ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಸದ್ಯಕ್ಕೆ ಯಾವುದೇ ಹುದ್ದೆಯಿಲ್ಲ

Last Updated 3 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಆರೋಪದಿಂದ ಮುಕ್ತರಾಗದ ಹೊರತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವುದೇ ಹುದ್ದೆಯನ್ನು ನೀಡುವುದಿಲ್ಲ~ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದರು.

ಬಾದಾಮಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸಾದ ಅವರು, ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳುವ ಮುನ್ನ ನಗರದಲ್ಲಿ ವರದಿಗಾರರ ಜತೆ ಮಾತನಾಡಿದರು.
`ಆರೋಪ ಬಂದುದರಿಂದಲೇ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಆರೋಪಗಳಿಂದ ಅವರಿನ್ನೂ ಮುಕ್ತರಾಗಿಲ್ಲ. ಹೀಗಾಗಿ ಮರಳಿ ಅವರಿಗೆ ಯಾವುದೇ ಹುದ್ದೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲ ಆರೋಪಗಳಿಂದ ಮುಕ್ತರಾದ ನಂತರ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು~ ಎಂದರು.

`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಸರ್ಕಾರವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಅವರನ್ನು ಬದಲಿಸುವ ಪ್ರಸ್ತಾವ ಸದ್ಯ ಕೇಂದ್ರ ನಾಯಕತ್ವದ ಮುಂದೆ ಇಲ್ಲ~ ಎಂದು ಅವರು ಹೇಳಿದರು.
`ಸುಪ್ರೀಂ ಕೋರ್ಟ್ 2ಜಿ ತರಂಗಾಂತರಕ್ಕೆ ಸಂಬಂಧಿಸಿದಂತೆ 122 ಲೈಸನ್ಸ್‌ಗಳನ್ನು ರದ್ದುಗೊಳಿಸಿದೆ. ತರಂಗಾಂತರ ಹಂಚಿಕೆ ಅಸಂವಿಧಾನಾತ್ಮಕವಾಗಿ ನಡೆದಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪಿ.ಚಿದಂಬರಂ, ಕಪಿಲ್ ಸಿಬಲ್ ಮತ್ತಿತರರು ತಕ್ಷಣ ರಾಜೀನಾಮೆ ನೀಡಬೇಕು~ ಎಂದು ಅವರು ಆಗ್ರಹಿಸಿದರು.

`ಕಳಂಕಿತ ಸಚಿವರು ಒಂದುವೇಳೆ ರಾಜೀನಾಮೆ ನೀಡದಿದ್ದರೆ ಅವರನ್ನು ಪ್ರಧಾನಿಯವರೇ ಸಂಪುಟದಿಂದ ಕಿತ್ತು ಹಾಕಬೇಕು~ ಎಂದು ಅವರು ಒತ್ತಾಯಿಸಿದರು. ಮೇಯರ್ ಪೂರ್ಣಾ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮತ್ತಿತರರು ಹಾಜರಿದ್ದರು.

ಗದಗ ವರದಿ: ವಿಧಾನಸಭೆ ಸ್ವೀಕರ್ ಬೋಪಯ್ಯ ಅವರು ಶಾಸಕರ ಅನರ್ಹತೆ ಸಂಬಂಧ ತಮ್ಮ ಮುಂದಿದ್ದ ದಾಖಲೆಗಳನ್ನು ಪರಿಶೀಲಿಸಿಯೇ ವಿವೇಚನಾಯುತ ತೀರ್ಪು ನೀಡಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಕೇಳುವುದು ಸರಿಯಲ್ಲ.  ಸಭಾಧ್ಯಕ್ಷರ ಹುದ್ದೆ ಸಂವಿಧಾನಿಕ ಹುದ್ದೆಯಾಗಿದ್ದು, ಅದಕ್ಕೆ ಅಗೌರವ ತೋರಬಾರದು ಎಂದು ನಾಯ್ಡು ಹೇಳಿದರು.

ಬಾಗಲಕೋಟೆ ವರದಿ: ಬಾದಾಮಿ ಸಮೀಪದ ಕರಡಿಗುಡ್ಡ(ಎಸ್.ಎನ್)ದಲ್ಲಿ ತೆಲಗು ನಟ ನಾಗಾರ್ಜುನ ನಟಿಸುತ್ತಿರುವ `ಶಿರಡಿ ಸಾಯಿಬಾಬಾ~ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಆಗಮಿಸಿದ್ದ ನಾಯ್ಡು, ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ  ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT