ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳನದಿಯ ಹರಿವಿನಲ್ಲಿ ಕಾವ್ಯದ ಹರಿಗೋಲು

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೊತ್ತೊತ್ತಿಗೂ ಒತ್ತುವ, ಮುಖ ಕೆತ್ತುವ ದಿನಗಳ ನಡುವೆಯೇ ಇಲ್ಲಿ ಕವಿತೆಯ ರಚನೆ ನಡೆದಿದೆ. ಕನ್ನಡ ಕವಿತೆಯ ಓದಿನ ನೆರವಿನಿಂದಲೇ ಹೇಳುವುದಾದರೆ, ಕವಿತೆ ಅಖಂಡತೆಯ ರೂಪವೇ ತಾನಾಗಿದೆ.
 
ಹೃದ್ಗತವಾದ, ಸುವಿಶಾಲ ಆಗಿರುವಂತಹ ಮೈಯನ್ನು ಕನ್ನಡದ ಕವಿತೆ ಪಡೆದುಕೊಂಡಿರುವ ಕಾರಣದಿಂದಾಗಿಯೇ ಇಲ್ಲಿಯವರೆಗೂ ನಡೆದುಬಂದಿದೆ. ಕವಿತೆ ಏಕಕಾಲದಲ್ಲಿ ಒಂದು ಪ್ರಕ್ರಿಯೆಯೂ, ಆತ್ಮಶೋಧವೂ ಆಗಿರುವುದರಿಂದ ಪ್ರತಿ ಕವಿಯೂ ತನ್ನ ಕವಿತೆಯಲ್ಲಿ ಅಖಂಡತೆಯ ಬಿಂಬವನ್ನು ಪ್ರತಿಫಲಿಸಲು ಇರುವಷ್ಟು ಕಾಲ ಒದ್ದಾಡುತ್ತಾನೆ.
 
ಹೀಗಿದ್ದಾಗಲೂ ಸರ್ವರಿಗೂ ಕವಿತೆ ಸಂಬಂಧಪಟ್ಟಿದೆ ಎಂಬ ನಂಬಿಕೆ ಈಗೀಗ ಮುಕ್ಕಾಗುತ್ತಿದೆ. ಕವಿತೆಯ ಅಖಂಡತೆಯೊಳಗೆ ತಮ್ಮದೊಂದು ಖಂಡವನ್ನು ಹುಟ್ಟಿಸಿಕೊಳ್ಳುವ ಉಮೇದನ್ನು ಇಂದಿನ ಅನೇಕ ಕವಿಗಳು ಪ್ರಕಟಿಸುತ್ತಿದ್ದಾರೆ.

ದೇಸಿ, ನಗರ, ಅನುಭಾವ, ಅಲ್ಪಸಂಖ್ಯಾತ, ದಲಿತ, ಮುಸ್ಲಿಂ, ಸ್ತ್ರೀ, ಮಧ್ಯಮವರ್ಗ ಹೀಗೆ ಖಂಡಗಳು ಕವಿಗಳಿಂದ, ಕವಿಗಳಿಗಾಗಿ ತಲೆಯೆತ್ತುತ್ತಿವೆ. (ಕನ್ನಡ ಕವಿತೆ ಬರೆಯುವಂತಾಗಬೇಕು ಎನ್ನುತ್ತಾರೆ ಕೆ.ವಿ. ನಾರಾಯಣ. ಈ ಚಿಂತನೆಯ ಪೂರ್ವದಲ್ಲಿಯೇ, ಸಾಹಿತ್ಯದಲ್ಲಿಯೂ ಮೀಸಲು ಕೇಳಬೇಡಿ ಎನ್ನುತ್ತಾರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ).
 
ಪಾಲು ಮಾಡಿಕೊಳ್ಳಲೆಂದೇ ಕವಿತೆ ಬರೆಯುತ್ತಿರುವ ಹಲವರ ಮಧ್ಯೆ ಕವಿ ಆನಂದ ಝುಂಜರವಾಡ ಭಿನ್ನವಾಗಿ ನಿಲ್ಲುತ್ತಾರೆ. ಅವರು ಕನ್ನಡದ ಕವಿತೆ ಬರೆಯುವ ಪ್ರಾಮಾಣಿಕ ಪ್ರಯತ್ನದಲ್ಲಿ ಕೆಳೆದ ನಾಲ್ಕೂವರೆ ದಶಕಗಳಿಂದಲೂ ತೊಡಗಿಕೊಂಡಿದ್ದಾರೆ. ಮುಖ್ಯವಾಗಿ ಕವಿತೆಯೆಂಬ ಹರಿಗೋಲನ್ನು ಹಿಡಿದು ಬಾಳನದಿಯನ್ನು ದಾಟುವ ಹಂಬಲವನ್ನು ತೋರುತ್ತಿದ್ದಾರೆ.

ಆನಂದ ಝುಂಜರವಾಡರ `ಪದಗಳ ಪರಿಧಿಯಲ್ಲಿ~, `ಖನನೋದ್ಯಮ~, `ಎಲ್ಲಿದ್ದಾನೆ ಮನುಷ್ಯ~, `ಶಬ್ದ ಪ್ರಸಂಗ~, `ದಿಂಡೀ ಮತ್ತು ದಾಂಡೀ~, `ಗಂಡ ಭೇರುಂಡ~ ಕವನ ಸಂಕಲನಗಳು ಈಗ `ಪ್ರೇತಕಾಂಡ~ ಹೆಸರಿನಲ್ಲಿ ಒಟ್ಟಾಗಿ ಹೊರಬರುತ್ತಿದೆ. ಕವಿ ಸಹಜವಾಗಿಯೇ ತಮ್ಮ ಸಂವೇದನೆಯ ಭಾಗವಾಗಿರುವ ಗರುಡಪುರಾಣದ ಪ್ರೇರಣೆಯಿಂದ ಈ ಸಂಕಲನಕ್ಕೆ `ಪ್ರೇತಕಾಂಡ~ ಎಂದು ಹೆಸರಿಟ್ಟಿದ್ದಾರೆ.

ಲೋಕದ ಕಟ್ಟಳೆಯಲ್ಲಿ ಜೀವಿಸುವುದೆಂದರೆ, ಯಾತನಾಶಿಬಿರದಲ್ಲಿ ಭಾಗವಹಿಸುವುದಾಗಿದೆ ಎಂಬ ತಿಳಿವು ಪ್ರೇತಕಾಂಡದಲ್ಲಿದೆ. ಈ ಮೂಲಕ ಕವಿ ಹಾಕಿಕೊಟ್ಟಿರುವ ಚೌಕಟ್ಟನ್ನು ಮೀರಿ ಇಲ್ಲಿನ ಕವಿತೆಗಳು ವರ್ತಿಸುತ್ತವೆ.

ಅಜ್ಜ ತನ್ನ ಮನೆ ಮಕ್ಕಳು, ಮೊಮ್ಮಕ್ಕಳೊಡನೆ ನಡೆಸುತ್ತಿರುವ ಆಪ್ತಸಲ್ಲಾಪ ಎನಿಸುವ ಈ ಕವಿತೆಗಳು, ಎಳೆಯ ಜೀವಗಳು ಪಕ್ಕಾಗಿ ಬಲಿತುಕೊಳ್ಳಲಿ ಎಂಬ ಇರಾದೆಯಲ್ಲಿ ಮಾತಿಗಿಳಿಯುತ್ತವೆ. ಹಾಗೆ ನೋಡಿದರೆ, ನಮ್ಮ ಕವಿಗಳು ಹೊಸಗನ್ನಡದಲ್ಲಿ ಎರಡು ಪ್ರಧಾನ ಧಾರೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಒಂದನ್ನು ಭಾವಪೂರ್ಣಧಾರೆ ಎಂದೂ, ಇನ್ನೊಂದನ್ನು ಚಿತ್ರಪಟಧಾರೆ ಎಂದೂ ಕರೆಯಬಹುದಾಗಿದೆ.

ಭಾವಪೂರ್ಣವು ಆದಷ್ಟೂ ಆಗುವ ನಡೆಯೊಂದಿಗೆ ಬದುಕಿನ ತಣಿಗೆಯನ್ನು ತುಂಬಿಕೊಳ್ಳುವ ಅಪೇಕ್ಷೆಯನ್ನು ಹೊಂದಿದೆ. ಈ ಧಾರೆ ಅನುಭವಕ್ಕಿಂತಲೂ ಮನುಷ್ಯ ಸಣ್ಣವನೆಂದು ಒಪ್ಪಿಕೊಳ್ಳುತ್ತದೆ. ಹಾಗಾಗಿ ಇಲ್ಲಿ ಜೀವಕೇಂದ್ರವೊಂದು ನಿರ್ಮಾಣವಾಗುತ್ತದೆ. ಚಿತ್ರಪಟವು ತನಗೆ ಬೇಕಾದ ಹಳ್ಳದಲ್ಲಿ ಭಾವವನ್ನು ತುಂಬುತ್ತದೆ. ಆಳವಾದ ವಿಚಾರ ಪರಂಪರೆಯ (Ideology) ಸಹವರ್ತಿಯಾಗಿರುತ್ತದೆ.

ಈ ಧಾರೆ ವ್ಯಕ್ತಿ, ಪುರಾಣ, ಚರಿತ್ರೆ ಮತ್ತು ರೂಢಿಯ ಕಡೆಗೆ ಹೋಗಿ ಬರುತ್ತಿರುತ್ತದೆ. ಆದರಿಂದ ಇಲ್ಲಿ ಶಕ್ತಿಕೇಂದ್ರವೊಂದು ನಿರ್ಮಾಣವಾಗುತ್ತದೆ. ಜೀವಕೇಂದ್ರ ಮತ್ತು ಶಕ್ತಿಕೇಂದ್ರವು ಒಬ್ಬ ಕವಿಯಲ್ಲಿಯೇ ಅಂತಸ್ಥವಾಗಿರುವ ಸಾಧ್ಯತೆ ಹೆಚ್ಚಿದೆ. ಇವು ಬೇರೆಯಾಗಿ ಬಿಡಿ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಇದೆ.
 
ಅನೇಕ ವೇಳೆ ಶಕ್ತಿಕೇಂದ್ರವು ಒಟ್ಟುಮಾಡುವ ಜವುಳು ಚಹರೆಗಳನ್ನು ಜೀವಕೇಂದ್ರದಿಂದ ಹೊರಡುವ ಚಿಲುಮೆ ಒರೆಸಿದೆ. ಅಪರೂಪಕ್ಕೆ ಈ ಕೇಂದ್ರಗಳು ಪರಸ್ಪರ ಕೈಹಿಡಿದು ಸಮಹೆಜ್ಜೆ ಹಾಕಿರುವುದೂ ಉಂಟು. ಬೇಂದ್ರೆ, ಕುವೆಂಪು, ಪು.ತಿ.ನರಸಿಂಹಾಚಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಗೋಪಾಲಕೃಷ್ಣ ಅಡಿಗ ಅವರು ಈ ಎರಡು ಕೇಂದ್ರಗಳನ್ನು ಸೂರೆಹೊಡೆದಿದ್ದಾರೆ. ಆ ಹಾದಿಯೊಂದಿಗೆ ಸಹ ಪ್ರಯಾಣ ಬೆಳೆಸುತ್ತಿರುವ ಆನಂದ ಝುಂಜರವಾಡರ ಕವಿತೆಗಳು ಅನೇಕ ಏರಿಳಿತವನ್ನು ಆರಂಭದಿಂದಲೂ ಅನುಭವಿಸಿವೆ. ಅವರ ಮುಖ್ಯ ಆಸ್ಥೆ ಜೀವಕೇಂದ್ರವೇ ಆಗಿದೆ.

ಒಳಹೊಕ್ಕು ಅಗುಳಿ ಹಾಕಿಕೊಳ್ಳುವ ಅಗುಳಿಗೂ
ಕುದಿಯುಕ್ಕಿ ಅಕ್ಕಿ ಅನ್ನವಾಗುವ ಕುದಿತ
ಹಲವು ಹಸೀ ಕಾಳುಗಳ ಮೊಳಕೆಯೊಡಿಸಿ ಕುದ್ದ
ಸಾಂಬಾರಿನಲ್ಲೂ ನಂಬಿ ಕಲಿಸಿಕೊಂಡಷ್ಟೇ
ತುತ್ತಾಗುವ ಸತ್ವ
ತಥಾಗತನ ಬೆತ್ತಲೆ ಬೊಗಸೆಗೂ ಒದಗಿದಷ್ಟೇ ಸತ್ಯ
ಗುಂಡಿಗೆದೆಗೊಟ್ಟ ಜನಗಣಮನದ ಸ್ವತಂತ್ರ ಸಾತತ್ಯ
 
ಉರುಳುವ ದಿನಗಳನ್ನು ಎದುರಿಸಿ ನಿಲ್ಲಬೇಕಾದರೆ ಗಾಂಧಿಯಂತಹ ಎಂಟೆದೆ ಬೇಕು. ಕುಕ್ಕೆಯೊಳಗಿನ ಕೋಳಿಯಂತೆ ಮಿಸುಕಾಡುವ ಜೀವ. ಆದರೂ ಈ ಬದುಕಿಗೆ ನಂಬಿಕೆಯೂ ಬೇಕು. ಅದರ ಬೆಳಕಲ್ಲಿ ಕಂಡಷ್ಟನ್ನು ಮಾತ್ರ ಕಾಣಿಸಬೇಕು. ನಮ್ಮನ್ನು ನಾವಷ್ಟೇ ನಂಬಿಕೊಂಡು ಇರಲು ಸಾಧ್ಯವಿಲ್ಲವಾದ್ದರಿಂದ, ಇನ್ನೊಂದು ಜೀವಿಯ ಸಾಮೀಪ್ಯವೂ ನಮಗೆ ಬೇಕಾಗಿರುವುದರಿಂದ ಇಲ್ಲಿ ಮಾತು ಸೇತುವೆಯಾಗಿದೆ. ಅಂತಹ ಮಾತು ಇರಬೇಕು ಹೇಗೆ?
  
ಮಾತು ಸಾಕು ಎನಿಸುವಂಥ
ಮಾತಿಗೂ ಮಾತ ಬಳಸಬೇಕು
ಮಾತಿನಿಂದಲೇ ಮಾತ ನಿಂದಿಸುತ
ಮಾತಿನ ಮಾತೃತ್ವ ಹೊಳೆಸಬೇಕು

ಯಾರೂ ಇಲ್ಲಿ ಇನ್ನೊಬ್ಬರ ಮಾತನ್ನು ಕಿವಿಗೆ ಹಾಕಿಕೊಳ್ಳುವಂತಿಲ್ಲ. ಅಂತಹ ವ್ಯವಧಾನವೂ ಇದ್ದಂತಿಲ್ಲ. ಏನೋ ದುಗುಡ ರಕ್ತಗತವಾದಂತಿದೆ. ಕವಿ ಕೇಳಿಕೊಳ್ಳುತ್ತಾರೆ: 

ಮನುಷ್ಯನ ಮುಖ ಬಿಡಿಸಲು
ಎಷ್ಟು ವಕ್ರರೇಖೆಗಳು ಬೇಕು?

ಲೆಕ್ಕ ಹಾಕಬೇಕು ಅನಿಸುತ್ತದೆ. ಎಲ್ಲರೂ ಎಲ್ಲಿಗೋ ಹೊರಟು ನಿಂತಂತಿದೆ. ಹಾಗೆ ಹೊರಟಿರುವವರ ಮಧ್ಯೆ ಸಾಮಾನ್ಯವಾದ ಕವಿಯೂ ಇರಬೇಕಾಗಿದೆ. ಕವಿಗೆ ಸಮಾಜವೆಂಬುದು ಹೊರಗಿಲ್ಲ, ಒಳಗಿದೆ; ಬದುಕಿನಲ್ಲಿ ಬೆರೆತುಹೋಗಿದೆ. ಕಣ್ಣಮುಂದಿನ ವಿದ್ಯಮಾನವನ್ನು ನೋಡಿ ಕೇಳಬೇಕೆನಿಸುತ್ತದೆ:  
  
ಗೆಳೆಯರೆ ಬಾಳಿನ ದುಃಖವನ್ನು
ಸಮಾಜದ ಸಮಸ್ಯೆಯಾಗಿ
ಏಕೆ ಅನುವಾದಿಸುತ್ತಿದ್ದೀರಿ?

ಹೀಗೆ ಕೇಳಿದ ಕವಿಗೆ ಸಿಟ್ಟಿಲ್ಲ. ಭೇದವೂ ಇಲ್ಲ. ಬದಲಿಗೆ ಒಂದು ಖಾತ್ರಿ ಇದೆ:

ನನ್ನ ನಿನ್ನ ಒಳ-ಒಲೆ ಕುದಿತವೇ ಪಾಕ
ಪ್ರಪಂಚದ ಬಾಳೆಲೆಯ ತುಂಬ ಗಡಿಯ ಹರಹು
ಬಡಿಸುವದೆಂದರೂ ಉಣ್ಣುವುದೇ ಮಣ್ಣಿನ
ಅನ್ನ, ಕಂಬನಿಗಡಲಿನ ಅವರವರ ಋಣದ ಉಪ್ಪು
ಉಣ್ಣುವುದೆಂದರೂ ಬಡಿಸುವುದೇ ಯಾರದೋ ಬೆವರು.
ಜೀವಂತವಿರುವುದನ್ನು ಬೆವರು ಊರ್ಜಿತಗೊಳಿಸಿದೆ. ಆ ಬೆವರು ಒಡೆದಾಗೆಲ್ಲಾ ತನಗೆ ತಾನೆ ಹಾದಿ ತೆರೆದುಕೊಂಡಿದೆ:
 
ಎದುರು ಬರುವೆ, ಬದಿಗೆ ಸರಿವೆ
ತುಂಬಿ ಎಸರು ಪಾತ್ರೆಗೆ
ದುಡಿತ ಕೊಟ್ಟ ಬದುಕ ಪಡೆದು
ಹೆಜ್ಜೆ ಜೀವ - ಜಾತ್ರೆಗೆ

ಈ ಜಾತ್ರೆಯ ಬೆನ್ನಿಗೆ ಸಂಸಾರವೂ ಇದೆ. ಕೈ ಹಿಡಿದ ಸಂಗಾತಿ ಜೊತೆಗಿದ್ದರೂ ಪ್ರಶ್ನೆಗಳು ಮುಳ್ಳಾಗಿ ಚುಚ್ಚುತ್ತವೆ:

ಮೈ ಮುಟ್ಟಿ ತಿಳಿದೆವು
ಮನ ಮುಟ್ಟಿದೆವು ಎಂದು
ಆ ಮುತ್ತು, ಆ ಉಲುಹು
ಆ ಉಸಿರು, ಆ ಬಸಿರು
ತಿರುಗಣಿಯ ತಿರುಗ ತೊಟ್ಟಿಲ ಜೀಕವೆಂದು

ಹೀಗೆ ಪಡೆದುಕೊಂಡ ಮೇಲೂ ಕಳೆದುಕೊಂಡದ್ದು ಏನೂ ಇಲ್ಲ. ಯಾಕೆಂದರೆ-

ಕಿರೀಟವಾದ ಗರಿಗೆ
ನವಿಲಾಗಿ ಕುಣಿವ ಭಾಗ್ಯವಿಲ್ಲ
ಕೊಳಲು
ಉಳಿದೆಲ್ಲ ಬಿದಿರುಗಳ ಹಾಡು
ಹಾಡುತ್ತದೆ.

ಜೀವಿಸುವುದಕ್ಕೆ ಸಾಮಾನ್ಯತೆಯೇ ಸಾಕಾಗಿದೆ:
 
ಎಂಥ ಕಲಾತ್ಮಕ ಆಕಾಶವೆಂದರೂ
ಹಕ್ಕಿಗಳಿಗೇನೂ ಅವಕಾಶವಿಲ್ಲ
ಮೊಟ್ಟೆಯೊಡೆದು ಮರಿಗಳಾದರು
ಎಲ್ಲಿ ಹೊರ ಬರುತ್ತವೆ?
ಚಿತ್ರ ಚೌಕಟ್ಟಿನಲ್ಲಿರುವವರೆಗೆ

ಒಳಹೊರಗಿನ ವರ್ತಮಾನದಲ್ಲಿ ಎಲ್ಲವೂ ನೆಟ್ಟಗಿಲ್ಲ. ಗೋಡೆಗಳ ಮೇಲೆ ಸಾಲು ಚಿತ್ರಗಳಿವೆ. ನೊಂದುಕೊಳ್ಳುವ ಮನ ಮಹಾತ್ಮರನ್ನು ನೆನೆಯುತ್ತದೆ:

ಹಚ್ಚಿಟ್ಟ ದೀಪಕ್ಕೆ ಎಣ್ಣೆ ಎರೆಯುವವರಿಲ್ಲ
ಚಿವುಡವವರಿಲ್ಲ ಕಪ್ಪು ಕುಡಿಗೆ
ಹೊಸ ಬತ್ತಿಗಳ ಹೊಸೆದು ಹೊತ್ತಿಸುವವರಿಲ್ಲ
ಹೇಗೋ ನಡೆದಿದೆ ಕತ್ತಲೆಯ ನಡೆಗೆ
ಮತ್ತೆ ಬರಬಹುದೆ ಆ ಅಜ್ಜ
ಮರುಜನ್ಮ ಪಡೆದು?
ಉಪ್ಪು ತೀರಿದ ಮನೆಯಲಿ ಹಚ್ಚಿಡುವನೆ
ಹೊಸತೊರಿದು ಅರಿವು ದೀಪ

ಇಂತಹ ಹಲವಾರು ನಿಗಿನಿಗಿಸುವ ಬಾಳನೋಟಗಳನ್ನು ಕವಿ ಓದುಗರ ಅಂಗೈಯಲ್ಲಿರಿಸುತ್ತಾರೆ. ಆನಂದ ಝುಂಜರವಾಡರಿಗೆ ಕವಿ ಆಡುವ ಮಾತಿನ ಮೇಲೆ ವಿಪರೀತ ಮೋಹವೂ ಇದ್ದಂತಿದೆ. ಹಾಗಾಗಿ ಅನೇಕ ಕವಿತೆಗಳಲ್ಲಿ ವಾಚಾಳಿತನವು ಅನ್ನದಲಿ ಹರಳು ಸಿಗುವಂತಾಗುತ್ತದೆ. ಆ ಮಾತು ಬೇರೆ. ಕತ್ತಲೆಯೆಂಬುದು ಇತ್ತಲೆಯಯ್ಯ ಎನ್ನುತ್ತಾನೆ ಅಲ್ಲಮಪ್ರಭು. ಈ ಮಾತನ್ನು ತನ್ನ ಅನುಭವ ವಿಸ್ತಾರದಲ್ಲಿ ಕಾಣಿಸುವ ಸಲುವಾಗಿಯೇ ಆನಂದ ಝುಂಜರವಾಡ ಬರೆಯುತ್ತಿದ್ದಾರೆ. 

ಪ್ರೇತಕಾಂಡ
ಲೇ: ಆನಂದ ಝುಂಜರವಾಡ
ಪು: 496; ಬೆ: ರೂ. 300
ಪ್ರ: ಕಿಟಕಿ ಪ್ರಕಾಶನ, ಮೈಸೂರು - 570023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT