ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಮ್ಮ ಗೌರಮ್ಮ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬುಧವಾರ ಗೌರಿ ಹಬ್ಬ. ಸಿಲಿಕಾನ್ ನಗರಿಯಲ್ಲಿ ಗಣೇಶ ಚತುರ್ಥಿಯಷ್ಟೇ ಅದ್ದೂರಿಯಿಂದ ಗೌರಿ ಪೂಜೆ ಮಾಡುವವರಿದ್ದಾರೆ. ಮನೆಯ ಮಹಿಳೆಯರ ಪಾಲಿಗಂತೂ ಆಕೆ ವರಪ್ರದಾಯಿನಿ. ಈ ಸಲ ರಂಜಾನ್ ನಿಮಿತ್ತ ರಜೆ ಇರುವುದರಿಂದ ಉದ್ಯೋಗಸ್ಥ ಗೃಹಿಣಿಯರಿಗೆ ಸ್ವಲ್ಪ ಅನುಕೂಲ.

ಬೆಲೆ ಏರಿಕೆಯ ಬಿಸಿ ನಡುವೆಯೂ ಗೌರಿ-ಗಣೇಶನನ್ನು ಸ್ವಾಗತಿಸಲು ಬೆಂಗಳೂರಿಗರು ಸಜ್ಜಾಗಿದ್ದಾರೆ. ಮೊದಲು `ಅಮ್ಮ ಗೌರಿ~ ಬಂದರೆ, ಮರುದಿನ ಆಕೆಯ ಮಗ ಗಣೇಶನ ಆಗಮನ.

ಹಬ್ಬದ ಹಿನ್ನೆಲೆಯಲ್ಲಿ ನಗರದ ಎಲ್ಲ ಮಾರುಕಟ್ಟೆಗಳಲ್ಲೂ ಬಿರುಸಿನಿಂದ ಖರೀದಿ ನಡೆಯುತ್ತಿದೆ. ಈಗ ಯಾವುದೇ ಮಾರುಕಟ್ಟೆಯತ್ತ ಕಣ್ಣು ಹಾಯಿಸಿದರೂ ತಾಜಾ ಮಾವಿನ ಎಲೆ, ಬಾಳೆ ಕಂಬಗಳು, ಹೂವು, ಹಣ್ಣು, ತರಕಾರಿ ಹೀಗೆ ಹಬ್ಬಕ್ಕೆ ಬೇಕಾದ ಸಾಮಾನುಗಳ ಭರಾಟೆಯೇ ಕಾಣುತ್ತಿದೆ. ಆದರೆ ಯಾವುದಕ್ಕೂ ಬೆಲೆ ಕಮ್ಮಿಯೇನಿಲ್ಲ. ಹಾಗಂತ ಹಬ್ಬ ಎಂದ ಮೇಲೆ ಶಾಸ್ತ್ರ- ಸಂಪ್ರದಾಯ ಬಿಡಲಾದೀತೇ?

ಬೆಲೆ ಗಗನಕ್ಕೆ
ಈ ಬಾರಿ ಬಾಳೆ ದಿಂಡಿನ ಬೆಲೆ ಗಗನಕ್ಕೇರಿದೆ. ಮಾವಿನಸೊಪ್ಪು, ಗರಿಕೆ, ತುಳಸಿ, ಬಟ್ಟಲು ಅಡಿಕೆ, ನಿಂಬೆಹಣ್ಣು, ತಾಳೆಗರಿ ಮತ್ತು ಕಬ್ಬಿನ ಜಲ್ಲೆಯ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ಹಬ್ಬದ ಖರೀದಿಯ ವೇಳೆ ಚೌಕಾಸಿ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

ನೆರೆಯ ಕೆಲವು ಜಿಲ್ಲೆಗಳ ಗ್ರಾಮೀಣ ಪ್ರದೇಶದಿಂದ ಹಬ್ಬದ ವ್ಯಾಪಾರಕ್ಕೆಂದು ಬಾಳೆ ದಿಂಡು, ಕಬ್ಬಿನ ಜಲ್ಲೆ, ಮಾವಿನ ಸೊಪ್ಪು ಮತ್ತಿತರ ವಸ್ತುಗಳೊಂದಿಗೆ ನಗರಕ್ಕೆ ಆಗಮಿಸಿರುವ ಜನರು, ರಸ್ತೆ ಬದಿಯಲ್ಲೇ ಠಿಕಾಣಿ ಹೂಡಿದ್ದಾರೆ.
 
ಹಬ್ಬ ಮುಗಿಯುವವರೆಗೂ ಇಲ್ಲೇ ಇದ್ದು ವ್ಯಾಪಾರ ಪೂರ್ಣಗೊಳಿಸಿ ವಾಪಸಾಗಲಿದ್ದಾರೆ.

ಹಬ್ಬದ ಪ್ರಯುಕ್ತ ಬಹುತೇಕ ಎಲ್ಲ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ತೊಗರಿಬೇಳೆ, ರವೆ, ಬೆಲ್ಲದ ಬೆಲೆ ದುಪ್ಪಟ್ಟಾಗಿದೆ.

ಹೀಗಿರುತ್ತದೆ ಬೆಳಿಗ್ಗೆ ..

ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ದೇವರ ಮನೆಯನ್ನು ಮಾವಿನ ಎಳೆಗಳಿಂದ, ಬಾಳೆ ದಿಂಡಿನಿಂದ ಸಿಂಗರಿಸುತ್ತಾರೆ. ಶ್ರೀ ಚಕ್ರವನ್ನು ರಂಗೋಲಿಯಿಂದ ಬಿಡಿಸುತ್ತಾರೆ, ಕಲಶ ಸ್ಥಾಪಿಸುತ್ತಾರೆ. ಅದರಲ್ಲಿ ನಾಣ್ಯ, ಕಲ್ಲು ಸಕ್ಕರೆ, ದ್ರಾಕ್ಷಿ, ಗೋಡಂಬಿಯನ್ನು ನೀರಿನಲ್ಲಿ ಹಾಕಿ ವೀಳ್ಯದ ಎಲೆಯಿಂದ ಸಿಂಗರಿಸುತ್ತಾರೆ. ಈಗೀಗ ಗೌರಿ ಮುಖವನ್ನು ಕಲಶದ ಮೇಲೆ ಪ್ರತಿಷ್ಠಾಪಿಸುವ ವಾಡಿಕೆಯಿದೆ.
 
ಈ ಪದ್ಧತಿ ಇಲ್ಲದಿರುವವರ ಮನೆಯಲ್ಲಿ ಅರಿಶಿನದಲ್ಲಿ ಗೌರಿ ಮಾಡಿ ಪೂಜೆ ಮಾಡುತ್ತಾರೆ. ಹೆಣ್ಣು ಮಕ್ಕಳು ಹಸಿರು ಮತ್ತು ಕೆಂಪು ಗಾಜಿನ ಬಳೆಯನ್ನು ಧರಿಸುತ್ತಾರೆ. ಹಸಿರು ಸಮೃದ್ಧಿಯ, ಭೂತಾಯಿಯ ಸಂಕೇತ ಎನ್ನುವುದು ಇದರ ಹಿಂದಿರುವ ಕಾರಣ.

 ಇದರೊಂದಿಗೆ ಬಹುತೇಕ ಎಲ್ಲ ದೇವಾಲಯಗಳಲ್ಲೂ ಸಾಮೂಹಿಕ ಗೌರಿ ಪೂಜೆ ಇರುತ್ತದೆ. ಪೂಜೆಯ ನಂತರ ದೇವಸ್ಥಾನದಲ್ಲಿ ಅರಿಶಿನ ಕುಂಕುಮ ಬಳೆಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.

ಬಾಗಿನ ಪದ್ಧತಿ..
ಬೆಳಿಗ್ಗೆ ಪೂಜೆ ಮಾಡಿದ ಮೇಲೆ ಸಂಜೆ ಸಮಯದಲ್ಲಿ ಮೊರದಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ಮೂರು, ಐದು ಹೀಗೆ ಬೆಸ ಸಂಖ್ಯೆಯಲ್ಲಿ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಬಾಗಿನ ಕೊಡುತ್ತಾರೆ.

ಅದರಲ್ಲಿ ಸೀರೆ, ಬಳೆ, ಸುಗಂಧ ದ್ರವ್ಯಗಳು, ಐದು ತರಹ ಧಾನ್ಯಗಳನ್ನು ಇಡಲಾಗುತ್ತದೆ.ಕೆಲವು ಕಡೆ ಐದು ವರ್ಷ ಅಥವಾ ಅದಕ್ಕಿಂತ ಚಿಕ್ಕ ಹೆಣ್ಣು ಮಕ್ಕಳ ಕಾಲು ತೊಳೆದು ಅವರಿಗೆ ಸಿಹಿ ಊಟ  ಹಾಕಿ ಆರತಿ ಎತ್ತಿ ಬಾಗಿನ ಕೊಡುತ್ತಾರೆ. ಇದು ಕನ್ಯೆ ರೂಪದಲ್ಲಿ ದೇವಿಯನ್ನು ಆರಾಧಿಸುವ ವಿಧಾನ.

ತವರು ಮನೆಯವರು ಮಗಳಿಗೆ ಗೌರಿ ಹಬ್ಬಕ್ಕೆಂದು ಸೀರೆ ಮತ್ತು ಬಳೆಗೆ ದುಡ್ಡು ಕೊಡುವುದು ಹಳೆ ಮೈಸೂರು ಭಾಗದ ವಿಶೇಷ. ಎಷ್ಟೋ ಕುಟುಂಬಗಳಲ್ಲಿ ಗೌರಿ ಹಬ್ಬದ ಉಡುಗೊರೆಗಾಗಿಯೇ ಸ್ಥಿರಾಸ್ತಿಗಳನ್ನು ಹೆಣ್ಣು ಮಕ್ಕಳಿಗೆ ಕೊಟ್ಟ ನಿದರ್ಶನಗಳೂ ಇವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT