ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ 272ಕ್ಕೂ ಹೆಚ್ಚು ಸ್ಥಾನ

ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ
Last Updated 17 ಮಾರ್ಚ್ 2014, 10:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಾವು ಈಗ ಎಲ್ಲವನ್ನು ಮರೆತು ದೇಶಕ್ಕಾಗಿ ಒಟ್ಟಾಗಿದ್ದೇವೆ. ಹಿಂದೆ ಆಗಿರುವ ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ. ನಮ್ಮ ಜತೆಗೆ ದೇವ ದುರ್ಲಬ ಕಾರ್ಯಕರ್ತರು ಇದ್ದಾರೆ. ಈ ಚುನಾವಣೆ ಗೆಲ್ಲುವ ಮೂಲಕ ಮುಂದೆ ರಾಜ್ಯದಲ್ಲೂ ಮರಳಿ ಅಧಿಕಾರ ಹಿಡಿಯಲು ನಾಂದಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ ಭಾನುವಾರ ಇಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಪಕ್ಷ ಮರು ಸೇರ್ಪಡೆಯಾದ ನಂತರ ನಗರದ ಪಕ್ಷದ ಜಿಲ್ಲಾ ಕಚೇರಿ ಪಾಂಚಜನ್ಯಕ್ಕೆ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರೊಂದಿಗೆ ಭೇಟಿ ನೀಡಿದ ಅವರು, ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಖಾಸಗಿ ವಾಹಿನಿ ನಡೆಸಿರುವ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 20 ಸ್ಥಾನಗಳು ಲಭಿಸಲಿದ್ದು, ಈ ಸಮೀಕ್ಷೆ ನೋಡಿದರೆ ದೇಶದಲ್ಲಿ ಬಿಜೆಪಿ 272ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆ ಇದೆ. ಈ ಮೊದಲು ರಾಜ್ಯದಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡರೂ ಒಳಗೆ ಅಳುಕು ಇತ್ತು. ಆದರೆ, ಸುದ್ದಿ ವಾಹಿನಿಯ ಸಮೀಕ್ಷೆ ಪಕ್ಷಕ್ಕೆ ಆನೆ ಬಲ ತಂದುಕೊಟ್ಟಿದೆ. ರಾಜ್ಯದಲ್ಲಿ ಹಿಂದೆ ಬಿಜೆಪಿ 18 ಸ್ಥಾನಗಳನ್ನು ಗೆದ್ದಾಗ ಒಟ್ಟಾರೆ ಶೇ.33ರಷ್ಟು ಮತಗಳನ್ನು ಪಕ್ಷ ಪಡೆದಿತ್ತು. ಈಗ ಅವೆಲ್ಲ ದಾಖಲೆಗಳನ್ನು ಮುರಿದು ಶೇ.46ರಷ್ಟು ಮತಗಳನ್ನು ಬಿಜೆಪಿ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂದರು.

ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು, ಅಡಿಕೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾಗ ಒತ್ತುವರಿ ತೆರವಿಗೆ ಕೈಹಾಕಲಿಲ್ಲ. ಆದರೆ, ಈಗ ಕಾಂಗ್ರೆಸ್‌ ಆಡಳಿತದಲ್ಲಿ ನಡೆಯುತ್ತಿದೆ. ಜಿಲ್ಲೆಯ ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಮ್ಮ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಮರ್ಥ ರಿದ್ದಾರೆ. ಶಾಸಕರಾದ ಸಿ.ಟಿ.ರವಿ ಮತ್ತು ಡಿ.ಎನ್‌. ಜೀವರಾಜ್‌ ಹಾಗೂ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಕ್ಷೇತ್ರದ ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿದರೆ ಜಿಲ್ಲೆಯಲ್ಲಿ ನಮಗೆ ಮುನ್ನಡೆ ಸಿಗುತ್ತದೆ. ಸಿಂಹ ಕಾಡಿಗೆ ರಾಜನಿದ್ದಂತೆ. ಆದರೆ ಸಿಂಹ ಮಲಗಿದ್ದಲ್ಲಿಗೆ ಆಹಾರ ಬಂದು ಬೀಳುವುದಿಲ್ಲ. ಅದು ಆಹಾರಕ್ಕಾಗಿ ಬೇಟೆಯಾ ಡಲೇಬೇಕು. ಈಗ ಪರಿಸ್ಥಿತಿ ನಮ್ಮ ಪರವಾಗಿದೆಯೆಂದು ಕಾರ್ಯಕರ್ತರು ಸುಮ್ಮನೆ ಕುಳಿತರೆ ಆಗದು. ಪ್ರತಿ ಯೊಬ್ಬರು ನಾವೇ ಅಭ್ಯರ್ಥಿಗಳೆಂದು ಭಾವಿಸಿ ಕೆಲಸ ಮಾಡಬೇಕು. ಪ್ರತಿಯೊಂದು ಬೂತ್‌ನಲ್ಲೂ ಪಕ್ಷಕ್ಕೆ ಮುನ್ನಡೆ ತಂದುಕೊಡಬೇಕು ಎಂದು ಕರೆನೀಡಿದರು.

ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ನಾನು ಅಭ್ಯರ್ಥಿ ನಿಮಿತ್ತ ಮಾತ್ರ. ದೇಶದ ರಥ ಎಳೆಯಲು ಪ್ರತಿಯೊಬ್ಬ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡ ಬೇಕು. ಕ್ಷೇತ್ರದಲ್ಲಿ ಗೆಲುವು ಪಡೆಯುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ರಾಜಕೀಯದಲ್ಲಿ ಚುನಾವಣೆ ಕಾರ್ಯಕರ್ತರಿಗೆ ಒಂದು ಯುದ್ಧವಿದ್ದಂತೆ. ನಾವು ಬುಲೆಟ್‌ ಮೇಲೆ ನಂಬಿಕೆ ಇಟ್ಟವರಲ್ಲ, ಬ್ಯಾಲೆಟ್‌ ಮೇಲೆ ನಂಬಿಕೆ ಇಟ್ಟವರು. ನಮ್ಮ ಕಾರ್ಯಕರ್ತರ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಪ್ರತಿಯೊಬ್ಬರಿಗೂ ಬಿಜೆಪಿ ಹುಚ್ಚು ಹಿಡಿಸಬೇಕು. ಆ ಹುಚ್ಚು ಹೆಚ್ಚಾಗಿ ಮತದಾನದ ದಿನ ಮತಗಟ್ಟೆಗೆ ಹೋಗಿ ಕಮಲದ ಗುರುತು ಹುಡುಕುವಂತೆ ಮಾಡಬೇಕು ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಡಿ.ಎನ್.ಜೀವರಾಜ್‌, ಮಾಜಿ ಅಧ್ಯಕ್ಷ ಎಂ.ಕೆ.ಪ್ರಾಣೇಶ್‌, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮುಖಂಡರಾದ ಎಂ.ಎಸ್‌. ಬೋಜೇಗೌಡ, ರೇಖಾ ಹುಲಿಯಪ್ಪಗೌಡ, ಶ್ಯಾಮಲಾ ಕುಂದನ್‌, ಜಿ.ಪಂ. ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ನಗರಸಭೆ ಅಧ್ಯಕ್ಷ ಪುಷ್ಪರಾಜ್‌, ಉಪಾಧ್ಯಕ್ಷ ಅಪ್ಸರ್‌ ಅಹಮದ್‌, ಮುಖಂಡರಾದ ಸಿ.ಆರ್‌. ಪ್ರೇಮ್‌ ಕುಮಾರ್‌, ಎಚ್‌.ಡಿ.ತಮ್ಮಯ್ಯ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಸಿ.ಎಚ್‌.ಲೋಕೇಶ್‌ ಮತ್ತು ಅವರ ಬೆಂಬಲಿಗರನ್ನು ಯಡಿಯೂರಪ್ಪ ಪಕ್ಷದ ಬಾವುಟ ನೀಡಿ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT