ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆ ಆಯಿತು, ಮುಂದೇನು?

Last Updated 8 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ 24 ದಿನಗಳ ಜೈಲುವಾಸ  ಕೊನೆಗೂ ಅಂತ್ಯಗೊಂಡಿದೆ. ಇವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿದ್ದ 3ನೇ ದೂರಿಗೆ ಸಂಬಂಧಿಸಿದಂತೆಯೂ ಹೈಕೋರ್ಟ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಮಂಗಳವಾರ ಆದೇಶಿಸಿದೆ. ಬಿಎಸ್‌ವೈ ವಿರುದ್ಧದ 2ನೇ ದೂರಿಗೆ ಸಂಬಂಧಿಸಿದಂತೆ ಶುಕ್ರವಾರವೇ ಜಾಮೀನು ಮಂಜೂರು ಆಗಿತ್ತು. 3ನೇ ದೂರಿನಲ್ಲಿ ಮಾತ್ರ ಕೃಷ್ಣಯ್ಯ ಶೆಟ್ಟಿ ಆರೋಪಿಯಾಗಿದ್ದರು.

ಬೆಳಿಗ್ಗೆ 11.35ಕ್ಕೆ ನ್ಯಾಯಮೂರ್ತಿ ಬಿ.ವಿ.ಪಿಂಟೊ ಅವರು ಇಬ್ಬರಿಗೂ ಜಾಮೀನು ಮಂಜೂರು ಮಾಡಿದರು. ಯಡಿಯೂರಪ್ಪನವರನ್ನು ಸಂಜೆ 6.45ಕ್ಕೆ, ಕೃಷ್ಣಯ್ಯ ಶೆಟ್ಟಿ ಅವರನ್ನು ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

ಷರತ್ತುಗಳು: ತಲಾ ರೂ 5 ಲಕ್ಷಗಳ ಬಾಂಡ್, ಅಷ್ಟೇ ಮೊತ್ತದ ಎರಡು ಭದ್ರತೆ ನೀಡುವಂತೆ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ, ಸಾಕ್ಷ್ಯಗಳನ್ನು ನಾಶಪಡಿಸದಂತೆ, ಅಧೀನ ಕೋರ್ಟ್‌ನ ಅನುಮತಿ ಪಡೆದುಕೊಳ್ಳದೆ ದೇಶ ಬಿಟ್ಟು ಹೋಗದಂತೆ, ಯಾವುದೇ ಅಪರಾಧ ಎಸಗದಂತೆ ಷರತ್ತು ವಿಧಿಸಲಾಗಿದೆ. ಇವುಗಳ ಪೈಕಿ ಯಾವುದೇ ಒಂದು ಷರತ್ತನ್ನು ಉಲ್ಲಂಘಿಸಿದರೂ ಜಾಮೀನು ಮಂಜೂರು ಆದೇಶ ರದ್ದು ಮಾಡಲಾಗುವುದು ಎಂದು ತೀರ್ಪಿನಲ್ಲಿ ಎಚ್ಚರಿಸಲಾಗಿದೆ.

ಜಾಮೀನಿಗೆ ಕಾರಣವೇನು?: ಸುಮಾರು ಅರ್ಧ ಗಂಟೆ ನ್ಯಾ. ಪಿಂಟೊ ಉಕ್ತಲೇಖನ (ಡಿಕ್ಟೇಷನ್) ನೀಡಿದರು.
`ಅಧೀನ ಕೋರ್ಟ್‌ನಲ್ಲಿ ಯಡಿಯೂರಪ್ಪ ಹಾಗೂ ಇತರ ಆರೋಪಿಗಳ ವಿರುದ್ಧ ಖಾಸಗಿ ದೂರನ್ನು ದಾಖಲು ಮಾಡುವಾಗ  ದೂರುದಾರ ಸಿರಾಜಿನ್ ಬಾಷಾ ಅವರು ಸುಮಾರು ಏಳು ಪುಟಗಳ ಪ್ರಮಾಣೀಕೃತ ಹೇಳಿಕೆ (ಸ್ವರ್ನ್ ಸ್ಟೇಟ್‌ಮೆಂಟ್) ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ 40 ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ಈ ದಾಖಲೆಗಳಲ್ಲಿನ ಮಾಹಿತಿಗಳು ಸತ್ಯವಾದವು ಎಂಬ ಬಗ್ಗೆ ಪ್ರಮಾಣೀಕೃತ ಹೇಳಿಕೆಯಲ್ಲಿ ಅವರು ಎಲ್ಲಿಯೂ ಉಲ್ಲೇಖಿಸಿಲ್ಲ. ಕೇವಲ ದೂರನ್ನು ಕೋರ್ಟ್‌ನಲ್ಲಿ ಮೌಖಿಕವಾಗಿ ಓದಿದ ಮಾತ್ರಕ್ಕೆ ಆರೋಪಿಗಳ ವಿರುದ್ಧ ಇರುವ ಆರೋಪಗಳು ಸಾಬೀತು ಆಗುವುದಿಲ್ಲ. ಆದರೆ ಇದನ್ನು ಗಮನಿಸದೆ ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿರುವುದು ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

`ದೂರುದಾರರು ನೀಡಿರುವ ದಾಖಲೆಗಳನ್ನು ಪಾಟಿ ಸವಾಲಿಗೆ ಒಳಪಡಿಸುವ ಮಟ್ಟಕ್ಕೆ ಪ್ರಕರಣ ಇನ್ನೂ ತಲುಪಿಲ್ಲ. ಈ ಹಂತದಲ್ಲಿ ಜಾಮೀನು ನಿರಾಕರಿಸಲು ಯಾವುದೇ ಆಧಾರಗಳು ಇಲ್ಲ. ಆರೋಪಿಗಳ ವಿರುದ್ಧ ಭಾರತೀಯ ಸಂವಿಧಾನದ 406, 120 ಬಿ, ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ 13(1)(ಡಿ), 13 (2) ಸೇರಿದಂತೆ ಇತರ  ಕಲಮುಗಳ ಅಡಿ ದೂರು ದಾಖಲು ಮಾಡಲಾಗಿದೆ. ಇವುಗಳು ಸಾಬೀತಾದರೂ ಆರೋಪಿಗಳಿಗೆ ಸಿಗುವ ಗರಿಷ್ಠ ಶಿಕ್ಷೆ 7ವರ್ಷ ಮಾತ್ರ. ಕರ್ನಾಟಕ ಭೂ ಕಂದಾಯ ಕಾಯ್ದೆಯ ಅಡಿ ದಾಖಲಾಗಿರುವ ದೂರಿನ ಆರೋಪ ಸಾಬೀತಾದರೆ ಸಿಗಬಹುದಾದ ಗರಿಷ್ಠ ಶಿಕ್ಷೆ 6 ವರ್ಷ. ಈ ಹಿನ್ನೆಲೆಯಲ್ಲಿ ಜೀವಾವಧಿ ಅಥವಾ ಮರಣದಂಡನೆಗೆ ಗುರಿಯಾಗುವ ಯಾವುದೇ ಆರೋಪಗಳು ಈ ಆರೋಪಿಗಳ ಮೇಲೆ ಇಲ್ಲ. ಆದುದರಿಂದ ಜಾಮೀನು ನಿರಾಕರಿಸುವುದು ಸಲ್ಲದು~ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

`ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಯಾವ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೋ, ಅದೇ ಪಕ್ಷ ಈಗ ಆಡಳಿತದಲ್ಲಿ ಇದೆ.
 ಆದುದರಿಂದ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಜಾಮೀನು ಮನವಿಯನ್ನು ತಿರಸ್ಕರಿಸಿರುವ ವಿಶೇಷ ಕೋರ್ಟ್ ಆದೇಶ ಸರಿಯಲ್ಲ~ ಎಂದು ಅವರು ತಿಳಿಸಿದ್ದಾರೆ.

ಮಾನ್ಯವಾಗದ ವಾದ: ತೀರ್ಪು ಆರಂಭಕ್ಕೂ ಮುನ್ನ ಬಾಷಾ ಪರ ವಕೀಲರು ನೀಡಿದ್ದ ಕೆಲವೊಂದು ದಾಖಲೆಗಳನ್ನು ನ್ಯಾ.ಪಿಂಟೊ ಪರಿಶೀಲಿಸಿದರು. ಪ್ರಮಾಣೀಕೃತ ಹೇಳಿಕೆಯ ಕುರಿತಾಗಿ ನ್ಯಾಯಮೂರ್ತಿಗಳು ಬಾಷಾ ಪರ ವಕೀಲ ಆರ್.ನಿತಿನ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ನಿತಿನ್ ಅವರು, `ದೂರು ದಾಖಲಾದ ಮೇಲೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ ಮೇಲೆ ದೂರಿನಲ್ಲಿನ ಅಂಶಗಳು ಸತ್ಯಾಂಶದಿಂದ ಕೂಡಿವೆ ಎಂದೇ ಭಾವಿಸಿದಂತೆ~ ಎಂದರು.

ಆದರೆ ಇದನ್ನು ನ್ಯಾಯಮೂರ್ತಿಗಳು ಒಪ್ಪಲಿಲ್ಲ. `ಅದು ಹೇಗೆ ಸಾಧ್ಯ, ದಾಖಲು ಮಾಡಿದ ದೂರುಗಳೆಲ್ಲ ಸತ್ಯಾಂಶದಿಂದ ಕೂಡಿವೆ ಎಂದರೆ ದೇಶದಲ್ಲಿನ ಅರ್ಧಕ್ಕರ್ಧ ಜನರು ಜೈಲಿನಲ್ಲಿ ಇರಬೇಕಿತ್ತು~ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು.

ವಿಚಾರಣೆ ಮುಂದಕ್ಕೆ: ಈ ಮಧ್ಯೆ ಬಾಷಾ ಅವರ 1,4 ಮತ್ತು 5ನೇ ದೂರಿಗೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು. ಅಧೀನ ಕೋರ್ಟ್‌ನಲ್ಲಿ ಜಾಮೀನು ಕೋರದೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಅರ್ಜಿಯನ್ನು ವಜಾ ಮಾಡುವಂತೆ ಬಾಷಾ ಅವರು ಮಂಗಳವಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿದರು. ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಇದರ ವಿಚಾರಣೆ ನಡೆಸುತ್ತಿದ್ದಾರೆ.

`ಅಪರಾಧಿ ಅಲ್ಲ~
`ನಾನು ಅಪರಾಧಿ ಅಲ್ಲ. ಆದಷ್ಟು ಬೇಗ ಆರೋಪಗಳಿಂದ ಮುಕ್ತನಾಗುತ್ತೇನೆ~ ಎಂದು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದ ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಜೈಲಿನಿಂದ ಬಿಡುಗಡೆ
ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಸಂಜೆ 6.45ರ ಸುಮಾರಿಗೆ ಜೈಲಿನಿಂದ ಬಿಡುಗಡೆಯಾದರು.

ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಬೆಳಿಗ್ಗೆಯೇ ಜಾಮೀನು ನೀಡಿದ್ದ ಸಂಗತಿಯನ್ನು ತಿಳಿದಿದ್ದ ಹಲವು ಶಾಸಕರು, ಸಚಿವರು ಹಾಗೂ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಮೊದಲೇ ಕಾರಾಗೃಹದ ಬಳಿ ಜಮಾಯಿಸಿದ್ದರು. ಅವರು ಬಿಡುಗಡೆಯಾಗಿ ಕಾರಾಗೃಹದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರು ಹೂವಿನ ಹಾರ ಹಾಕಿ ಆತ್ಮೀಯವಾಗಿ ಬರ ಮಾಡಿಕೊಂಡರು. ಯಡಿಯೂರಪ್ಪ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಯಡಿಯೂರಪ್ಪ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಅಳಿಯ ಆರ್.ಎನ್.ಸೋಹನ್ ಕುಮಾರ್, ಸಚಿವರಾದ ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಎಚ್.ಹಾಲಪ್ಪ, ಎನ್.ಎಸ್.ನಂದೀಶ್‌ರೆಡ್ಡಿ, ಬಿ.ಪಿ.ಹರೀಶ್, ಎಸ್.ಆರ್.ವಿಶ್ವನಾಥ್ ಸೇರಿದಂತೆ ಪಕ್ಷದ ಹಲವು ಮುಖಂಡರು ಕಾರಾಗೃಹದ ಬಳಿ ಹಾಜರಿದ್ದರು. ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರಿಗೂ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಅವರು ಜೈಲಿನಿಂದ ಬಿಡುಗಡೆಯಾದರು.

ರಾಜ್ಯದಾದ್ಯಂತ ಪ್ರವಾಸ
ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸದ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದೆರಡು ದಿನದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡು ಇಡೀ ರಾಜ್ಯ ಸುತ್ತುವ ಯೋಚನೆ ಮಾಡಿದ್ದಾರೆ.

ವಿವಿಧೆಡೆ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಮೂಲಕ ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿಯಲ್ಲಿನ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದೆರಡು ದಿನಗಳಲ್ಲಿ ತಮ್ಮ ಆಪ್ತರ ಜತೆ ಮಾತುಕತೆ ನಡೆಸಿ, ಪ್ರವಾಸದ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ.

ಈ ನಡುವೆ ಪಕ್ಷಾತೀತವಾದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲೂ ಅವರು ಚಿಂತನೆ ನಡೆಸಿದ್ದಾರೆ. ಸಮಾವೇಶ ಇದೇ 20ರಂದು ನಡೆಯುವ ಸಾಧ್ಯತೆ ಇದೆ. ಯಡಿಯೂರಪ್ಪ ಅಭಿಮಾನಿ ಬಳಗದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದಕ್ಕೆ ವಿವಿಧ ಸಮಾಜಗಳ ಮಠಾಧೀಶರನ್ನು ಆಹ್ವಾನಿಸಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಕಾರ್ಯಕ್ರಮ ನಂತರ ಗುಲ್ಬರ್ಗ, ದಾವಣಗೆರೆ, ಮೈಸೂರು ಮತ್ತು ಬೆಳಗಾವಿಯಲ್ಲೂ ವಿಭಾಗೀಯ ಮಟ್ಟದ ಬೃಹತ್ ಸಮಾವೇಶಗಳನ್ನು ನಡೆಸಲು ಬೆಂಬಲಿಗರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ತುಮಕೂರಿಗೆ: ಬುಧವಾರ ಬೆಳಿಗ್ಗೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಅದರ ನಂತರ ಅವರು ತಮ್ಮ ಮನೆ ದೇವರಾದ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಬಳ್ಳಾರಿಯಲ್ಲಿ ಸಕ್ರಿಯ: ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಚುನಾವಣೆ ನೆಪದಲ್ಲಿ ಜನರ ಜತೆ ಇರಲು ಯಡಿಯೂರಪ್ಪ ನಿಶ್ಚಯಿಸಿದ್ದು, ಆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಗೆ ಹಾಜರು: ಪಕ್ಷದ ಚುನಾವಣಾ ಸಮಿತಿ ಬುಧವಾರ ಸಭೆ ಸೇರಲಿದ್ದು, ಅದರಲ್ಲಿ ಯಡಿಯೂರಪ್ಪ ಕೂಡ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ಬಳ್ಳಾರಿ ಟಕೆಟ್ ಯಾರಿಗೆ ನೀಡಬೇಕೆನ್ನುವ ಕುರಿತು ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT