ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕೃಷ್ಣೇಗೌಡ ವಿರುದ್ಧ ತನಿಖೆಗೆ ಗಡುವು

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಡಿ. ಬಾಲಕೃಷ್ಣೇಗೌಡ ಅವರ ವಿರುದ್ಧ ತನಿಖೆ ನಡೆಸಿ ಫೆಬ್ರುವರಿ 17ರ ಒಳಗೆ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಇವರ ವಿರುದ್ಧದ ತನಿಖೆಗೆ ಕಳೆದ ವಾರ ಹೈಕೋರ್ಟ್ ಹಸಿರು ನಿಶಾನೆ ತೋರಿತ್ತು. ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಕೋರ್ಟ್ ತೆರವುಗೊಳಿಸಿತ್ತು. ಈ ಆದೇಶ ಕುರಿತು ಲೋಕಾಯುಕ್ತ ಪರ ವಕೀಲರು ಲೋಕಾಯುಕ್ತ ಕೋರ್ಟ್ ಗಮನಕ್ಕೆ ತಂದರು. ಆದುದರಿಂದ ತನಿಖೆಯನ್ನು ಮುಂದುವರಿಸುವಂತೆ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಸೂಚಿಸಿದರು.

ತನಿಖೆ ಪೂರ್ಣಗೊಳಿಸಲು ತಮಗೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂದು ಲೋಕಾಯುಕ್ತ ವಕೀಲರು ಕೋರಿಕೊಂಡರು. ಆದರೆ ಹೆಚ್ಚಿನ ಸಮಯ ನೀಡುವುದು ಸಾಧ್ಯವಿಲ್ಲ ಎಂದ ನ್ಯಾಯಾಧೀಶರು ತಿಂಗಳ ಗಡುವು ನೀಡಿದರು.

ಬಾಲಕೃಷ್ಣೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರ. ಕೆಎಎಸ್ ಅಧಿಕಾರಿಯಾಗಿದ್ದ ಅವರು, ಸ್ವಯಂ ನಿವೃತ್ತಿ ಪಡೆದ ನಂತರ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವುದು ಆರೋಪ.  ಇವರ ವಿರುದ್ಧ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಲ್ಲಿನ ನಿವೃತ್ತ ಮೆಕ್ಯಾನಿಕಲ್ ಎಂಜಿನಿಯರ್ ಎಸ್.ಎನ್.ಬಾಲಕೃಷ್ಣ  ಸಲ್ಲಿಸಿರುವ ದೂರಿನ ವಿವಾದ ಇದಾಗಿದೆ. 

ಇಂದು ತೀರ್ಪು ಸಾಧ್ಯ

ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ.ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಮಂಗಳವಾರ (ಜ.17) ನೀಡುವ ಸಾಧ್ಯತೆ ಇದೆ.

`ನಾಗದೇವನಹಳ್ಳಿ ಬಳಿಯ ಸರ್ವೆ ನಂ.47 ಮತ್ತು 48ರಲ್ಲಿರುವ 3.40 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ ರವಿಕೃಷ್ಣ ರೆಡ್ಡಿ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲು ಮಾಡಿರುವ ದೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಈ ದೂರಿನ ಹಿನ್ನೆಲೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಸೋಮವಾರವೇ ತೀರ್ಪು ನೀಡಬೇಕಿತ್ತು. ಆದರೆ ಅರ್ಜಿಯ ವಾದ, ಪ್ರತಿವಾದ ಮುಂದುವರಿದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ವಿಚಾರಣೆ ಮುಂದೂಡಿದರು.

ಪಿಐಎಲ್
ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್‌ಗೆ   ವಿಭಾಗೀಯ ಪೀಠ ನೋಟಿಸ್ ನೀಡಿದೆ.

ಸಂಚಾರಿ ಪೀಠಗಳನ್ನು ಮಾಡಿದಾಗ ಮೂರರಲ್ಲಿ ಒಂದನೇ ಭಾಗ ಪ್ರಕರಣಗಳನ್ನು ವರ್ಗಾಯಿಸಬೇಕು. ಆದರೆ ಧಾರವಾಡದ ಪೀಠಕ್ಕೆ ಕೇವಲ 21 ಸಾವಿರ, ಗುಲ್ಬರ್ಗ ಪೀಠಕ್ಕೆ 11 ಸಾವಿರ ಪ್ರಕರಣ ವಹಿಸಲಾಗಿದೆ. ಅಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು ಸಂಚಾರಿ ಪೀಠಗಳ ಅಗತ್ಯ ಇರಲಿಲ್ಲ ಎನ್ನುವುದು ಅರ್ಜಿದಾರರ ವಾದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT