ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್ ಕಾರ್ಡ್‌ಗಳ ಅಸಮರ್ಪಕ ವಿತರಣೆಗೆ ವಿರೋಧ;ಬೀದಿಗಿಳಿದ ಮಹಿಳೆಯರು

Last Updated 13 ಜುಲೈ 2012, 9:40 IST
ಅಕ್ಷರ ಗಾತ್ರ

ಮಹಾಲಿಂಗಪುರ: ಬಡತನ ರೇಖೆಗಿಂತ ಕೆಳಗಿರುವ ಅರ್ಹ ಕುಟುಂಬಗಳಿಗೆ ಸರಿಯಾಗಿ ಬಿಪಿಎಲ್ ಕಾರ್ಡ್‌ಗಳು ವಿತರಣೆಯಾಗುತ್ತಿಲ್ಲ ಹಾಗೂ ಕಾರ್ಡ್ ಹೊಂದಿದ ಅನೇಕರಿಗೆ ಸಮರ್ಪಕವಾಗಿ ಪಡಿತರ ವಿತರಣೆ ಆಗುತ್ತಿಲ್ಲ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟ ನಡೆಸಿದರು.

ರಾಷ್ಟ್ರೀಯ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಚಾಂದಬೀ ಸಿಂದಗಿ ಮಾತನಾಡಿ, ಬೆಳಗಾವಿ, ಹುಬ್ಬಳ್ಳಿ, ಬೈಲಹೊಂಗಲ ತಾಲ್ಲೂಕುಗಳಲ್ಲಿ ಗ್ಯಾಸ್ ಸಂಪರ್ಕ ಹೊಂದಿದವರಿಗೂ ತಲಾ 4 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುತ್ತಿದ್ದು ಇಲ್ಲಿಯೂ ಆ ರೀತಿಯ ವ್ಯವಸ್ಥೆ ಆಗಬೇಕು ಪಡಿತರ ವಿತರಣೆ ವ್ಯವಸ್ಥೆಯ ಎಲ್ಲ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಹೇಳಿದರು.

ಕೇಂದ್ರ ಸರಕಾರ ಪ್ರತಿ ಕಾರ್ಡ್‌ದಾರರಿಗೆ 3 ಕೆಜಿ ಬೇಳೆ ಹಾಗೂ 6 ಕೆಜಿ ಖಾದ್ಯ ತೈಲವನ್ನು ಪೂರೈಸಲು ಸೂಚಿಸಿದ್ದರೂ ರಾಜ್ಯ ಸರಕಾರ ಪಡಿತರ ವಿತರಣೆದಾರರಿಗೆ ಸರಿಯಾದ ಆದೇಶ ನೀಡಿಲ್ಲ. ಶಾಸಕ ಸಿದ್ದು ಸವದಿ ಮಧ್ಯೆ ಪ್ರವೇಶಿಸಿ ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಪುರಸಭೆಗೆ ಬಂದು ಮನವಿ ಅರ್ಪಿಸಿದರು. ಮುಖ್ಯಾಧಿಕಾರಿಗಳ ಪರವಾಗಿ ರಮೇಶ ಜಾಧವ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ವನಿತಾ ನಿಂಬಾಳ, ಯಲ್ಲವ್ವ ಮಾಯನ್ನವರ, ಸಾವಿತ್ರಿ ಕಳ್ಳಿ, ಶಾಂತಾ ರೊಳ್ಳಿ, ಗುಲ್ಶನ್ ಯಾದವಾಡ, ತಂಗೆವ್ವ ತಿಮ್ಮಾಪೂರ, ಸುಧಾ ಹಟ್ಟಿ, ಜಯಶ್ರಿ ಬಂಡಿವಡ್ಡರ, ಚಂದ್ರವ್ವ ಬೆಳವಣಿಕಿ, ಮಹಾದೇವಿ ಹಟ್ಟಿ, ಪಾರ್ವತಿ ಹಡಪದ, ಮಹಾದೇವಿ ಬಂಡಿವಡ್ಡರ, ನಂದಾ ಮಾದಗುಡಿ, ಕಮಲವ್ವ ಉತ್ತೂರ, ಪದ್ಮವ್ವ ಕಿರಿಕಿರಿ, ಮಹಾನಂದಾ ಕಲ್ಯಾಣಿ, ಮಹಾನಂದಾ ಪೂಜಾರಿ, ಮಹಾದೇವಿ ಭಜಂತ್ರಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಎಸ್‌ಬಿಐನಿಂದ ನಾಳೆ ನಾಣ್ಯ ವಿತರಣೆ
ಮಹಾಲಿಂಗಪುರ: ಪಟ್ಟಣದಲ್ಲೆಗ ನೀರಿನ ಜೊತೆಗೆ ಚಿಲ್ಲರೆಗೂ ಬರ. ಊರಿನ ಹೋಟೆಲ್‌ಗಳಲ್ಲಿ ಹಾಗೂ ಚಿಲ್ಲರೆ ವ್ಯಾಪಾರದ ಅಂಗಡಿಗಳಲ್ಲಿ ಚಿಲ್ಲರೆ ಕೊಡುವ ಬದಲು ಪ್ಲಾಸ್ಟಿಕ್ ತುಣುಕುಗಳ ಚಲಾವಣೆ ನಡೆದಿದೆ. ಇಲ್ಲಿಯ ಗ್ರಾಹಕರೇ ಆಗಿದ್ದಲ್ಲಿ ಮತ್ತೊಮ್ಮೆ ಅದೇ ಅಂಗಡಿಗೆ ಹೋದಾಗ ಪ್ಲಾಸ್ಟಿಕ್ ಹಣ ಕೊಟ್ಟು ಅದರ ಮೌಲ್ಯದ ಸಾಮಾನು ಪಡೆಯುತ್ತಾರೆ.

ಆದರೆ ಬಸ್ ನಿಲ್ದಾಣದಲ್ಲಿ ಚಹ ಕುಡಿದು ಬೇರೆ ಬಸ್ ಹತ್ತಿ ಹೊರಟು ಹೋಗುವ ಗ್ರಾಹಕ ಈ ಪ್ಲಾಸ್ಟಿಕ್ ಹಣದಿಂದ ಮೋಸ ಹೋಗುತ್ತಿದ್ದ. ನಗರದಲ್ಲಿಯ ಎಲ್ಲ ಬ್ಯಾಂಕುಗಳು ಈ ಸಮಸ್ಯೆಯನ್ನು ಪರಿಹರಿಸಲು ಪರದಾಡುತ್ತಲೇ ಇದ್ದವು.

ನಗರದ ಮುಂಚೂಣಿಯಲ್ಲಿರುವ ಎಸ್‌ಬಿಐ ತನ್ನ ಸಮೀಪದ ಎಲ್ಲ ಶಾಖೆಗಳನ್ನು ಸಂಪರ್ಕಿಸಿ ಊರಿನ ಚಿಕ್ಕ ಚಿಕ್ಕ ವ್ಯಾಪಾರಿಗಳಿಗೆ ನಾಣ್ಯಗಳನ್ನು ಹಂಚುವ ಕಾರ್ಯವನ್ನು ಕೈಗೊಂಡಿದೆ. ಶನಿವಾರ ಯಾರು ಮೊದಲು ಬರುವರೋ ಅವರಿಗೆ ಆದ್ಯತೆಯ ಮೇರೆಗೆ ಚಿಲ್ಲರೆ ನಾಣ್ಯಗಳನ್ನು ಹಂಚಲಾಗುತ್ತದೆ. ಊರಿನ ಚಿಲ್ಲರೆ ಅಭಾವದ ಸಮಸ್ಯೆಯನ್ನು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿರುವ ಶಿವಲಿಂಗ ಸಿದ್ನಾಳ ಅವರಿಂದಲೇ ಈ ನಾಣ್ಯ ಹಂಚಿಕೆ ನಡೆಯಲಿದೆ.

ನಗರದ ಎಸ್‌ಬಿಐ ಇತ್ತೀಚೆಗೆ ಕಾರ್ಯಾರಂಭ ಮಾಡಿದ್ದರೂ ಕಳೆದ ಆರ್ಥಿಕ ವರ್ಷದ ಗುಣಾತ್ಮಕ ಹಾಗೂ ಗ್ರಾಹಕರ ಸಂತೃಪ್ತಿಯ ಆರು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಕೃಷಿಕರಿಗೆ ಕೊಡುವ ಬಂಗಾರದ ಮೇಲಿನ ಕಡಿಮೆ ಬಡ್ಡಿ ದರದ ಸಾಲ ವಿತರಣೆಯಲ್ಲಿ ಒಂದೇ ತಿಂಗಳಿನಲ್ಲಿ 6 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ್ದಕ್ಕೆ ಪ್ರಶಸ್ತಿ ಪಡೆದಿರುವ ಬ್ಯಾಂಕು ಗ್ರಾಹಕರಿಗಾಗಿ ಉಚಿತ ಇಂಟರ್‌ನೆಟ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳು ಬಂದಾಗ ಚಾಕಲೇಟ್ ಕೊಡುವ ವ್ಯವಸ್ಥೆ ಹಾಗೂ ಸಮುದಾಯ ಸೇವಾ ಬ್ಯಾಂಕಿಂಗ್ ಯೋಜನೆ ಅಡಿಯಲ್ಲಿ ನಾಲ್ಕು ಸ್ಥಳೀಯ ಶಾಲೆಗಳಿಗೆ ಫ್ಯಾನ್‌ಗಳನ್ನು ಮತ್ತು ಒಂದು ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ.

ಶನಿವಾರ ಗ್ರಾಹಕರ ಅನುಕೂಲಕ್ಕೆ ವಿತರಿಸಲಾಗುತ್ತಿರುವ ಚಿಲ್ಲರೆ ನಾಣ್ಯಗಳನ್ನು ಅವಶ್ಯಕವಿದ್ದವರು ಪಡೆದುಕೊಳ್ಳಲು ಬ್ಯಾಂಕಿನ ಶಾಖಾಧಿಕಾರಿ ರಾಜು ಟೆಂಗಿನಕಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT