ ಮತ್ತು ಒಂದು ಕಿಮೀಗೆ ರೂ 1.25 ಪೈಸೆಯಂತೆ ಹಣ ನೀಡಲಾಗುತ್ತದೆ. ಕಬ್ಬು ಮತ್ತು ವೇಬ್ರಿಡ್ಜ್‌ನಲ್ಲಿ ತೂಕ ಮಾಡಿದ ಚೀಟಿ ತರುವ ರೈತರಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದರು.

ಗೋಶಾಲೆಗಳಿಗೆ ಮೇವಿನ ಕೊರತೆ ಇದೆ, ಒಂದು ವೇಳೆ ಕಬ್ಬು ಒಣಗುವುದನ್ನು ತಪ್ಪಿಸಿ ಮಾರಾಟ ಮಾಡಲು ರೈತರು ಮುಂದೆ ಬಂದರೆ ಎಷ್ಟೇ ಪ್ರಮಾಣದಲ್ಲಿದ್ದರೂ ಖರೀದಿಸುತ್ತೇವೆ ಎಂದು ಹೇಳಿದ ಬಿರಾದಾರ, ಮೊದಲು ಟನ್‌ಗೆ ರೂ 1 ಸಾವಿರ ಇದ್ದುದನ್ನು ಈಗ 2 ಸಾವಿರಕ್ಕೆ ಹೆಚ್ಚಿಸಿದ್ದು ನಿಯಮಾನುಸಾರ ಕಬ್ಬು ಖರೀದಿಸಲಾಗುತ್ತದೆ ಎಂದರು.

ಕುಷ್ಟಗಿ ಮತ್ತು ಪಕ್ಕದ ಯಲಬುರ್ಗಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತಲಾ 400 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆ ಇದೆ, ಇದರಲ್ಲಿ ಶೇ 30ರಷ್ಟು ಈ ವರ್ಷ ನಾಟಿ ಮಾಡಲಾಗಿದೆ, ಉಳಿದದ್ದು ಕುಳೆ ಬೆಳೆಯಾಗಿದೆ. ಸಿರಗುಪ್ಪ ಮೂಲದ ಸಕ್ಕರೆ ಕಾರ್ಖಾನೆ ಒಪ್ಪಂದ ಮಾಡಿಕೊಂಡಿರುವುದರಿಂದ ರೈತರು ಈ ವರ್ಷ ನಾಟಿ ಮಾಡಿರುವ ಕಬ್ಬನ್ನು ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕಬ್ಬು ಬೆಳವಣಿಗೆ ಹಂತದಲ್ಲಿರುವಾಗಲೇ ಕಟಾವು ಮಾಡುತ್ತಿರುವುದರಿಂದ ತೂಕ ಹೆಚ್ಚುತ್ತಿಲ್ಲ ಎಂದು ತಿಳಿಸಲಾಗಿದೆ.

ಉತ್ತಮ ಆದಾಯದ ನಿರೀಕ್ಷೆಯೊಂದಿಗೆ ಬಹುತೇಕ ಕಬ್ಬಿನ ಮೊರೆ ಹೋಗಿದ್ದರು. ಆದರೆ ನೆಚ್ಚಿನ ಬೆಳೆ ತಮ್ಮ ಕಣ್ಮುಂದೆಯೇ ಒಣಗುತ್ತಿರುವುದರಿಂದ ಕಂಗಾಲಾಗಿ ಕಣ್ಣೀರು ಸುರಿಸುವಂತಾಗಿದ್ದು, ಹತಾಶೆಗೊಳಗಾಗಿರುವ ಕಬ್ಬು ಬೆಳೆಗಾರರು ಅನಿವಾರ್ಯ ಸ್ಥಿತಿಯಲ್ಲಿ ಬಂದಷ್ಟು ಹಣ ಬರಲಿ ಎಂದು ಗೋಶಾಲೆಗಳಿಗೆ ಮಾರಾಟ ಮಾಡುತ್ತಿರುವುದಾಗಿ ರೈತರು ತಿಳಿಸಿದ್ದಾರೆ.

ಸಾಕಷ್ಟು ಖರ್ಚು ಮಾಡಿ ಕಬ್ಬು ನಾಟಿ ಮಾಡಿದ್ದೇವು, ಮಳೆ ಬರಲಿಲ್ಲ, ಕೊಳವೆಬಾವಿಗಳೂ ಬತ್ತುತ್ತಿವೆ ಹಾಗಾಗಿ ಮಾಡಿದ ಖರ್ಚಾದರೂ ಬರಲಿ ಎಂದು ಎಳೆಯ ಕಬ್ಬನ್ನೇ ಕಡಿದು ಮಾರಾಟ ಮಾಡುತ್ತಿದ್ದೇವೆ ಎಂದು ಶಾಖಾಪುರದ ರೈತ ಚೌಡಪ್ಪ ಪೊಲೀಸಪಾಟೀಲ, ಕೊರಡಕೇರಿಯ ಪುಂಡನಗೌಡ, ಹಿರೇಅರಳಿಹಳ್ಳಿಯ ಶಂಕರಪ್ಪ ಕೊಂಡಗುರಿ ವಿವರಿಸಿದರು. ಎಳೆಯ ಕಬ್ಬು ಮಾರುವಲ್ಲಿನ ರೈತರ ಧಾವಂತ ಬರದ ಭೀಕರತೆಯನ್ನು ಎತ್ತಿತೋರಿಸುತ್ತಿದೆ.

ಖರೀದಿ ದರಕ್ಕೆ ಸರ್ಕಾರದ `ಚೌಕಾಸಿ~ : ರೈತರಿಂದ ಕಬ್ಬು ಖರೀದಿಸುತ್ತಿರುವ ಕಂದಾಯ ಇಲಾಖೆ ಬಲಿತ ಕಬ್ಬಿಗೆ ನಿಗದಿಪಡಿಸಿದ ದರವನ್ನೇ ಎಳೆಯ ಕಬ್ಬಿಗೂ ನೀಡುವುದಾಗಿ ಹೇಳಿ ರೈತರೊಂದಿಗೆ ಚೌಕಾಸಿಗಿಳಿದಿರುದು ಕಂಡುಬಂದಿದೆ.

ಎಲ್ಲೆಂದರಲ್ಲಿ ಗೋಶಾಲೆಗಳನ್ನು ತೆರೆಯಲು ಜಿಲ್ಲಾಡಳಿತ ಮುಂದಾಗಿದ್ದು ಇನ್ನೊಂದೆಡೆ ಗೋಶಾಲೆಗಳಲ್ಲಿ ಮೇವು ಇಲ್ಲದಿರುವುದು ಕಂಡುಬಂದಿದೆ. ಗಂಗಾವತಿ, ಸಿಂಧನೂರು, ಬಳ್ಳಾರಿ ಜಿಲ್ಲೆಯ ಕಂಪ್ಲಿ ಇತರೆಡೆಯಿಂದ ಬತ್ತದ ಹುಲ್ಲು ಖರೀದಿಸುತ್ತಿದ್ದರೂ ಅದೂ ಖಾಲಿಯಾಗುತ್ತಿದ್ದು ಅಧಿಕಾರಿಗಳು ಗೋಶಾಲೆ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಆದರೆ ಭೀಕರ ಬರದಿಂದಾಗಿ ರೈತರು ಎಳೆಯ ಕಬ್ಬನ್ನೇ ಮಾರಾಟ ಮಾಡಿ ಕೈಸುಟ್ಟುಕೊಳ್ಳುತ್ತಿರುವಾಗ ಹೆಚ್ಚಿನ ದರ ನೀಡಿ ರೈತರ ನೆರವಿಗೆ ಬರಬಾರದೆ ಎಂಬ ಪ್ರಶ್ನೆ ರೈತ ಮುಖಂಡರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT