ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕವಿತೆ

1
ಒಂದು ಪರಾಗದಿಂದಲೇ ಅರಳಿದ ಹೂವು
ತುಟಿ ಕುರುಳು ಎದೆ
ಒಂದೊಂದೆಸಳು

ಎಲ್ಲಿ ಎಲ್ಲಿದೆ ಆ ಕಣ
ಮುಟ್ಟಿ ನೋಡಿದರೆ
ನಿನ್ನೆದೆಯಲ್ಲೇ

ಕಣ್ಣು ಮುಚ್ಚಿದರೆ ಲೋಕ
ಕಣ್ತೆರೆದರೆ
ಸಾಕಾರ ನಿಂತ ಧ್ಯಾನ

ನಿಂತರೂ ಕುಂತರೂ ಚಲಿಸಿದರೂ
ಅದರ ಪರಿಮಳದಲ್ಲೆ ಈಸಾಡುವ
ಮೀನ ನೀನು!
 

2
ಕಾಡುವುದು ನಿನ್ನ ಮುಗುಳುನಗು
ನಿದ್ರೆಯೆಚ್ಚರಗಳಲಿ
ಕಾಪಾಡಿ, ಎಲ್ಲ ಕಾವಳವನೋಡಿಸಿ

ಎವೆ ತೆರೆದರೂ ಮುಚ್ಚಿದರೂ ನಿನ್ನದೇ ಪ್ರಕಾಶ
ಮಗುವ ಕಳಕೊಂಡ ತಾಯಿ ಪತಿಗೆ ಎರವಾದ ಬಡಪಾಯಿಗೆ
ಗುಳಕಾಯಜ್ಜಿಯ ಕುಡಿಕೆ ಹಾಲಿನೊರತೆ
ಹರಿದಿರಲೆಂದೇ ಬೇಡುವೆ ಸದಾ
ಈ ಎದೆಯೊಳಗೆ
 

3
ಜಗದ ಡೋಲಿ ಹೊತ್ತು ಏರಿಳಿವ ನಮ್ಮ
ಮಂಡಿ ಬಿದ್ದು ಹೋಗಿದೆ
ನೋಯದೇ ಗುರು ನಿನಗೆ?

ನಮಗೆಂದೇ ಆದರೂ ಒಮ್ಮೆ ಮೆಲ್ಲ ಕೂರು
ಹಾಗೇ ಒರಗು ನಮ್ಮ ರಂಗನಾಥನಾಗಿ
ಬೆಟ್ಟ ಹಾವಾಗಿ


4
ಪುಷ್ಕರಣಿಯಲೇ ಮುಖ ತೊಳೆದು ಮಿಂದೆದ್ದು
ನಿತ್ಯವೂ ನಿಲ್ಲುವೆಯೆ ದರ್ಶನಕ್ಕೆ
ಉಳಿದಂತೆ ಕಲ್ಯಾಣಿ ಬಂದ್
ಸಾರ್ವಜನಿಕ ಪ್ರವೇಶಕ್ಕೆ

ಬೆಟ್ಟವೇರಿ ನಿನ್ನ ಬಿಂಬವೊಡಗೂಡಿ
ಕಾಣಬಹುದಷ್ಟೇ ಕಲ್ಯಾಣಿಯ
ಆಗ ತೆರೆಗಳೇಳದ ಪ್ರಸನ್ನ ಕನ್ನಡಿ
ಪ್ರತಿಮಿಸುವುದು ನಿನ್ನ ನಗೆಯ


ನೀರಜ್ವಾಲೆಯ ಸೆಳತಕ್ಕೆ ಯಾವುದೇ ನರಕೀಟ
ಧುಮುಕಿದರೆ ಸರಿರಾತ್ರಿ ನೀರೊಳಕ್ಕೆ
ಅಂದು ನಿನ್ನ ಮೋರೆಯಲೊಂದು ಗೆರೆನೆರಳು
ಆಡುವುದು ಕಂಡೂ ಕಾಣದಂತೆ

5
ಮೀರಿದವ ನಿಂತೇ ಇರಬೇಕೇನೊ
ಅವಗೆ ಸಲ್ಲುವುದೆಲ್ಲ ಭಕ್ತಿ ಬೆರಗು
ಹಸಿವು ನೀರಡಿಕೆ ಚಳಿ ಬಿಸಿಲು ಮಳೆ
ಯಾರು ಕೇಳುವರು ಅವನ ಪಾಡನ್ನು?

ಅವನ ದಿಟ್ಟಿಯ ನೆಗೆತ
ಹಾದು ಈ ತೋಟ ತುಡಿಕೆ
ನೆಲೆಸುವುದು ಆಕಾಶದಾಳದಲ್ಲಿ

ಇಳಿದು ಅಲ್ಲಿಂದ ಶೂನ್ಯ ಸಂದೇಶ
ಗೂಡು ಕಟ್ಟುವುದು ಇವನ ಕಂಗಳಲ್ಲಿ
ಆ ಹಕ್ಕಿ ಚಿಲಿಪಿಲಿಯ ಕಚಗುಳಿಯೆ
ಬಿಡಿಸುವುದೆ ಕುಸುರುನಗೆ ತುಟಿಯಲ್ಲಿ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT