ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲವಿಕಾಸದಲ್ಲಿ ಚಿಣ್ಣರ ಮನಗೆದ್ದ ಗ್ರಾಮೀಣ ಕ್ರೀಡೆಗಳು

Last Updated 24 ಜನವರಿ 2014, 19:30 IST
ಅಕ್ಷರ ಗಾತ್ರ

ಧಾರವಾಡ:  ಲಗೋರಿ, ಚಿಣ್ಣಿ–ದಾಂಡು, ಕುಂಟೆ ಬಿಲ್ಲೆ, ಕಿರ್ ಕಿರ್‌ ಆಟ, ಉಪ್ಪು ಉಪ್ಪು ಕಡ್ಡಿ, ಕುಂಬಳಕಾಯಿ ಆಟ, ಒಂಟಿ ಕಾಲಿನ ಓಟ, ಕಣ್ಣು ಕಟ್ಟಿ ಗಡಿಗೆ ಒಡೆಯು­ವುದು, ಮರಕೋತಿಯಾಟ, ಚೌಕಾ­ಬಾರಾ ಸೇರಿದಂತೆ ಹತ್ತಾರು ಬಗೆಯ ಆಟಗಳನ್ನು ಮಕ್ಕಳು ಶುಕ್ರವಾರ ಇಲ್ಲಿಯ ಶಿಕ್ಷಕಿಯರ ತರಬೇತಿ ಸಂಸ್ಥೆಯ ಆವರಣದಲ್ಲಿ ಆಡಿದರು.

ಕರ್ನಾಟಕ ಬಾಲವಿಕಾಸ ಅಕಾ­ಡೆಮಿ ಆರಂಭವಾಗಿ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿ­ಕೊಂಡಿದ್ದ ಕ್ರೀಡೋತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಹಲವು ಬಗೆಯ ಜನಪದ ಕ್ರೀಡೆ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು.

‘ಜನಪದ ಹಾಗೂ ಗ್ರಾಮೀಣ ಕ್ರೀಡೆಗಳು ಮಕ್ಕಳ ದೈಹಿಕ ಸದೃಢತೆ ಹೆಚ್ಚಿಸುವ ಜೊತೆಗೆ ಮಾನಸಿಕ ವಿಕಸನದ ಕೌಶಲಗಳನ್ನು ಹೊಂದಿವೆ. ಬಾಲ್ಯಜೀವನ ಮರಳಿ ಬಾರದು. ಹೀಗಾಗಿ ಈ ಅವಧಿಯನ್ನು ಸಂಪೂರ್ಣ­ವಾಗಿ ಸದುಪಯೋಗ ಮಾಡಿಕೊಳ್ಳಿ’ ಎಂದು ಅಕಾಡೆಮಿ ಹೊರತಂದ ‘ಮಕ್ಕಳ ಜನಪದ ಆಟಗಳು’ ಕೃತಿ ಬಿಡುಗಡೆ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕೆ.ಆರ್.ಸುಂದರ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

‘ಜಾಗತೀಕರಣದಿಂದಾಗಿ ಜನಪದ ಮತ್ತು ದೇಸಿ ಸಂಸ್ಕೃತಿ ಕಣ್ಮರೆ­ಯಾಗುತ್ತಿವೆ. ಇಂಥ ಸಂಕ್ರಮಣ ಕಾಲದಲ್ಲಿ ಮಕ್ಕಳಿಗೆ ದೇಸಿ ಸಂಸ್ಕೃತಿಯ ಅರಿವು ಮೂಡಿಸಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ’ ಎಂದು ಅಕಾಡೆಮಿಯ ದಿನದರ್ಶಿಕೆ ಬಿಡು­ಗಡೆಗೊಳಿಸಿದ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.

‘ಜನಮಾನಸದಿಂದ ದೂರ­ವಾಗುತ್ತಿದ್ದ ಜನಪದ ಆಟಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಅಕಾಡೆಮಿಯು ಯೋಗ್ಯ ಕೆಲಸ ಮಾಡಿದೆ’ ಎಂದು ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು.

ಅಕಾಡೆಮಿಯ ಯೋಜನಾಧಿಕಾರಿ ಮಾಲತಿ ಪೋಳ ಮತ್ತು ಜಗದೀಶ ಮಳಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT